
ವರದಿ:ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ: ಬಿಜೆಪಿ ಪಕ್ಷದ ತತ್ವಸಿದ್ಧಾಂತ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯಕರ್ತರಿಗೆ ತಿಳಿಸುವ ಉದ್ದೇಶದಿಂದ ಪ್ರಶಿಕ್ಷಣ ಮಹಾ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ತಿಳಿಸಿದರು.

ಪಟ್ಟಣದ ಹರವೆ ಮಲ್ಲರಾಜಪಟ್ಟಣ ಬಡಾವಣೆಯಲ್ಲಿರುವ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಗಾರ ಉದ್ಘಾಟಿಸಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ಮಾತನಾಡಿದರು. ಬಿಜೆಪಿ ಪಕ್ಷ ವಿಶ್ವದಲ್ಲಿಯೇ ಬಲಿಷ್ಠ ಪಕ್ಷ ಎಂಬ ಕೀರ್ತಿಗೆ ಪಾತ್ರವಾಗಿದ್ದು ಅತಿ ಹೆಚ್ಚು ಶಾಸಕರು ಹಾಗೂ ಸಂಸದರನ್ನು ಹೊಂದಿರುವ ಪಕ್ಷವಾಗಿದೆ ಎಂದರು. ಕಾರ್ಯಕರ್ತರಿಗೆ ಪ್ರಶಿಕ್ಷಣ ಎಂಬುದು ಬೇರೆ ಯಾವ ರಾಜಕೀಯ ಪಕ್ಷಗಳಲ್ಲೂ ಇಲ್ಲ, ಬಿಜೆಪಿ ಪಕ್ಷವು ಚುನಾವಣೆ ಗೆಲ್ಲಲು ಮಾತ್ರ ಕಾರ್ಯಕರ್ತರನ್ನು ಬಳಸಿಕೊಳ್ಳದೆ ದೇಶ ಮೊದಲು ಎಂಬ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬರಿಗೂ ತಿಳಿಸುವ ಮೂಲಕ ಸಾಮಾನ್ಯ ಕಾರ್ಯಕರ್ತರಿಗೂ ಗೌರವ ನೀಡಿದೆ ಎಂದರು. ದೇಶದಲ್ಲಿಯೇ ಮೊದಲ ಬಾರಿಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಪ್ರಶಿಕ್ಷಣ ಸ್ಥಾಪನೆ ಮಾಡುವ ಮೂಲಕ ಕಾರ್ಯಕರ್ತರಿಗೆ ಪಕ್ಷದ ಸಿದ್ಧಾಂತಗಳನ್ನು ತಿಳಿಸಿ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ಧರು ಆ ಕಾರಣಕ್ಕಾಗಿ ಪ್ರಶಿಕ್ಷಣಕ್ಕೆ ಅವರ ಹೆಸರು ಇಡಲಾಗಿದೆ ಎಂದರು. ಎರಡು ದಿನಗಳ ಕಾಲ ನಡೆಯುವ ಪ್ರಶಿಕ್ಷಣದಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಇಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ಮನದಟ್ಟು ಮಾಡಿಕೊಳ್ಳುವ ಮೂಲಕ ಇತರರಿಗೂ ತಿಳಿಸಿ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.

ಮಾಜಿ ಶಾಸಕ ಹೆಚ್.ಸಿ.ಬಸವರಾಜ್ ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆದಾಗಿನಿಂದ ನಮ್ಮ ದೇಶದ ಶಕ್ತಿ ಇಡೀ ವಿಶ್ವಕ್ಕೆ ಮನದಟ್ಟಾಗಿದೆ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡುವ ಮೂಲಕ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಜಾಗೃತಿ ವಹಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ವಿ.ರಾಜೇಂದ್ರ ಮಾತನಾಡಿ ವಿಕಸಿತ ಭಾರತ ಯೋಜನೆಯಡಿ ಬರುವ ಮುಖ್ಯ ಕಾರ್ಯಕ್ರಮ ಪ್ರಶಿಕ್ಷಣವಾಗಿದೆ, ಬಿಜೆಪಿ ಸರ್ಕಾರದ ಸಾಧನೆಗಳು ಹಾಗೂ ಪಕ್ಷ ನಡೆದು ಬಂದ ದಾರಿ ಮತ್ತು ಸಾಮಾನ್ಯ ಜನರು ಸಾಮಾಜಿಕ ಜಾಲತಾಣವನ್ನು ಉಪಯೋಗಿಸುವ ಕುರಿತು ಸೇರಿದಂತೆ ಆಧುನಿಕ ತಂತ್ರಜ್ಞಾನದ ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಶಿಕ್ಷಣ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಭಾರಿ ಪಣೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರೀಕ್ಷಿತ್ ರಾಜೇಅರಸ್, ಜಿಲ್ಲಾ ಉಪಾಧ್ಯಕ್ಷ ಕಿರಣ್ ಜಯರಾಮೇಗೌಡ, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಎಂ.ಎಂ.ರಾಜೇಗೌಡ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ, ಮೈಸೂರು ನಗರ ಅಧ್ಯಕ್ಷ ರಾಜೇಶ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಚನ್ನಬಸವರಾಜು, ಹೆಮ್ಮಿಗೆ ರವಿ, ಮುಖಂಡರಾದ ವಿಕ್ರಮ್ ರಾಜ್, ಲೋಕಪಾಲಯ್ಯ, ಬಾಲಕೃಷ್ಣ, ವಿಜಯಕುಮಾರ್, ಟಿ.ರಮೇಶ್, ಶುಭಗೌಡ, ಮಾಗಳಿ ಸ್ವಾಮಿ, ಪಿ.ಕೆ.ರಾಘವೇಂದ್ರ, ಎಸ್.ಮಲ್ಲೇಶ್, ಶಿವರಾಮೇಗೌಡ, ಮೀನಾಕ್ಷಿ, ಕಾಂತರಾಜೇ ಅರಸ್, ಗೀತಾ, ಅಶೋಕ್, ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

