Latest News

ಮ್ಯೂನಿಕ್‌ನಲ್ಲಿ ತಂತ್ರಜ್ಞಾನದ ಸಂವಾದಗಳಲ್ಲಿ ಪಾಲ್ಗೊಂಡ ಯದುವೀರ್ ಒಡೆಯರ್‌: ಭಾರತ–ಯುರೋಪ್ ಸಹಕಾರ ಬಲಪಡಿಸುವತ್ತ ಹೆಜ್ಜೆ

ಮ್ಯೂನಿಕ್ (ಜರ್ಮನಿ), ಫೆಬ್ರವರಿ 2026: ಮೈಸೂರು ಸಂಸದ ಹಾಗೂ ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಫೆಬ್ರವರಿ 11ರಿಂದ 15ರವರೆಗೆ ಜರ್ಮನಿಯ ಬವೇರಿಯಾದ ಮ್ಯೂನಿಕ್ ನಗರದಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ರಾಜತಾಂತ್ರಿಕ ಹಾಗೂ ನೀತಿ ಸಂವಾದಗಳಲ್ಲಿ ಭಾಗವಹಿಸುತ್ತಿದ್ದಾರೆ. ಭಾರತ, ಬವೇರಿಯಾ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಸಹಕಾರ ಬಲಪಡಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮಗಳಲ್ಲಿ ಅವರು ಪ್ರಮುಖ ಭಾಷಣಕಾರರಾಗಿ ಮತ್ತು ಸಂವಾದ ಭಾಗಿಯಾಗಿದ್ದಾರೆ.

ಈ ಭೇಟಿಯ ಭಾಗವಾಗಿ ಯದುವೀರ್ ಒಡೆಯರ್‌ ಅವರು ಇಂಡಿಯಾ–ಯುರೋಪ್ ರೆಸಿಲಿಯನ್ಸ್ ಫೋರಂ ಮತ್ತು ಮ್ಯೂನಿಕ್ ಭದ್ರತಾ ಸಮ್ಮೇಳನದ ಅಂಗಸಂವಾದಗಳೊಂದಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಜಾಗತಿಕ ಆಡಳಿತ, ತಂತ್ರಜ್ಞಾನ ಸಹಕಾರ, ಹಾಗೂ ಭೂರಾಜಕೀಯ ಸಮನ್ವಯದಲ್ಲಿ ಭಾರತದ ಪಾತ್ರ ಹೆಚ್ಚುತ್ತಿರುವ ಹಿನ್ನೆಲೆ, ಈ ವೇದಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಮ್ಯೂನಿಕ್‌ನ ಹಾನ್ಸ್ ಸೈಡಲ್ ಫೌಂಡೇಶನ್ ಕೇಂದ್ರದಲ್ಲಿ ನಡೆದ ಇಂಡಿಯಾ–ಯುರೋಪ್ ರೆಸಿಲಿಯನ್ಸ್ ಫೋರಂ ಚರ್ಚಾಸತ್ರದಲ್ಲಿ ಅವರು ಭಾರತ–ಯುರೋಪ್ ತಂತ್ರಜ್ಞಾನ ಸಹಕಾರ ಕುರಿತ ನೀತಿ ಸಂವಾದದಲ್ಲಿ ಭಾಷಣ ನೀಡಿದರು. ಡಿಜಿಟಲ್ ಸಹಕಾರ, ತಂತ್ರಜ್ಞಾನ ವಿನಿಮಯ ಮತ್ತು ಸ್ಥೈರ್ಯವರ್ಧನೆ ಕುರಿತ ವಿಚಾರ ವಿನಿಮಯದಲ್ಲಿ ಭಾರತೀಯ ಸಂಸದೀಯ ದೃಷ್ಟಿಕೋನವನ್ನು ಅವರು ಮಂಡಿಸಿದರು. ಈ ಕಾರ್ಯಕ್ರಮದ ಅಂಗವಾಗಿ ಅಂತರರಾಷ್ಟ್ರೀಯ ಪ್ರತಿನಿಧಿಗಳೊಂದಿಗೆ ಪರಸ್ಪರ ಸಂವಾದ ನಡೆಸಿ ಆರ್ಥಿಕ ಸಹಭಾಗಿತ್ವ, ಗಡಿ ಮೀರುವ ಸವಾಲುಗಳು ಹಾಗೂ ತಂತ್ರತಜ್ಞಾನದ ಅಭಿವೃದ್ಧಿ ಕುರಿತ ವಿಚಾರಗಳನ್ನೂ ಚರ್ಚಿಸಿದರು.

