Latest News

ಮೈಸೂರು: ಕಬ್ಬಿನ ಹಣ ಪಾವತಿ ವಿಳಂಬ :  ಏಪ್ರಿಲ್ 21ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರ ಧರಣಿಗೆ ರೈತರ ತೀರ್ಮಾನ

ಮೈಸೂರು, ಏಪ್ರಿಲ್ 13: ಕಬ್ಬು ಬೆಳೆಗಾರರಿಗೆ ಬಾಕಿ ಇರುವ ಹಣವನ್ನು ತಕ್ಷಣ ಪಾವತಿಸಬೇಕೆಂದು ಒತ್ತಾಯಿಸಿ ಏಪ್ರಿಲ್ 21ರಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರ ಪ್ರತಿಭಟನೆ ಧರಣಿ ನಡೆಸಲು ರೈತ ಮುಖಂಡರು ತೀರ್ಮಾನಿಸಿದ್ದಾರೆ. ಈ ಸಂಬಂಧ ನಡೆದ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರ ಮತ್ತು ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸರ್ಕಾರದ ಆದೇಶಗಳನ್ನು ಗೌರವಿಸದೇ ನಿರ್ಲಕ್ಷ್ಯ ತೋರಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಸರ್ಕಾರದ ಆದೇಶಗಳನ್ನು ಪಾಲಿಸದಿರುವುದು ದುರಂತ. ಕಬ್ಬು ಬೆಳೆಗಾರರ ಖಾತೆಗಳಿಗೆ ಬಾಕಿ ಹಣ ಜಮಾ ಆಗುವವರೆಗೆ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ,” ಎಂದು ಅವರು ಎಚ್ಚರಿಕೆ ನೀಡಿದರು.

ರೈತರ ಹಣ ಬಾಕಿ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ‘ರಿಕವರಿ ಸರ್ಟಿಫಿಕೇಟ್’ ಜಾರಿ ಮಾಡಿ, ಸಕ್ಕರೆ ದಾಸ್ತಾನು ಜಪ್ತಿ ಮಾಡುವಂತೆ ಆಗ್ರಹಿಸಿದರು. ಇದರಿಂದ ರೈತರಿಗೆ ತಕ್ಷಣ ನ್ಯಾಯ ದೊರಕಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ನಿಗದಿ ಮಾಡಿದ ಪ್ರತಿ ಟನ್‌ಗೆ ಹೆಚ್ಚುವರಿ 100 ರೂ. ಕಬ್ಬಿನ ದರವನ್ನು ಬಣ್ಣಾರಿ ಹಾಗೂ ಮಹದೇಶ್ವರ ಸಕ್ಕರೆ ಕಾರ್ಖಾನೆಗಳು ತಕ್ಷಣವೇ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಲಾಯಿತು. ಇದಲ್ಲದೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮೂಲಕ ರೈತರ ಸಾಲಗಳಿಗೆ ಒನ್ ಟೈಮ್ ಸೆಟಲ್‌ಮೆಂಟ್ (OTS) ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಬ್ಯಾಂಕುಗಳಲ್ಲಿ ಚಿನ್ನದ ಗಿರವಿ ಸಾಲಗಳಿಗೆ ಸಿಬಿಲ್ ಸ್ಕೋರ್ ಆಧಾರಿತ ನಿಯಮವನ್ನು ರದ್ದುಪಡಿಸಬೇಕು ಹಾಗೂ ಹಳೆಯ ಪದ್ಧತಿಯಂತೆ ಬಡ್ಡಿ ಪಾವತಿಸಿ ಸಾಲ ನವೀಕರಣ ಮಾಡಲು ಅವಕಾಶ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ಕೃಷಿ ಪಂಪ್‌ಸೆಟ್‌ಗಳ ಅಕ್ರಮ-ಸಕ್ರಮ ಯೋಜನೆಯನ್ನು ಹಳೆಯ ಮಾದರಿಯಂತೆ ಮುಂದುವರಿಸಬೇಕು ಮತ್ತು ಅದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂಬ ಬೇಡಿಕೆಯೂ ಕೇಳಿಬಂದಿತು.

ಇನ್ನು ಐವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು, ಜಮೀನುಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಹಾಗೂ ಪೋಡಿ ಸರಳೀಕರಣ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏಪ್ರಿಲ್ 21ರಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರ ಧರಣಿ ನಡೆಸಲಾಗುವುದು ಎಂದು ಸಭೆಯಲ್ಲಿ ಏಕಮತದಿಂದ ನಿರ್ಧರಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮಿಪುರ ವೆಂಕಟೇಶ್, ವರಕೋಡು ನಾಗೇಶ್ ಸೇರಿದಂತೆ ಹಲವು ರೈತ ಮುಖಂಡರು ಮತ್ತು ಸದಸ್ಯರು ಉಪಸ್ಥಿತರಿದ್ದರು.

Contact us for classifieds and ads : +91 9742974234