
ಬೆಂಗಳೂರು :- ಮೆಟ್ರೋ ಕೇವಲ ಒಂದು ಸಾರಿಗೆ ವ್ಯವಸ್ಥೆಯಲ್ಲ, ಅದು ನಮ್ಮ ನಗರದ ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕುಟುಂಬಗಳ ಕನಸುಗಳನ್ನು ಹೊತ್ತೊಯ್ಯುವ, ಪ್ರಗತಿಯತ್ತ ಮುನ್ನಡೆಸುವ ಮತ್ತು ಈ ಎಲ್ಲರ ದೈನಂದಿನ ಜೀವನಾಡಿಯ ಸಂಕೇತವಾಗಿದೆ. ಇತ್ತೀಚಿನ ಮೆಟ್ರೋ ದರ ಪರಿಷ್ಕರಣೆಯ ನಂತರ ಪ್ರಯಾಣಿಕರಿಂದ ವ್ಯಕ್ತವಾದ ಆತಂಕ ಮತ್ತು ಬೇಸರವನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ಜನರ ಅಹವಾಲಿಗೆ ಕಿವಿಯಾಬೇಕಿರುವುದು ಪ್ರತಿ ಜವಾಬ್ದಾರಿಯುತ ಸರ್ಕಾರದ ಕರ್ತವ್ಯ ಎಂದು ನಂಬಿರುವ ನಮಗೆ ನಿಮ್ಮ ಅಹವಾಲುಗಳೇ ಆದ್ಯತೆಯಾಗಿವೆ.

ರಾಜಕೀಯ ಕೆಸರೆರೆಚಾಟಕ್ಕಿಂತ ರಾಜ್ಯದ ಜನರಿಗೆ ಸತ್ಯ ತಿಳಿಸುವುದು ಈ ಸಂದರ್ಭದಲ್ಲಿ ಹೆಚ್ಚು ಮುಖ್ಯವಾದುದ್ದು ಎನ್ನುವುದು ನನ್ನ ಭಾವನೆ,.
ಮೆಟ್ರೋ ರೈಲ್ವೇಸ್ (ಆಪರೇಷನ್ & ಮೇಂಟೆನೆನ್ಸ್) ಆಕ್ಟ್, 2002ರ ಅಡಿಯಲ್ಲಿ, ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ದರಗಳನ್ನು ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಮೂಲಕ ರಚಿಸಲಾದ ಸ್ವತಂತ್ರ ದರ ನಿಗದಿ ಕಮಿಟಿ (FFC) ನಿರ್ಧರಿಸುತ್ತದೆ.
ಆಕ್ಟ್‌ನ ಸೆಕ್ಷನ್ 36ರ ಪ್ರಕಾರ, ದರ ನಿಗದಿ ಕಮಿಟಿಯು ನಿಗದಿತ ಅವಧಿಯೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕು, ಮತ್ತು ಸೆಕ್ಷನ್ 37ರ ಅಡಿಯಲ್ಲಿ ಈ ಶಿಫಾರಸುಗಳು ಮೆಟ್ರೋ ಆಡಳಿತವು ಒಪ್ಪಲೇಬೇಕಿದೆ ಮತ್ತು ಜಾರಿ ಮಾಡಬೇಕಿದೆ. ರಾಜ್ಯ ಸರ್ಕಾರಕ್ಕೆ ಅಥವಾ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಈ ಶಿಫಾರಸುಗಳನ್ನು ರದ್ದುಗೊಳಿಸುವ ಅಥವಾ ಉಲ್ಲಂಘಿಸುವ ಕಾನೂನಾತ್ಮಕ ಅಧಿಕಾರವಿಲ್ಲ.
ಈ ದರ ನಿಗದಿ ಕಮಿಟಿಯನ್ನು:
- ಕೇಂದ್ರ ಸರ್ಕಾರ ರಚಿಸುತ್ತದೆ
- ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯವರು ನೇತೃತ್ವ ವಹಿಸಿರುತ್ತಾರೆ
- ಕೇಂದ್ರದ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ
- ಮತ್ತು ಸಂಸತ್ತಿನಲ್ಲಿ ತಾವೇ ಈ ಶಿಫಾರಸುಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡಿ ಈಗ ನಮ್ಮ ಸರ್ಕಾರದ ಮೇಲೆ ಬೆಲೆಯೇರಿಕೆ ನಿರ್ಧಾರದ ಆರೋಪ ಹೊರಿಸುವುದು ಅಪ್ರಾಮಾಣಿಕ ನಡೆ ಮಾತ್ರವಲ್ಲ, ಜನರನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ. ದರ ಪರಿಷ್ಕರಣೆಯ ಹೊಣೆಯನ್ನು ನಮ್ಮ ಸರ್ಕಾರದ ತಲೆಗೆ ಕಟ್ಟುವುದು ದುಷ್ಟತನದ್ದು.
