Latest News

75 ವರ್ಷಗಳಿಂದ ಜೀವಜಲ ಕಾಪಾಡಿದ ಬಾವಿ: ಜವರಮ್ಮ ಸಿಂಗ್ರೇ ಗೌಡರ ಕುಟುಂಬಕ್ಕೆ ವಿಶ್ವ ಜಲ ದಿನದ ಗೌರವ

ಕೆ ಆರ್. ನಗರ. ಮಾ:- ಸುಮಾರು 75 ವರ್ಷಗಳ ಹಿಂದೆ ತಮ್ಮ ಕುಟುಂಬಕ್ಕಾಗಿ ನಿರ್ಮಿಸಿಕೊಂಡ ಜೀವ ಜಲದ ಬಾವಿಯನ್ನು ಇಂದಿಗೂ ರಕ್ಷಣೆ ಮಾಡಿಕೊಂಡು ಬಂದ ಜವರಮ್ಮ ಸಿಂಗ್ರೇ ಗೌಡರ  ಕುಟುಂಬಗಳಿಗೆ  ವಿಶ್ವ ಜಲ ದಿನದಂದು ನೆನೆಯುವ ಜೊತೆಗೆ ನಮಸ್ಕಾರವನ್ನು ತಿಳಿಸುವ ಹಾಗೂ ಇತರರು ಇವರಂತೆ ಹಳೆಯ ಬಾವಿಗಳನ್ನು ರಕ್ಷಿಸಿ ಅಂತರ್ಜಲವನ್ನು ಹೆಚ್ಚಿಸುವ ಕೆಲಸವನ್ನು ಮಾಡಿ ಎಂದು ತಿಳಿಸೋಣ.

 ಸಾಲಿಗ್ರಾಮ ತಾಲೂಕಿನ ಮಿರ್ಲೆ ಹೋಬಳಿಯ ವಡ್ಡರ ಕೊಪ್ಪಲು ಎಂಬ ಚಿಕ್ಕ ಗ್ರಾಮದಲ್ಲಿ ದಿವಂಗತ ಜವರಮ್ಮ ಸಿಂಗ್ರೇ ಗೌಡರು   ತಮ್ಮ ಕುಟುಂಬಕ್ಕೆ ಕುಡಿಯುವ ನೀರಿನ ನಿರ್ವಹಣೆಗಾಗಿ ಸುಮಾರು 75 ವರ್ಷಗಳಿಗೂ ಹಿಂದೆ ಸುಮಾರು 20 ಅಡಿ ಆಳದ ಬಾವಿಯನ್ನು ನಿರ್ಮಿಸಿಕೊಂಡು ಅಲ್ಲಿ ಬರುತ್ತಿದ್ದ ಅಂತರ್ಜಲದ ನೀರನ್ನು ತಮ್ಮ ಕುಟುಂಬ ಮತ್ತು ಜಾನುವಾರಗಳಿಗೆ  ಹಾಗೂ ತಮ್ಮ ಭೂಮಿಗೆ ಬಳಕೆ ಮಾಡಿಕೊಂಡು ಜೀವ ಜಲವನ್ನು ರಕ್ಷಣೆ ಮಾಡುತ್ತಿದ್ದರು.

 ಅವರು  ಕಾಲವಾದ ನಂತರ ಅವರ ಮೂರು ಜನ ಮಕ್ಕಳು ಅವರ ಭೂಮಿಯನ್ನು ವಿಭಾಗ ಮಾಡಿಕೊಂಡು ವ್ಯವಸಾಯ ಮಾಡಿಕೊಂಡು ಹೋಗುತ್ತಿದ್ದಾರೆ ಅವರ ಮಧ್ಯೆ ಮಗ ಚೆಲುವೇಗೌಡ ಮತ್ತು ಅವರ ಶ್ರೀಮತಿ ದಿವಂಗತ ಜವರಮ್ಮ ರವರ ಭಾಗಕ್ಕೆ ಬಂದ ಈ ಬಾವಿಯನ್ನು ಮುಚ್ಚಿ ವ್ಯವಸಾಯ ಮಾಡಲು ತೀರ್ಮಾನ ಮಾಡಿದಾಗ ದಿವಂಗತ ಜವರಮ್ಮ ಅವರ ಪತಿ ಚೆಲುವೆಗೌಡ ಮತ್ತು ಮಕ್ಕಳನ್ನು ಕರೆದು ಯಾವುದೇ ಕಾರಣಕ್ಕೂ ನಮ್ಮ ಹಿರಿಯರ ಕಾಲದಿಂದಲೂ ಉಪಯೋಗಕ್ಕೆ ಬರುತ್ತಿರುವ ಈ ಜಲಜೀವ ಬಾವಿಯನ್ನು ಮುಚ್ಚಬೇಡಿ ಎಂದು ಮಾಡಿದ ಒತ್ತಾಯದ ಮೇರೆಗೆ ಅಂದಿನಿಂದ ಇಂದಿನವರೆಗೂ ಈ ಬಾವಿಯಲ್ಲಿ ನೀರು ತುಂಬಿ ತುಳುಕಾಡುತ್ತಿರುತ್ತದೆ.

