Latest News

ಸ್ಥಳೀಯ ದೇಸೀಯ ಕಲಾವಿದರಿಗೆ ವೇದಿಕೆ: ರಾಜ್ಯಾದ್ಯಂತ ಮುನ್ನಲೆಗೆ ತರುವ ಶಪಥ – ಸಾಧುಕೋಕಿಲ

ಮೈಸೂರು ಕಲಾವಿದರಿಗೆ ಹೊಸ ವೇದಿಕೆ: ಸಾಧು ಕೋಕಿಲ ಘೋಷಣೆ

ಮೈಸೂರು, ಮಾ. 23: ಸಾಂಸ್ಕೃತಿಕ ಪರಂಪರೆಯ ನಾಡಾಗಿರುವ ಮೈಸೂರು ನಗರದಲ್ಲಿ ಸ್ಥಳೀಯ ಹಾಗೂ ದೇಸೀಯ ಕಲಾವಿದರ ಬದುಕಿಗೆ ಹೊಸ ದಿಕ್ಕು ನೀಡುವ ಸಂಕಲ್ಪದೊಂದಿಗೆ ಮಹತ್ವದ ಕಾರ್ಯಕ್ರಮೊಂದು ಜರುಗಿತು. ಕರ್ನಾಟಕ ರಾಜ್ಯ ಕಾಂಗ್ರೆಸ್ ಸಮಿತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ವತಿಯಿಂದ ನಗರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಮೈಸೂರು ಜಿಲ್ಲಾ ಘಟಕದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಸಾಧುಕೋಕಿಲ ಅವರು, ಸ್ಥಳೀಯ ಕಲಾವಿದರನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ಮುನ್ನಲೆಗೆ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಶ್ರಮಿಸುವುದಾಗಿ ಶಪಥ ಮಾಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡುತ್ತಾ, ಮೈಸೂರು ನಗರವು ಸಾಂಸ್ಕೃತಿಕವಾಗಿ ಅಪಾರ ಇತಿಹಾಸ ಮತ್ತು ವೈಭವ ಹೊಂದಿರುವ ನಗರ ಎಂದು ಹೇಳಿದರು. “ವಿಜಯನಗರ ಸಾಮ್ರಾಜ್ಯವನ್ನು ಬಿಟ್ಟರೆ, ಕಲೆ–ಸಂಸ್ಕೃತಿಯ ಹೆಜ್ಜೆ ಗುರುತುಗಳಿಗಾಗಿ ಗುರುತಿಸಲ್ಪಡುವ ಪ್ರಮುಖ ನಗರಗಳಲ್ಲಿ ಮೈಸೂರು ಪ್ರಮುಖ ಸ್ಥಾನ ಹೊಂದಿದೆ. ಇಲ್ಲಿ ಹುಟ್ಟಿದ ಕಲಾವಿದರು, ಸಾಹಿತ್ಯಿಕರು, ಸಂಗೀತಜ್ಞರು ದೇಶದ ಸಾಂಸ್ಕೃತಿಕ ನಕ್ಷೆಯಲ್ಲಿ ತಮ್ಮ ಗುರುತು ಮೂಡಿಸಿದ್ದಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅನೇಕ ಸ್ಥಳೀಯ ಕಲಾವಿದರು ಗುರುತಿನ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು.

“ಕಲಾವಿದರಿಗೆ ಬೆಲೆ ಇದೆ, ಆದರೆ ಸ್ಥಾನಮಾನ ಇಲ್ಲ”

