Latest News

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಶೃಂಗಸಭೆ ಯಶಸ್ವಿ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಶೃಂಗಸಭೆ: ಜಾಗತಿಕ ವನ್ಯಜೀವಿ ಸಂರಕ್ಷಣಾ ವಿಷಯಗಳ ಚರ್ಚೆಗಳು

ನಾಗರಹೊಳೆ, ಫೆ.13: ಜಾಗತಿಕ ವನ್ಯಜೀವಿ ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದಿರುವ ಬಿಗ್ ಕ್ಯಾಟ್ ಶೃಂಗಸಭೆಯ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಫೆಬ್ರವರಿ 12 ಮತ್ತು 13ರಂದು ವಿಶೇಷ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಅಂತರಾಷ್ಟ್ರೀಯ ಹುಲಿಗಳ ಮೈತ್ರಿ (International Big Cat Alliance – IBCA), ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA), ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ಸಹಯೋಗದಲ್ಲಿ ಆಯೋಜಿಸಲಾದ “Indian Technical and Economic Cooperation (ITEC) Executive Course in Karnataka” ಕಾರ್ಯಕ್ರಮದ ಭಾಗವಾಗಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅರ್ಮೇನಿಯಾ, ಭೂತಾನ್, ಕಾಂಬೋಡಿಯಾ, ಗೌಟೆಮಾಲಾ, ಕಜಕಿಸ್ಥಾನ, ಲೈಬೀರಿಯಾ, ಮೆಕ್ಸಿಕೋ, ಮಾಲಾವಿ, ಮಾಲಿ, ಮಲೇಶಿಯಾ, ಮಯನ್ಮಾರ್, ನೇಪಾಳ, ನೈಜರ್, ಮಂಗೋಲಿಯಾ, ಪನಾಮಾ, ಪೆರು, ರೊಮಾನಿಯಾ, ಸೋಮಾಲಿಯಾ, ಶ್ರೀಲಂಕಾ ಹಾಗೂ ರಷ್ಯಾ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ ಅಧಿಕಾರಿಗಳು, ಸಂಶೋಧಕರು ಮತ್ತು ವನ್ಯಜೀವಿ ತಜ್ಞರು ಸೇರಿ ಒಟ್ಟು 38 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಜಾಗತಿಕ ಮಟ್ಟದಲ್ಲಿ ಸಂರಕ್ಷಣಾ ಕಾರ್ಯತಂತ್ರಗಳ ವಿನಿಮಯ ಮತ್ತು ಸಾಮರ್ಥ್ಯ ವೃದ್ಧಿಗೆ ಈ ಕಾರ್ಯಕ್ರಮ ವೇದಿಕೆಯಾಗಿತ್ತು.

ನಾಗರಹೊಳೆಯಲ್ಲಿ ಮೊದಲ ದಿನದ ಅಧಿವೇಶನಗಳು

ಕಾರ್ಯಕ್ರಮದ ಮೊದಲ ದಿನ ನಡೆದ ತರಗತಿ ಅಧಿವೇಶನಗಳಲ್ಲಿ ಸುಸ್ಥಿರ ಪರಿಸರ ಪ್ರವಾಸೋದ್ಯಮ ಮತ್ತು ಜನಸಂಪರ್ಕ ಕಾರ್ಯಕ್ರಮಗಳ ಕುರಿತು ವಿಶ್ಲೇಷಣಾತ್ಮಕ ಚರ್ಚೆಗಳು ನಡೆದವು. ಅರ್ಕಾನ್ಸಾಸ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನುಪ್ ಕೆ.ಸಿ., ನ್ಯಾಷನಲ್ ಜಿಯೋಗ್ರಫಿಕ್ ಪ್ರಮಾಣೀಕೃತ ಪ್ರಕೃತಿ ಶಿಕ್ಷಕರಾದ ಶ್ರೀ ಜೈ ಶರ್ಮಾ ಹಾಗೂ ಬೆಂಗಳೂರು ಮೂಲದ ವನಲೋಕ್ ಸಂಸ್ಥೆಯ ಶ್ರೀ ಸಂತೋಷ್ ಸುತ್ತರ್ ಅವರು ಪರಿಸರ ಶಿಕ್ಷಣ ಮತ್ತು ಜನಜಾಗೃತಿ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು. ಪರಿಸರ ಪ್ರವಾಸೋದ್ಯಮವು ವನ್ಯಜೀವಿ ಸಂರಕ್ಷಣೆಗೆ ನೆರವಾಗುವ ರೀತಿಗಳು ಹಾಗೂ ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಅವರು ಉದಾಹರಣೆಗಳೊಂದಿಗೆ ವಿವರಿಸಿದರು.

