
ಮೈಸೂರು, ಮಾ.4:- ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಹಿಳೆಯರು ಹಾಗೂ ವಿಕಲಚೇತನರಿಗೆ ಉದ್ಯೋಗ ಕಲ್ಪಿಸಿ ಆರ್ಥಿಕ ಮಟ್ಟ ಸುಧಾರಿಸಲು ಮಾಚ್೯ 6 ರಂದು ಬೆಳಿಗ್ಗೆ 9.30 ಗಂಟೆಗೆ ಶ್ರೀ ರಂಗಚಾರ್ಲು ಪುರಭವನದಲ್ಲಿ ವಿಕಾಸ ಪಥದಲ್ಲಿ ವಿಶೇಷಚೇತನರ ಹಾಗೂ ಮಹಿಳೆಯರ ಹೆಜ್ಜೆ ಸೌರ ಬೆಂಬಲಿತ ಕಾರ್ಯಾಗಾರ ಹಾಗೂ ಜೀವನೋಪಯ ಪರಿಹಾರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರು ತಿಳಿಸಿದರು.

ಅವರು ಇಂದು ಮೈಸೂರು ಮಹಾನಗರ ಪಾಲಿಕೆಯ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಛ ಮೈಸೂರು ರೋಡ್ ಶೋ ಹಾಗೂ ವಿಶೇಷಚೇತನರ ಹಾಗೂ ಮಹಿಳೆಯರ ಹೆಜ್ಜೆ ಸೌರ ಬೆಂಬಲಿತ ಕಾರ್ಯಾಗಾರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ವಿಶೇಷಚೇತನರಿಗಾಗಿ ಮೈಸೂರು ಮಹಾನಗರಪಾಲಿಕೆಯಲ್ಲಿ ಶೇ 5 ರಷ್ಟು ಅನುದಾನ ಮೀಸಲಿದ್ದು, ಅದರಲ್ಲಿ ಅವರಿಗೆ ಜೀವನೋಪಾಯ ಕಲ್ಪಿಸುವ ರೀತಿಯಲ್ಲಿ ತರಬೇತಿ ನೀಡಬೇಕು ಎಂದರು.
ಮಾ.6 ರಂದು ಸೆಲ್ಕೋ ಫೌಂಡೇಶನ್ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕಾರ್ಯಾಗಾರದಲ್ಲಿ ಸೋಲರ್ ಆಧಾರಿತ ವ್ಯವಸಾಯ ಯಂತ್ರಗಳು, ಪಶುಸಂಗೋಪನಾ ಯಂತ್ರಗಳು, ಕಿರು ಉದ್ಯಮ ಯಂತ್ರ ಹಾಗೂ ಉತ್ಪನ್ನ ಯಂತ್ರಗಳನ್ನು ಬಳಸಿ ಸ್ವ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸಲು ಬೇಕಿರುವ ಕೌಶಲ್ಯ ತರಬೇತಿ ನೀಡಲಾಗುವುದು ಎಂದರು.

ತರಬೇತಿ ನೀಡಿದ ನಂತರ ಅವರಿಗೆ ಸ್ವ ಉದ್ಯೋಗ ಕೈಗೊಳ್ಳಲು ಬೇಕಿರುವ ಬ್ಯಾಂಕಿನಿಂದ ಬೇಕಿರುವ ಸಾಲ ಹಾಗೂ ಸಹಾಯಧನ ಒದಗಿಸಿ. ನಂತರ ಅವರು ಜೀವನದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಬಗ್ಗೆ ನಿಗಾ ವಹಿಸಿ ಇತರರಿಗೆ ತಿಳಿಸಿ., ಇದರಿಂದ ಮಹಿಳೆಯರು ಹಾಗೂ ವಿಕಲಚೇತನರು ಹೆಚ್ಚಾಗಿ ಕೌಶಲ್ಯಾಧರಿತ ತರಬೇತಿ ಪಡೆಯಲು ಮುಂದಾಗಲಿ ಎಂದರು.
ಮಾ.8 ರಂದು ಸ್ವಚ್ಛತಾ ರೋಡ್ ಶೋ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಾಚ್೯8 ರಂದು ಮೈಸೂರು ಅರಮನೆ ಆವರಣದಿಂದ ಓವಲ್ ಮೈದಾನದವರೆಗೆ ಸ್ವಚ್ಛ ಮೈಸೂರು ನನ್ನಿಂದ ಪ್ರಾರಂಭ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ರೋಡ್ ಶೋ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮಾನ್ಯ ಮುಖ್ಯಮಂತ್ರಿಗಳನ್ನು ಸಹ ಆಹ್ವಾನಿಸಲಾಗುವುದು. ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಸಂಘ ಸಂಸ್ಥೆ ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮವನ್ನು ಆಯೋಜಿಸಿ ಎಂದರು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರು ಮಾತನಾಡಿ ರೋಡ್ ಶೋನಲ್ಲಿ ವಿಟೇಂಜ್ ಕಾರ್, ಮಹಿಳಾ ದಿನಾಚರಣೆ ಮಾ.8 ರಂದು ಇರುವ ಹಿನ್ನಲೆಯಲ್ಲಿ ಮಹಿಳೆಯರ ಬೈಕ್ ರ್ಯಾಲಿ, ಸೈಕಲ್ ರ್ಯಾಲಿ, ಮೌಂಟೆಡ್ ತಂಡದಿಂದ ಕುದುರೆಗಳು, ಟಾಂಗಾಗಳು ಇನ್ನಿತರೆ ತಂಡಗಳು ಭಾಗವಹಿಸುವ ರೀತಿ ಯೋಜಿಸಲಾಗುತ್ತಿದೆ ಎಂದರು.
ರೋಡ್ ಶೋ ಕೊನೆಗೊಳ್ಳುವ ಓವಲ್ ಮೈದಾನದಲ್ಲಿ ಕಟ್ಟಡ ನಿರ್ಮಾಣ ತ್ಯಜ್ಯ ವಸ್ತುಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆ, ಇ.ವೇಸ್ಟ್ , ಪ್ಲಾಸ್ಟಿಕ್, ಬಯೋ ಮೆಡಿಕಲ್ ವೇಸ್ಟ್ ಗಳ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಆಯೋಜಿಸಿ ಸಾರ್ವಜನಿಕರಿಗೆ ಸ್ವಚ್ಛ ಮೈಸೂರು ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಉಪಾಯುಕ್ತೆ ವೀಣಾ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷರಾದ ಕೆ.ಬಿ. ಲಿಂಗರಾಜು, ಕ್ಲೀನ್ ಫೌಂಡೇಶನ್ ಮೈಸೂರ್ ನ ನಿರ್ದೇಶಕರಾದ ಲೀಲಾ ವೆಂಕಟೇಶ್, ಸೆಲ್ಕೋ ಫೌಂಡೇಶನ ನ ಪ್ರಕಾಶ್ ಮೇಟಿ, ಪರಿಸರ ವಿಜ್ಞಾನ ಸಂಶೋಧಕರಾದ ಗೋಪಿ ಕಿರಣ್ ಹೆಚ್, ಜಿ.ಎಸ್.ಎಸ್ ಪ್ರಾಜೆಕ್ಟ್ ಕ್ರೆಡೈ ನ ಶ್ರೀ ರಾಮ್ ಡಿ, ಶ್ರೀಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