ಸಾಧು ಕೋಕಿಲ ಮಾತನಾಡುತ್ತಾ,“ನಮ್ಮ ದೇಶದಲ್ಲಿ ಕಲಾವಿದರಿಗೆ ಗೌರವ ಇದೆ, ಆದರೆ ರಾಜಕೀಯ ಮತ್ತು ಸಾಮಾಜಿಕ ಸ್ಥಾನಮಾನ ಕೊರತೆಯಾಗಿದೆ. ದೂರದ ಬೆಟ್ಟ ನುಣ್ಣಿಗೆ ಎಂಬಂತೆ ಕಲಾವಿದರ ಸ್ಥಿತಿ ಆಗಿದೆ. ಮಾತಿಗಿಂತ ಸಂಗೀತ ಮತ್ತು ಸಾಹಿತ್ಯದ ಮೂಲಕ ಮನುಷ್ಯನ ಮನಸ್ಸನ್ನು ತಟ್ಟಬಹುದು,” ಎಂದು ಅಭಿಪ್ರಾಯಪಟ್ಟರು.

ದೇವತೆಗಳಿಗೂ ಸಂಗೀತ ಮತ್ತು ಸಾಹಿತ್ಯದ ಮೂಲಕವೇ ಮಹತ್ವ ಬಂದಿದೆ ಎಂದು ಹೇಳಿ, ಕಲಾವಿದರನ್ನು “ಗಂಧರ್ವರು” ಎಂದು ಕರೆಯುವುದಕ್ಕೆ ಕಾರಣವೇ ಅವರ ಕಲಾತ್ಮಕ ಶಕ್ತಿ ಎಂದು ಅವರು ಹೇಳಿದರು.

ಸಂಗೀತ, ಸಾಹಿತ್ಯ ಮತ್ತು ಕಲೆಯ ಮಹತ್ವವನ್ನು ವಿವರಿಸಿದ ಸಾಧುಕೋಕಿಲ ಅವರು, “ಮಾತಿಗಿಂತ ಸಂಗೀತ, ಸಾಹಿತ್ಯವು ಮನುಷ್ಯನ ಮನಸ್ಸನ್ನು ಹೆಚ್ಚು ಪ್ರಭಾವಿಸುತ್ತದೆ. ದೇವರುಗಳೇ ಸಂಗೀತ ಮತ್ತು ಸಾಹಿತ್ಯದ ಮೂಲಕ ಜನಮನಗಳಲ್ಲಿ ನೆಲೆಗೊಂಡಿದ್ದಾರೆ. ಅದಕ್ಕಾಗಿ ಕಲಾವಿದರನ್ನು ‘ಗಂಧರ್ವರು’ ಎಂದು ಕರೆಯುತ್ತಾರೆ. ಇಂತಹ ಕಲಾವಿದರನ್ನು ನಾವು ಉಳಿಸಿಕೊಳ್ಳಬೇಕು, ಬೆಳೆಸಬೇಕು” ಎಂದು ಕರೆ ನೀಡಿದರು.

ದಸರಾ ವೇದಿಕೆಯಲ್ಲಿ ಸ್ಥಳೀಯರಿಗೆ ಅವಕಾಶದ ಭರವಸೆ

ದಸರಾ ಮಹೋತ್ಸವದಂತಹ ಪ್ರಮುಖ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವ ಬದಲು, ಹೊರರಾಜ್ಯಗಳಿಂದ ಅಥವಾ ಹೊರಜಿಲ್ಲೆಗಳಿಂದ ಕಲಾವಿದರನ್ನು ಕರೆಸಿಕೊಳ್ಳುವ ಪದ್ಧತಿ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. “ನಮ್ಮ ಮಣ್ಣಿನ ಕಲಾವಿದರಿಗೆ ದೊಡ್ಡ ವೇದಿಕೆ ಸಿಗಬೇಕು. ಈ ಘಟಕದ ಮೂಲಕ ಅವರನ್ನು ಒಗ್ಗೂಡಿಸಿ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸಲಾಗುವುದು” ಎಂದು ಭರವಸೆ ನೀಡಿದರು.

