ಶಾಲೆ ಅಂದ ಮೇಲೆ ಎಲ್ಲಾ ಚಟುವಟಿಕೆಗಳು ಮಕ್ಕಳಿಗೆ ಮೀಸಲು ಅನ್ನುವುದರಲ್ಲಿ ಅನುಮಾನವೇ ಇಲ್ಲ, ಒಮ್ಮೆ ಶಿಕ್ಷಕರ ಜೊತೆಗೆ ಮುಖ್ಯೋಪಾಧ್ಯಾಯರು ಚರ್ಚಿಸಿದಾಗ ಅಡುಗೆ ಮನೆಯ ಕಡೆಗೆ ಏಕೆ ಮುಖ ಮಾಡಬಾರದು? ಒಂದು ತಂಡದಲ್ಲಿ 6 ಜನ ಸದಸ್ಯರನ್ನು ಸೇರಿಸಿ ಅಡುಗೆ ಸ್ಫರ್ಧೆಯನ್ನು ಏಕೆ ಆಯೋಜಿಸಬಾರದು? ಎಂಬ ಯೋಚನೆ ಬಂದಿತು. ಎಲ್ಲರ ಅನುಮೋದನೆ ಸಿಕ್ಕ ನಂತರದಲ್ಲಿ ಮುಂದಿನವಾರ ಶಾಲೆಯಲ್ಲಿ ಮಕ್ಕಳಿಗೆ “ಅಡುಗೆ ಸ್ಪರ್ಧೆ” ತಿಳಿಸಲಾಯಿತು.
ಅಂದಿನಿಂದ ಅದೆಷ್ಟು ಲವಲವಿಕೆಯಿಂದ ಮಕ್ಕಳು ಓಡಾಟ ನಡೆಸುತ್ತಿದ್ದಾರೆ. ಗುಂಪಾಗಿ ಚರ್ಚೆಗಳು. ನಮಗೂ ಅದೇ ಮೊದಲ ಬಾರಿಯಾದ್ದರಿಂದ ಯಾವರೀತಿಯಲ್ಲಿ ಅನ್ನುವುದೊಂದು ಯೋಚನೆಯಾಗಿತ್ತು. ಅನೇಕ ಮಕ್ಕಳು ತಮ್ಮ ತಂಡದ ಮೆನು ಕಾರ್ಡ್ ನ್ನು ತಯಾರಿಸಿ ಅದರಲ್ಲಿ ತಮ್ಮ ತಂಡದಿಂದ ತಯಾರಿಸುವ 6 ತಿಂಡಿ/ತಿನಿಸುಗಳನ್ನು ತಿಳಿಸಿದ್ದರು. ಅದನ್ನು ನೋಡಿಯೇ ಹೊಟ್ಟೆ ತುಂಬುವ ಹಾಗಿತ್ತು. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಅಡುಗೆ ಮನೆ ಹೆಚ್ಚು ಪರಿಚಯ. ಆದರೆ, ನಾವೇನು ಕಡಿಮೆ ಎನ್ನುವ ಹಾಗೆ ಗಂಡು ಮಕ್ಕಳು ಕೂಡ ತಾವು ಅಡುಗೆ ಮಾಡಲು ಸಿದ್ಧರಾದರು.
