
ಮೈಸೂರು: ಸಾಂಸ್ಕೃತಿಕ ನಗರಿಯ ಪರಿಸರ ಸಂರಕ್ಷಣೆ ಮತ್ತು ನಾಗರಿಕರ ಆರೋಗ್ಯ ವೃದ್ಧಿಯ ಆಶಯದೊಂದಿಗೆ ಆಯೋಜಿಸಲಾಗಿದ್ದ ‘ಮೈಸೂರು ಸೈಕಲ್ ದಿನ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಮೈಸೂರು ಮಹಾನಗರ ಪಾಲಿಕೆ, ಜಿಐಝಡ್ ಇಂಡಿಯಾ ಸಹಯೋಗದೊಂದಿಗೆ ಇಎಸ್ಎಎಫ್ ಫೌಂಡೇಶನ್ ಇದನ್ನು ಆಯೋಜಿಸಿತ್ತು. ದೇವರಾಜ ಅರಸು ರಸ್ತೆಯಲ್ಲಿ ನಡೆದ ಈ ಅಭಿಯಾನದಲ್ಲಿ ನಗರದ ವಿವಿಧೆಡೆಯಿಂದ 350ಕ್ಕೂ ಹೆಚ್ಚು ಸೈಕಲ್ ಪ್ರೇಮಿಗಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಾಲಿಕೆ ಆಯುಕ್ತರಾದ ಶ್ರೀ ಶೇಖ್ ತನ್ವೀರ್ ಆಸೀಫ್ ತಮ್ಮ ಮನೆಯಿಂದ ಕಾರ್ಯಕ್ರಮದ ಸ್ಥಳದವರೆಗೆ ಸೈಕಲ್ ತುಳಿದುಕೊಂಡು ಬರುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು. ಬಳಿಕ ಪ್ರಾದೇಶಿಕ ಆಯುಕ್ತರಾದ ಶ್ರೀ ನಿತೇಶ್ ಪಾಟೀಲ್ ಅವರೊಂದಿಗೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿ ಮಾತನಾಡಿ ಮೈಸೂರನ್ನು ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ಉಳಿಸಲು ಇಂಧನ ರಹಿತ ವಾಹನಗಳ ಬಳಕೆ ಹಾಗೂ ಸಾರ್ವಜನಿಕ ಸಹಭಾಗಿತ್ವ ಅತ್ಯಗತ್ಯ ಎಂದರು.

ಜಿಐಝಡ್ ಸಂಸ್ಥೆಯ ನೀತು ಜೋಸೆಫ್ ಮಾತನಾಡಿ ಭಾರತ ಮತ್ತು ಜರ್ಮನಿ ಸರ್ಕಾರಗಳ ತಾಂತ್ರಿಕ ಸಹಕಾರದ SUM-ACA ಯೋಜನೆಯಡಿ ಹವಾಮಾನ ಸ್ನೇಹಿ ನಗರ ಸಾರಿಗೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದರು.

ಸಾರ್ವಜನಿಕರಿಗಾಗಿ ಝುಂಬಾ ನೃತ್ಯ, ವಿದ್ಯಾರ್ಥಿಗಳಿಗಾಗಿ ರಸ್ತೆ ರಂಗೋಲಿ ಮತ್ತು ಜಲವರ್ಣ ಚಿತ್ರಕಲೆ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳು ನಡೆದವು. ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಅನೇಕರು ಇದರಲ್ಲಿ ಭಾಗವಹಿಸಿ ಉತ್ಸಾಹ ವನ್ನು ಹೆಚ್ಚಿಸಿದರು. ಇನ್ನು ಮುಂದೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಭಾನುವಾರ ಈ ಸೈಕಲ್ ದಿನ ಮುಂದುವರೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಇದೇ ವೇದಿಕೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರು ಹಾಗೂ ನೈರ್ಮಲ್ಯ ಮೇಲ್ವಿಚಾರಕರನ್ನು ಗೌರವಿಸಲಾಯಿತು. ‘ಸ್ವಚ್ಛ ಸರ್ವೇಕ್ಷಣೆ-2025’ರ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ‘ಸ್ವಚ್ಛತಾ ಚಾಂಪಿಯನ್’ಗಳನ್ನು ಸನ್ಮಾನಿಸಲಾಯಿತು. ಮನೆಯಲ್ಲೇ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ತಾರಸಿ ತೋಟ ಮಾಡಿದ ರಮಾ ಅಮರನಾಥ್, ಮುಬಾರಕ್ ಹಾಗೂ ವಿಕಾಸ್ ಅವರಿಗೆ ಪ್ರಶಸ್ತಿ ನೀಡಲಾಯಿತು. 6,800ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟ ‘ಟೀಂ ಮೈಸೂರು’, ಸ್ವಚ್ಛತಾ ಶ್ರಮದಾನ ಮಾಡಿದ ಪೃಥ್ವಿ ನೇತೃತ್ವದ ಎನ್.ಎಸ್.ಎಸ್ ತಂಡ ಹಾಗೂ ಅನಿಲ್ ಕುಮಾರ್ ರಾಮಯ್ಯ ನೇತೃತ್ವದ ಯುವರಾಜ ಕಾಲೇಜಿನ ಎನ್.ಸಿ.ಸಿ ತಂಡಗಳನ್ನು ಗೌರವಿಸಲಾಯಿತು. 30,000ಕ್ಕೂ ಹೆಚ್ಚು ಪ್ಲಾಸ್ಟಿಕ್ ಟೂತ್ ಬ್ರಷ್ಗಳನ್ನು ಸಂಗ್ರಹಿಸಿ ಸಂಸ್ಕರಿಸಿದ ಡಾ. ಭರತ್ ಕುಮಾರ್ ಹಾಗೂ ಹೆಚ್ಚುವರಿ ಆಹಾರವನ್ನು ಹಸಿದವರಿಗೆ ತಲುಪಿಸುತ್ತಿರುವ ‘ಸಂತೃಪ್ತಿ’ ಎನ್.ಜಿ.ಒ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಲಾಯಿತು.

