Latest News

ನಮ್ಮೂರ ಶಾಲೆ ನಮ್ಮ ಅಸ್ತಿತ್ವ, ಶಾಲೆ ಮುಚ್ಚಲು ಬಂದರೆ, ಬಲಿಷ್ಠ ಹೋರಾಟಕ್ಕೆ ಸಿದ್ಧವೆಂದ ಗ್ರಾಮಸ್ಥರು

ನಂಜನಗೂಡಿನ ಡಾ. ಬಿ. ಆರ್ ಅಂಬೇಡ್ಕರ್ ಸರ್ಕಲ್ ಬಳಿ, ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆ ಅಡಿಯಲ್ಲಿ ಮುಚ್ಚುತ್ತಿರುವ ಹದಿನಾರುಮೋಳೆ , ಮೂಡಹಳ್ಳಿ, ಮಲ್ಲರಾಜನಹುಂಡಿ, ಮಾದಯ್ಯನಹುಂಡಿ, ಆಲತ್ತೂರು, ಇಮ್ಮಾವು, ಇಮ್ಮಾವುಹುಂಡಿ (ಉಪ್ಪಲಿಗರ ಉಂಡಿ), ಕೆಂಪಿಸಿದ್ದನಹುಂಡಿ, ಹುಳಿಮಾವು, ತೊರೆಮಾವು, ಬೊಕ್ಕಹಳ್ಳಿ, ಗೀಕಹಳ್ಳಿಹುಂಡಿ, ಆಲಂಬೂರು ಮುಂಟಿ, ಅಳಗಂಚಿ  ಶಾಲೆಗಳನ್ನು ಉಳಿಸಲು, AIDSO ನೇತೃತ್ವದಲ್ಲಿ ನಂಜನಗೂಡು ತಾಲೂಕು  ಮಟ್ಟದ ಪ್ರತಿಭಟನಾ ಸಮಾವೇಶವನ್ನು  ಸಂಘಟಿಸಲಾಗಿತ್ತು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸುಭಾಷ್ ಬೆಟ್ಟದ ಕೊಪ್ಪ ಅವರು ಮಾತನಾಡುತ್ತಾ, 6 ಕಿ.ಮೀ. ವ್ಯಾಪ್ತಿಗೆ ಸೇರಿದಂತೆ ಗ್ರಾಮ ಪಂಚಾಯಿತಿಗೆ ಒಂದು ಶಾಲೆ ಎಂಬ KPS ಮ್ಯಾಗ್ನೆಟ್ ಯೋಜನೆ ಮೂಲಕ ರಾಜ್ಯ ಸರ್ಕಾರ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಅದರಲ್ಲಿ ಸಿ.ಎಂ ಕ್ಷೇತ್ರದ ಶಾಲೆಗಳೂ ಇರುವುದು ದೊಡ್ಡ ದುರಂತ. ಸರ್ಕಾರಿ ಶಾಲೆಗಳಿಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸದೇ ಅಧೋಗತಿಗೆ ತಂದು, ಜನ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿಲ್ಲ ಎಂದು ಸರ್ಕಾರವೇ ಅಪಪ್ರಚಾರ ಮಾಡುತ್ತಿದೆ. ಬಡವರ ಶಾಲೆ ಮುಚ್ಚುವ ಮಾತನಾಡುವ ಸರ್ಕಾರ 1500 ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದೆ. ನಮ್ಮ ರಕ್ತದಲ್ಲೇ ಕನ್ನಡ ಇದೆ ಎನ್ನುವ ಶಿಕ್ಷಣ ಸಚಿವರು ಚೆನ್ನಪಟ್ಟಣದ ಹೊಂಗನೂರು ಶಾಲೆಯನ್ನು ಮುಚ್ಚುವ ಆದೇಶ ಹೊರಡಿಸಿದ್ದಾರೆ. ಸರಕಾರದ ಈ ಇಬ್ಬಗೆಯ ನೀತಿಯನ್ನು ಸೋಲಿಸಬೇಕು ಎಂದು ಕರೆ ನೀಡಿದರು.