ಮ್ಯೂನಿಕ್ ಭದ್ರತಾ ಸಮ್ಮೇಳನದ ಅಂಗವಾಗಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಅವರು ಭಾರತದ ಬಹುಮುಖ ರಾಜತಾಂತ್ರಿಕ ಧೋರಣೆಯ ಅವಕಾಶಗಳು ಮತ್ತು ಮಿತಿಗಳು ಕುರಿತ ಚರ್ಚೆಯಲ್ಲಿ ಪ್ರಮುಖ ವಕ್ತಾರರಾಗಿ ಪಾಲ್ಗೊಂಡರು. ಜಾಗತಿಕ ಸ್ಥಿರತೆ ಮತ್ತು ತಂತ್ರತಜ್ಞಾನದ ಸಹಕಾರ ಕುರಿತ ಚರ್ಚೆಗಳಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಜೊತೆಗೆ, ಭಾರತವು 2047ರತ್ತ ಸಾಗುತ್ತಿರುವ ಅಭಿವೃದ್ಧಿಯ ದೃಷ್ಟಿಕೋನ ಮತ್ತು ದೀರ್ಘಕಾಲೀನ ಗುರಿಗಳನ್ನು ಪರಿಶೀಲಿಸುವ ಮುಚ್ಚಿದ ಸಭೆಯ ರಾಜಕೀಯ ಸಂವಾದದಲ್ಲಿಯೂ ಅವರು ಪಾಲ್ಗೊಂಡರು.

