Latest News

ನಮ್ಮೂರ ಸರ್ಕಾರಿ ಶಾಲೆ, ಮುಚ್ಚಲು ಬಿಡುವುದಿಲ್ಲ – ಶಿರಮಳ್ಳಿ ಗ್ರಾಮಸ್ಥರ ಆಗ್ರಹ.

ನಂಜನಗೂಡು:-  ತಾಲೂಕಿನ ಶಿರಮಳ್ಳಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮುಚ್ಚಲಾಗುತ್ತಿದ್ದು ಇದನ್ನು ವಿರೋಧಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಹೇಮಾ ಅವರು ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಶಿರಮಳ್ಳಿ  ಶಾಲೆ ಮುಚ್ಚಿ ಇಲ್ಲಿನ ವಿದ್ಯಾರ್ಥಿಗಳನ್ನು ಹುಲ್ಲಹಳ್ಳಿ  ಕಳುಹಿಸಲಾಗುತ್ತಿದೆ. ಈ ರೀತಿ ಮೈಸೂರು ಜಿಲ್ಲೆಯಲ್ಲಿ 1,666 ಶಾಲೆಗಳನ್ನು ಮುಚ್ಚಲು ಪಟ್ಟಿ ತಯಾರಿಸಲಾಗಿದೆ. ರಾಜ್ಯವ್ಯಾಪಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ.

ಇದನ್ನೂ ಓದಿ :-  ಮೈಸೂರಲ್ಲಿ ಮೊಳಗಿದ ಹನುಮನಾಮ: 50 ಸಾವಿರಕ್ಕೂ ಹೆಚ್ಚು ಭಕ್ತರಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ

ಸಾವಿತ್ರಿಬಾಯಿ- ಜ್ಯೋತಿಬಾ ಫುಲೆಯವರ ಹೋರಾಟ ಮತ್ತು ಪರಿಶ್ರಮದ ಫಲವಾಗಿ ಇಂದು ಹಳ್ಳಿಗಳಿಗೆ ಸರ್ಕಾರಿಶಾಲೆಗಳು ಆರಂಭವಾಗಿವೆ.ಈ ಎಲ್ಲ ಮಹಾತ್ಮರ ಆಶಯಗಳನ್ನು ಗಾಳಿಗೆ ತೂರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅ.15ರಂದು ಹೊರಡಿಸಿರುವ ಆದೇಶದಲ್ಲಿ ಆಯ್ದ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 5ಕಿಮೀ ವ್ಯಾಪ್ತಿಯ ಶಾಲೆಗಳನ್ನು ಜೋಡಿಸುವುದಾಗಿ ಸ್ಪಷ್ಟಪಡಿಸಿದೆ. ಆದರೆ ಶಿಕ್ಷಣ ಮಂತ್ರಿಗಳು ಒಂದೆಡೆ ಒಂದೇ ಒಂದು ಶಾಲೆ ಮುಚ್ಚುವುದಿಲ್ಲ ಎಂದು ಸುಳ್ಳು ಹೇಳುತ್ತ ಇನ್ನೊಂದೆಡೆ ಹಳ್ಳಿಗಳಿಗೆ ಬಸ್ ಬಿಡುವುದಾಗಿ ಹೇಳುತ್ತಿದ್ದಾರೆ. ಈ ಬಸ್ ಒದಗಿಸುವ ಜವಾಬ್ದಾರಿ ಕೂಡ ಎಸ್‌ಡಿಎಂಸಿ ಮೇಲೆ ಹೇರಲಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಮೊನ್ನೆ ಮಂಡ್ಯದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳನ್ನು ಲಾರಿಯಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಯಾವ ಬಸ್ ನಲ್ಲಿ ಮಕ್ಕಳನ್ನು ಕರೆದೊಯ್ಯುತ್ತದೆ ಎಂದು ಪ್ರಶ್ನಿಸಿದರು. ಎಡಿಬಿ ಬ್ಯಾಂಕಿನಿಂದ 2500 ಕೋಟಿ ರೂಪಾಯಿ  ಸಾಲ ಪಡೆದು ಕೆಪಿಎಸ್ ಶಾಲೆ ತೆರೆಯಲಾಗುತ್ತಿದೆ. ಈ ಶಾಲೆಗಳನ್ನು ಖಾಸಗಿ ಕಂಪನಿಗಳಿಗೆ ಹೊರಗುತ್ತಿಗೆ ಕೊಡಲಾಗುತ್ತದೆ. ಪ್ರತಿ ಶಾಲೆ ಕೂಡ ಆದಾಯ ಸಂಗ್ರಹಿಸಬೇಕು. ಸರ್ಕಾರ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಂಡು ಇಡೀ ಸಾರ್ವಜನಿಕ ಶಿಕ್ಷಣವನ್ನು ಕಾರ್ಪೊರೇಟ್ ಕಂಪನಿಗಳಿಗೆ ದಾನ ಮಾಡುವ ಹುನ್ನಾರ ರಚಿಸಿದೆ. ಇದರ ವಿರುದ್ದ ಒಗ್ಗಟ್ಟಾಗಿ ಹೋರಾಡುವುದೇ ಜನರ ಮುಂದಿರುವ ಪರಿಹಾರವಾಗಿದ್ದು ಏನೇ ಬಂದರೂ ಹೋರಾಟದಿಂದ ಹಿಂದೆ ಸರಿಯ ಬಾರದು ಎಂದು ಕರೆ ನೀಡಿದರು.

