Latest News

ಸರ್ಕಾರಿ ಶಾಲೆ ಉಳಿವಿಗಾಗಿ ಮೈಸೂರು ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶ – ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ  ಬುಗಿಲೆದ್ದ  ಜನತೆಯ ಆಕ್ರೋಶ

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಮೈಸೂರಿನಾದ್ಯಂತ 1,666 ಸರ್ಕಾರಿ ಶಾಲೆಗಳನ್ನು ಮುಚ್ಚತ್ತಿರುವುದನ್ನು ವಿರೋಧಿಸಿ AIDSO ವಿದ್ಯಾರ್ಥಿ ಸಂಘಟನೆಯ  ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಮೈಸೂರಿನ ಟೌನ್ ಹಾಲ್ ಆವರಣದಲ್ಲಿ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿತ್ತು. ಮೈಸೂರಿನ 300 ಕ್ಕೂ ಹೆಚ್ಚು ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಸಮಾವೇಶದಲ್ಲಿ AIDSO ರಾಜ್ಯ ಉಪಾಧ್ಯಕ್ಷರಾದ ಚಂದ್ರಕಲಾ ಅವರು ಮಾತನಾಡಿ’ ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ ತಮ್ಮ ಜೀವನವನ್ನೇ ಶಾಲೆಗಳಿಗಾಗಿ ಅರ್ಪಿಸಿದರು. ಕಳೆದ ಬಿಜೆಪಿ ಸರ್ಕಾರ ಸಂಯೋಜನೆ ಹೆಸರಿನಲ್ಲಿ 13800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದ್ದರು. ಪ್ರಸ್ತುತ ಕಾಂಗ್ರೆಸ್ ಸರ್ಕಾರ  ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ 40,000 ಶಾಲೆಗಳನ್ನು ಮುಚ್ಚಲು ಹೊರಟಿದೆ. ಒಟ್ಟಾರೆ ಎಲ್ಲಾ ಸರ್ಕಾರಗಳ ಅಂತಿಮ ಗುರಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಡ ವಿದ್ಯಾರ್ಥಿಗಳಿಂದ ಶಿಕ್ಷಣವನ್ನು ಕಸಿದುಕೊಳ್ಳುವುದೇ ಆಗಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸರ್ಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ 2500 ಕೋಟಿ ಸಾಲ ಮಾಡಿ ತೆರೆಯುತ್ತಿದೆ.  ಖಾಸಗಿ ಬ್ಯಾಂಕಿನಿಂದ ಸಾಲ ಪಡೆದು ಸರ್ಕಾರಿ ಶಾಲೆಗಳನ್ನು ನಡೆಸುವಂತಹ ಕೆಟ್ಟ ಪರಿಸ್ಥಿತಿಗೆ ಸರ್ಕಾರ ಬಂದಿದೆಯೇ? ನಾವು ಕಟ್ಟುತ್ತಿರುವ ತೆರಿಗೆಯು ಸಾಲದೇ? ಎಂದು ಪ್ರಶ್ನಿಸಿದರು.

ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಹೊರಗುತ್ತಿಗೆ ನೀಡಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನಾಗಿ ಪರಿವರ್ತಿಸುವ ಉನ್ನಾರವನ್ನು ಸರ್ಕಾರ ಮಾಡುತ್ತಿದೆ. ಪ್ರತಿಯೊಂದು ಕಿಲೋಮೀಟರ್ ವ್ಯಾಪ್ತಿಯ ಒಳಗೆ ಪ್ರಾಥಮಿಕ ಶಾಲೆ ಇರಬೇಕೆನ್ನುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಕಾಯ್ದೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಉಲ್ಲಂಘಿಸುತ್ತದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ, ಮಹಾರಾಜ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ಕಾಳಚೆನ್ನೆಗೌಡ ಅವರು ಮಾತನಾಡಿ ‘ ಕನ್ನಡ ಶಾಲೆಗಳು ಪ್ರತಿಯೊಂದು ಗ್ರಾಮದಲ್ಲಿ ಇರಬೇಕು. ಈಗಾಗಲೇ ರಾಜ್ಯದಲ್ಲಿ 62 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ , 7,000ಕ್ಕೂ ಹೆಚ್ಚು ಏಕೋಪದ್ಯಾಯ ಶಾಲೆಗಳಿವೆ. 23 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಕಟ್ಟಡಗಳು ದುರಸ್ತಿಯಾಗಬೇಕಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸರ್ಕಾರಿ ಶಾಲೆಗಳು ಸೊರಗುವಂತೆ ಮಾಡಿ ಸರ್ಕಾರ ಹಿಂಭಾಗಲಿನಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘಟನೆಯ ನಂಜನಗೂಡು ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಹೆಜ್ಜೆಗೆ ಪ್ರಕಾಶ್ ಅವರು ಮಾತನಾಡಿ’ಗ್ರಾಮೀಣ ಭಾಗದ ಶಾಲೆಗಳನ್ನು ಮುಚ್ಚುವುದನ್ನು ನಾವು ಖಂಡಿಸುತ್ತೇವೆ. ಎಲ್ಲೆಲ್ಲಿ ಶಾಲೆಗಳನ್ನು ಮುಚ್ಚುತ್ತಾರೆಯೋ ಅಲ್ಲಲ್ಲಿ ಜನ ಹೋರಾಟ ಮಾಡಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮರಂಕಯ್ಯ ಅವರು ಮಾತನಾಡಿ ‘ ನಮ್ಮ ಊರಿನಲ್ಲಿ ನಾವು ಓದಬೇಕಾದರೆ ಶಾಲೆ ಇರಲಿಲ್ಲ ಹೋರಾಟ ಮಾಡಿದ್ದರಿಂದ ಶಾಲೆ ಪ್ರಾರಂಭವಾಯಿತು ಆದರೆ ಈ ಶಾಲೆಯನ್ನೇ ಮುಚ್ಚುತ್ತಿರುವುದು ಖಂಡನೀಯ. ಶಾಲೆಗಳನ್ನು ಮುಚ್ಚಿ ಕೆ.ಪಿ.ಎಸ್  ಮ್ಯಾಗ್ನೆಟ್ ಶಾಲೆಗಳಿಗೆ ಬಸ್ ಬಿಡುತ್ತೇವೆ ಎಂದು ಹೇಳುತ್ತಿರುವುದು ಸರ್ಕಾರದ ಬೂಟಾಟಿಕೆ ಎಂದರು.

