City SpotlightMandya

ಪರಿಸರ ಬಲಿಯಾಗದಂತೆ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಲಿ: ಸಂಜಯ್ ಗುಬ್ಬಿ

ಮಂಡ್ಯ: ಯಾವುದೇ ಅಭಿವೃದ್ಧಿ ಯೋಜನೆಯು ಪರಿಸರವನ್ನು ಬಲಿಗೊಟ್ಟು ರೂಪಿತವಾಗಬಾರದು ಎಂದು ಖ್ಯಾತ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಹೇಳಿದರು. ಉದ್ದೇಶಿತ ಮೇಕೆದಾಟು ಯೋಜನೆಯಿಂದ ಕಾವೇರಿ ವನ್ಯಜೀವಿ ವಲಯದ ಸುಮಾರು 4,800 ಎಕರೆ ಅರಣ್ಯ ಭೂಮಿ ಮುಳುಗಡೆಯಾಗಲಿದ್ದು, 12 ಲಕ್ಷಕ್ಕೂ ಅಧಿಕ ಮರಗಳು ನಾಶವಾಗುವ ಸಾಧ್ಯತೆ ಇದೆ. ಇದು ಪರಿಸರ ವ್ಯವಸ್ಥೆಗೆ ತುಂಬಲಾರದ ನಷ್ಟವಾಗಲಿದೆ ಎಂದು ಅವರು ಎಚ್ಚರಿಸಿದರು.

ನಗರದ ಗಾಂಧಿ ಭವನದಲ್ಲಿ ಕನ್ನಡ ಕರ್ನಾಟಕ ಫೌಂಡೇಶನ್, ಎಂಪ್ಟಿ ಪಾಕೆಟ್ ಡ್ರೀಮ್ಸ್ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾದ ‘ಆಪ್ತ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮನಗರ ಜಿಲ್ಲೆಯ ಕನಕಪುರ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಅಣೆಕಟ್ಟಿನ ಬದಲಿಗೆ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಅಣೆಕಟ್ಟು ನಿರ್ಮಿಸುವುದು ಪರಿಸರದ ದೃಷ್ಟಿಯಿಂದ ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟರು. ಅಲ್ಲಿನ 8 ಮಿನಿ ಜಲವಿದ್ಯುತ್ ಘಟಕಗಳ ಹಿತಾಸಕ್ತಿಯ ಕಾರಣದಿಂದ ಜನಪ್ರತಿನಿಧಿಗಳು ಪರ್ಯಾಯ ಮಾರ್ಗದ ಬಗ್ಗೆ ಆಸಕ್ತಿ ತೋರುವುದಿಲ್ಲ ಎಂಬುದಾಗಿ ಅವರು ವಿಷಾದಿಸಿದರು.

ಪರಿಸರ ಹೋರಾಟದ ಸ್ವರೂಪ ಬದಲಾಗಬೇಕಿದೆ. ಕೇವಲ ಬೀದಿಗಿಳಿದು ಘೋಷಣೆ ಕೂಗುವುದರಿಂದ ಮಾತ್ರ ಸಂರಕ್ಷಣೆ ಸಾಧ್ಯವಿಲ್ಲ. ಹಾನಿಯ ಬಗ್ಗೆ ನಿಖರ ದಾಖಲೆಗಳನ್ನು ಸಿದ್ಧಪಡಿಸಿ, ರಾಜಕಾರಣಿಗಳಿಗೆ ಮನವರಿಕೆ ಮಾಡಿದಾಗ ಮಾತ್ರ ಶಾಶ್ವತ ಬದಲಾವಣೆ ಸಾಧ್ಯ ಎಂದು ಹೇಳಿದರು. ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತ ಮತ್ತು ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಇದೇ ರೀತಿಯ ಹೋರಾಟದ ಫಲ ಎಂದು ವಿವರಿಸಿದರು.

ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಐದು ಜಿಲ್ಲೆಗಳಲ್ಲಿ ಶೇ.70ರಷ್ಟು ಚಿರತೆ ದಾಳಿ ಪ್ರಕರಣಗಳು ವರದಿಯಾಗುತ್ತಿವೆ. ಆವಾಸಸ್ಥಾನಗಳ ನಾಶ ಮತ್ತು ಅವೈಜ್ಞಾನಿಕ ಸ್ಥಳಾಂತರವೇ ಇದಕ್ಕೆ ಕಾರಣ ಎಂದು ತಿಳಿಸಿದರು.

ಇಂದಿನ ಸಫಾರಿ ಸಂಸ್ಕೃತಿ ಮೋಜು-ಮಸ್ತಿಗೆ ಸೀಮಿತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್‌ಗಾಗಿ ಹುಲಿ-ಚಿರತೆ ನೋಡುವುದಕ್ಕಿಂತ ನಮ್ಮ ಸುತ್ತಲಿನ ಕ್ರಿಮಿಕೀಟ, ಪಕ್ಷಿ ಹಾಗೂ ಮರಗಳ ವೈವಿಧ್ಯತೆಯನ್ನು ಅರಿಯುವುದೇ ನಿಜವಾದ ಸಫಾರಿ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಂಜಯ್ ಗುಬ್ಬಿ ಅವರ ಮುಂದಿನ ಕೃತಿಗಳಾದ ‘ಕಾಡಿನೊಳಗೊಂದು ಮನೆಯ ಮಾಡಿ’ ಮತ್ತು ‘ಕಾಡಿನ ಗೆಳೆಯರ ಕಾಡುವ ಕಥೆಗಳು’ ಪುಸ್ತಕಗಳ ಕುರಿತು ಮಾಹಿತಿ ನೀಡಲಾಯಿತು.

ಲೇಖಕ ಹಾಗೂ ಕಿರುಚಿತ್ರ ನಿರ್ದೇಶಕ ವಿನಯ್ ಕುಮಾರ್ ಎಂ.ಜಿ. ಸಂವಾದವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಸಿಎಫ್ ಮಹದೇವಸ್ವಾಮಿ, ಡಿಎಸ್ಎಸ್ ಹಿರಿಯ ಮುಖಂಡ ಪ್ರೊ. ಚಂದ್ರಶೇಖರನ್, ಸಹಾಯಕ ಸರ್ಕಾರಿ ಅಭಿಯೋಜಕಿ ರತಿಕುಮಾರಿ, ಪತ್ರಕರ್ತ ಸಿದ್ದು ಆರ್.ಜಿ. ಹಳ್ಳಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Contact us for classifieds and ads : +91 9742974234