ರಾಜ್ಯದ ಜನರಿಗೆ ನನ್ನ ವಾಗ್ದಾನ:

ಕಾನೂನು ದರ ಪರಿಷ್ಕರಣೆಯ ಎಲ್ಲಾ ಪ್ರಕ್ರಿಯೆಗಳನ್ನು ನಿಗದಿಪಡಿಸುತ್ತದೆಯಾದರೂ, ಜನಹಿತದ ವಿಚಾರದಲ್ಲಿ ನಮ್ಮ ಬದ್ಧತೆಯು ಕಾನೂನಿನ ಗಡಿಗಳನ್ನು ಮೀರಿದೆ. ನಾವು ನಿಮ್ಮೊಂದಿಗೆ ದೃಢವಾಗಿ ಇರುತ್ತೇವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಎಲ್ಲರಿಗೂ ಲಭ್ಯವಾಗುವಂತೆ ಕೈಗೆಟುಕುವ ದರದಲ್ಲಿರಬೇಕು ಮತ್ತು ದೈನಂದಿನ ಬದುಕಿಗೆ ಬಲ ತುಂಬುವಂತಿರಬೇಕು. ಬೆಂಗಳೂರಿನ ಬೆಳವಣಿಗೆಯು ಪ್ರಯಾಣಿಕರಿಗೆ ಹೊರೆಯಾಗಬಾರದು.
ನಾನು ಈ ಕೆಳಕಂಡ ವಿಷಯವನ್ನು ಔಪಚಾರಿಕವಾಗಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದ್ದೇನೆ.
ಕೇಂದ್ರಕ್ಕೆ ನನ್ನ ಒತ್ತಾಯಗಳು:
- ದರ ನಿಗದಿ ಕಮಿಟಿಯು ಶಿಫಾರಸು ಮಾಡಿರುವ ದರವನ್ನು ಮರುಪರಿಶೀಲಿಸಬೇಕು.
- ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಬಡಜನರಿಗೆ ಅನುಕೂಲವಾಗುವಂತೆ ಸಮಾನವಾಗಿ ದರ ನಿಗದಿ ಮಾಡುವ ವ್ಯವಸ್ಥೆಯನ್ನು ಅನುಸರಿಸಬೇಕು.
- ಸಾಮಾಜಿಕ ನ್ಯಾಯದೊಂದಿಗೆ ಸುಸ್ಥಿರ ಆರ್ಥಿಕತೆಯನ್ನು ಸರಿದೂಗಿಸುವ ನೀತಿಗಳ ಬಗ್ಗೆ ಗಮನ ಹರಿಸಬೇಕು.
ನಗರಗಳ ಸಂಪರ್ಕ ಹಾಗೂ ಸಾರಿಗೆ, ಸಾರ್ವಜನಿಕ ಸೇವೆಗಳು ಮತ್ತು ಜನರ ಹಿತವನ್ನು ರಕ್ಷಿಸುವಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿ ರಾಜ್ಯವಾಗಿದೆ. ನಾವು ಬೆಂಗಳೂರು ನಗರ ನಿವಾಸಿಗಳ ಹಿತರಕ್ಷಣೆಗಾಗಿ ಸಂವಿಧಾನಾತ್ಮಕವಾಗಿ, ರಚನಾತ್ಮಕವಾಗಿ ಮತ್ತು ದೃಢವಾಗಿ ನಿಲ್ಲಲಿದ್ದೇವೆ.
ವಿರೋಧ ಪಕ್ಷಗಳು ಹರಡುತ್ತಿರುವ ತಪ್ಪು ಮಾಹಿತಿಯನ್ನು ಬದಿಗೊತ್ತಿ ರಾಜ್ಯದ ಜನತೆಯ ಹಿತಕ್ಕಾಗಿ ನೀವೆಲ್ಲರೂ ನಮ್ಮ ಜೊತೆ ನಿಲ್ಲಬೇಕು ಎಂದು ಮನವಿ ಮಾಡುತ್ತೇನೆ. ನ್ಯಾಯಯುತ ಆಡಳಿತ, ಪ್ರಾಮಾಣಿಕ ಸಂವಹನ ಮತ್ತು ನಾಡಿನ ಜನರ ಹಿತಕ್ಕಾಗಿ ನಿರಂತರ ಹೋರಾಟ ಮಾಡುವಲ್ಲಿ ನಮ್ಮ ಬದ್ಧತೆ ಸ್ಪಷ್ಟವಾಗಿದೆ.
ದುರದೃಷ್ಟವಶಾತ್, ದೆಹಲಿಯಲ್ಲಿ ಕರ್ನಾಟಕದ ಹಿತ ಕಾಪಾಡಲು ವಿಫಲರಾಗಿರುವ ಬಿಜೆಪಿ ನಾಯಕರೇ ಇಂದು ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಟೀಕಿಸುವ ಮೂಲಕ ರಾಜಕೀಯ ನಾಟಕ ಮಾಡುತ್ತಿದ್ದಾರೆ.
