ವರುಣಾ ಕ್ಷೇತ್ರದಲ್ಲಿ ಒತ್ತುವರಿಯಾಗಿರುವ ಕೆರೆಗಳ ತೆರವುಗೊಳಿಸಿ ಅಭಿವೃದ್ಧಿ : ಡಾ|| ಯತೀಂದ್ರ ಸಿದ್ದರಾಮಯ್ಯ
ಮೈಸೂರು ಮಾ4 : ವರುಣಾ ಕ್ಷೇತ್ರದಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಿ ಸಣ್ಣನೀರಾವರಿ ಇಲಾಖೆಯಿಂದ ಅಭಿವೃದ್ಧಿಗೊಳಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಡಾ|| ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ತಾಯೂರು ಪಂಚಾಯಿತಿ ವ್ಯಾಪ್ತಿಯ ಗೆಜ್ಜಗನಹಳ್ಳಿ, ಹಾರೋಪುರ, ಸಾಲುಂಡಿ ಇಗ್ಲಿ ತಾಯೂರು ಗ್ರಾಮಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಗೆಜ್ಜಗನಹಳ್ಳಿಯಲ್ಲಿ ಬಸ್ ನಿಲುಗಡೆ ಕೇಳಿದ್ದೀರಿ, ನಾಲೆಗಳ ಅಭಿವೃದ್ಧಿಪಡಿಸಲು ತಿಳಿಸಿದ್ದೀರಿ, ಚರಂಡಿ ಸ್ವಚ್ಛಗೊಳಿಸಬೇಕು, ಮಕ್ಕಳಿಗೆ ಕೆಲಸ ಕೊಡಿಸಿ ಎಂದಿದ್ದೀರಿ ಅದೇ ರೀತಿ ಹಾರೋಪುರ ಗ್ರಾಮದ ರಸ್ತೆ ಅಭಿವೃದ್ಧಿ, ಕೆರೆ ಅಭಿವೃದ್ಧಿ ದೇವಸ್ಥಾನಕ್ಕೆ ಕಾಂಪೌಂಡ್, ಸ್ಮಶಾನಕ್ಕೆ ಜಾಗ, ಸೈಟ್ ಬೇಕು ಎಂದು ಕೇಳಿದ್ದೀರಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಮಾತನಾಡಿ ಪರಿಹರಿಸಲು ಪ್ರಯತ್ನಿಸುತ್ತೇನೆ. ಇಲ್ಲೇ ಇರುವ ತಾಲ್ಲೂಕುಮಟ್ಟದ ಅಧಿಕಾರಿಗಳು ನಿಮ್ಮ ಮಟ್ಟದಲ್ಲಿ ಬಗೆಹರಿಯುವ ಸಮಸ್ಯೆಗಳನ್ನು ತಕ್ಷಣ ಸಾರ್ವಜನಿಕರಿಗೆ ಮಾಡಿಕೊಡಿ. ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವುದನ್ನು ಸಹಿಸದ ಬಿ.ಜೆ.ಪಿ., ಜೆ.ಡಿ.ಎಸ್.ನವರು ಸುಳ್ಳು ಆರೋಪಗಳನ್ನು ಮಾಡುತ್ತ, ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ನಿಮ್ಮೆಲ್ಲರ ಆಶೀರ್ವಾದ ಕಾಂಗ್ರೆಸ್ ಪಕ್ಷ ಹಾಗೂ ನಮ್ಮ ಮೇಲೆ ಇರಲಿ ಎಂದರು.
ಈ ಸಂದರ್ಭದಲ್ಲಿ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಪ್ರಾಣಿ ಸಂಗ್ರಹಾಲಯದ ಅಧ್ಯಕ್ಷ ರಂಗಸ್ವಾಮಿ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಆಪ್ತಸಹಾಯಕರಾದ ಶಿವಸ್ವಾಮಿ, ಪ್ರದೀಪ್ಕುಮಾರ್, ಮಹೇಶ್, ಮುಖಂಡರಾದ ಮಣಿಯಯ್ಯ, ಕಲ್ಮಳ್ಳಿ ಬಾಬು, ಚಿನ್ನಂಬಳ್ಳಿ ರಾಜು, ಜಿ.ಡಿ. ವಿಠಲ್, ತಾಯೂರು ಬಸವರಾಜು, ರಾಜೇಶ್, ಶಿವಣ್ಣ, ಕುಮಾರ್, ನಾಗರಾಜ್ ಹಾಜರಿದ್ದರು.

