Latest News

ಮೈಸೂರಿನಲ್ಲಿ ಟ್ರಾಫಿಕ್ ಸಿಗ್ನಲ್ ಗೊಂದಲ : ಸರ್ವೇ ಇಲ್ಲದೆ ಅಳವಡಿಕೆ ಆರೋಪ : ಹಿರಿಯ ವಕೀಲ ಎ.ಎಂ.ಭಾಸ್ಕರ್ ಬೇಸರ

ಮೈಸೂರು: ನಗರದ ವಿವಿಧೆಡೆ ಕಳೆದ ಡಿಸೆಂಬರ್‌ನಿಂದೀಚೆಗೆ ಎಲ್ಲೆಂದರಲ್ಲಿ ಏಕಾಏಕಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಇದರಿಂದ ಅನುಕೂಲದ ಬದಲು ಸಮಸ್ಯೆಯೇ ಹೆಚ್ಚಾಗಿದೆ. ಹೀಗಾಗಿ ಇವುಗಳನ್ನು ಅಳವಡಿಸುವ ಮುನ್ನ ಯಾವುದಾದರೂ ಸರ್ವೆ ನಡೆದಿದೆಯೇ, ಪಾಲಿಕೆ, ಮುಡಾ, ಭಾರತೀಯ ರಸ್ತೆ ಕಾಂಗ್ರೆಸ್‌ನ ಅನುಮತಿ ಪಡೆಯಲಾಗಿದೆಯೇ ಎಂದು ತಾವು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಪೊಲೀಸ್ ಆಯುಕ್ತರು ನಕಾರಾತ್ಮಕ ಉತ್ತರ ನೀಡಿದ್ದಾರೆ ಎಂದು ಹಿರಿಯ ವಕೀಲ ಎ.ಎಂ.ಭಾಸ್ಕರ್ ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲೆಲ್ಲ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಿದ ಬಳಿಕ ಜನದಟ್ಟಣೆ, ಸಂಚಾರ ದಟ್ಟಣೆ ಗೊಂದಲಕಾರಿಯಾಗಿ ಕಂಡು ಬರುತ್ತಿರುವುದು ತಮ್ಮ ಗಮನಕ್ಕೆ ಬಂತು. ಹೀಗಾಗಿ ಈ ಕುರಿತು ಪೊಲೀಸ್ ಆಯುಕ್ತರಿಗೆ ಆರ್‌ಟಿಐ ಅಡಿಯಲ್ಲಿ ಅರ್ಜಿ ಹಾಕಿ ಯಾವ ಯಾವ ವೃತ್ತದಲ್ಲಿ ಸರ್ವೆ ನಡೆದಿದೆ, ಎಷ್ಟು ವೆಚ್ಚವಾಗಿದೆ, ಸಂಬಂಧಿಸಿದವರ ಅನುಮತಿ ಪಡೆಯಲಾಗಿದೆಯೇ ಎಂಬಿವೇ ಮೊದಲಾದ ೧೪ ಪ್ರಶ್ನೆ ಕೇಳಿದ್ದೆ. ಆದರೆ ಇದಾವುದರ ಮಾಹಿತಿಯೂ ತಮ್ಮ ಬಳಿ ಇಲ್ಲ ಎಂದು ಆಯುಕ್ತರು ಉತ್ತರ ನೀಡಿದ್ದಾರೆ. ಹಾಗಿದ್ದರೆ ಯಾವ ಕಾರಣಕ್ಕೆ ಇಲ್ಲೆಲ್ಲ ಸಿಗ್ನಲ್ ದೀಪ ಅಳವಡಿಸಲಾಗಿದೆ ಎಂಬುದನ್ನು ಇನ್ನು ೧೫ ದಿನಗಳೊಳಗೆ ಆಯುಕ್ತರು ನೀಡಬೇಕು. ಇಲ್ಲದಿದ್ದಲ್ಲಿ ಇಲ್ಲಿ ಭ್ರಷ್ಟಾಚಾರದ ವಾಸನೆ ಕಂಡುಬರುತ್ತಿರುವ ಕಾರಣ ಲೋಕಾಯುಕ್ತರಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಲ್ಲದೆ ಇವರು ಪಾಲಿಕೆ, ಮುಡಾ, ಡಿಸಿ ಅನುಮತಿ ಸಹಾ ಪಡೆದಿಲ್ಲ. ಈ ಕುರಿತು ಸಂಬಂಧಿಸಿದವರಿಗೆ ದೂರು ನೀಡಿದಲ್ಲಿ ಸುಮಾರು ಒಂದು ಲಕ್ಷ ರೂ.ವರೆಗೆ ದಂಡ ಸಹಾ ವಿಧಿಸಬಹುದಾಗಿದೆ. ಜತೆಗೆ, ಇಲ್ಲಿ ಸಂಭವಿಸಿರುವ ಅಪಘಾತಗಳ ಮಾಹಿತಿ ಕೇಳಿದಾಗ ನೀಡಿರುವ ಉತ್ತರ ಸಮಾಧಾನಕರವಾಗಿಲ್ಲ. ಯಾವುದೇ ಸರ್ವೆ ಸಹಾ ನಡೆಸಿಲ್ಲ. ಸಿಗ್ನಲ್ ದೀಪ ಅಳವಡಿಸುವ ಮುನ್ನ ಟೆಂಡರ್ ಪ್ರಕಟಣೆ ನಡೆದಿಲ್ಲ. ಸಾರ್ವಜನಿಕರ ಅಹವಾಲು ಸಹಾ ಆಲಿಸಿಲ್ಲ. ಹೀಗಾಗಿ ಇಲ್ಲೆಲ್ಲ ಸಮಸ್ಯೆಗಳು ಹೆಚ್ಚಾಗಿರುವ ಕಾರಣ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಬಹುದಾಗಿದೆ. ಆದ್ದರಿಂದ ನಗರ ಪೊಲೀಸ್ ಆಯುಕ್ತರು ಇನ್ನು ೧೫ ದಿನಗಳೊಳಗೆ ತಮ್ಮ ನಿರ್ಧಾರ ಕುರಿತಂತೆ ಉತ್ತರ ನೀಡಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಮತ್ತೋರ್ವ ವಕೀಲ ಸಚಿನ್, ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಇದ್ದರು.

Contact us for classifieds and ads : +91 9742974234