ಸಮ್ಮೇಳನ ಚಟುವಟಿಕೆಗಳ ಹೊರತಾಗಿ, ಯದುವೀರ್ ಒಡೆಯರ್‌ ಅವರು ಬವೇರಿಯಾ ಮತ್ತು ಜರ್ಮನಿಯ ರಾಜಕೀಯ ನಾಯಕರೊಂದಿಗೆ ಹಲವಾರು ಮಹತ್ವದ ಸಂಸ್ಥಾತ್ಮಕ ಸಭೆಗಳನ್ನು ನಡೆಸಿದರು. ಬವೇರಿಯಾ ಸಂಸತ್ ಪ್ರತಿನಿಧಿಗಳು, ರಾಜ್ಯ ಚಾನ್ಸಲರಿ ಅಧಿಕಾರಿಗಳು ಹಾಗೂ ಜರ್ಮನ್ ಬುಂಡೆಸ್ಟಾಗ್ ಸದಸ್ಯರೊಂದಿಗೆ ನಡೆದ ಚರ್ಚೆಗಳಲ್ಲಿ ಪ್ರಾದೇಶಿಕ ಅಭಿವೃದ್ಧಿ, ಡಿಜಿಟಲ್ ಪರಿವರ್ತನೆ ಮತ್ತು ಬವೇರಿಯಾ–ಕರ್ನಾಟಕ ಸಹಭಾಗಿತ್ವ ಬಲಪಡಿಸುವ ವಿಚಾರಗಳಿಗೆ ಆದ್ಯತೆ ನೀಡಲಾಯಿತು. ಉಪರಾಷ್ಟ್ರೀಯ ಮಟ್ಟದ ರಾಜತಾಂತ್ರಿಕತೆ ಆರ್ಥಿಕ ನವೀನತೆ, ಜ್ಞಾನ ವಿನಿಮಯ ಹಾಗೂ ಹೂಡಿಕೆ ಸಹಕಾರಕ್ಕೆ ನೆರವಾಗುತ್ತದೆ ಎಂಬುದನ್ನು ಈ ಸಭೆಗಳು ಒತ್ತಿ ಹೇಳುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೇಟಿಯು ಭಾರತ–ಯುರೋಪ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನೂ ಹೊಂದಿದ್ದು, ಯುರೋಪಿಯನ್ ನೀತಿನಿರ್ಮಾತೃಗಳೊಂದಿಗೆ ನಡೆದ ಸಂವಾದಗಳಲ್ಲಿ ತಂತ್ರಜ್ಞಾನ ಸಹಕಾರ, ಸರಬರಾಜು ಸರಪಳಿ ಹಾಗೂ ಭದ್ರತಾ ನೀತಿ ಕುರಿತ ಚರ್ಚೆಗಳು ನಡೆದವು. ಸರ್ಕಾರ, ಸಂಸತ್ ಹಾಗೂ ನೀತಿ ವೇದಿಕೆಗಳ ಮೂಲಕ ವಿವಿಧ ಮಟ್ಟಗಳಲ್ಲಿ ನಡೆದ ಸಂವಹನವು ಮುಂದಿನ ದಿನಗಳಲ್ಲಿ ಸಹಕಾರದ ಮಾರ್ಗಗಳನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ, ಈ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವಿಕೆ ಮತ್ತು ದ್ವಿಪಕ್ಷೀಯ ಸಭೆಗಳು ಭಾರತ–ಬವೇರಿಯಾ ಸಹಕಾರದ ಪ್ರಾಮುಖ್ಯತೆಯನ್ನು ಭಾರತ–ಯುರೋಪ್ ಸಂಬಂಧಗಳ ವ್ಯಾಪಕ ಚೌಕಟ್ಟಿನಲ್ಲಿ ಇನ್ನಷ್ಟು ಸ್ಪಷ್ಟಪಡಿಸಿವೆ. ಪ್ರಜಾಸತ್ತಾತ್ಮಕ ಮೌಲ್ಯಗಳು, ನವೀನ ತಂತ್ರಜ್ಞಾನ ಪರಿಸರ ಹಾಗೂ ಆರ್ಥಿಕ ಸ್ಥೈರ್ಯವನ್ನು ಆಧಾರವಿಟ್ಟ ಸಹಭಾಗಿತ್ವವನ್ನು ಬೆಳೆಸುವ ಪ್ರಯತ್ನಗಳು ಮುಂದುವರಿಯುತ್ತಿವೆ. ಜೊತೆಗೆ ಜನರಿಂದ ಜನರಿಗೆ ಹಾಗೂ ಸಂಸ್ಥೆಗಳ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವ ದಿಕ್ಕಿನಲ್ಲಿ ಈ ಸಂವಾದಗಳು ಸಹಕಾರಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ಶ್ರೀ ಯದುವೀರ್ ಒಡೆಯರ್‌ ಅವರ ಈ ಭೇಟಿಯು ಭಾರತ ಮತ್ತು ಯುರೋಪಿಯನ್ ಪಾಲುದಾರರ ನಡುವೆ ದೀರ್ಘಕಾಲೀನ ತಂತ್ರಜ್ಞಾನದ ಸಮನ್ವಯ ಹಾಗೂ ಸಹಕಾರದ ಬಲವಾದ ಸಂದೇಶವನ್ನು ನೀಡುತ್ತದೆ. ತಂತ್ರಜ್ಞಾನ, ಪ್ರಾದೇಶಿಕ ಅಭಿವೃದ್ಧಿ ಹಾಗೂ ಜಾಗತಿಕ ಆಡಳಿತ ಕ್ಷೇತ್ರಗಳಲ್ಲಿ ಸಹಕಾರದ ಅವಕಾಶಗಳನ್ನು ವಿಸ್ತರಿಸುವತ್ತ ಇದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

Contact us for classifieds and ads : +91 9742974234