Latest News

ಮಾ.1ರಂದು ಕಲಾ ಮಂದಿರದಲ್ಲಿ ರೇಣುಕಾಚಾರ್ಯ ಜಯಂತಿ – ಓವಲ್ ಮೈದಾನದಲ್ಲಿ ವಿಶೇಷ ಮಕ್ಕಳಿಗಾಗಿ ಕ್ರೀಡಾಕೂಟ

 

ಮೈಸೂರು:-  ಜಿಲ್ಲಾಡಳಿತ ಹಾಗೂ ರೇಣುಕಾಚಾರ್ಯ ಜಯಂತ್ಯುತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 1ರಂದು ಬೆಳಗ್ಗೆ 10.30ಕ್ಕೆ ನಗರದ ಕಲಾ ಮಂದಿರದಲ್ಲಿ ರೇಣುಕಾಚಾರ್ಯ ಜಯಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ ಎಂದು ಸಮಿತಿ ಪದಾಧಿಕಾರಿ ಶ್ರೀಶೈಲ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಸುಧಾರಕ ಹಾಗೂ ಧಾರ್ಮಿಕ ಚಿಂತಕರಾದ ರೇಣುಕಾಚಾರ್ಯರ ಜೀವನ ಮತ್ತು ಸಂದೇಶಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಸಚಿವ ಕೆ. ವೆಂಕಟೇಶ್, ಶಾಸಕ ಅನಿಲ್ ಕುಮಾರ್, ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರುವರು ಎಂದು ಹೇಳಿದರು. ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸುವುದರ ಜೊತೆಗೆ ರೇಣುಕಾಚಾರ್ಯರ ಆದರ್ಶಗಳು ಹಾಗೂ ಸಮಾಜ ಸೇವೆಯ ಕುರಿತಾಗಿ ಉಪನ್ಯಾಸ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು. ಸಭೆಯಲ್ಲಿ ದಯಾನಂದ್, ಜ್ಞಾನಜ್ಯೋತಿ, ಬೀರೇಶ್, ಮಾಲಿನಿ, ಬೀರೇಶ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇನ್ನೊಂದೆಡೆ, ರೋಟರಿ ಮಿಡ್ ಟೌನ್ ವತಿಯಿಂದ ಮಾರ್ಚ್ 1ರಂದು ಬೆಳಗ್ಗೆ 9 ಗಂಟೆಗೆ ನಗರದ ಓವಲ್ ಮೈದಾನದಲ್ಲಿ “ಬಾಂಧವ್ಯ” ಶೀರ್ಷಿಕೆಯಡಿ ವಿಶೇಷ ಮಕ್ಕಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಉದ್ದೇಶಿಸಿದ ವಿಶೇಷ ಕ್ರೀಡಾ ಹಾಗೂ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಕೇಶ್ ಬಾಬು ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 500ಕ್ಕೂ ಹೆಚ್ಚು ವಿಶೇಷ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿವಿಧ ಕ್ರೀಡೆಗಳು ಹಾಗೂ ಮನರಂಜನಾ ಚಟುವಟಿಕೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಸರಳ ಆಟೋಟಗಳನ್ನು ಏರ್ಪಡಿಸಲಾಗಿದ್ದು, ಹೆಚ್ಚಿನ ವಯಸ್ಸಿನ ಮಕ್ಕಳಿಗಾಗಿ ಓಟದ ಸ್ಪರ್ಧೆ, ಲಾಂಗ್ ಜಂಪ್, ಶಾಟ್‌ಪುಟ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಮತ್ತು ಸಾಮಾಜಿಕ ಬಾಂಧವ್ಯವನ್ನು ವೃದ್ಧಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಬೆಳಗ್ಗೆ ರವಿಶಂಕರ್, ದಾಕೋಜು ಹಾಗೂ ನವೀನ್ ಚಂದ್ರ ಉದ್ಘಾಟಿಸಲಿದ್ದು, ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿಶೇಷ ಮಕ್ಕಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ.ವಿ. ಭಾಸ್ಕರ್, ಎಚ್.ಎಸ್. ವೀರೇಶ್ ಸೇರಿದಂತೆ ರೋಟರಿ ಮಿಡ್ ಟೌನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಾರ್ಚ್ 1ರಂದು ನಡೆಯಲಿರುವ ಈ ಎರಡೂ ಕಾರ್ಯಕ್ರಮಗಳು ನಗರದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಚೈತನ್ಯ ನೀಡಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

Contact us for classifieds and ads : +91 9742974234