ಇನ್ನೊಂದು ಅಧಿವೇಶನದಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ ಭೂದೃಶ್ಯ ವಿಧಾನಗಳ ಕುರಿತು ಭಾರತೀಯ ವನ್ಯಜೀವಿ ಸಂಸ್ಥೆ ಡೆಹ್ರಾಡೂನ್ನ ವಿಜ್ಞಾನಿ ಡಾ. ರಮೇಶ್ ಕೃಷ್ಣಮೂರ್ತಿ ಹಾಗೂ SACON ಕೊಯಮತ್ತೂರಿನ ವಿಜ್ಞಾನಿ ಡಾ. ಟಿ. ರಮೇಶ್ ಅವರು ಪ್ರಾತ್ಯಕ್ಷಿಕೆ ನೀಡಿದರು. ವನ್ಯಜೀವಿಗಳ ವಲಸೆ ಮಾರ್ಗಗಳು, ಪರಿಸರ ವ್ಯವಸ್ಥೆಗಳ ಸಂಪರ್ಕ ಹಾಗೂ ಅರಣ್ಯ ಪ್ರದೇಶಗಳ ಸಮಗ್ರ ನಿರ್ವಹಣೆಯ ಅಗತ್ಯತೆಯನ್ನು ಅವರು ಒತ್ತಿಹೇಳಿದರು.

ಕಬಿನಿ ಹಿನ್ನೀರಿನ ಪ್ರದೇಶಕ್ಕೆ ಸ್ಥಳಗಳಿಗೆ ಭೇಟಿ ಮತ್ತು ಅಧ್ಯಯನ

ನಾಗರಹೊಳೆಯಲ್ಲಿ ಅಧ್ಯಯನದ ಭಾಗವಾಗಿ ಭಾಗವಹಿಸಿದ್ದ ಪ್ರತಿನಿಧಿಗಳು ಕಬಿನಿ ಹಿನ್ನೀರಿನ ಪ್ರದೇಶಕ್ಕೆ ಕ್ಷೇತ್ರಭೇಟಿ ನಡೆಸಿ ಪರಿಸರ ಪ್ರವಾಸೋದ್ಯಮದ ಪ್ರಾಯೋಗಿಕ ಆಯಾಮಗಳನ್ನು ಅವಲೋಕಿಸಿದರು. ನಂತರ ಬಳ್ಳೆಯ  ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ ಸಾಕಾನೆಗಳ ನಿರ್ವಹಣೆ, ತರಬೇತಿ ವಿಧಾನಗಳು ಹಾಗೂ ಮಾನವ-ಆನೆ ಸಂಬಂಧಿತ ನಿರ್ವಹಣಾ ಕ್ರಮಗಳ ಕುರಿತು ತಿಳಿದುಕೊಂಡರು. ಈ ಕ್ಷೇತ್ರಭೇಟಿಗಳು ತಜ್ಞರೊಂದಿಗೆ ನೇರ ಸಂವಾದ ನಡೆಸಲು ಹಾಗೂ ಕಾರ್ಯಪದ್ಧತಿಗಳನ್ನು ಅರಿಯಲು ಅವಕಾಶ ನೀಡಿದವು.

