Latest News

ರೈತರ ಹಿತಕ್ಕಾಗಿ ಕ್ರಮ: ಸಹಕಾರ ಸಂಘಗಳ ಮೂಲಕ ಗೊಬ್ಬರ ವಿತರಣೆ ಹೆಚ್ಚಿಸಿ – ಸಚಿವ ವೆಂಕಟೇಶ್

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ: ಮುಂಗಾರು ಪ್ರಾರಂಭವಾಗುತ್ತಿದ್ದು ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಸಮರ್ಪಕ ವಿತರಣೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಿ– ಸಚಿವ ಕೆ. ವೆಂಕಟೇಶ್ ಸೂಚನೆ

ಪಿರಿಯಾಪಟ್ಟಣ: ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ರೈತರಿಗೆ ವಿತರಣೆ ಮಾಡುವಂತೆ ವ್ಯವಸ್ಥೆ ಮಾಡಬೇಕು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಸೂಚಿಸಿದರು. ಇದರಿಂದ ರೈತರಿಗೆ ನಿಖರವಾದ ಹಾಗೂ ಸಮಂಜಸ ಬೆಲೆಯಲ್ಲಿ ರಸಗೊಬ್ಬರ ದೊರಕುವಂತೆ ಸಾಧ್ಯವಾಗುತ್ತದೆ ಎಂದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು ಎಂದು ಸೂಚಿಸಿದರು. ಕಚೇರಿಗಳಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು ಹಳ್ಳಿಗಳಿಗೆ ಭೇಟಿ ನೀಡಿ ರೈತರೊಂದಿಗೆ ನೇರವಾಗಿ ಸಭೆ ನಡೆಸಿ, ರೇಷ್ಮೆ ಹಾಗೂ ಸಿರಿಧಾನ್ಯ ಬೆಳೆಗಳ ಲಾಭದ ಕುರಿತು ಅರಿವು ಮೂಡಿಸಬೇಕು ಎಂದರು. ತಂಬಾಕಿಗೆ ಪರ್ಯಾಯವಾಗಿ ಈ ಬೆಳೆಗಳನ್ನು ಉತ್ತೇಜಿಸಲು ಹೆಚ್ಚಿನ ಪ್ರಯತ್ನ ಮಾಡಬೇಕೆಂದು ಹೇಳಿದರು.

ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಉಲ್ಲೇಖಿಸಿದ ಸಚಿವರು, ಅವುಗಳನ್ನು ಶೀಘ್ರ ಪೂರ್ಣಗೊಳಿಸಿ ಅಭಿವೃದ್ಧಿಗೆ ಸಹಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಕ್ರಮ ಮದ್ಯ ಮಾರಾಟದ ಬಗ್ಗೆ ಬಂದಿರುವ ದೂರುಗಳ ಕುರಿತು ಗಂಭೀರವಾಗಿ ಕ್ರಮ ಕೈಗೊಂಡು, ನಿಯಮ ಉಲ್ಲಂಘಿಸುವ ಅಂಗಡಿಗಳ ಪರವಾನಿಗೆ ರದ್ದುಗೊಳಿಸಬೇಕು ಎಂದರು.