 ಕುಟುಂಬಕ್ಕೆ ತೆರೆದ ಬಾವಿ ಗ್ರಾಮಕ್ಕೆ ಉಪಯೋಗ :- ತಮ್ಮ ಕುಟುಂಬಕ್ಕೋಸ್ಕರ ತೆಗೆದ ಬಾವಿ ಗ್ರಾಮದ ಬಳಕೆಗು ಉಪಯೋಗವಾಗಿತ್ತು ಗ್ರಾಮಕ್ಕೆ ನೀರಿನ ತೊಂದರೆ ಉಂಟಾದಾಗ ಮತ್ತು ಸುತ್ತು ಮುತ್ತಲಿನ ಜಾನುವಾರುಗಳಿಗೆ ಕುಡಿಯಲು ನೀರು ಸಿಗದಿದ್ದಾಗ ಈ ಬಾವಿಯಿಂದಲೇ ಗ್ರಾಮದ ಜನತೆಗೆ ಮತ್ತು ಜಾನುವಾರುಗಳಿಗೆ ನೀರನ್ನು ತೆಗೆದುಕೊಂಡು ಹೋಗುತ್ತಿದ್ದು ಉಂಟು ಎಂದು ಗ್ರಾಮದ ಹಿರಿಯರು ಸಹ ಹೇಳುತ್ತಾರೆ.

 ಬರಗಾಲದಲ್ಲಿಯೂ ತುಂಬಿ ತುಳುಕುತ್ತಿದ್ದ ನೀರಿನ ಬಾವಿ:- ಬರಗಾಲದ ಸಮಯದಲ್ಲಿ ಊರಿನ ಒಳಗೆ ಮತ್ತು ಹೊರಗೆ ಸುತ್ತಮುತ್ತಲಿನ ಕೆರೆಕಟ್ಟೆಗಳಲ್ಲಿಯೂ ನೀರಿಲ್ಲದೆ ಬತ್ತಿ ಹೋದ ಸಮಯದಲ್ಲಿ ಈ ಬಾವಿಯಲ್ಲಿ ಮಾತ್ರ ಅಂತರ್ಜಲದಿಂದ ತುಂಬಿ ತುಳುಕುತ್ತಿತ್ತು ಈ ಬಾವಿಯಿಂದಲೇ ಸುತ್ತಮುತ್ತಲಿನ ಜನತೆ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳುತ್ತಾರೆ.

 ಸಾಂಕ್ರಮಿಕ ರೋಗದ ಭಯದಿಂದ ಊರಿನ ಹೊರಗೆ ಬಂದ ವೇಳೆ ತೆಗೆದ ಬಾವಿ :- ಸುಮಾರು ಐವತ್ತು ಅರವತ್ತು ವರ್ಷಗಳ ಹಿಂದೆ ಸಾಂಕ್ರಮಿಕ ರೋಗಗಳಾದ ವಾಂತಿಬೇದಿ ಕಾಲರ ಸಿಡುಬು ಪ್ಲೇಗೂ ಸೇರಿದಂತೆ ಇನ್ನಿತರ ಅಂಟು ಕಾಯಿಲೆಗಳಿಂದ ದೂರ ಉಳಿಯಲು ಗ್ರಾಮವನ್ನೇ ತ್ಯಜಿಸುತ್ತಿದ್ದ ವೇಳೆ ದಿವಂಗತ ಸಿಂಗ್ರೇಗೌಡರ ಕುಟುಂಬ ಗ್ರಾಮವನ್ನು ತ್ಯಜಿಸಿ ತಮ್ಮ ಭೂಮಿಯಲ್ಲಿ ವಾಸಿಸಲು ಸೆಡ್ ನಿರ್ಮಾಣ ಮಾಡಿಕೊಂಡ ವೇಳೆ ತಮಗೆ ಮತ್ತು ತಮ್ಮ ದನಕರಿಗಳಿಗಾಗಿ ನಿರ್ಮಿಸಿಕೊಂಡ ಈ ಬಾವಿ ಇಂದು ತಮ್ಮ ಕುಟುಂಬಕ್ಕಲ್ಲದೆ ಗ್ರಾಮಕ್ಕು ಇತರರಿಗೂ ಬಳಕೆಯಾಗಿರುವುದು ವಿಶೇಷವಾಗಿದೆ ಎಂದು ಅವರ ಕುಟುಂಬದವರು ಹೇಳುತ್ತಾರೆ.