ಮಕ್ಕಳು ಕುತೂಹಲದಿಂದ ಕಾಯುತ್ತಿದ್ದ ದಿನ ಬಂದಾಗ ತಮ್ಮ ತಂಡಗಳಿಗೆ ನಿಗಧಿಪಡಿಸಿದ್ದ ಸ್ಥಳದಲ್ಲಿ ಸ್ವಚ್ಚವಾಗಿ ಓರಣಗೊಳಿಸಿಕೊಂಡರು ಶಾಲೆಯವತಿಯಿಂದ ನೀಡಿದ ಇಟ್ಟಿಗೆಗಳನ್ನು ಬಳಸಿಕೊಂಡು ಒಲೆಯನ್ನು ಸಿದ್ಧಪಡಿಸಿಕೊಂಡರು ಕೆಲವು ಮಕ್ಕಳಂತು ಹಳ್ಳಿಯ ಸೊಗಡನ್ನು ಪರಿಚಯಿಸುವ ರೀತಿಯಲ್ಲಿ ಒಲೆಗೆ ಹರಿಶಿಣ-ಕುಂಕುಮ ಹಚ್ಚಿ, ರಂಗೋಲಿ ಬರೆದು, ಪೂಜೆಯನ್ನು ನೆರವೇರಿಸಿ ಸೌದೆಯನ್ನು ಬಳಸಿಕೊಂಡು ಒಲೆಯನ್ನು ಹಚ್ಚಿದರು, ಇನ್ನೂ ಕೆಲವರು ಪಾಪ ಒಲೆಯನ್ನು ಹಚ್ಚಲು ಕಷ್ಟಪಡುತ್ತಲೇ ಇದ್ದರು. ಅದೆಷ್ಟು ಕಷ್ಟಪಟ್ಟರೂ ಒಲೆ ಹಚ್ಚಲು ಬಾರದೇ ಇದ್ದಾಗ ಕೆಲವು ಶಿಕ್ಷಕರು ಅದಕ್ಕೆ ಸಹಾಯ ಮಾಡಿದರು. ಮಕ್ಕಳಲ್ಲಿ ಇದ್ದಂತಹ ಉತ್ಸಾಹವನ್ನು ವರ್ಣಿಸುವುದೇ ಅಸಾಧ್ಯ ಎನ್ನುವ ಹಾಗೆ. ಕೆಲವರು ಒಲೆಯ ಮೇಲಿನ ಪಾತ್ರೆಯಲ್ಲಿ ಅಡುಗೆಗೆ ಸಿದ್ಧತೆ ನಡೆಸುತ್ತಿದ್ದರೆ, ಉಳಿದವರು ತರಕಾರಿ ಕತ್ತರಿಸುವಲ್ಲಿ, ಪ್ರತಿಯೊಂದು ಪದಾರ್ಥವನ್ನು ಜೋಪಾನವಾಗಿ ಪ್ರತ್ಯೇಕವಾಗಿರಿಸುತ್ತ, ಚಪಾತಿ ಲಟ್ಟಿಸುವುದು, ಒಗ್ಗರಣೆ, ಬೇಯಿಸುವ, ಎಣ್ಣೆಯಲ್ಲಿ ಹಾಕಿ ಕರಿಯುವ, ಪಾತ್ರೆಗಳನ್ನು ತೊಳೆದು ಶುದ್ಧಮಾಡುವುದು ಹೀಗೆ ಅದೆಷ್ಟು ಆಸಕ್ತಿಯಲ್ಲಿ ಕೆಲಸದಲ್ಲಿ ತಲ್ಲೀನರಾಗಿದ್ದರೆಂದರೆ, ತಾವೇ ದಿನವೂ ಮನೆಯಲ್ಲಿ ಅಡುಗೆ ಮಾಡುವವರು ಎನ್ನುವ ರೀತಿಯಲ್ಲಿ, ಮಕ್ಕಳನ್ನು ಕಂಡ ಪೋಷಕರು ಆಶ್ಚರ್ಯ ವ್ಯಕ್ತಪಡಿಸಿದರು. ‘ಇವು ನಿಜಕ್ಕೂ ನಮ್ಮ ಮಕ್ಕಳೇನಾ? ಮನೆಯಲ್ಲಿ ತಿಂದ ನಂತರ ತಟ್ಟೆಯನ್ನೇ ತೆಗೆಯದವರು, ಹೀಗೆಲ್ಲಾ ಮಾಡುತ್ತಿದ್ದಾರೆ ಎಂದರೆ ನಿಜಕ್ಕೂ ಆಶ್ಚರ್ಯವೇ ಸರಿ!’ ಬಹುತೇಕ ಪೋಷಕರ ನುಡಿಯು ಇದೇ ಆಗಿತ್ತು. ಮನೆಯಲ್ಲಿ ಗ್ಯಾಸ್ ನಿಂದ ಅಡುಗೆ ಮಾಡುವ ಕಾಲದಲ್ಲಿ ಒಲೆಯಲ್ಲಿ ಮಾಡುವುದನ್ನು ನೋಡಿ ಹಲವರು ತಮ್ಮ ಹಳೆಯ ದಿನಗಳನ್ನು ನೆನೆಸಿಕೊಂಡಿದ್ದು ಉಂಟು. ತಿಂಡಿಗಳು, ಚಾಟ್ಸ್ ಗಳನ್ನು ಮಾಡಿದ್ದ ಮಕ್ಕಳ ನಡುವೆ ಬಾಳೆಎಲೆಯ ಊಟವನ್ನು ಸಿದ್ಧಪಡಿಸಿದ್ದರು. ಗಂಡುಮಕ್ಕಳು ತಾವೇನು ಕಡಿಮೆ ಇಲ್ಲ ಎಂಬಂತೆ ಮುದ್ದೆ ಬಸ್ಸಾರು, ಗಿಣ್ಣ, ಪಲಾವ್, ರೊಟ್ಟಿ ಹೀಗೆ ಬಾಯಲ್ಲಿ ನೀರೂರಿಸುವಂತಹ ಖಾದ್ಯಗಳನ್ನು ತಯಾರಿಸಿದ್ದರು. ಅಡುಗೆ ಮಾಡುವ ಅವಧಿ ಮುಗಿದಾಗ ಅದನ್ನು ತೀರ್ಪುಗಾರರ ಮುಂದೆ ಪ್ರಸ್ತುತಪಡಿಸಲು ಅದನ್ನು ಅಲಂಕರಿಸಿದ ರೀತಿ, ಜೋಡಿಸಿದ್ದು, ಅಚ್ಚುಕಟ್ಟುತನ ಇವನ್ನು ಎಲ್ಲಿ ಕಲಿತರು ಎನ್ನುವ ಸಂದೇಹ ಮೂಡವ ರೀತಿಯಲ್ಲಿದ್ದಂತದ್ದು ಸತ್ಯ. ಕೆಲವು ತಂಡಗಳು ಉತ್ತಮವಾಗಿ ತಯಾರಿಸಿದ್ದರೆ, ಕೆಲವು ತಂಡಗಳಲ್ಲಿ ಉಪ್ಪು, ಹುಳಿ, ಕಾರಗಳಲ್ಲಿ ವ್ಯತ್ಯಾಸವನ್ನು ಪೋಷಕರು ತಿಳಿಸಿ ಅದನ್ನು ಸರಿಪಡಿಸಿಕೊಳ್ಳಲು ನೀಡುತ್ತಿದ್ದ ಸಲಹೆಗಳು, ಮಕ್ಕಳ ಈ ಪ್ರಯತ್ನ ಕಂಡು ಖುಷಿಯಾದವರು, ಬೆರಗಾದವರು ಹೀಗೆ ಅನೇಕ ಭಾವನೆಗಳ ಮಿಶ್ರಣವೇ ತುಂಬಿತ್ತು. ತೀರ್ಪುಗಾರಿಕೆ ಮುಗಿದ ಮೇಲೆ ಅದನ್ನು ಮಾರಾಟ ಮಾಡುವ ರೀತಿಯನ್ನು ಕಂಡು ಬೆರಗಾಯಿತು. ಎಂತಹ ವ್ಯವಹಾರ ಜ್ಞಾನವನ್ನು ಸಂಪಾದಿಸಿಕೊಂಡಿದ್ದಾರಲ್ಲ ಎಂದೆನಿಸಿತು ಬಂದ ಹಣವನ್ನು ಸಮವಾಗಿ ಹಂಚಿಕೊಂಡವರು, ಕೆಲವರು ಯಾವುದಾದೂ ಬಡವರಿಗೆ ನೀಡಿ ಎಂದು ಶಾಲೆಯ ಮುಖ್ಯಸ್ಥರಿಗೆ ನೀಡಿದ್ದು ಮೆಚ್ಚುಗೆಯಾಗಿದ್ದಂತೂ ಹೌದು.