ತಾಲೂಕಿನಲ್ಲಿ 3.18 ಲಕ್ಷ ಕ್ವಿಂಟಲ್ ರಾಗಿ ಮಾರಾಟಕ್ಕೆ ರೈತರು ನೋಂದಣಿ ಮಾಡಿದ್ದರೂ, ಇದುವರೆಗೆ ಶೇ.50ರಷ್ಟು ಮಾತ್ರ ಮಾರಾಟವಾಗಿರುವುದನ್ನು ಪ್ರಶ್ನಿಸಿದ ಸಚಿವರು, ಖಾಸಗಿ ಖರೀದಿದಾರರು ನೋಂದಾಯಿತ ರೈತರ ಹೆಸರಿನಲ್ಲಿ ದುರುಪಯೋಗ ಮಾಡುತ್ತಿರುವ ಕುರಿತು ಬಂದಿರುವ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ರಾವಂದೂರು ಮತ್ತು ಹಾರನಹಳ್ಳಿ ಗ್ರಾಮಗಳಲ್ಲಿ ಸರ್ಕಾರಿ ಜಾಗ ಗುರುತಿಸಿ ಮಾರುಕಟ್ಟೆ ಯಾರ್ಡ್ ಹಾಗೂ ಗೋದಾಮುಗಳನ್ನು ನಿರ್ಮಿಸುವ ಕುರಿತು ಪರಿಶೀಲನೆ ನಡೆಸುವಂತೆ ತಹಸೀಲ್ದಾರ್ ನಿಸರ್ಗಪ್ರಿಯಾ ಅವರಿಗೆ ಸೂಚನೆ ನೀಡಿದರು. ಜೊತೆಗೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮವಹಿಸಲು ಮತ್ತು ಹಾಸ್ಟೆಲ್, ಅಂಗನವಾಡಿ ಹಾಗೂ ಆಸ್ಪತ್ರೆಗಳಲ್ಲಿ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.

ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಸಬ್ಸಿಡಿ ಯೋಜನೆಗಳನ್ನು ಫಲಾನುಭವಿಗಳಿಗೆ ವಿತರಿಸುವ ಮೊದಲು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ತಿಳಿಸಿದರು. ರೇಷ್ಮೆ ಬೆಳೆ ಉತ್ತೇಜನಕ್ಕಾಗಿ ಹೆಚ್ಚಿನ ಅನುದಾನ ಅಗತ್ಯವಿದ್ದಲ್ಲಿ ಪಟ್ಟಿಮಾಡಿ ಸಲ್ಲಿಸಿದರೆ ನೀಡಲಾಗುವುದು ಎಂದರು.

ಸಭೆಯಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್, ಮೊರಾರ್ಜಿ ವಿದ್ಯಾರ್ಥಿ ನಿಲಯಗಳಿಗೆ ಬೇಡಿಕೆ ಹೆಚ್ಚಿದ್ದು, ವಿದ್ಯಾರ್ಥಿಗಳ ನೋಂದಣಿ ಹೆಚ್ಚಾಗಿದೆ ಎಂದು ತಿಳಿಸಿದರು. 22 ಅಂಬೇಡ್ಕರ್ ಭವನಗಳಿಗೆ ಜಾಗ ದೊರೆತಿದ್ದು, ಹೊಸದಾಗಿ 12 ಅಂಬೇಡ್ಕರ್ ಹಾಗೂ 10 ಬಾಬು ಜಗಜೀವನ ಭವನಗಳಿಗೆ ಅನುಮೋದನೆ ದೊರೆತಿದೆ ಎಂದರು. ಗಿರಿಜನ ಹಳ್ಳಿಗಳಲ್ಲಿ ಕೆಲವು ಜನರಿಗೆ ಹಕ್ಕುಪತ್ರ ವಿತರಣೆಯಾಗದಿರುವುದರಿಂದ ಸವಲತ್ತು ಪಡೆಯಲು ತೊಂದರೆ ಆಗುತ್ತಿದೆ ಎಂದು ತಿಳಿಸಿದರು.

ಪಶುಪಾಲನಾ ಇಲಾಖೆ ಅಧಿಕಾರಿ ಸೋಮಯ್ಯ, ಜಾನುವಾರುಗಳಿಗೆ ಲಸಿಕೆ ನೀಡಲಾಗಿದ್ದು, ಶೇ.50 ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರಗಳನ್ನು ನೀಡಲಾಗುತ್ತಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಹಾಗೂ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ, ಸಚಿವರು ಅವರನ್ನು ತರಾಟೆಗೆ ತೆಗೆದುಕೊಂಡು ಸರಿಯಾದ ಮಾಹಿತಿಯೊಂದಿಗೆ ಮತ್ತೆ ಹಾಜರಾಗುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತಾಧಿಕಾರಿ ಕಿರುಬ ನಂದನ್, ತಹಸೀಲ್ದಾರ್ ನಿಸರ್ಗಪ್ರಿಯಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಸುನೀಲ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Contact us for classifieds and ads : +91 9742974234