ಇದನ್ನೂ ಓದಿ :- ಬನ್ನೂರಿನಲ್ಲಿ ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ: ಕಬ್ಬು ಬೆಳೆಗಾರರಿಂದ  ಶಾಂತಿಯುತ ಪ್ರತಿಭಟನೆ

ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರಾದ  ನಾಗರಾಜು  ಮಾತನಾಡಿ, ಊರಿನ ಶಾಲೆ ಮುಚ್ಚಿದರೆ ನಮ್ಮೂರಿನ 1ನೇ ತರಗತಿ ಮಕ್ಕಳು ಇಲ್ಲಿಂದ 3ಕಿಮೀ ದೂರದ ಹುಳ್ಳಹಳ್ಳಿ ಹೋಗಿ ಓದಲು ಸಾಧ್ಯವಿಲ್ಲ.  6ನೇ ಕ್ಲಾಸಿನಿಂದಲೇ ಕೆಪಿಎಸ್ ಶಾಲೆಯಲ್ಲಿ ಅಡಿಕೆ ಸುಲಿಯುವುದು ಸೇರಿದಂತೆ ಇತರೆ ಕಸುಬುಗಳನ್ನು ಕಲಿಸುವುದಾಗಿ ಸರ್ಕಾರ ಹೇಳಿದೆ. ಸಮಾಜದ ತಳಸಮುದಾಯದ ಮಕ್ಕಳ ವಿದ್ಯೆ ಕಸಿದು ಕೂಲಿಗೆ ಕಳಿಸುವ ಸರ್ಕಾರದ ಹುನ್ನಾರವನ್ನು ನಾವು ಒಪ್ಪುವುದಿಲ್ಲ. ಈ ಯೋಜನೆ ರದ್ದಾಗುವವರೆಗೂ ನಿರಂತರವಾಗಿ ಹೋರಾಟ ನಡೆಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ  ಪಾಲಕರು, ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತೀವ್ರ ವಾಗಿ ವಿರೋಧಿಸಿದರು. ಈ ಯೋಜನೆ ರದ್ದುಗೊಳಿಸುವವರೆಗೂ ಶಾಲೆ ಉಳಿಸಲು ಹೋರಾಡುವ ಸಂಕಲ್ಪ ತೆಗೆದು ಕೊಂಡರು. ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳಾದ ಸ್ವಾತಿ ,ಚಂದನ , ಚಂದ್ರಿಕಾ, ಹಾಗೂ ಊರಿನ ಗ್ರಾಮಸ್ಥರಾದ ಮಣಿಯಪ್ಪ, ಸುರೇಶ್, ಸುಧಾ , ಕೆಂಪಮ್ಮ, ವೆಂಕಟೇಶ್, ಚಿಕ್ಕಮ್ಮ, ಸಂದೇಶ್ ಹಾಗೂ ಮುಂತಾದವರು ಭಾಗವಹಿಸಿದ್ದರು.

 

ಮಗುವಿನ ಕುತ್ತಿಗೆಯಿಂದ ಸರ ಕಿತ್ತು ನುಂಗಿದ ಆರೋಪಿ ಆಸ್ಪತ್ರೆಯಲ್ಲಿ ನಿಗಾ

Contact us for classifieds and ads : +91 9742974234