Latest News

ಮೈಸೂರು ಸಿಸಿಬಿ ಪೊಲೀಸರ ದಾಳಿ: ರೂ.10.30 ಲಕ್ಷ ಮೌಲ್ಯದ ಎಂ.ಡಿ.ಎಂ.ಎ ವಶ – 4 ಆರೋಪಿಗಳ ಬಂಧನ

ಮೈಸೂರು, ಫೆ.23: ಮೈಸೂರು ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಇತ್ತೀಚಿನ ದಾಳಿಯಲ್ಲಿ ರೂ.10,30,800 ಮೌಲ್ಯದ 103 ಗ್ರಾಂ 88 ಮಿಲಿ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಹಾಗೂ ಸುಮಾರು ರೂ.8 ಲಕ್ಷ ಮೌಲ್ಯದ ಇನೋವಾ ಕಾರನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಸಿಸಿಬಿ ಘಟಕದ ಸಹಾಯಕ ಪೊಲೀಸ್ ಆಯುಕ್ತ ಮಹಮ್ಮದ್ ಶರೀಫ್ ರಾವುತರ್ ಅವರಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಯಿತು.

ಫೆಬ್ರುವರಿ 23ರಂದು ಸಿಸಿಬಿ-2 ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್ ನೇತೃತ್ವದಲ್ಲಿ ಪಿಎಸ್‌ಐ ಲೇಪಾಕ್ಷ ಕೆ., ಜ್ಯೋತ್ಸ್ನರಾಜ್ ಆರ್., ರೇವಣಾಸಿದ್ದಪ್ಪ ಹಾಗೂ ಸಿಬ್ಬಂದಿಗಳಾದ ಮಧುಕುಮಾರ್, ಚೇತನ್, ಅಧಾಮ್, ಕಿರಣ್ ರಾಥೋಡ್, ಸಂತೋಷ್ ಪವಾರ್, ಹಜ್ರತ್ ಅಲಿ, ರಾಜಾಸಾಬ್, ಸಮೀರ್, ಯಶ್ವಂತ್, ದೇವರಾಜು, ಮಮತ ಎನ್.ಜಿ., ಸಿದ್ದರಾಜು ಮತ್ತು ಸುರೇಶ್ ಅವರ ತಂಡ ಉಮರ್ ಖಾಯಂ ರಸ್ತೆಗೆ ತೆರಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಎಂ-05/ಓಎ-7805 ಸಂಖ್ಯೆಯ ಇನೋವಾ ಕಾರನ್ನು ತಡೆದು ತಪಾಸಣೆ ನಡೆಸಿದರು.

ತಪಾಸಣೆ ವೇಳೆ ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಬೆಂಗಳೂರು ಮೂಲದ ನುಹೇದ್ ಖಾನ್ ಬಳಿ ರೂಢಿಗತ ಎಂ.ಡಿ.ಎಂ.ಎ ಪೆಡ್ಲರ್ ಜಾವೀದ್‌ಗೆ ಸೇರಿದ 51 ಗ್ರಾಂ ಮಾದಕ ವಸ್ತು ಪತ್ತೆಯಾಯಿತು. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ 31 ಗ್ರಾಂ 13 ಮಿಲಿ ಎಂ.ಡಿ.ಎಂ.ಎ ದೊರೆತಿದ್ದು, ಜಾವೀದ್ ಬಳಿ 6 ಗ್ರಾಂ 40 ಮಿಲಿ ಹಾಗೂ ಜಿಯಾವುಲ್ಲಾ ಬಳಿ 15 ಗ್ರಾಂ 50 ಮಿಲಿ ಎಂ.ಡಿ.ಎಂ.ಎ ಪತ್ತೆಯಾಯಿತು.

ಒಟ್ಟು 103 ಗ್ರಾಂ 88 ಮಿಲಿ ತೂಕದ ಎಂ.ಡಿ.ಎಂ.ಎ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಅಂದಾಜು ಮೌಲ್ಯ ರೂ.10,30,800 ಆಗಿದೆ. ಅಲ್ಲದೆ ಮಾದಕ ವಸ್ತು ಸಾಗಾಟಕ್ಕೆ ಬಳಸಲಾಗುತ್ತಿದ್ದ ಸುಮಾರು ರೂ.8 ಲಕ್ಷ ಮೌಲ್ಯದ ಇನೋವಾ ಕಾರು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿಗಳು ಮಾದಕ ವಸ್ತುಗಳನ್ನು ನಗರದಲ್ಲಿ ಮಾರಾಟ ಮಾಡಲು ತಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದು, ಇವರ ಹಿಂದೆ ಇನ್ನೂ ದೊಡ್ಡ ಜಾಲ ಇರುವ ಸಾಧ್ಯತೆ ಬಗ್ಗೆ ತನಿಖೆ ಮುಂದುವರೆದಿದೆ.

ಬಂಧಿತ ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಮಾದಕ ವಸ್ತುಗಳು ಮತ್ತು ಇತರ ಸಾಮಗ್ರಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಡಿ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಮೈಸೂರು ನಗರದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರು ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಹಾಜರಿದ್ದರು.

Contact us for classifieds and ads : +91 9742974234