ಅನೇಕ ದಿನಗಳು ಕಳೆದ ನಂತರದಲ್ಲಿ ಫಲಿತಾಂಶವನ್ನು ಪ್ರಕಟಿಸುವಾಗ ಎಲ್ಲರಲ್ಲೂ ಕುತೂಹಲ. 8,9,10ನೇ ತರಗತಿಯ ಮಕ್ಕಳಿಗೆ ಪ್ರತ್ಯೇಕವಾಗಿ ಬಹುಮಾನ ಎಂದು ತಿಳಿಸಿದರು. 8ನೇ ತರಗತಿಯ ಪ್ರಶಸ್ತಿ ಘೋಷಣೆ ಮೊದಲ ಎರಡು ಪ್ರಶಸ್ತಿಗಳು ಹುಡುಗರ ಪಾಲು. 9ನೇ ತರಗತಿಯಲ್ಲಿ ಪ್ರಥಮ ಸ್ಥಾನ ಹುಡುಗರೇ, 10ನೇ ತರಗತಿಯಲ್ಲಿ ದ್ವಿತೀಯ ಸ್ಥಾನ ಹುಡುಗರ ಪಾಲು. ಈ ಫಲಿತಾಂಶ ನೋಡಿದರೆ ಗಂಡುಮಕ್ಕಳು ಅಡುಗೆಲಿ ಸೈ ಅನಿಸಿಕೊಂಡದ್ದಂತೂ ಸುಳ್ಳಲ್ಲ.
ಈ ಕಾರ್ಯಕ್ರಮದ ಯಶಸ್ಸನ್ನು ಕಂಡು ಪ್ರತಿ ವರ್ಷವೂ ಈ ಸ್ಪರ್ಧೆಯು ನಡೆಯುತ್ತಲೇ ಬರುತ್ತಿದೆ. ಪ್ರತಿ ಮಕ್ಕಳು ಸಂತೋಷದಿಂದ ಭಾಗವಹಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಒಂದಿಷ್ಟು ಬದಲಾವಣೆಗಳೊಂದಿಗೆ ಸಾಗುತ್ತ ಬರುತ್ತಿದೆ. ನಂತರದ ದಿನಗಳಲ್ಲಿ ಚಾಟ್ಸ್ ಗಳನ್ನು ಹೊರತು ಪಡಿಸಿ, ಈ ಸ್ಪರ್ಧೆ ನಿರಂತರವಾಗಿ ಸಾಗುತ್ತಿದೆ, ಯಶಸ್ವಿಯೂ ಆಗಿದೆ. ಇಂದು ಶಿವಮೊಗ್ಗದ ಅನೇಕ ಶಾಲೆಗಳಲ್ಲಿ ಅಡುಗೆ ಸ್ಪರ್ಧೆಗಳು ನಡೆಯಲು ಇದು ಪೂರಕ ಮತ್ತು ಪ್ರೇರಕವೂ ಆಗಿದೆ.
ಸಣ್ಣಪುಟ್ಟ ಜಗಳಗಳಿಂದ ಕೂಡಿರುತ್ತಿದ್ದ ವಿದ್ಯಾರ್ಥಿಗಳ ಬಳಗವು ಗುಂಪಾಗಿ ಸೇರಿಕೊಂಡು ತಮ್ಮನ್ನು ತಾವು ತೊಡಗಿಸಿಕೊಂಡು ಭಾಗವಹಿಸಿದ್ದು ಪೋಷಕರು ಮತ್ತು ಶಿಕ್ಷಕರಿಗೂ ಸಂತೋಷ ನೀಡಿದೆ. ಪ್ರತಿಬಾರಿಯೂ ಪಾಠ, ಪಠ್ಯಗಳಲ್ಲೇ ಮುಳುಗಿರುತ್ತಿದ್ದ ಮಕ್ಕಳಿಗೆ ಇದೊಂದು ವಿಶೇಷ ಎನಿಸಿದೆ. ಇಂತಹ ಅನೇಕ ಕಾರ್ಯಕ್ರಮಗಳ ಮೂಲಕ ಸ್ವಯಂಪ್ರೇರಿತವಾಗಿ ತೊಡಗಿಸಿಕೊಳ್ಳುವಂತ ಕಾರ್ಯಕ್ರಮಗಳು ನಿಜಕ್ಕೂ ಯಶಸ್ವಿಯೂ ಮತ್ತು ಆನಂದದಾಯಕವಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಒಂದು ಕಾರ್ಯಕ್ರಮ ಅನೇಕ ಒಳ್ಳೆಯ ಕಾರ್ಯಕ್ರಮಕ್ಕೆ ಹಾಕಿದ ಮುನ್ನುಡಿ ಎಂದರೆ ತಪ್ಪಾಗಲಾರದು…