Articles

೩ಅಂಕಗಳಿಗೆ ಕಿರುಪರೀಕ್ಷೆಯಲ್ಲಿ ‘ನಿಮ್ಮಬಗ್ಗೆ’ ಕೇಳಲಾಗಿತ್ತು

- ಚೇತನ್ ಸಿ ರಾಯನಹಳ್ಳಿ

‘ಅಜ್ಜನ ತೋಟ’ ಅಂತ ಒಂದು ಗದ್ಯಭಾಗ ೮ನೇ ತರಗತಿಯ ತೃತೀಯ ಭಾಷೆ ಕನ್ನಡದಲ್ಲಿ ಇತ್ತು. (ಈಗ ಅದು ಅಜ್ಜಿಯ ತೋಟ ಎಂದು ಬದಲಾಗಿದೆ) ಅದರ ಲೇಖಕರು ಡಾ.ಕೆ.ಸಿ.ಶಶಿಧರ್ ಶಿವಮೊಗ್ಗದಲ್ಲಿಯೇ ನೆಲೆಸಿರುವವರು. ಪಾಠವನ್ನು ಮಾಡುವಾಗ ಅವರನ್ನು ಬೇಕಾದರೆ ಭೇಟಿ ಮಾಡಬಹುದು ನೋಡಿ ಎಂದು ಹೇಳಿದ್ದೆ.
೯ನೇ ತರಗತಿಯಲ್ಲಿ ಸವಿತಾನಾಗಭೂಷಣ ಅವರ ರಚನೆಯ ಪದ್ಯವಿತ್ತು. ಅವರೂ ಸಹ ಶಿವಮೊಗ್ಗದಲ್ಲಿಯೇ ನೆಲೆಸಿದ್ದಾರೆ ಎನ್ನುವುದನ್ನು ತಿಳಿಸಿದ್ದೆ. ತರಗತಿ ಮುಗಿದ ನಂತರದಲ್ಲಿ ಒಂದಿಷ್ಟು ವಿದ್ಯಾರ್ಥಿಗಳು ಬಂದರು, ‘ಸರ್ ಲೇಖಕರು ಶಿವಮೊಗ್ಗದಲ್ಲಿಯೇ ಇದಾರಲ್ಲ ನಾವು ಅವರನ್ನು ಭೇಟಿಯಾದರೆ ಹೇಗೆ?’ ಎಂದರು ನಾನಾಗಲೇ ಅವರನ್ನು ಭೇಟಿಯಾಗಿದ್ದೆ. ಈಗ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಭೇಟಿ ಮಾಡಿಬರಬೇಕಾದ ಪರಿಸ್ಥಿತಿ. ಆಗಲಿ ಅವರನ್ನು ಕೇಳಿ ತಿಳಿಸುವೆ ಎಂದದ್ದಾಯಿತು.