- ಕರ್ನಾಟಕದ ಬಿಜೆಪಿ ಸಂಸದರು ಈ ವಿಷಯವನ್ನು ಸಂಸತ್ತಿನಲ್ಲಿ ಏಕೆ ಪ್ರಶ್ನಿಸಲಿಲ್ಲ?
- ಕರ್ನಾಟಕದ ಬಿಜೆಪಿ ಸಚಿವರು ಕೇಂದ್ರ ಮಟ್ಟದಲ್ಲಿ ಉನ್ನತ ದರದ ಸ್ಲ್ಯಾಬ್‌ಗಳನ್ನು ಏಕೆ ವಿರೋಧಿಸಲಿಲ್ಲ?
- ಬೆಂಗಳೂರಿಗರ ಬೆಂಬಲಕ್ಕೆ ನಿಲ್ಲಬೇಕಿದ್ದ ಕರ್ನಾಟಕದ ಬಿಜೆಪಿ ನಾಯಕರು ದೆಹಲಿ ಸರ್ಕಾರದ ವಕ್ತಾರರಂತೆ ವರ್ತಿಸುತ್ತಿರುವುದು ಯಾಕೆ?
ಕರ್ನಾಟಕದ ಬಿಜೆಪಿ ನಾಯಕರಿಗೆ ತಮಗೆ ಮತ ನೀಡಿದ ಜನರ ಹಿತರಕ್ಷಣೆಗಿಂತ ತಮ್ಮ ಹೈಕಮಾಂಡ್ ನಾಯಕರ ಓಲೈಕೆಯೇ ಮುಖ್ಯವಾಗಿದೆ.

ಈ ದರ ಏರಿಕೆ ಯಾವುದೋ ಒಂದು ಪ್ರತ್ಯೇಕ ಘಟನೆಯಲ್ಲ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮೇಲಿಂದ ಮೇಲೆ ಎಸಗುತ್ತಿರುವ ಅನ್ಯಾಯದ ಸರಣಿಯ ಭಾಗವಾಗಿದೆ. ಅಸಮರ್ಪಕ ತೆರಿಗೆ ಹಂಚಿಕೆ, ನ್ಯಾಯಯುತ ಅನುದಾನದ ನಿರಾಕರಣೆ, ಮೂಲಭೂತ ಸೌಲಭ್ಯಗಳಿಗೆ ಬೆಂಬಲ ನೀಡುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ ಮತ್ತು ಈಗ ಸಾಮಾನ್ಯ ಜನರ ಮೇಲೆ ಹೊರೆ ಹಾಕುವ ಮೆಟ್ರೋ ದರಗಳು, ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿದ್ದು, ಇವುಗಳ ಉದ್ದೇಶ ಕನ್ನಡಿಗರ ಶೋಷಣೆಯಾಗಿದೆ.
ಕೇಂದ್ರ ಸರ್ಕಾರವು ದೇಶದ ಆರ್ಥಿಕತೆಯನ್ನು ಮುನ್ನಡೆಸುತ್ತಿರುವ ರಾಜ್ಯಗಳನ್ನು ಬೆಂಬಲಿಸುವ ಬದಲು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮತ್ತು ದೈನಂದಿನ ಜೀವನವನ್ನು ದುಬಾರಿಯಾಗಿಸುವ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ವಿಪರ್ಯಾಸ.
ಬಿಜೆಪಿ ನಾಯಕರಲ್ಲಿ ನನ್ನ ಆಗ್ರಹ:
- ಜನರನ್ನು ತಪ್ಪುದಾರಿಗೆಳೆಯುವುದನ್ನು ನಿಲ್ಲಿಸಿ,
- ಜನರ ನೋವಿನಲ್ಲಿ ನಿಮ್ಮ ಸ್ವಾರ್ಥ ರಾಜಕೀಯ ಆಟವನ್ನು ಸಾಕುಮಾಡಿ ಮತ್ತು
- ಮೊದಲು ನಾಡಿಗೆ, ನಂತರ ನಿಮ್ಮಗಳ ಪಕ್ಷಕ್ಕೆ ಋಣಿಯಾಗಿರಿ.
ನಮ್ಮ ಸರ್ಕಾರವು ರಾಜ್ಯದ ಜನರ ಜೊತೆಗೆ ದೃಢವಾಗಿ ನಿಂತಿದ್ದು. ಆರ್ಥಿಕ, ಆಡಳಿತಾತ್ಮಕ ಅಥವಾ ರಾಜಕೀಯ ಯಾವುದೇ ಅನ್ಯಾಯವೇ ಆಗಿರಲಿ, ಅದಕ್ಕೆ ತಕ್ಕ ಉತ್ತರ ನೀಡದೆ ಬಿಡುವುದಿಲ್ಲ.



