ಮೈಸೂರು, ಮಾ.20: ಮೈಸೂರಿನ ಹಿರಿಯ ಲೇಖಕಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಚಂಪಾ ಶಿವಣ್ಣ (71) ಅವರು ಇಂದು ಬೆಳಿಗ್ಗೆ ಅನಾರೋಗ್ಯದ ಕಾರಣದಿಂದ ನಿಧನ ಹೊಂದಿದರು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ವಲಯದಲ್ಲಿ ದುಃಖದ ಛಾಯೆ ಆವರಿಸಿದೆ.
ಇವರು ಮೈಸೂರಿನ ಹಿರಿಯ ಪತ್ರಕರ್ತ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಎಂ.ಆರ್. ಶಿವಣ್ಣ ಅವರ ಪತ್ನಿಯಾಗಿದ್ದರು. ಸಾಹಿತ್ಯ ಮತ್ತು ಸಾಮಾಜಿಕ ಬದುಕಿನಲ್ಲಿ ಸರಳತೆ ಹಾಗೂ ನಿಷ್ಠೆಯನ್ನು ಅಳವಡಿಸಿಕೊಂಡಿದ್ದ ಚಂಪಾ ಶಿವಣ್ಣ ಅವರು ತಮ್ಮ ಬರವಣಿಗೆಯ ಮೂಲಕ ವಿಶಿಷ್ಟ ಗುರುತು ಮೂಡಿಸಿದ್ದರು.
ಸುಮಾರು 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ಕಥೆ, ಪ್ರಬಂಧ, ಕವನ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು. ಅವರ ಕೃತಿಗಳು ಸಾಮಾಜಿಕ ಮೌಲ್ಯಗಳು, ಮಹಿಳಾ ಬದುಕಿನ ನೈಜತೆ ಹಾಗೂ ಮಾನವೀಯ ಸಂಬಂಧಗಳ ಸೂಕ್ಷ್ಮತೆಗಳನ್ನು ಪ್ರತಿಬಿಂಬಿಸುತ್ತಿದ್ದವು. ಈ ಮೂಲಕ ಓದುಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು.
ತಮ್ಮ ಸಾಹಿತ್ಯ ಸೇವೆಯಿಂದ ಅವರು ಅನೇಕ ಹಿರಿಯ ಸಾಹಿತಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಡಾ. ದೊಡ್ಡ ರಂಗೇಗೌಡ, ಡಾ. ಸಿ.ಪಿ.ಕೆ., ಡಾ. ಹೆಚ್.ಎಸ್.ಕೆ., ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ಮಹೇಶ್ ಜೋಶಿ ಸೇರಿದಂತೆ ಹಲವು ಗಣ್ಯರು ಅವರ ಕೃತಿಗಳನ್ನು ಶ್ಲಾಘಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಲಭಿಸಿದ್ದವು.
ಕುಟುಂಬದವರಲ್ಲಿ ಪುತ್ರಿ ಶ್ರೀಮತಿ ಶಿವರಂಜಿನಿ, ಅಳಿಯ ಪ್ರಹ್ಲಾದರಾವ್, ಮೊಮ್ಮಗ ಪ್ರತಮ್ ಸೇರಿದಂತೆ ಅಪಾರ ಸಂಖ್ಯೆಯ ಬಂಧುಬಳಗ ಹಾಗೂ ಸಾಹಿತ್ಯಾಭಿಮಾನಿಗಳನ್ನು ಅವರು ಅಗಲಿದ್ದಾರೆ.
ಅವರ ನಿಧನಕ್ಕೆ ಹಿರಿಯ ಸಾಹಿತಿ ಶ್ರೀಮತಿ ಹೇಮಗಂಗಾ ಹಾಗೂ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮಕುಮಾರ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ಚಂಪಾ ಶಿವಣ್ಣ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಭರ್ತಿಯಾಗದ ನಷ್ಟ ಉಂಟಾಗಿದೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಚಂಪಾ ಶಿವಣ್ಣ ಅವರ ಅಂತ್ಯಕ್ರಿಯೆ ಕುಟುಂಬದವರ ಸಮ್ಮುಖದಲ್ಲಿ ಮೈಸೂರಿನಲ್ಲಿ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.


