Latest News

ವಸತಿ ಶಾಲೆ ಮಾಲೀಕನಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ: ಕೃತ್ಯ ಮುಚ್ಚಿಡಲು ಪತ್ನಿಯಿಂದ ಬೆದರಿಕೆ – ದಂಪತಿ ಬಂಧನ

ಬೆಂಗಳೂರು ಗ್ರಾಮಾಂತರ, : ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು ಹೆಚ್ಚಿನ ವೆಚ್ಚ ಮಾಡಿ ವಸತಿ ಶಾಲೆಗಳಿಗೆ ಕಳುಹಿಸುವ ಸಂದರ್ಭಗಳಲ್ಲಿ, ಮಕ್ಕಳಿಗೆ ರಕ್ಷಣೆ ನೀಡಬೇಕಾದ ಶಾಲೆಯ ಮಾಲೀಕರೇ ದೌರ್ಜನ್ಯ ನಡೆಸಿದ ಅಮಾನುಷ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಖಾಸಗಿ ವಸತಿ ಶಾಲೆಯ ಮಾಲೀಕ ಧನಂಜಯ್ ಎಂಬಾತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದು, ಈ ಕೃತ್ಯವನ್ನು ಮುಚ್ಚಿಹಾಕಲು ಸಹಕರಿಸಿದ್ದ ಆರೋಪದಲ್ಲಿ ಆತನ ಪತ್ನಿ ಶೈಲಜಾಳನ್ನೂ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ, ಶಾಲೆಯಲ್ಲಿ ಓದುತ್ತಿದ್ದ ಕೆಲವು ವಿದ್ಯಾರ್ಥಿನಿಯರ ಮೇಲೆ ಧನಂಜಯ್ ಹಲವು ದಿನಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನಡೆದ ಘಟನೆ ಬಗ್ಗೆ ಪೋಷಕರಿಗೆ ತಿಳಿಸದಂತೆ ಮಕ್ಕಳನ್ನು ಬೆದರಿಸಲಾಗಿದ್ದು, ಪರೀಕ್ಷೆಯ ನೆಪದಲ್ಲಿ ಸುಮಾರು 15 ದಿನಗಳ ಕಾಲ ಪೋಷಕರನ್ನು ಭೇಟಿ ಮಾಡಲು ಅವಕಾಶ ನೀಡದೇ ವಸತಿ ಶಾಲೆಯಲ್ಲೇ ಇರಿಸಲಾಗಿತ್ತು. ಮಕ್ಕಳಿಗೆ ಮನೆಗೆ ಕರೆ ಮಾಡಲು ಸಹ ಅವಕಾಶ ನಿರಾಕರಿಸಲಾಗಿತ್ತು ಎಂದು ತಿಳಿದುಬಂದಿದೆ.

ಇದಲ್ಲದೆ, ಗಂಡನ ಕೃತ್ಯವನ್ನು ಮುಚ್ಚಿಡಲು ಪತ್ನಿ ಶೈಲಜಾ ಮಕ್ಕಳಿಗೆ ಯಾರಿಗೂ ವಿಷಯ ತಿಳಿಸಬಾರದು ಎಂದು ಬೆದರಿಕೆ ಹಾಕುತ್ತಿದ್ದಳು ಎಂಬ ಆರೋಪವೂ ಕೇಳಿಬಂದಿದೆ. ಮಕ್ಕಳಿಗೆ ಮಾನಸಿಕ ಒತ್ತಡ ಉಂಟುಮಾಡಿ ವಿಷಯ ಬಹಿರಂಗವಾಗದಂತೆ ಮಾಡಲು ವಿವಿಧ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸುಮಾರು 15 ದಿನಗಳ ಕಾಲ ಕಿರುಕುಳವನ್ನು ಸಹಿಸಿಕೊಂಡಿದ್ದ ಮಕ್ಕಳು ಫೆಬ್ರವರಿ 28ರಂದು ಶಿಕ್ಷಕಿಯೊಬ್ಬರ ಮೊಬೈಲ್ ಫೋನ್ ಬಳಸಿ ಪೋಷಕರಿಗೆ ಕರೆ ಮಾಡಿ ಅಳುತ್ತಾ ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಿದ್ದಾರೆ. ವಿಷಯ ತಿಳಿದ ಕೂಡಲೇ ಪೋಷಕರು ಶಾಲೆಗೆ ಆಗಮಿಸಿ ಮಕ್ಕಳನ್ನು ವಿಚಾರಿಸಿದಾಗ ಘಟನೆ ದೃಢಪಟ್ಟಿದೆ. ನಂತರ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ದೂರಿನ ಆಧಾರದ ಮೇಲೆ ದೇವನಹಳ್ಳಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಧನಂಜಯ್ ಹಾಗೂ ಆತನ ಪತ್ನಿ ಶೈಲಜಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಂತರ ದಂಪತಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ಘಟನೆ ಬಹಿರಂಗವಾಗುತ್ತಿದ್ದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಶಾಲೆಯ ಆವರಣದಲ್ಲೇ ವಾರ್ಡನ್ ಕೊಠಡಿಯಲ್ಲಿ ಮಂಚ ಸೇರಿದಂತೆ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿಕೊಂಡು ಅಲ್ಲಿಯೇ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಎಸಗಿರುವ ಸಾಧ್ಯತೆಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದಲ್ಲದೆ, ಬಾಲಕಿಯರ ವಸತಿ ವ್ಯವಸ್ಥೆ ನಡೆಸಲು ಯಾವುದೇ ಅಧಿಕೃತ ಅನುಮತಿ ಪಡೆಯದೇ ಅಕ್ರಮವಾಗಿ ಹಾಸ್ಟೆಲ್ ನಡೆಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಘಟನೆ ಬಗ್ಗೆ ಸಾರ್ವಜನಿಕರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣದ ಕುರಿತು ದೇವನಹಳ್ಳಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Contact us for classifieds and ads : +91 9742974234