Latest News

ಬಸವಣ್ಣನವರಂತಹ ಮಹಾತ್ಮರನ್ನು ನಿತ್ಯ ನೆನೆಯುವುದರಿಂದ ಮನುಷ್ಯ ಮುಕ್ತಿ ಪಡೆಯಬಹುದು : ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ವರದಿ :-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಮಾ. 30:- ಶ್ರೀ ಮಲೈ ಮಹದೇಶ್ವರರು, ಬಸವಣ್ಣನವರಂತಹ ಮಹಾತ್ಮರನ್ನು ನಿತ್ಯ ನೆನೆಯುವುದರಿಂದ ಮನುಷ್ಯ ಮುಕ್ತಿ ಪಡೆಯಬಹುದೆಂದು ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಸಾಲಿಗ್ರಾಮ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಶ್ರೀ ಮಹದೇಶ್ವರ ಸೇವಾ ಸಮಿತಿಯಿಂದ ನೂತನವಾಗಿ ನಿರ್ಮಿಸಿರುವ ಶ್ರೀ ಮಹದೇಶ್ವರ ಜೀರ್ಣೋದ್ದಾರ ನೂತನ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಬದುಕಿರುವಾಗಲೇ ಆಧ್ಯಾತ್ಮಿಕವಾಗಿ ಸಂತೋಷ, ತೃಪ್ತಿ ಹೊಂದಿ ಇದರ ಮೂಲಕ ಭಗವಂತನನ್ನು ಕಾಣುವುದೇ ನಿಜವಾದ ಮೋಕ್ಷ. ಐದು ಶತಮಾನದ ಹಿಂದೆ ಜನರಲ್ಲಿ ಸುಜ್ಞಾನ, ಸಂಸ್ಕಾರ ಮೂಡಿಸುವಂತಹ ಸತ್ಕಾರ್ಯ ಮಾಡಿದ ಕೀರ್ತಿ ಶ್ರೀ ಮಹದೇಶ್ವರರಿಗೆ ಸಲ್ಲಬೇಕು ಎಂದರು. ಶ್ರೀ ಮಹದೇಶ್ವರ ಎಂದರೆ ಬೆಟ್ಟದ ಮಾದಪ್ಪ ಎಂದೇ ಜನಜನಿತ. ಸರಳವಾಗಿ ಬದುಕು ರೂಪಿಸಿಕೊಂಡಿದ್ದ ಶ್ರೀ ಮಹದೇಶ್ವರ ಅಪರೂಪದ ಇತಿಹಾಸ ಹಾಗೂ ಪವಾಡಪುರುಷ ಎಂದು ಬಣ್ಣಿಸಿದರು. ದೇವಾಲಯಗಳ ಭೇಟಿಯಿಂದ ಮನಸ್ಸು ಪ್ರಪುಲ್ಲಗೊಳ್ಳಲಿದೆ.ಮೂರುನೂರು ವರ್ಷಗಳ ಹಿಂದೆ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಚಿಕ್ಕದಾಗಿ ನಿರ್ಮಾಣವಾಗಿದ್ದ ಈ ದೇವಸ್ಥಾನವನ್ನು ಐಎಎಸ್ ಅಧಿಕಾರಿ ಹಾಡ್ಯ ಗ್ರಾಮದ ಸೊಸೆ ಡಿ. ಭಾರತಿ ಮಹದೇವಪ್ಪ ಅವರು ಎಲ್ಲರ ಸಹಕಾರದಿಂದ ಸುಸಜ್ಜಿತವಾಗಿ ನಿರ್ಮಾಣ ಮಾಡಿದ್ದಾರೆ ಎಂದರು. ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ದೇವಸ್ಥಾನಗಳು ನೆಮ್ಮದಿಯ ತಾಣ. ನಮ್ಮ ತಂದೆ ಮಹದೇವ್ ಪ್ರಸಾದ್ ಅವರು ಸಚಿವರಾಗಿದ್ದಾಗ ಶ್ರೀ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಡಿ. ಭಾರತಿ ಅವರು ಬೆಟ್ಟದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸಿ ಸಾಕಷ್ಟು ಶ್ರಮಿಸಿದ್ದರು. ಭಕ್ತಾದಿಗಳಿಗೆ ಮೂಲಸೌಕರ್ಯ ಕಲ್ಪಿಸಿ ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದರು. ಈ ನಿಟ್ಟಿನಲ್ಲಿ ಡಿ .ಭಾರತಿಯವರು ತಮ್ಮ ಸ್ವಂತ ಊರಿನಲ್ಲೂ ಸುಸಜ್ಜಿತ ಮಹದೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿ ಭಕ್ತರ ಮನ ಗೆದ್ದಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ಡಿ .ರವಿಶಂಕರ್ ಅವರು ಮಾತನಾಡಿ, ಶ್ರೀ ಮಹದೇಶ್ವರ ದೇವಾಲಯ ಮೂರು ಶತಮಾನಗಳ ಇತಿಹಾಸ ಹೊಂದಿದೆ. ತುಂಬಾ ಶಿಥಿಲವಾಗಿದ್ದ ದೇವಾಲಯವನ್ನು ಹಾಡ್ಯ ಮತ್ತು ಮಾಯಿಗೌಡನಹಳ್ಳಿ ಗ್ರಾಮಸ್ಥರ ಸಹಕಾರದಿಂದ ಭವ್ಯವಾಗಿ ನಿರ್ಮಾಣ ಮಾಡಲಾಗಿದೆ. ಕೆರೆಯ ಬದಿಯಲ್ಲಿದ್ದ ದೇವಸ್ಥಾನ ಸುಗಮವಾಗಿ ನಿರ್ಮಾಣಗೊಳ್ಳಲು ಕೆರೆಗೆ ತಡೆಗೋಡೆ ನಿರ್ಮಾಣಕ್ಕಾಗಿ ಸರ್ಕಾರದಿಂದ ಸುಮಾರು 50 ಲಕ್ಷ ರೂ.ಅನುದಾನ ಮಂಜೂರು ಮಾಡಿಸಿದ್ದೆ ಎಂದರು. ಧಾರ್ಮಿಕ ಕಾರ್ಯಕ್ರಮಕ್ಕೂ ಮೊದಲು ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಶ್ರೀ ಮಹದೇಶ್ವರ ದೇವಾಲಯಕ್ಕೇ ಕಳಶ ಪ್ರತಿಷ್ಠಾಪಿಸಿ ಶುಭ ಕೋರಿದರು. ಮಾಜಿ ಸಚಿವ ಸಾ.ರಾ. ಮಹೇಶ್ ಅವರು ದೇವಾಲಯಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.

ಐಎಎಸ್ ಅಧಿಕಾರಿ ಡಿ . ಭಾರತಿ, ಗಾವಡಗೆರೆ ಮಠಾಧೀಶ ಶ್ರೀ ನಟರಾಜ ಸ್ವಾಮೀಜಿ, ಬೆಟ್ಟದಪುರದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಅಂಕನಹಳ್ಳಿ ಮಠದ ವಿಜಯಕುಮಾರ ಸ್ವಾಮೀಜಿ, ಮಾದಿಹಳ್ಳಿ ಮಠದ ಶ್ರೀಸಾಂಬ ಸದಾಶಿವ ಸ್ವಾಮೀಜಿ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮಿಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಶ್ರೀ ಮಹದೇಶ್ವರ ಸೇವಾ ಸಮಿತಿ ಅಧ್ಯಕ್ಷ ಎಚ್. ಪಿ. ಮಹದೇವಪ್ಪ, ನಿವೃತ್ತ ಪ್ರಾಂಶುಪಾಲ ಮೊರಬದ ಮಲ್ಲಿಕಾರ್ಜುನ, ಮುಖಂಡರಾದ ಎಲ್ .ಪಿ. ರವಿಕುಮಾರ್, ಗಡ್ಡ ಮಹೇಶ್, ದೇವಾಲಯ ಸಮಿತಿಯ ಮಲ್ಲಿಕಾರ್ಜುನ, ಎಂ.ಎನ್. ಮಹದೇವ, ಷಣ್ಮುಖ, ಮಂಜುನಾಥ, ಸೋಮೇಶ, ಶಿವಾನಂದ, ರಘು, ಸುರೇಶ, ಮಹದೇಶ ಪೂಜಾರಿ, ದಶರಥ, ರವಿ, ರಾಜಶೇಖರಯ್ಯ, ನಂಜೇಶ, ಮಹದೇವ ಸೇರಿದಂತೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಐಎಎಸ್ ಅಧಿಕಾರಿ ಭಾರತಿ ಮಹಾದೇವಪ್ಪ ಮಾತನಾಡಿ ನಾನು ಹೊರರಾಜ್ಯಗಳಲ್ಲಿ ಕೆಲಸ ಮಾಡಿರುವುದರಿಂದ ನಮ್ಮ ರಾಜ್ಯ ಅಭಿವೃದ್ಧಿ ಮತ್ತು ಶ್ರೀಮಂತಿಕೆಯನ್ನು ಹೊಂದಿರುವಷ್ಟು ಬೇರೆ ರಾಜ್ಯಗಳು ಹೊಂದಿಲ್ಲ ಈ ನಮ್ಮ ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ನಮ್ಮ ಮೈಸೂರಿನ ಒಡೆಯರು ಶಿಕ್ಷಣ ನೀರಾವರಿ ರಸ್ತೆ ಆರೋಗ್ಯ ಅನ್ನ ದಾಸೋಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಸಾಮಾನ್ಯರ ಪರವಾಗಿ ಆಡಳಿತ ನಡೆಸಿದರು ಅದೇ ರೀತಿ 12ನೇ ಶತಮಾನದಲ್ಲಿ ಬಸವೇಶ್ವರರು ಹಾಕಿಕೊಟ್ಟ ಅನುಭವ ಮಂಟಪ ಎಲ್ಲರೂ ಒಂದೇ ನಾವೆಲ್ಲರೂ ಮನುಷ್ಯರೂ ಎಂಬಂತೆ ಕಾಣುತ್ತಿದ್ದರು ಈಗಿನ ಕಾಲಕ್ಕೆ ಮಠಮಾನ್ಯಗಳು ಇಂದೇ ಬಸವಣ್ಣನವರು ಮೈಸೂರಿನ ಒಡೆಯರು ಹಾಕಿಕೊಟ್ಟ ಮಾರ್ಗವನ್ನೇ ಅನುಸರಿಸಿ ಶಿಕ್ಷಣ ಆರೋಗ್ಯ ಉದ್ಯೋಗ ಹಸಿವನ್ನು ನೀಗಿಸುವಂತಹ ಮಹತ್ ಕಾರ್ಯವನ್ನು ಮಾಡಿದ ಮಠಮಾನ್ಯರ ಕೊಡುಗೆಯಿಂದಲೇ ಈ ರಾಜ್ಯ ಸಮೃದ್ಧಿಯಾಗಿದೆ ಅವರು ತೋರಿದ ಮಾರ್ಗದಲ್ಲಿ ನಾವು ನಡೆಯೋಣ ಈಗ ನಾವು ದೇವಾಲಯವನ್ನು ನಿರ್ಮಿಸಿದ್ದೇವೆ ಆದರೆ ಇನ್ನು ಮುಂದೆ ದೇವಾಲಯವನ್ನು ಅಭಿವೃದ್ಧಿಪಡಿಸುತ್ತಾ ದೇವಾಲಯದ ಸ್ವಚ್ಛತೆ ಮತ್ತು ಬರುವ ಭಕ್ತರಿಗೆ ಅತಿಥಿ ಸತ್ಕಾರ ಮಾಡುವ ಜವಾಬ್ದಾರಿ ಆಡಳಿತ ಮಂಡಳಿಯದು ಅದನ್ನು ಮಾಡುವ ಮೂಲಕ ಶ್ರೀ ಮಲೈ ಮಹದೇಶ್ವರ ಕೃಪೆಗೆ ಪಾತ್ರರಾಗಿ ಎಂದು ತಿಳಿಸಿದರು.”

Contact us for classifieds and ads : +91 9742974234