 ಆದ್ದರಿಂದ ಇಂದು ವಿಶ್ವ ಜಲ ದಿನದ ವಿಶೇಷವಾಗಿ ಪ್ರಾಣಿ ಪಕ್ಷಿಗಳಿಂದ ಜನರ ಬದುಕಿಗಾಗಿ ಅಂತರ್ಜಲದ ಉಳಿವಿಗಾಗಿ ಕೆರೆ ಕಟ್ಟೆ ಬಾವಿಯನ್ನು ತೆರೆಯೋಣ ಇಂದು ಈ ಚಿಕ್ಕ ಗ್ರಾಮದಲ್ಲಿ ಹಿರಿಯರು ನಿರ್ಮಿಸಿದಂತೆ ಬಾವಿಯೊಂದನ್ನು ತೆರೆದು ನಮಗೂ ಸಹಾಯದ ಜೊತೆಗೆ ಇತರರಿಗೂ ಸಹಾಯವಾಗಲು ಸಹಕರಿಸೋಣ. ” ಕುಡಿಯುವ ನೀರಿನ ಕೊರತೆ ನೀಗಿಸೋಣ ಅಂತರ್ಜಲದ ಮಟ್ಟ ಹೆಚ್ಚಿಸಿ ಪರಿಸರದ ಸಮತೋಲನ ಕಾಪಾಡೋಣ ಜಲವೇ ಜೀವದ ಸೆಲೆ ಉಳಿಸೋಣ ಹನಿ ಹನಿಯ ನೀರು ಇದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬ ಮಾತನ್ನು ಹೇಳುತ್ತಾ ಎಲ್ಲರೂ ಈ ಹಿರಿಯ ಕುಟುಂಬದ ಸಂದೇಶವನ್ನು ಪಾಲಿಸುವ. “

 ಬಾಕ್ಸ್ ಕಾಲಂ ” ನಾವು ಚಿಕ್ಕವರಿದ್ದಾಗ ನಮ್ಮ ತಂದೆ ತಾಯಿ ನಮ್ಮ ಕುಟುಂಬಕ್ಕೋಸ್ಕರ ವರ್ಷಗಟ್ಟಲೆ ಈ ಬಾವಿಯನ್ನು ತೆರೆದಿದ್ದೆವು ಆಗ ಬಂದ ನಮ್ಮ ಬಾವಿಯ ಅಂತರ್ಜಲದ ನೀರು ಇಲ್ಲಿಯವರೆಗೂ ನಿಂತಿಲ್ಲ ನಮ್ಮ ಮಕ್ಕಳು ಸಹ ನಮ್ಮ ಭೂಮಿಯಲ್ಲಿ ಕೊಳವೆ ಬಾವಿಯನ್ನು ತೆರೆದಿದ್ದರೂ ಆ ಬಾವಿಯಲ್ಲಿಯೂ ಸಹ ನೂರ ಐವತ್ತು ಇನ್ನೂರು ಅಡಿಗಳ ಅಂತರದಲ್ಲಿ  ನೀರು ಸಿಗುತ್ತದೆ ಆದರೆ ದೇವರ ಕೃಪೆಯು ಗಂಗಾಮಾತೆಯ ಕೃಪೆಯು ಗೊತ್ತಿಲ್ಲ ನಮ್ಮ ಇಪ್ಪತ್ತು ಅಡಿ ಆಳದ ಬಾವಿಯಲ್ಲಿ ಸದಾ ಗಂಗಾಮಾತೆ ಹರಿಯುತ್ತಿರುತ್ತದೆ ನಾನು ಸುಮಾರು ಹತ್ತು ಹದಿನೈದು ವರ್ಷದವನಿದ್ದಾಗ ತೆಗೆದ ಈ ಬಾವಿ ಈಗ ನನಗೆ 90.92  ವರ್ಷಗಳಾಗಿದೆ ಆದರೆ ಈ ಬಾವಿಯನ್ನು ನನ್ನ ಪತ್ನಿ ದಿವಂಗತ ಜವರಮ್ಮ ಮುಚ್ಚಲು ಅವಕಾಶ ನೀಡಿರಲಿಲ್ಲ ನಾನು ಸಹ ನನ್ನ ಮಕ್ಕಳಿಗೆ ಮುಚ್ಚಬೇಡಿ ಎಂದು ತಿಳಿಸಿದ್ದೇನೆ ಮುಂದೆಯೂ ಸಹ ಗ್ರಾಮದ ಜನತೆ ಮತ್ತು ಇತರರು ಈ ನೀರನ್ನು ಬಳಕೆ ಮಾಡಬಹುದು.” ಭಾವಿಯ ಒಡೆಯ ಚೆಲುವೇಗೌಡ ವಡ್ಡರ ಕೊಪ್ಪಲು  ಗ್ರಾಮ

Contact us for classifieds and ads : +91 9742974234