
ಮೈಸೂರು :- ಮೈಸೂರು ತಾಲ್ಲೂಕಿನ ಹೂಟಗಳ್ಳಿ ನಗರದ ಕೆ.ಹೆಚ್.ಬಿ. ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೂಟಗಳ್ಳಿ ನಗರಸಭೆಯ ಆಡಳಿತ ಕಚೇರಿ ಗುರುವಾರ ವಿಶೇಷ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಕಾರ್ಯಾರಂಭ ಮಾಡಿತು. ಹೊಸ ಕಚೇರಿ ಆರಂಭದ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಸಂಭ್ರಮದ ವಾತಾವರಣ ಕಂಡುಬಂತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಜಿ.ಟಿ. ದೇವೇಗೌಡ ಅವರು ಪೂಜೆಯಲ್ಲಿ ಭಾಗವಹಿಸಿ ನೂತನ ಕಚೇರಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ವೇಗವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಜನಸೇವೆಗೆ ಅನುಕೂಲವಾಗುವ ರೀತಿಯಲ್ಲಿ ಸುಸಜ್ಜಿತ ಆಡಳಿತ ಕಚೇರಿ ಅಗತ್ಯವಾಗಿತ್ತು. ಇದೀಗ ಹೊಸ ಕಚೇರಿ ಆರಂಭಗೊಂಡಿರುವುದು ನಾಗರಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ನೆರವಾಗಲಿದೆ ಎಂದು ತಿಳಿಸಿದರು.

ಹೊಸ ಕಚೇರಿಯಲ್ಲಿ ನಾಗರಿಕರಿಗೆ ಅಗತ್ಯವಿರುವ ಮೂಲಭೂತ ಸೇವೆಗಳನ್ನು ಒಂದೇ ಕಡೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು, ತೆರಿಗೆ ಪಾವತಿ, ಕುಡಿಯುವ ನೀರು, ಸ್ವಚ್ಛತೆ, ರಸ್ತೆ, ಬೀದಿ ದೀಪ ಹಾಗೂ ಇತರ ನಗರಸಭೆ ಸಂಬಂಧಿತ ಆಡಳಿತ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಅನುಕೂಲವಾಗಲಿದೆ. ಇದರಿಂದ ಸಾರ್ವಜನಿಕರು ದೂರ ಪ್ರಯಾಣ ಮಾಡಬೇಕಾದ ಅಗತ್ಯ ಕಡಿಮೆಯಾಗಲಿದ್ದು, ಆಡಳಿತ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ ಸುರೇಶ್ ಅವರು ಮಾತನಾಡಿ, ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಜನರಿಗೆ ಹೊಸ ಕಚೇರಿ ಆರಂಭಗೊಂಡಿರುವುದು ಸಂತಸದ ವಿಷಯವಾಗಿದ್ದು, ನಾಗರಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರಕುವಂತಾಗಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಕೂರ್ಗಳ್ಳಿ ಗ್ರಾಮದ ಮಾಜಿ ತಾಲೋಕು ಪಂಚಾಯಿತಿ ಸದಸ್ಯೆ ರಾಣಿ ಸತೀಶ್ ಹಾಗೂ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್ಗಳ ಮುಖಂಡರು ಮತ್ತು ಸ್ಥಳೀಯ ನಿವಾಸಿಗಳು ಹಾಜರಿದ್ದು ನೂತನ ಕಚೇರಿ ಕಾರ್ಯಾರಂಭಕ್ಕೆ ಶುಭ ಹಾರೈಸಿದರು.
ನೂತನ ಕಚೇರಿ ಆರಂಭದ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಹಾಗೂ ಸ್ಥಳೀಯರು ಪೂಜೆಯಲ್ಲಿ ಭಾಗವಹಿಸಿ, ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವೇಗವಾಗಿ ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು. ನೂತನ ಆಡಳಿತ ಕಚೇರಿ ಆರಂಭದಿಂದ ಹೂಟಗಳ್ಳಿ ನಗರಸಭೆಯ ಆಡಳಿತ ವ್ಯವಸ್ಥೆಗೆ ಹೊಸ ಚೈತನ್ಯ ದೊರಕುವ ನಿರೀಕ್ಷೆ ವ್ಯಕ್ತವಾಗಿದೆ.


