Latest News

ಬಿಸಿಲಿನ ತಾಪ ಹೆಚ್ಚಳ: ಕುಡಿಯುವ ನೀರು, ಮೇವು ಕೊರತೆ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಿ – ಶಾಸಕ ಡಿ.ರವಿಶಂಕರ್

ವರದಿ :-ವಡ್ಡರಕೊಪ್ಪಲು ಶಿವರಾಮು.

 ಕೆ.ಆರ್.ನಗರ. ಮಾ. 05:- ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಮತ್ತು ಕುಡಿಯುವ ನೀರಿಗೆ ಅಭಾವ ಉಂಟಾಗುವ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ರೈತರ ಕೃಷಿ ಪಂಪಸಟ್ಟು ಗಳಿಗೆ ವಿದ್ಯುತ್ ತೊಂದರೆಯಾಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಶಾಸಕ ಡಿ ರವಿಶಂಕರ್ ಸಲಹೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ಗ್ರಾಮಾಂತರ ಪ್ರದೇಶಗಳ ಕುಡಿಯುವ ನೀರಿನ ಲಭ್ಯತೆ ಮತ್ತು ಕೊರತೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

ಬೇಸಿಗೆ ಸಮಯದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುವುದರ ಜತೆಗೆ ಸಾರ್ವಜನಿಕರಿಂದ ದೂರು ಬಂದ ಕೂಡಲೇ ಸ್ಪಂದಿಸಬೇಕು ಎಂದು ಹೇಳಿದ ಶಾಸಕರು

ಜನ ಮತ್ತು ಜಾನುವಾರುಗಳಿಗೆ ಸಕಾಲದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವುದರ ಜತೆಗೆ ಆರೋಗ್ಯದ ಬಗ್ಗೆಯೂ ತುರ್ತು ನಿಗಾ ವಹಿಸಬೇಕೆಂದು ತಿಳಿಸಿದ ಅವರು ಎರಡು ತಾಲೂಕಿನಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಮೇವು ಸಾಗಾಣೆಯಾಗದಂತೆ ನಿಗಾ ವಹಿಸಬೇಕೆಂದರು.

ಚನ್ನಪ್ಪನಕೊಪ್ಪಲು ಗ್ರಾಮದಲ್ಲಿ ನೂತನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿದ್ದು ನೀರಿನ ಮೂಲವಿಲ್ಲದೆ ಖಾಲಿ ಇದ್ದು ಕೂಡಲೇ ಅಲ್ಲಿಗೆ ಮತ್ತು ಪಕ್ಕದ ಅರೆಕಲ್ ಕೊಪ್ಪಲು ಗ್ರಾಮಗಳಿಗೆ ನೀರು ಸರಬರಾಜು ಮಾಡಬೇಕೆಂದು ಸೂಚಿಸಿದರು.

ಹಂಪಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದ್ದು ಕಳೆದ ಮಂಗಳವಾರ ಗ್ರಾಮದಲ್ಲಿ ನಡೆದ ದುರ್ಗಾಪರಮೇಶ್ವರಿ ದೇವಾಲಯದ ರಥೋತ್ಸವಕ್ಕೆ ನಾನು ಹೋದಾಗ ಅಲ್ಲಿನ ಮಹಿಳೆಯರು ಈ ಸಂಬಂದ ದೂರು ನೀಡಿದ್ದು ಆ ಬಗ್ಗೆ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕೆಂದು ಆದೇಶಿಸಿದರು.

ಹರಂಬಳ್ಳಿ ಮತ್ತು ಮಾರಗೌಡನಹಳ್ಳಿ ಹಾಗೂ ಐಪನಹಳ್ಳಿ ಗ್ರಾಮಗಳ ನಡುವೆಯೂ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಸ್ಥಳಕ್ಕೆ ಬೇಟಿ ನೀಡಿ ನನಗೆ ವರದಿ ನೀಡಬೇಕೆಂದರಲ್ಲದೆ ನೀರು ಸರಬರಾಜಿಗೂ ಆಧ್ಯತೆ ನೀಡಬೇಕೆಂದರು.

ಹೆಬ್ಬಾಳು ಬಡಾವಣೆಯ ಡಾ.ಜಗಜೀವನರಾಂ ಬಡಾವಣೆ, ಸಿದ್ದಾಪುರ, ಕಗ್ಗೆರೆ, ಬ್ಯಾಡರಹಳ್ಳಿ, ಅರ್ಜುನಹಳ್ಳಿ, ಡೋರ್ನಹಳ್ಳಿ, ಅಡಗೂರು, ಕೆಸ್ತೂರು, ತಿಪ್ಪೂರು, ಲಾಲಂದೇವನಹಳ್ಳಿ, ಸಿದ್ದಾಪುರ, ಹಂಪಾಪುರ, ಹೊಸ ಅಗ್ರಹಾರ, ಮಾಯಿಗೌಡನಹಳ್ಳಿ, ಮಿರ್ಲೆ, ನರಚನಹಳ್ಳಿ, ತಂದ್ರೆ, ಕರ್ಪೂರವಳ್ಳಿ, ಲಕ್ಷ್ಮೀಪುರ ಮತ್ತು ಮುಂಜನಹಳ್ಳಿ ಗ್ರಾಮಗಳಲ್ಲಿ ಕೂಡಲೇ ಕೊಳವೆ ಭಾವಿ ಕೊರೆಸಲು ಬೇಡಿಕೆ ಬಂದಿದ್ದು ಈ ಬಗ್ಗೆ ಸದನದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ನುಡಿದರು.

