ಎಂಎಲ್’ಎ ಟಿಕೆಟ್ !!! ನಾನು ಕಾಂಗ್ರೆಸ್ ಸೇರಬೇಕಾದರೆ ನನ್ನ ಮಗನಿಗೆ ಟಿಕೆಟ್ ನೀಡಬೇಕು
AskMysuru 27/08/2021 Politics
ಮೈಸೂರು: ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ನನ್ನ ಮಗ ಜಿ.ಡಿ. ಹರೀಶ್ ಗೌಡ ಅವರಿಗೆ ಕಾಂಗ್ರೆಸ್ ವಿಧಾನಸಭೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರೆ ನಾವು ಕಾಂಗ್ರೆಸ್ ಸೇರ್ಪಡೆಯಾಗುತ್ತೇವೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಹೂಟಗಳ್ಳಿ ನಗರಸಭೆಯನ್ನು ಶುಕ್ರವಾರ ಉದ್ಘಾಟಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ನಿಲುವನ್ನು ಈಗಾಗಲೇ ಪ್ರಕಟ ಮಾಡಿದ್ದೇನೆ. 2 ವರ್ಷದಿಂದ ಜೆಡಿಎಸ್ ಪಕ್ಷದಿಂದ ನಾನು ದೂರ ಉಳಿದುಕೊಂಡಿದ್ದೇನೆ. ಅವರು ಸಹ ನನ್ನನ್ನು ಕರೆಯುತ್ತಿಲ್ಲ. ಕಳೆದ 2 ಬಾರಿಯ ಮೇಯರ್ ಚುನಾವಣೆಗೂ ನನ್ನನ್ನು ಕರೆದಿಲ್ಲ. ಪಕ್ಷದ ಯಾವುದೇ ಬ್ಯಾನರ್ ಗಳು ಹಾಗೂ ಪೋಸ್ಟರ್ ಗಳಲ್ಲಿ ನನ್ನ ಫೋಟೋ ಹಾಕುತ್ತಿಲ್ಲ. ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿಲ್ಲ. ಅವರು ಸಹ ನನ್ನನ್ನು ಪಕ್ಷದಿಂದ ದೂರ ಇಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ನಾವೆಲ್ಲರು ಜತೆಯಾಗಿ ಹೋಗೊಣ ಅಂದಿದ್ದಾರೆ. ಅಧಿಕಾರವನ್ನು ಹಂಚಿಕೊಳ್ಳೋಣ, ಅಭಿವೃದ್ಧಿಯನ್ನು ಮಾಡೋಣ ಎಂದು ಆಹ್ವಾನ ನೀಡಿದ್ದಾರೆ ಎಂದರು.
ನಾನು ಕಾಂಗ್ರೆಸ್ ಸೇರಬೇಕಾದರೆ ನನ್ನ ಮಗ ಹರೀಶ್ ಗೌಡ ಅವರಿಗೆ ಟಿಕೆಟ್ ನೀಡಬೇಕು ಎಂದು ಕೇಳಿದ್ದೇನೆ. ಈ ವಿಚಾರವನ್ನು ಪಕ್ಷದ ಸಮಿತಿಯ ಮುಂದೆ ಇಟ್ಟು ಚರ್ಚಿಸಿ ತಿಳಿಸುತ್ತೇವೆ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಸಮಿತಿಯಲ್ಲಿ ನಿಮ್ಮ ಪರವಾಗಿ ಮಾತನಾಡುವ ಭರವಸೆ ನೀಡಿದ್ದಾರೆ. ಈ ವಿಚಾರ ಎಲ್ಲ ಅಂತಿಮವಾದ ನಂತರ ನಾವು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಚುನಾವಣೆ ಒಳಗೆ ಜಿ.ಡಿ. ಹರೀಶ್ ಗೌಡ ಅವರಿಗೆ ಟಿಕೆಟ್ ಖಾತ್ರಿಯಾದರೆ ಜಿ.ಡಿ. ಹರೀಶ್ ಗೌಡ ಹಾಗೂ ಬೆಂಬಲಿಗರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ‍್ಳುತ್ತಾರೆ. ಇಲ್ಲವಾದಲ್ಲಿ ಈಗ ಇರುವ ಸ್ಥಿತಿಯಲ್ಲಿಯೇ ಮುಂದುವರೆಯಲಾಗುವುದು ಎಂದರು.
ಬೆಂಬಲಿಗರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಜಿಲ್ಲಾ ಪಂಚಾಯಿತಿ ಚುನಾವಣೆ ಒಳಗೆ ಜಿ.ಡಿ. ಹರೀಶ್ ಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ‍್ಳುವ ವಿಚಾರ ಅಂತಿಮಗೊಳ್ಳುತ್ತದೆ. ಒಂದುವೇಳೆ ಅಂತಿಮಗೊಳ್ಳದೆ ಇದ್ದರೆ ಇದೇ ರೀತಿ ಮುಂದುವರೆಯುತ್ತೇವೆ. ಎಲ್ಲೂ ಸಿಗದೆ ಇದ್ದಾಗ ಇಲ್ಲೇ ಸುತ್ತಿಕೊಂಡು ಬರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ನಲ್ಲಿ ಬೆಂಬಲಿಗರಿಗೆ ಅವಕಾಶ ದೊರೆಯದೆ ಇದ್ದರೆ ಜೆಡಿಎಸ್ ನಲ್ಲೇ ಉಳಿಯುವ ಮುನ್ಸೂಚನೆ ನೀಡಿದರು.