ನಾಗರಹೊಳೆಯಲ್ಲಿ ಎರಡನೇ ದಿನದ ಚಟುವಟಿಕೆಗಳು

ವಿವಿದ ದೇಶಗಳಿಂದ ಆಗಮಿಸಿದ್ದ ಎಲ್ಲಾ ಪ್ರತಿನಿದಿಗಳು ಫೆಬ್ರವರಿ 13ರಂದು ನಡೆದ ಕೊನೆಯ ದಿನದ ಕಾರ್ಯಕ್ರಮ ಬೆಳಗಿನ ಕ್ಷೇತ್ರ ಅಧ್ಯಯನದಿಂದ ಆರಂಭವಾಯಿತು. ನಂತರ ಕಾರಾಪುರದಲ್ಲಿರುವ ಜಂಗಲ್ ಲಾಡ್ಜಸ್ & ರೆಸಾರ್ಟ್ನಲ್ಲಿ ವನ್ಯಪ್ರಾಣಿ ಸಂಬಂಧಿತ ತರಗತಿ ಅಧಿವೇಶನಗಳು ನಡೆದವು.

ವನ್ಯಪ್ರಾಣಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಗಳ ಕುರಿತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯಾಧಿಕಾರಿ ಶ್ರೀ ರಮೇಶ್ ಹೆಚ್. ಅವರು ವಿವರಣೆ ನೀಡಿದರು. ಅಪಾಯಕಾರಿಯ ಪರಿಸ್ಥಿತಿಗಳಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ವಿಧಾನಗಳು, ಪ್ರಾಣಿಗಳ ಸುರಕ್ಷತೆ ಮತ್ತು ಮಾನವ ಜೀವ ರಕ್ಷಣೆ ನಡುವೆ ಸಮತೋಲನ ಸಾಧಿಸುವ ಕ್ರಮಗಳನ್ನು ಅವರು ವಿವರಿಸಿದರು.

ಸಂರಕ್ಷಣಾ ಕಾರ್ಯಗಳಿಗೆ ಆರ್ಥಿಕ ವ್ಯವಸ್ಥೆಗಳ ಕುರಿತು PwC ಇಂಡಿಯಾದ ಶ್ರೀ ರಾನೆನ್ ಬ್ಯಾನರ್ಜಿ ಅವರು ವೀಡಿಯೊ ಸಂದೇಶದ ಮೂಲಕ ಸಂರಕ್ಷಣಾ ಯೋಜನೆಗಳಿಗೆ ಅಗತ್ಯವಾದ ಹಣಕಾಸು ವ್ಯವಸ್ಥೆಗಳ ಮಹತ್ವವನ್ನು ವಿವರಿಸಿದರು. ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಹಾಗೂ ಅಂತರಾಷ್ಟ್ರೀಯ ಸಹಕಾರದ ಪಾತ್ರವನ್ನು ಅವರು ಒತ್ತಿಹೇಳಿದರು.

ವಿದೇಶಿ ಪ್ರತಿನಿಧಿಗಳು ತಮ್ಮ ದೇಶಗಳಲ್ಲಿನ ವನ್ಯಜೀವಿ ಸಂಪತ್ತು, ನಿರ್ವಹಣಾ ಕ್ರಮಗಳು, ಮಾನವ-ವನ್ಯಪ್ರಾಣಿ ಸಂಘರ್ಷಗಳು ಹಾಗೂ ಸವಾಲುಗಳ ಕುರಿತು ಪ್ರಸ್ತುತಪಡಿಸಿದರು. ಜಾಗತಿಕ ಅನುಭವ ಹಂಚಿಕೆ ಮೂಲಕ ಪರಸ್ಪರ ಕಲಿಕೆಯ ಅವಕಾಶ ದೊರಕಿತು.

