
ಕನಕಗುರುಪೀಠ ಜಾತ್ಯಾತೀತ ಪೀಠ: ನುಡಿನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಸ್ಪಷ್ಟ ಸಂದೇಶ

ರಾಯಚೂರು, ಫೆಬ್ರವರಿ 1: ಸಮಾನ ಅವಕಾಶ, ಸಮಾನ ಗೌರವ ಮತ್ತು ಜಾತ್ಯಾತೀತ ಚಿಂತನೆಯನ್ನೊಳಗೊಂಡ ಸಮಸಮಾಜ ನಿರ್ಮಾಣವೇ ಕನಕಗುರುಪೀಠದ ಮೂಲ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕದಲ್ಲಿ ಕನಕಗುರುಪೀಠವು ಜಾತಿ-ಧರ್ಮ ಮೀರಿ ಸಮಾಜವನ್ನು ಒಗ್ಗೂಡಿಸುವ ಜಾತ್ಯಾತೀತ ಪೀಠವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ತಿಂಥಣಿ ಬ್ರಿಡ್ಜ್ ವತಿಯಿಂದ ಆಯೋಜಿಸಲಾಗಿದ್ದ ಬ್ರಹ್ಮಲೀನ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮೀಜಿಯವರು ತಮ್ಮ ಜೀವನದುದ್ದಕ್ಕೂ ಶಿಕ್ಷಣ, ಆಧ್ಯಾತ್ಮ ಮತ್ತು ಸಾಮಾಜಿಕ ಸಮಾನತೆಯ ಮೌಲ್ಯಗಳನ್ನು ಬಿತ್ತಿದ ಮಹಾನ್ ಚೇತನರಾಗಿದ್ದರು ಎಂದು ಸ್ಮರಿಸಿದರು.
ಪೂಜ್ಯಶ್ರೀಗಳ ಅಗಲಿಕೆಗೆ ಮುಖ್ಯಮಂತ್ರಿ ಸಂತಾಪ

ಕುರುಬ ಸಮುದಾಯಕ್ಕೆ ಸಮರ್ಪಿತವಾಗಿ 1992ರಲ್ಲಿ ಕಾಗಿನೆಲೆ ಕನಕಗುರುಪೀಠ ಸ್ಥಾಪನೆಯಾಯಿತು. ಮೊದಲ ಗುರುಗಳಾಗಿ ಶ್ರೀ ತಾರಕಾನಂದ ಸ್ವಾಮೀಜಿಯವರು ಸೇವೆ ಸಲ್ಲಿಸಿದ್ದರು. ನಂತರ ಕಲ್ಯಾಣ ಕರ್ನಾಟಕ, ಬೆಂಗಳೂರು, ಮೈಸೂರು ಮತ್ತು ಮುಂಬಯಿ ಕರ್ನಾಟಕ ವಿಭಾಗಗಳನ್ನು ರಚಿಸಲಾಗಿದ್ದು, ಈ ವಿಭಾಗಗಳಲ್ಲಿ ಪ್ರತ್ಯೇಕ ಗುರುಗಳು ಸಮಾಜ ಸೇವೆ ನಡೆಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ವಿಭಾಗದ ಗುರುಗಳಾಗಿ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಕಾರ್ಯನಿರ್ವಹಿಸಿದ್ದರು ಎಂದು ಮುಖ್ಯಮಂತ್ರಿ ವಿವರಿಸಿದರು.
ಗುರುಪೀಠದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವುದು, ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವುದು ಮತ್ತು ಜಾತ್ಯಾತೀತ ಮನೋಭಾವವನ್ನು ಸಮಾಜದಲ್ಲಿ ಬೆಳೆಸುವುದು ಸ್ವಾಮೀಜಿಯವರ ಪ್ರಮುಖ ಧ್ಯೇಯವಾಗಿತ್ತು. ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಹಾಗೂ ಸಮಾಜಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಿದ್ದರಾಮಯ್ಯ ಪ್ರಾರ್ಥಿಸಿದರು.
ಕನಕದಾಸರು “ಕುಲಕುಲವೆಂದು ಹೊಡೆದಾಡದಿರಿ” ಎಂದು ಸಾರಿದಂತೆ, ಬಸವಣ್ಣ, ಬುದ್ಧ ಮತ್ತು ಇತರ ಶರಣರು ಜಾತಿವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಸಿಎಂ ಸ್ಮರಿಸಿದರು. ನಮ್ಮ ಸಮಾಜವು ವಿವಿಧ ಜಾತಿ, ಧರ್ಮ, ಭಾಷೆ ಮತ್ತು ವರ್ಗಗಳಿಂದ ಕೂಡಿದೆ. ಆದರೂ ಮನುಜರೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಮಾಜಿಕ ಚಿಂತಕ ಡಾ. ರಾಮಮನೋಹರ ಲೋಹಿಯಾ ಅವರ ಉಲ್ಲೇಖ ಮಾಡುತ್ತಾ, ಮುಂದುವರಿದ ಜಾತಿಗಳು ಸಮಾಜವನ್ನು ದಾರಿತಪ್ಪಿಸುವ ಕೆಲಸ ಮಾಡಬಾರದು ಎಂದಿದ್ದರು ಎಂದು ಹೇಳಿದರು. ಸಮಾನ ಅವಕಾಶ ದೊರಕುವ ಸಮಸಮಾಜ ನಿರ್ಮಾಣವಿಲ್ಲದೆ ನಿಜವಾದ ಪ್ರಗತಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಶಿಕ್ಷಣವೇ ಸಮಾಜದ ಪ್ರಗತಿಗೆ ಮೂಲ
ಶಿಕ್ಷಣವಿಲ್ಲದೇ ಯಾವುದೇ ಸಮಾಜ ಮುಂದುವರಿಯಲು ಸಾಧ್ಯವಿಲ್ಲ. ಕಾಗಿನೆಲೆ ಕನಕಗುರುಪೀಠ ಸ್ಥಾಪನೆಯ ಹಿಂದಿನ ಉದ್ದೇಶವೂ ಶಿಕ್ಷಣ ಮತ್ತು ಸಮಾನತೆಯ ಮೂಲಕ ಸಮಾಜವನ್ನು ಮೇಲಕ್ಕೆತ್ತುವುದೇ ಆಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಯಾವುದೇ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ, ಪ್ರೀತಿ ಮತ್ತು ಮಾನವೀಯತೆಯನ್ನೇ ಸಾರುತ್ತದೆ ಎಂದು ಅವರು ಹೇಳಿದರು.
ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬರಲು ಕರೆ
ಇಂದಿನ ದಿನಗಳಲ್ಲಿ ಶಿಕ್ಷಣ ದೊರೆತರೂ ಕೆಲವರು ಇನ್ನೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸ್ವಾಭಿಮಾನದಿಂದ ಬದುಕುವ ಮನೋಭಾವ ಯುವಪೀಳಿಗೆಯಲ್ಲಿ ಬೆಳೆಸಬೇಕು ಎಂದು ಹೇಳಿದರು. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣವೇ ಸಮಾಜವನ್ನು ಜಡತ್ವದಿಂದ ಹೊರತೆಗೆಯಬಲ್ಲ ಶಕ್ತಿ ಎಂದು ಅವರು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ಸಮಯದಲ್ಲಿ ದೇಶದಲ್ಲಿ ಕೇವಲ ಶೇ.15ರಷ್ಟು ಶಿಕ್ಷಣವಿದ್ದರೆ, ಇಂದು ಅದು ಶೇ.76ಕ್ಕೆ ಏರಿಕೆಯಾಗಿದೆ. ಆದರೂ ಜಾತಿವ್ಯವಸ್ಥೆ ಸಂಪೂರ್ಣವಾಗಿ ನಶಿಸಿಲ್ಲ. ಸಮಾಜಕ್ಕೆ ಚೈತನ್ಯ ತರಲು ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಅಗತ್ಯವಿದೆ ಎಂದು ಅವರು ಹೇಳಿದರು. ಈ ದಿಕ್ಕಿನಲ್ಲಿ ಸ್ವಾಮೀಜಿಯವರು ಮೌಢ್ಯಗಳ ವಿರುದ್ಧ ಹೋರಾಟ ನಡೆಸಿದ್ದರು ಎಂದು ಸ್ಮರಿಸಿದರು.
ಜನರ ಪ್ರೀತಿಯೇ ನನ್ನ ರಾಜಕೀಯ ಶಕ್ತಿ
ಜನರ ಆಶೀರ್ವಾದದಿಂದ ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾಗಿ, ಎರಡನೇ ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ಬಂದಿದ್ದೇನೆ. ನಾಡಿನ ಎಲ್ಲ ವರ್ಗಗಳ ಪ್ರೀತಿಯಿಂದಲೇ ರಾಜಕೀಯದಲ್ಲಿ ಇಂದಿಗೂ ನಿಂತಿದ್ದೇನೆ. ಈ ಸಮಾಜದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಧ್ವನಿಯಿಲ್ಲದವರ ಪರವಾಗಿ ಹೋರಾಡುವುದು ನನ್ನ ಕರ್ತವ್ಯ ಎಂದು ಮುಖ್ಯಮಂತ್ರಿ ಹೇಳಿದರು.
ಕುರುಬ ಸಮಾಜಕ್ಕೆ ಎಸ್ಟಿ ಸ್ಥಾನಮಾನ ಕುರಿತು ಹೇಳಿಕೆ
ಇಡೀ ರಾಜ್ಯಕ್ಕೆ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಮಾದರಿಯಾಗಿದೆ ಎಂದು ಶ್ಲಾಘಿಸಿದ ಸಿದ್ದರಾಮಯ್ಯ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಸತಿ ನಿಲಯ, ಯಾತ್ರಿನಿವಾಸ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಗಳಿಗೆ ಬೆಂಗಳೂರಿನಲ್ಲಿ ಸುಮಾರು 50 ಎಕರೆ ಭೂಮಿ ನೀಡಲು ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರ ತನ್ನ ಶಿಫಾರಸ್ಸನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅಂತಿಮ ನಿರ್ಧಾರ ಕೇಂದ್ರದ ಕೈಯಲ್ಲಿದೆ ಎಂದು ತಿಳಿಸಿದರು.
ಇನ್ನು ಜಾತಿಗಣತಿ ವರದಿಯನ್ನು ಇನ್ನೊಂದು ತಿಂಗಳೊಳಗೆ ಸಲ್ಲಿಸಲಾಗುವುದು. ವರದಿ ಕುರಿತು ಸಮಗ್ರ ಚರ್ಚೆ ನಡೆಸಿ ನಂತರ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು..