AIKKMS ರೈತ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಎಚ್ .ಪಿ ಶಿವಪ್ರಕಾಶ್, AIUTUC ಕಾರ್ಮಿಕ ಸಂಘಟನೆಯ ಮುಖಂಡರಾದ ಚಂದ್ರಶೇಖರ್ ಮೇಟಿ,AIMMS ಮಹಿಳಾ ಹೋರಾಟಗಾರ್ತಿ ಸೀಮಾ ಜಿ.ಎಸ್, AIDYO ಯುವ ಮುಖಂಡರಾದ ಸುನಿಲ್ ಟಿ.ಯರ್ ಅವರು ಮಾತನಾಡಿದರು.

ಸಾರ್ವಜನಿಕ ಶಿಕ್ಷಣ ಉಳಿಸಲು ಮುಂದಿನ ದಿನಗಳಲ್ಲಿ ಬಲಿಷ್ಠ  ಹೋರಾಟವನ್ನು ಕಟ್ಟಲು ಮೈಸೂರು ಜಿಲ್ಲಾ ಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. ಸಮಿತಿಯ ಸಲಹೆಗಾರರಾಗಿ ಕರ್ನಾಟಕ ರಾಜ್ಯ ರೈತ ಸಂಘಟನೆಯ ಹೊಸಕೋಟೆ ಬಸವರಾಜ್, ಸಾಮಾಜಿಕ ಹೋರಾಟಗಾರರಾದ ಉಗ್ರ ನರಸಿಂಹೇಗೌಡ,  ಮಹಾರಾಜ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊಫೆಸರ್ ಕಾಳಚನ್ನೆಗೌಡ, ಲತಾ ಮೈಸೂರು, ಕರ್ನಾಟಕ ರಾಜ್ಯ ರೈತ ಸಂಘಟನೆ ಜಿಲ್ಲಾಧ್ಯಕ್ಷರಾದ ಮರಂಕಯ್ಯ, ವಿದ್ಯಾ ಶಂಕರ್ ಹಾಗೂ ಪ್ರೇಮ್ ರಾಜ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಇಮ್ಮಾವು ಹುಂಡಿಯ ರಾಜಣ್ಣ, ಕಾರ್ಯದರ್ಶಿಯಾಗಿ AIDSO ಜಿಲ್ಲಾಧ್ಯಕ್ಷರಾದ ಚಂದ್ರಕಲಾ ಹಾಗೂ ಉಪಾಧ್ಯಕ್ಷರಾಗಿ ಚೋರನಹಳ್ಳಿ ಶಿವಣ್ಣ , ಹೆಜ್ಜಿಗೆ ಪ್ರಕಾಶ್ ಸೇರಿದಂತೆ 16 ಜನ  ಹಾಗೂ ವಿವಿಧ ಹಳ್ಳಿಗಳಿಂದ 60ಕ್ಕೂ ಹೆಚ್ಚು ಸದಸ್ಯರಾಗಿ ಆಯ್ಕೆ ಮಾಡಲಾಯಿತು.ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಬೆಳವಾಡಿ ನಂಜುಂಡಸ್ವಾಮಿ, ದಿವಾಕರ್ S , ಕೆಲ್ಲಹಳ್ಳಿ ಲಲಿತಮ್ಮ, ಹುಸ್ಕೂರು ಪ್ರದೀಪ್, ರಾಂಪುರ ವಿನೋದ್ ಕುಮಾರ್ ಅವರು ಮಾತನಾಡಿದರು.

ಸಮಾವೇಶದ ಅಧ್ಯಕ್ಷತೆಯನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ನಿತಿನ್  ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷರಾದ ಸ್ವಾತಿ, ಪದಾಧಿಕಾರಿಗಳಾದ ಚಂದನ, ಚಂದ್ರಿಕಾ, ಹೇಮ, ದಿಶಾ, ಅಂಜಲಿ, ಅಭಿಷೇಕ್, ನಂದೀಶ್ ಹಾಗೂ ವಿವಿಧ ಹಳ್ಳಿಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Contact us for classifieds and ads : +91 9742974234