ಭಾರತದಲ್ಲಿ ಆನೆ ಸಂರಕ್ಷಣೆಯ ಸವಾಲುಗಳ ಕುರಿತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ರಮೇಶ್ ಕುಮಾರ್ ಪಾಂಡೆ ಅವರು ಪ್ರಾತ್ಯಕ್ಷಿಕೆ ನೀಡಿ ಮಾನವ-ಆನೆ ಸಂಘರ್ಷ ನಿಯಂತ್ರಣ, ವಾಸಸ್ಥಳ ಸಂರಕ್ಷಣೆ ಹಾಗೂ ತಂತ್ರಜ್ಞಾನ ಬಳಕೆಯ ಬಗ್ಗೆ ವಿವರಿಸಿದರು.

ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ಮತ್ತು ಸಮಾರೋಪ

ಎಲ್ಲಾ ಅಧಿವೇಶನಗಳಲ್ಲಿ ಭಾಗವಹಿಸಿದ ಪ್ರತಿನಿಧಿಗಳು ಹಿರಿಯ ಅಧಿಕಾರಿಗಳೊಂದಿಗೆ ಸಕ್ರಿಯ ಸಂವಾದ ನಡೆಸಿ ಜಾಗತಿಕ ಸಂರಕ್ಷಣಾ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು. ವನ್ಯಜೀವಿ ಸಂರಕ್ಷಣೆ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿ ಹಾಗೂ ಜಾಗತಿಕ ಸಹಕಾರದ ಅಗತ್ಯತೆ ಈ ವೇದಿಕೆಯಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿತು. ಕಾರ್ಯಕ್ರಮದ ಅಂತ್ಯದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ವಿದೇಶಿ ಪ್ರತಿನಿಧಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.

ಫೆಬ್ರವರಿ 8ರಂದು ಬಂಡೀಪುರದಿಂದ ಆರಂಭಗೊಂಡಿದ್ದ ಕಾರ್ಯನಿರ್ವಾಹಕ ಕೋರ್ಸ್ ಫೆಬ್ರವರಿ 13ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವಾಲಯದ ನಿರ್ದೇಶಕರಾದ ಶ್ರೀ ನಿತಿನ್ ಪ್ರಮೋದ್, ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ರಮೇಶ್ ಕುಮಾರ್ ಪಾಂಡೆ, IBCA ನಿರ್ದೇಶಕರಾದ ಶ್ರೀ ಜೆರೋಮ್ ಮಿಂಜ್, NTCA ಸದಸ್ಯ ಕಾರ್ಯದರ್ಶಿ ಡಾ. ಸಂಜಯನ್ ಕುಮಾರ್, ಕೋರ್ಸ್ ನಿರ್ದೇಶಕರಾದ ಶ್ರೀ ಸುಭಾಷ್ ಮಾಲ್ಖೆಡೆ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಈ ಕಾರ್ಯಕ್ರಮವು ಮಹತ್ವ

ಈ ಕಾರ್ಯಕ್ರಮವು ಕರ್ನಾಟಕದ ಅರಣ್ಯ ಸಂಪತ್ತಿನ ಜಾಗತಿಕ ಮಹತ್ವವನ್ನು ಮತ್ತೊಮ್ಮೆ ದೃಢಪಡಿಸಿದೆ. ವನ್ಯಜೀವಿ ಸಂರಕ್ಷಣೆಯಲ್ಲಿ ಜಾಗತಿಕ ಸಹಕಾರ, ತಾಂತ್ರಿಕ ಜ್ಞಾನ ವಿನಿಮಯ ಹಾಗೂ ಸಾಮರ್ಥ್ಯ ವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಿದೆ. ಹುಲಿಗಳು ಸೇರಿದಂತೆ ಬಿಗ್ ಕ್ಯಾಟ್ ಪ್ರಜಾತಿಗಳ ಸಂರಕ್ಷಣೆಗಾಗಿ ದೇಶಗಳ ನಡುವೆ ಸಹಯೋಗ ವೃದ್ಧಿಸಲು ಈ ಶೃಂಗಸಭೆ ಪರಿಣಾಮಕಾರಿಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

 

Contact us for classifieds and ads : +91 9742974234