ಸಂಸ್ಥೆಗಳ ವಿಭಾಗದಲ್ಲಿ ‘ಸ್ವಚ್ಛ ಸರ್ಕಾರಿ ಕಚೇರಿ’ ಪ್ರಶಸ್ತಿಯನ್ನು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪಡೆದುಕೊಂಡವು. ಸ್ವಚ್ಛ ಆಸ್ಪತ್ರೆ ವಿಭಾಗದಲ್ಲಿ ನಾರಾಯಣ ಹೃದಯಾಲಯ, ಅಪೊಲೊ ಬಿಜಿಎಸ್ ಹಾಗೂ ಜಯದೇವ ಆಸ್ಪತ್ರೆಗಳು ಗುರುತಿಸಲ್ಪಟ್ಟವು. ಹೋಟೆಲ್ ವಿಭಾಗದಲ್ಲಿ ದಕ್ಷಿಣ ಪಾಕ ಮತ್ತು ಸದರ್ನ್ ಸ್ಟಾರ್ ಹೋಟೆಲ್ಗಳು ಹಾಗೂ ಶಾಲಾ ವಿಭಾಗದಲ್ಲಿ ಪಿ.ಎಂ.ಶ್ರೀ. ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವನಿತಾ ಸದನ, ಸಿ.ಕೆ.ಸಿ ಕಾನ್ವೆಂಟ್ ಮತ್ತು ನಿರ್ಮಲಾ ಕಾನ್ವೆಂಟ್ಗಳು ಸ್ವಚ್ಛ ಪ್ರಶಸ್ತಿ ಮುಡಿಗೇರಿಸಿಕೊಂಡವು. ರೈಲ್ವೆ ನಿಲ್ದಾಣ ಮತ್ತು ಸುಬರ್ಬನ್ ಬಸ್ ನಿಲ್ದಾಣಗಳನ್ನು ಸ್ವಚ್ಛ ಸಾರಿಗೆ ಕೇಂದ್ರಗಳೆಂದು ಹಾಗೂ ರೈಲ್ವೆ ನಿಲ್ದಾಣದ ಆಟೋ ನಿಲ್ದಾಣ ಮತ್ತು ಗಾಯತ್ರಿಪುರಂನ ಜೈ ಕರ್ನಾಟಕ ಆಟೋ ನಿಲ್ದಾಣಗಳನ್ನು ಸ್ವಚ್ಛ ಆಟೋ ನಿಲ್ದಾಣಗಳೆಂದು ಗೌರವಿಸಲಾಯಿತು.

ಸ್ವಚ್ಚತಾ ರಾಯಭಾರಿಗಳಾದ ಚಿತ್ರನಟರಾದ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ, ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್ ಹಾಗೂ ಅರುಣ್ ಯೋಗಿರಾಜು ಅವರು ವಿಜೇತರಿಗೆ ಬಹುಮಾನ ವಿತರಿಸಿ ಮೆರುಗು ನೀಡಿದರು. ಎಸ್ ಬಿ ಎಂ ನೋಡಲ್ ಅಧಿಕಾರಿ ಮೃತ್ಯುಂಜಯ ಕೆ.ಎಸ್., ಎಲ್ಲಾ ಪರಿಸರ ಅಭಿಯಂತರರು, ಆರೋಗ್ಯ ಪರಿವೀಕ್ಷಕರು ಇದ್ದರು.
