Latest News

ಮೈಸೂರುನಲ್ಲಿ ಡ್ರಗ್ಸ್ ಪ್ರಯೋಗಾಲಯ ಶಂಕೆ: ಎನ್‌ಸಿಬಿ ಸೂಚನೆ ಬಳಿಕ 14 ತಂಡಗಳೊಂದಿಗೆ ವ್ಯಾಪಕ ಶೋಧ ಕಾರ್ಯ

ಮೈಸೂರು: ನಗರದಲ್ಲಿ ಡ್ರಗ್ಸ್ ತಯಾರಿಕಾ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿರುವ ಶಂಕೆ ಗಟ್ಟಿಯಾಗುತ್ತಿದ್ದಂತೆ, ಮೈಸೂರು ನಗರ ಪೊಲೀಸರು ಹೈ ಅಲರ್ಟ್ ಘೋಷಿಸಿ ಭಾರಿ ಮಟ್ಟದ ಶೋಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ರಾಷ್ಟ್ರೀಯಾ ಮಾದಕ ವಸ್ತು ನಿಯಂತ್ರಣಾ ದಳ (ಎನ್‌ಸಿಬಿ) ನೀಡಿದ ಖಚಿತ ಮಾಹಿತಿಯ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ 14 ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕೈಗಾರಿಕಾ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಪೊಲೀಸರ ಪ್ರಕಾರ, ಕಳೆದ ಕೆಲವು ತಿಂಗಳಿನಿಂದ ಮೈಸೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಗುಪ್ತ ಮಾಹಿತಿ ಸಿಕ್ಕಿತ್ತು. ಇದಕ್ಕೆ ಮತ್ತಷ್ಟು ಬಲ ನೀಡುವಂತೆ, ಇತ್ತೀಚೆಗೆ ನವದೆಹಲಿಯ ಎನ್‌ಸಿಬಿ ತಂಡವು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಪಿನಾಯಿಲ್ ತಯಾರಿಕಾ ಘಟಕವೊಂದರಲ್ಲಿ ಡ್ರಗ್ಸ್ ಪ್ರಯೋಗಾಲಯ ಇರುವುದನ್ನು ಪತ್ತೆಹಚ್ಚಿತ್ತು. ಈ ಬೆಳವಣಿಗೆ ಮೈಸೂರು ಪೊಲೀಸರಲ್ಲಿ ಎಚ್ಚರಿಕೆಯ ಗಂಟೆ ಮೊಳಗಿಸಿದಂತಾಗಿದೆ.

ಇದಕ್ಕೂ ಮುನ್ನ, ಕಳೆದ ವರ್ಷ ಜುಲೈ ತಿಂಗಳಲ್ಲಿ ಮುಂಬೈ ಪೊಲೀಸರ ವಿಶೇಷ ತಂಡ ನಗರ ರಿಂಗ್ ರಸ್ತೆಯ ಸಿದ್ದಿಕಿ ನಗರ ಸಮೀಪ ದಾಳಿ ನಡೆಸಿ ಎಂಡಿಎಂಎ (MDMA) ಮಾದಕ ವಸ್ತು ತಯಾರಿಕಾ ಘಟಕವೊಂದನ್ನು ಪತ್ತೆಹಚ್ಚಿತ್ತು. ಆ ಪ್ರಕರಣ ರಾಜ್ಯ ಮಟ್ಟದಲ್ಲೇ ದೊಡ್ಡ ಸಂಚಲನ ಸೃಷ್ಟಿಸಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಚಟುವಟಿಕೆಗಳ ಸುಳಿವು ಸಿಕ್ಕಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನೆಲೆ, ಮೇಟಗಳ್ಳಿ, ಬನ್ನಿಮಂಟಪ, ಹಿನಕಲ್ ಸೇರಿದಂತೆ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಪೊಲೀಸ್ ತಂಡಗಳು ತಪಾಸಣೆ ತೀವ್ರಗೊಳಿಸಿವೆ. ಮೈಸೂರು ನಗರ ಮಾತ್ರವಲ್ಲದೆ ಮೈಸೂರು ಜಿಲ್ಲೆ ಹಾಗೂ ಪಕ್ಕದ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿಯೂ ಶೋಧ ಕಾರ್ಯ ವಿಸ್ತರಿಸಲಾಗಿದೆ. ಒಟ್ಟು 250ಕ್ಕೂ ಹೆಚ್ಚು ಕೈಗಾರಿಕೆಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ರಾಸಾಯನಿಕ ವಸ್ತುಗಳ ಬಳಕೆ, ಸಂಗ್ರಹಣೆ ಹಾಗೂ ಉತ್ಪಾದನಾ ಪ್ರಕ್ರಿಯೆಗಳ ಮೇಲೆ ಸೂಕ್ಷ್ಮವಾಗಿ ನಿಗಾ ಇಡಲಾಗಿದೆ.

ಪ್ರತಿ ತಂಡದಲ್ಲೂ ಅನುಭವ ಹೊಂದಿದ ಅಧಿಕಾರಿಗಳು ಹಾಗೂ ತಾಂತ್ರಿಕ ಪರಿಣಿತರನ್ನು ಒಳಗೊಂಡಿದ್ದು, ಅನುಮಾನಾಸ್ಪದ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಕೆಲವು ಘಟಕಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದ್ದು, ಲೈಸೆನ್ಸ್ ಹಾಗೂ ಉತ್ಪಾದನಾ ಅನುಮತಿಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಡ್ರಗ್ಸ್ ತಯಾರಿಕೆಗಾಗಿ ಸಾಮಾನ್ಯವಾಗಿ ರಾಸಾಯನಿಕ ಕಾರ್ಖಾನೆಗಳನ್ನು ಆವರಣವಾಗಿ ಬಳಸುವ ಸಾಧ್ಯತೆ ಇರುವುದರಿಂದ, ಪ್ರತಿಯೊಂದು ಘಟಕದ ಮೇಲೂ ವಿಶೇಷ ಗಮನ ಹರಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಕೈಜೋಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ನಡುವೆ, ಸಾರ್ವಜನಿಕರ ಸಹಕಾರವೂ ಅಗತ್ಯವೆಂದು ಪೊಲೀಸರು ಮನವಿ ಮಾಡಿದ್ದಾರೆ. ತಮ್ಮ ಸುತ್ತಮುತ್ತ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ. ಶೋಧ ಕಾರ್ಯ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಬೆಳವಣಿಗೆಗಳು ಹೊರಬರುವ ಸಾಧ್ಯತೆ ಇದೆ.

ಮೈಸೂರು ನಗರದಲ್ಲಿ ಡ್ರಗ್ಸ್ ಜಾಲ ಬೇರೂರಲು ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪೊಲೀಸರು ಈ ಕಾರ್ಯಾಚರಣೆಯ ಮೂಲಕ ನೀಡಿದ್ದಾರೆ.

Contact us for classifieds and ads : +91 9742974234