sri krishnadevaraya hampi

ಕೆ.ಸಿ.ಶಶಿಧರ್ ಸರ್‌ಗೆ ಪೋನ್ ಮಾಡಿ, ‘ಶಾಲೆಯ ಐದಾರು ಮಕ್ಕಳು ನೀವು ಬರೆದಿದ್ದ ಪಾಠವನ್ನು ಓದಿದ ನಂತರದಲ್ಲಿ ನಿಮ್ಮನ್ನು ಭೇಟಿಮಾಡಲು ಉತ್ಸುಕರಾಗಿದ್ದಾರೆ, ಒಂದಿಷ್ಟು ಸಮಯ ಸಿಗಬಹುದೇ?’ ಎಂದಾಗ ಧಾರಾಳವಾಗಿ ಬನ್ನಿರಿ ಎಂದು ಸಮಯವನ್ನು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯರಿಗೆ ಈ ರೀತಿಯಲ್ಲಿ ಲೇಖಕರೊಬ್ಬರನ್ನು ಭೇಟಿ ಮಾಡಲು ಮಕ್ಕಳು ಇಚ್ಚಿಸಿರುವ ವಿಷಯವನ್ನು ತಿಳಿಸಿ, ಅವರಿಂದಲೂ ಒಪ್ಪಿಗೆ ಪಡೆದುಕೊಂಡು ವಾರದಕೊನೆಯಲ್ಲಿ ಸಂಜೆಗೆ ಭೇಟಿಯಾಗಲು ಸಮಯವನ್ನು ನೀಡಿದ್ದಾರೆ ಎಂಬ ವಿಷಯವನ್ನು ಮಕ್ಕಳಿಗೆ ತಿಳಿಸುವ ಸಮಯದಲ್ಲಿ ೮ನೇ ತರಗತಿಯ ಸಂಕೇತ್ ಕಶ್ಯಪ್ ಕೂಡ ನಾನು ಜೊತೆಯಲ್ಲಿ ಬರಬಹುದೇ ಸರ್? ಎಂದು ಕೇಳಿಕೊಂಡ ಎಲ್ಲರೂ ಮನೆಯಲ್ಲಿ ಪೋಷಕರ ಒಪ್ಪಿಗೆ ಪಡೆದುಕೊಂಡು ಬರಲು ತಿಳಿಸಿದೆ. ಮರುದಿನಕ್ಕೆ ಎಲ್ಲರ ಒಪ್ಪಿಗೆ ಪತ್ರವನ್ನು ತಂದರು. ಇಷ್ಟು ಮಕ್ಕಳಿಗೆ ಮೊದಲೇ ತಿಳಿಸಿದ್ದರಿಂದಾಗಿ ಒಂದಿಷ್ಟು ಪ್ರಶ್ನೆಗಳನ್ನು ಪಟ್ಟಿಮಾಡಿಕೊಂಡಿದ್ದರು. ಒಂದು ಸಂದರ್ಶನದ ರೀತಿಯಲ್ಲಿ ಅವರ ಜೊತೆಗೆ ಮಾತುಕತೆಯನ್ನು ಮಾಡಿಕೊಂಡು ಬರುವುದಕ್ಕೆ ಎಲ್ಲರೂ ಸಿದ್ದತೆ ಮಾಡಿಕೊಂಡರು.
ನಿರ್ದಿಷ್ಟ ಸಮಯಕ್ಕೆ ಎಲ್ಲರೂ ಶರಾವತಿ ನಗರದ ವಿಠ್ಠಲ ದೇವಸ್ಥಾನದ ಬಳಿ ಬರಬೇಕೆಂದು ತಿಳಿಸಲಾಯಿತು. ಸಮಯಕ್ಕೆ ಸರಿಯಾಗಿ ಎಲ್ಲರೂ ಬಂದರು. ಅದರ ಹಿಂಭಾಗದಲ್ಲಿಯೇ ಲೇಖಕರ ಮನೆ. ಎಲ್ಲರೂ ಸೈಕಲ್ ನಿಲ್ಲಿಸಿದ ನಂತರದಲ್ಲಿ ಲೇಖಕರೇ ಎಲ್ಲರನ್ನು ಸ್ವಾಗತಿಸಿದರು. ಎಲ್ಲರೂ ಒಳಗೆ ಬಂದುಕುಳಿತು. ಒಬ್ಬೊಬ್ಬರ ಪರಿಚಯ ಮಾಡಿಕೊಂಡರು ಲೇಖಕರು ತಮ್ಮ ಪರಿಚಯ ಮಾಡಿಕೊಂಡಾಗ, ‘ನಿಮ್ಮ ಪರಿಚಯ ಚೆನ್ನಾಗಿದೆ ಸರ್, ೩ಅಂಕಗಳಿಗೆ ಕಿರುಪರೀಕ್ಷೆಯಲ್ಲಿ ನಿಮ್ಮ ಬಗ್ಗೆ ಕೇಳಲಾಗಿತ್ತು’ ಧನುಷ್ ನಾವುಡ ತಿಳಿಸಿದ. ಅಲ್ಲದೇ ಪಠ್ಯಪುಸ್ತಕದಲ್ಲಿ ಅವರು ಬರೆದಿರುವ ಪಾಠವನ್ನು ಅವರಿಗೆ ತೋರಿಸಲಾಯಿತು. ಒಮ್ಮೆ ಖುಷಿಯಿಂದ ಅದನ್ನು ನೋಡಿದರು. ಈ ರೀತಿಯಲ್ಲಿ ಪುಸ್ತಕದಲ್ಲಿ ಇದೆಯೇ ನಾನು ನೋಡಿರಲಿಲ್ಲ ಎಂದು ಸಂತೋಷದಿoದ ಅದನ್ನು ಮಗುಚಿಮಗುಚಿ ನೋಡಿದರು. ‘ಈಗ ನಾನೇನು ಮಾಡಬೇಕಿದೆ?’ ಎಂದು ಲೇಖಕರು ಕೇಳಿದಾಗ, ‘ಪಠ್ಯಕ್ಕೆ ಸಂಬoಧಿಸಿದoತೆ ಒಂದಿಷ್ಟು ಪಶ್ನೆಗಳನ್ನು ಮಕ್ಕಳು ಸಿದ್ದಪಡಿಸಿಕೊಂಡಿದ್ದಾರೆ, ಸಣ್ಣ ಸಂದರ್ಶನದ ರೀತಿಯಲ್ಲಿ ಇದನ್ನು ರೆಕಾರ್ಡ್ ಮಾಡಿಕೊಂಡು ಶಾಲೆಯ ಇತರ ಮಕ್ಕಳಿಗೆ ತಲುಪಿಸೋಣ ಎಂದು ಸಣ್ಣ ಯೋಜನೆಯನ್ನು ಮಾಡಿಕೊಂಡಿದ್ದೇವೆ’ ಎಂದಾಗ ಹಾಗಾದರೆ ಸರಿ ಎಂದರು. ಲೇಖಕರು, ಎಲ್ಲಾ ವಿದ್ಯಾರ್ಥಿಗಳು ಕಾಣಿಸಿಕೊಳ್ಳುವ ಹಾಗೆ ಶಂತನು, ಶಶಾಂಕ್ ಕ್ಯಾಮಾರವನ್ನು ಸಿದ್ದಗೊಳಿಸಿಕೊಂಡರು. ಮಾತುಕತೆ ಶುರುವಾಯಿತು. ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಮೂಡಿದ್ದು ಹೇಗೆ? ಹಲವಾರು ಪುಸ್ತಕಗಳನ್ನು ರಚಿಸಿದ್ದು ಹೇಗೆ? ಅದು ಪಠ್ಯ ರೂಪದಲ್ಲಿ ಮಕ್ಕಳು ಕಲಿಯುವುದು ಹೇಗೆ ಖುಷಿ ನೀಡಿತು? ಅದು ಇದು ಎಂದು ಸುಮಾರು ಅರ್ಧಗಂಟೆಗಳ ಕಾಲ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಅಂತುಇAತೂ ಕಡೆಯ ಪ್ರಶ್ನೆಗೆ ಉತ್ತರಿಸಿ, ‘ಪತ್ರಕರ್ತರ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿದ್ರಿ, ಮುಂದೆ ನೀವೇನಾದರೂ ಪತ್ರಕರ್ತರಾದರೆ ಚೆನಾಗಿ ಕಾರ್ಯಕ್ರಮ ಮಾಡ್ತಿರಿ, ಅದರಲ್ಲಿ ಅನುಮಾನವೇ ಇಲ್ಲ’ ಅಂದರು. ಎಲ್ಲರೂ ಒಂದು ಸಣ್ಣನಗು ನಕ್ಕು ಸಂದರ್ಶನವನ್ನು ಮುಗಿಸಿದೆವು. ಅವರ ಜೊತೆಗೆ ಪೋಟೋ ತೆಗೆಸಿಕೊಂಡೆವು ನಂತರದಲ್ಲಿ ಕಾಫಿ, ಹಣ್ಣನ್ನು ನೀಡಿದರು. ಸಂದರ್ಶನದ ಆಚೆಗೂ ಹಲವಾರು ಕೃಷಿಯ ಬಗ್ಗೆ ಸಣ್ಣ ಅನುಮಾನ, ಶಿಕ್ಷಣ, ಬಾಲ್ಯ ಕುಟುಂಬದ ಸಹಕಾರದ ಬಗ್ಗೆಯೂ ಕೇಳಿ ತಿಳಿದುಕೊಂಡೆವು. ಅವರ ಕುಟುಂಬದ ಎಲ್ಲ ಸದಸ್ಯರನ್ನು ಪರಿಚಯಿಸಿದರು. ಇದೊಂದು ತಮಗೆ ವಿಶೇಷ ಅನುಭವ. ‘ಪಠ್ಯಪುಸ್ತಕದಲ್ಲಿ ಬಂದ ಪಾಠದ ಬಗ್ಗೆ ಹೀಗೆ ತಮ್ಮನ್ನು ಭೇಟಿಯಾದ ಮಕ್ಕಳಲ್ಲಿ ನೀವೇ ಮೊದಲಿಗರು, ಏನೋ ಒಂದಿಷ್ಟು ಮಾತನಾಡಬಹುದು ಅಂದುಕೊAಡರೆ ಸಂದರ್ಶನ ಕರ‍್ಯಕ್ರಮವೇ ಆಗಿಹೋಯಿತು, ನಿಮ್ಮ ಜೊತೆಗೆ ಕಳೆದ ಈ ಸಮಯ ಮರೆಯೋಕೆ ಸಾಧ್ಯವೇ ಇಲ್ಲ’ ಎಂದಾಗ ಅದೇನೋ ಹಿಗ್ಗೋಹಿಗ್ಗು ನಮ್ಮ ಮಕ್ಕಳಲ್ಲಿ. ಒಟ್ಟಿನಲ್ಲಿ ಒಂದಿಷ್ಟು ಸಮಯವನ್ನು ಪುಸ್ತಕದೊಳಗಿದ್ದ ಲೇಖಕರ ಜೊತೆಗೆ ಕಳೆದದ್ದು ಮಕ್ಕಳಿಗಂತೂ ಹೇಳತೀರದ ಸಂತೋಷ. ಅವರನ್ನು ಬೀಳ್ಕೊಂಡು ಹೊರಡುವಾಗ, ‘ಹುಷಾರಾಗಿ ಹೊರಡಿ, ಮತ್ತೊಮ್ಮೆ ಬಿಡುವು ಮಾಡಿಕೊಂಡು ಎಲ್ಲರೂ ಸಿಗೋಣ’ ಎಂಬ ಮಾತುಗಳನ್ನಾಡಿ ಕಳಿಸಿಕೊಟ್ಟರು.
ಎರಡು-ಮೂರು ದಿನಗಳಲ್ಲಿ ಅವರ ಜೊತೆಗಿನ ಸಂದರ್ಶನವನ್ನು ತರಗತಿಯಲ್ಲಿ ಮಕ್ಕಳಿಗೆ ತೋರಿಸಲು ಸಿದ್ದತೆ ಮಾಡಿಕೊಂಡೆವು. ಮೊದಲು ಅವರ ಪರಿಚಯವನ್ನು ಮಾಡಿಕೊಟ್ಟು, ನಂತರದಲ್ಲಿ ಅವರ ಜೊತೆಗೆ ಮಾತುಕತೆ ನಡೆಸಿದ್ದು, ನಂತರದಲ್ಲಿ ಎಲ್ಲರೂ ಸೇರಿ ತೆಗೆಸಿಕೊಂಡ ಪೋಟೋವನ್ನು ಹಾಕಿ ತಯಾರು ಮಾಡಿ ತರಗತಿಯಲ್ಲಿ ಮಕ್ಕಳಿಗೆ ತೋರಿಸಲಾಯಿತು. ಒಂತರಾ ಎಲ್ಲರಿಗೂ ಖುಷಿ ಪಾಠದ ಬಗ್ಗೆ ಸ್ವತಃ ಲೇಖಕರೇ ಮಾತನಾಡಿದ್ದಾರೆ. ಪ್ರಶ್ನೆಗಳನ್ನು ಕೇಳಿದವರು ಸಹಪಾಠಿಗಳೇ ಆಗಿದ್ದಾರೆ. ನಾವುಗಳು ಒಮ್ಮೆ ಭೇಟಿಮಾಡಬೇಕು ಎಂಬ ಹಂಬಲ ಎಲ್ಲರಲ್ಲೂ.
ಇದೊಂದು ರೀತಿಯಲ್ಲಿ ಎಲ್ಲರಿಗೂ ಹೊಸ ಅನುಭವ. ಪುಸ್ತಕದಲ್ಲಿ ಪಾಠ/ಪದ್ಯಗಳನ್ನು ಬರೆದಿರುವವರ ಜೊತೆಗೆ ಅವರ ಪಠ್ಯದ ಬಗ್ಗೆ ಅವರ ಜೊತೆಯಲ್ಲಿಯೇ ಚರ್ಚಿಸಿ ಅವರಿಂದಲೇ ತಿಳಿದುಕೊಳ್ಳುವುದು ಅವರನ್ನು ಸಂದರ್ಶಿಸಿದವರಿಗೆ ಹೇಳತೀರದ ಆನಂದ. ಅದನ್ನು ತರಗತಿಯಲ್ಲಿ ವೀಕ್ಷಿಸಿದ ಮಕ್ಕಳಿಗೂ ಸಂತೋಷ.
ತರಗತಿಯಲ್ಲಿ ಪಾಠಪದ್ಯಗಳಲ್ಲೇ ಇರುತ್ತಿದ್ದ ವಿದ್ಯಾರ್ಥಿಗಳಿಗೆ ಇದೊಂದು ಹೊಸರೀತಿಯ ಅನುಭವ. ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ಲೇಖಕರ ಜೊತೆಗೆ ಮಾತನಾಡಲು ಅವಕಾಶ ಸಿಕ್ಕಿದ್ದು, ಇದು ಎಲ್ಲಾ ಮಕ್ಕಳಿಗೂ ಸಿಗಬೇಕೆಂಬ ಸಣ್ಣ ಆಸೆ. ಒಮ್ಮೆ ಲೇಖಕರನ್ನು ಶಾಲೆಗೆ ಆಹ್ವಾನಿಸಿ ಒಂದಿಷ್ಟು ಸಮಯ ಮಕ್ಕಳ ಜೊತೆಗೆ ಕಳೆಯಲು ಅವಕಾಶ ಮಾಡಿಕೊಡಬೇಕೆಂಬುದು. ಈ ಆಸೆ ಇನ್ನೂ ಹಾಗೆ ಇದೆ. ಎಂದು ನೆರವೇರುವುದೋ ಕಾದುನೋಡಬೇಕಿದೆ…

Contact us for classifieds and ads : +91 9742974234



 
error: Content is protected !!