ಸಮಾವೇಶದಲ್ಲಿ  ಭಾಷಣಕಾರರಾಗಿ AIDSO ರಾಜ್ಯ ಉಪಾಧ್ಯಕ್ಷರಾದ  ಅಪೂರ್ವ ಅವರು ಮಾತನಾಡುತ್ತಾ,  “ಅಕ್ಟೋಬರ್ 15 ಹಾಗೂ ಡಿಸೆಂಬರ್ 30 2025 ರಂದು ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯಾದಾದ್ಯಂತ ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆಯಂತೆ, ಕೇವಲ ೬೦೦೦ ಶಾಲೆಗಳು ಉಳಿದು ೪೦,೦೦೦ ಸರ್ಕೆಕಾರಿ ಶಾಲೆಗಳು ನಶಿಸುವವು.  ಅಂದರೆ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಐದು ಕಿಲೋಮೀಟರ್ ವ್ಯಾಪ್ತಿಯ ಉಳಿದ ಎಲ್ಲಾ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ. ಈಗಾಗಲೇ ಕಳೆದ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆ ಪ್ರಕಾರ ನಮ್ಮ ರಾಜ್ಯದ ಲಕ್ಷಾಂತರ ರೈತ-ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಮತ್ತು  ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿ ವೃತ್ತಿಪರ ಶಿಕ್ಷಣವನ್ನು ಆರಂಬಿಸಲಾಗುವುದು. 6ನೇ ತರಗತಿಯಿಂದ ಮಕ್ಕಳಿಗೆ ಮಣ್ಣಿನ ಹಣತೆ ಮಾಡುವ, ಅಡಿಕೆ ಸುಲಿಯುವ ಕೌಶಲ್ಯಗಳನ್ನು ಕಲಿಸುವುದಾಗಿ ಶಿಕ್ಷಣ ಮಂತ್ರಿಗಳು ಬಹಿರಂಗಪಡಿಸಿದ್ದಾರೆ. ಕಾರ್ಮಿಕರ ಮಕ್ಕಳನ್ನು, ಕಾರ್ಮಿಕರನ್ನಗಿಯೇ ಉಳಿಸುವ ಕುತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ರೈತ ಸಂಘಟನೆ ನಂಜನಗೂಡು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹೆಜ್ಜಿಗೆ ಪ್ರಕಾಶ್ ಅವರು ಮಾತನಾಡಿ, “ಇಂದು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳು ರಾಜ್ಯ, ದೇಶಾದ್ಯಾಂತ ಹಲವಾರು ಸಾಧನೆಗಳನ್ನು ಮಾಡ್ತಾ ಇದ್ದಾರೆ. ಆ ಬಡ ಪ್ರತಿಭೆಗಳಿಗೆ ಸರ್ಕಾರಿ ಶಾಲೆಗಳು ಉಳಿಯಲೇಬೇಕು” ಎಂದು ಆಗ್ರಹಿಸಿದರು.

AIUTUC ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಎಂ. ಉಮಾದೇವಿ ಮಾತನಾಡಿ,  ಈ KPS ಮ್ಯಾಗ್ನೆಟ್ ನೀತಿ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಕಡಿಮೆ ಕೂಲಿಗೆ ದುಡಿಯುವ ಕಾರ್ಮಿಕರನ್ನು ಒದಗಿಸಲು ಮಾಡಿರುವ ಯೋಜನೆ. ಇದು ಬಡಮಕ್ಕಳಿಂದ ಶಿಕ್ಷಣ ಕಸಿಯುವ ಹುನ್ನಾರವನ್ನು ಹಿಮ್ಮೆಟ್ಟಿಸ ಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ್ದ AIKKMS ರೈತ ಮುಖಂಡರಾದ ಬಸವರಾಜು ಎಚ್. ಎಂ ಅವರು ಮಾತನಾಡಿ, “ನಮ್ಮನ್ನು ಆಳುವ ಸರ್ಕಾರಗಳು ಕೇವಲ ದುಡ್ಡು ಹೊಂದಿರುವವರಿಗೆ ಮಾತ್ರ ಶಿಕ್ಷಣ ಸಿಗುವ ತರ ಮತ್ತು ಬಡವರ ಮಕ್ಕಳು ಹಿಂದಿರುಗಿ ಜೀತ ಪದ್ಧತಿಗೆ ಹೋಗುವ ಹಾಗೆ ಮಾಡುತ್ತಿದೆ. ನಾವು ದೊಡ್ಡ  ಹೋರಾಟಗಳನ್ನು ಸಂಘಟಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು”.

ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಯ ನಾಯಕರು ಹಾಗೂ ಇಮ್ಮಾವು ಗ್ರಾಮಸ್ಥರಾದ, ಪ್ರೇಮ್, ಸಾರ್ವ ಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರಾದ, ಇಮ್ಮಾವು ಹುಂಡಿಯ ರಾಜಣ್ಣ  ಹುಳಿಮಾವಿನ ಗಿರೀಶ್,  ಆಲತ್ತೂರಿನ ಮಹೇಶ್,  ಬೊಕ್ಕಳ್ಳಿಯ ಭಾಗ್ಯಮ್ಮ,  ಕೆಂಪಿಸಿದ್ದನ ಹುಂಡಿಯ ರವಿ ಅವರು ಮಾತನಾಡಿದರು.

ಸಮಾವೇಶದಲ್ಲಿ ಪ್ರಾಸ್ತವಿಕವಾಗಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ನಿತಿನ್ ಅವರು ಮಾತನಾಡಿದರು.  ಜಿಲ್ಲಾ ಉಪಾಧ್ಯಕ್ಷರಾದ ಸ್ವಾತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮಾವೇಶದಲ್ಲಿ ಸಾಮಾಜಿಕ ಹೋರಾಟಗಾರರಾದ ಉಗ್ರ ನರಸಿಂಹೇ ಗೌಡ, ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಚಂದ್ರಕಲಾ, ಪದಾಧಿಕಾರಿಗಳಾದ ಹೇಮಾ, ಚಂದ್ರಿಕಾ, ಚಂದನ, ಅಂಜಲಿ, ದಿಶಾ, ನಂದೀಶ, ಅಭಿಷೇಕ್ ಹಾಗೂ 14 ಹಳ್ಳಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

Contact us for classifieds and ads : +91 9742974234