ಕಲೆ ಎಂದರೆ ಕೇವಲ ಮನರಂಜನೆ ಅಲ್ಲ, ಅದು ದೇಶದ ಸಂಸ್ಕೃತಿ  ಡಾ. ಬಿ.ಜೆ. ವಿ

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಬಿ.ಜೆ. ವಿಜಯಕುಮಾರ್ ಅವರು, ಸಾಧುಕೋಕಿಲ ಅವರ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಮಾತನಾಡಿದರು. “ವರುಣ ಕ್ಷೇತ್ರದಲ್ಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಗಮನಾರ್ಹ. ಕಲಾವಿದರ ಬದುಕು ಆರ್ಥಿಕ ಹಾಗೂ ಸಾಮಾಜಿಕವಾಗಿ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಕಲಾವಿದರ ಪಾತ್ರ ಅಪಾರವಾಗಿದೆ. ಕಲೆ ಎಂದರೆ ಕೇವಲ ಮನರಂಜನೆ ಅಲ್ಲ, ಅದು ದೇಶದ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬ” ಎಂದು ಹೇಳಿದರು.

ಗ್ರಾಮೀಣ ಕಲೆಗಳಿಗೆ ಅಪಾಯ: ಉಳಿಸುವ ಅಗತ್ಯ

ಅವರು ಮುಂದುವರಿದು, “ಗ್ರಾಮಾಂತರ ಭಾಗಗಳಲ್ಲಿ ಅನೇಕ ದೇಸೀಯ ಕಲೆಗಳು ನಾಶವಾಗುವ ಹಂತಕ್ಕೆ ತಲುಪಿವೆ. ಸೋಬಾನೆ, ಗಾಲಿ, ಕಸಾಂಳೆ ಸೇರಿದಂತೆ ಹಲವಾರು ಜನಪದ ಕಲೆಗಳು ಇಂದು ಮರೆಮಾಚಿಕೊಳ್ಳುತ್ತಿವೆ. ಇದು ಮುಂದಿನ ಪೀಳಿಗೆಗೆ ದೊಡ್ಡ ನಷ್ಟ. ಇಂತಹ ಕಲೆಗಳನ್ನು ಉಳಿಸಲು ನಾವು ಸಮಗ್ರ ಯೋಜನೆ ರೂಪಿಸಿದ್ದೇವೆ” ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿಯೇ 500ಕ್ಕೂ ಹೆಚ್ಚು ಕಲಾವಿದರಿಗೆ ಅವಕಾಶ ನೀಡುವ ಯೋಜನೆ ರೂಪಿಸಿರುವುದಾಗಿ ತಿಳಿಸಿದ ಅವರು, “ಸಾಮಾನ್ಯ ಕಲಾವಿದರಿಗೆ ವೇದಿಕೆ ಕಲ್ಪಿಸುವುದು ನಮ್ಮ ಪ್ರಮುಖ ಗುರಿ. ಕಲೆಗೊಂದು ಗೌರವ, ಕಲಾವಿದರಿಗೆ ಜೀವನೋಪಾಯ ಸಿಗಬೇಕು” ಎಂದು ಹೇಳಿದರು.