ಬೇರ್ಯ, ಹೆಬ್ಬಾಳು, ಮಿರ್ಲೆ ಸೇರಿದಂತೆ ಇತರ ಪ್ರಾಥಮಿಕ ಆರೋಗ್ಯ ಕೇದ್ರಗಳ ವೈಧ್ಯರುಗಳು ವಿಳಂಬವಾಗಿ ಆಸ್ಪತ್ರೆಗೆ ಆಗಮಿಸಿ ಬೇಗನೆ ತೆರಳುತ್ತಾರೆ ಎಂಬ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿದ್ದು ಕೂಡಲೇ ತಾಲೂಕು ಆರೋಗ್ಯಾಧಿಕಾರಿಗಳು ಬೇಟಿ ನೀಡಿ ಕ್ರಮ ವಹಿಸಬೇಕೆಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸರಬರಾಜು ಆಗದಿದ್ದರೆ ಅದನ್ನು ನನ್ನ ಗಮನಕ್ಕೆ ತಂದರೆ ಸಂಬಂದಿತ ಸಚಿವರು ಮತ್ತು ಅಧಿಕಾರಿಗಳ ಜತೆಗೆ ಮಾತನಾಡಿ ಔಷದಿ ಕೊಡಿಸುವ ವ್ಯವಸ್ಥೆ ಮಾಡಿಸುವ ಭರವಸೆ ಕೊಟ್ಟರು.

ಜೆಜೆಎಂ ಕುಡಿಯುವ ನೀರಿನ ಕಾಮಗಾರಿಗಳು ಕೆಲವು ಗ್ರಾಮಗಳಲ್ಲಿ ಅಪೂರ್ಣವಾಗಿದ್ದು ಅದು ಅತ್ಯಂತ ಕೆಟ್ಟ ಯೋಜನೆಯಾಗಿ ಮಾರ್ಪಟ್ಟಿದ್ದು ಈ ಕೂಡಲೇ ಸಂಬಂದಿತರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕೆಲಸ ಪೂರ್ಣಗೊಳಿಸಿ ಆ ಸಬಂದ ನನ್ನ ಗಮನಕ್ಕೆ ತರಬೇಕೆಂದು ತಾಕೀತು ಮಾಡಿದರು.

ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಕೆರೆ ಮತ್ತು ಕಟ್ಟೆಗಳಿಗೆ ನೀರು ತುಂಬಿಸಿ ಅದರ ವಿಡಿಯೋ ನನಗೆ ಕಳುಹಿಸುದರ ಜತೆಗೆ ಹೊಸಕೋಟೆ ಬಾಗದಲ್ಲಿ ಕೆರೆಗಳು ಸರಿಯಾಗಿ ತುಂಬಲ್ಲ ಎಂಬ ದೂರುಗಳಿದ್ದು ಈ ಬಗ್ಗೆ ನಿಗಾ ವಹಿಸಬೇಕೆಂದು ಕಟ್ಟಪ್ಪಣೆ ಮಾಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಶಿರಸ್ತೆದಾರ್ ವೆಂಕಟೇಶ್ , ತಾ.ಪಂ.ಇಒಗಳಾದ ವಿ.ಪಿ.ಕುಲದೀಪ್, ಎ.ಎನ್. ರವಿ, ಪಂಚಾಯತ್ ರಾಜ್ ಉಪ-ವಿಭಾಗದ ಪ್ರಭಾರ ಕಾರ್ಯಪಾಲ ಅಭಿಯಂತರ ಆನಂದ್.ಕೆ, ಸೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಅರ್ಕೇಶ್ವರಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ನಟರಾಜು, ಸಹಾಯಕ ಕೃಷಿ ನಿರ್ದೇಶಕ ಕೆ.ಜೆ. ಮಲ್ಲಿಕಾರ್ಜುನ, ವಲಯ ಅರಣ್ಯಾಧಿಕಾರಿ ಟಿ.ವಿ.ಹರಿಪ್ರಸಾದ್, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಶಿವಮೂರ್ತಿ ಆರೋಗ್ಯ ಇಲಾಖೆಯ ರಮೇಶ ಆರ್ ಐ ಶಶಿಧರ್ ಇದ್ದರು.

 

 

Contact us for classifieds and ads : +91 9742974234