ತಾಲ್ಲೂಕು ಮಟ್ಟದಲ್ಲಿ ‘ಕಾಂಗ್ರೆಸ್ ಕಲಾ ಸಂಗಮ’ ಯೋಜನೆ

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಅಧ್ಯಕ್ಷರಾದ ಕಂದೇಗಾಲ ನಾಗೇಶ್ ಅವರು ಮಾತನಾಡಿ, ಸಂಘಟನಾ ಬಲವರ್ಧನೆಗೆ ಒತ್ತು ನೀಡುವುದಾಗಿ ತಿಳಿಸಿದರು. “ಜಿಲ್ಲೆಯಲ್ಲಿ ಒಟ್ಟು 75 ಸದಸ್ಯರನ್ನು ನೇಮಕ ಮಾಡಲಾಗಿದೆ. ಪ್ರತಿಯೊಂದು ತಾಲ್ಲೂಕಿಗೂ ಪ್ರತ್ಯೇಕ ಅಧ್ಯಕ್ಷರನ್ನು ನೇಮಿಸಿ, ತಾಲ್ಲೂಕು ಮಟ್ಟದಲ್ಲಿಯೇ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಿದ್ದೇವೆ. ‘ಕಾಂಗ್ರೆಸ್ ಕಲಾ ಸಂಗಮ’ ಎಂಬ ಹೆಸರಿನಲ್ಲಿ ಕಲಾವಿದರ ವೇದಿಕೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಅವರು ಮಾತನಾಡಿ, ಕಲಾವಿದರಿಗೆ ರಾಜಕೀಯ ಮತ್ತು ಸಾಮಾಜಿಕ ಬೆಂಬಲ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. “ಕಲಾವಿದರ ಧ್ವನಿ ಸಮಾಜದಲ್ಲಿ ಪ್ರತಿಧ್ವನಿಸಬೇಕು. ಅವರಿಗೆ ಅವಕಾಶ ನೀಡಿದಾಗ ಮಾತ್ರ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯ” ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಗಿರೀಶ್, ಸಂತೋಷ್ ಗೌಡ, ಹೆಳವರ ಹುಂಡಿ ಸೋಮು, ಸಿದ್ದಯ್ಯ, ಮಲ್ಲೇಶ್ ಕೋಟೆ, ನಗರ ಕಾಂಗ್ರೆಸ್ ಅಧ್ಯಕ್ಷ ರಮೇಶ್, ಪ್ರವೀಣ್ ಸಿದ್ದಲಿಂಗಪುರ, , ಚಾಮರಾಜ ಕ್ಷೇತ್ರದ ವಾರ್ಡ ಕಾಂಗ್ರೇಸ್ ನ  ಮಹಿಳಾ ಅಧ್ಯಕ್ಷೆ ಆಶಾ ಮೈಸೂರು ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಬಿ. ಬೋರೇಗೌಡ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಇದಲ್ಲದೆ, ಯೋಗಕ್ಷೇಮದ ದೃಷ್ಟಿಯಿಂದ ಕಲಾವಿದರಿಗೆ ವಿವಿಧ ತರಬೇತಿ ಶಿಬಿರಗಳು, ಆರ್ಥಿಕ ಸಹಾಯ ಯೋಜನೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅವಕಾಶಗಳನ್ನು ಸೃಷ್ಟಿಸುವ ಕುರಿತು ಚರ್ಚೆ ನಡೆಯಿತು. ಕಲಾವಿದರಿಗೆ ವಿಮೆ, ಪಿಂಚಣಿ ಹಾಗೂ ವೇದಿಕೆ ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಕಲಾವಿದರು, ಯುವ ಪ್ರತಿಭೆಗಳು ಹಾಗೂ ಗ್ರಾಮೀಣ ಭಾಗದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಚೈತನ್ಯ ನೀಡಿತು. ಅನೇಕರು ತಮ್ಮ ಸಮಸ್ಯೆಗಳು ಮತ್ತು ನಿರೀಕ್ಷೆಗಳನ್ನು ವೇದಿಕೆಯ ಮುಂದೆ ಹಂಚಿಕೊಂಡರು.

ಒಟ್ಟಿನಲ್ಲಿ, ಈ ಸಮಾರಂಭವು ಕೇವಲ ಅಧಿಕಾರ ಸ್ವೀಕಾರ ಕಾರ್ಯಕ್ರಮವಾಗಿರದೆ, ಕಲಾವಿದರ ಭವಿಷ್ಯ ರೂಪಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ ಗುರುತಿಸಲ್ಪಟ್ಟಿತು. ಸ್ಥಳೀಯ ಮತ್ತು ದೇಸೀಯ ಕಲಾವಿದರನ್ನು ಉಳಿಸಿ ಬೆಳೆಸುವ ಸಂಕಲ್ಪವು ಇಲ್ಲಿ ಮತ್ತೊಮ್ಮೆ ಗಟ್ಟಿಯಾಗಿ ಮೊಳಗಿದಂತಾಯಿತು

Contact us for classifieds and ads : +91 9742974234