Latest News

ದಾಸವಾಳದ ಹೂವನ್ನು ನುಂಗಿ ಏಳು ತಿಂಗಳ ಮಗುವಿನ ದುರಂತ ಸಾವು

ಮೈಸೂರು  ಜಿಲ್ಲೆ ಹುಣಸೂರು:-  ಮೈಸೂರು ಜಿಲ್ಲೆ ಹುಣಸೂರು ತಾಲೂಕು ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಮನೆಯ ಹೊಸಿಲಲ್ಲಿ ಪೂಜೆಗಾಗಿ ಇಟ್ಟಿದ್ದ ದಾಸವಾಳ ಹೂವೇ 7 ತಿಂಗಳ ಮಗುವಿನ ಪ್ರಾಣ ತೆಗೆಯುವಂತಾಗಿದೆ.

ದೊಡ್ಡ ಹೆಜ್ಜೂರು ಗ್ರಾಮದ ಸುದರ್ಶನ್ ಹಾಗೂ ನವ್ಯ ದಂಪತಿಯ ಪುತ್ರ ಚಿನ್ಮಯ್ ಗೌಡ (7 ತಿಂಗಳು) ಈ ದುರ್ಘಟನೆಯ ಬಲಿಯಾಗಿದ್ದಾನೆ. ಕುಟುಂಬದ ಸಂತೋಷವನ್ನು ನುಂಗಿದ ಈ ಘಟನೆ ಗ್ರಾಮಸ್ಥರ ಮನದಲ್ಲಿ ಆಘಾತ ಮೂಡಿಸಿದೆ.

ಮೊನ್ನೆ ಮನೆಯ ಹೊಸಿಲಿಗೆ ಪೂಜೆ ನೆರವೇರಿಸಿ, ದಾಸವಾಳ ಹೂವುಗಳನ್ನು ಅಲಂಕಾರವಾಗಿ ಇಡಲಾಗಿತ್ತು. ಇದೇ ವೇಳೆ ಚಿನ್ಮಯ್ ತನ್ನ ಅಣ್ಣನ ಜೊತೆ ಮನೆಯ ಹೊರಾಂಗಣದಲ್ಲಿ ಆಟವಾಡುತ್ತಿದ್ದ. ಆಟದ ನಡುವೆ ಮಗುವು ಪೂಜೆಗೆ ಇಟ್ಟಿದ್ದ ದಾಸವಾಳ ಹೂವಿನ ಹಸಿರು ದಿಂಡಿನ ಭಾಗವನ್ನು ಕಿತ್ತು ಬಾಯಿಗೆ ಹಾಕಿಕೊಂಡಿದೆ.

ಈ ಸಂಗತಿಯನ್ನು ಗಮನಿಸಿದ ಅಣ್ಣ ತಕ್ಷಣವೇ ಹೂವನ್ನು ಹೊರತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ ಅಷ್ಟರಲ್ಲೇ ಮಗು ಆ ದಿಂಡಿನ ಭಾಗವನ್ನು ನುಂಗಿಬಿಟ್ಟಿದೆ.

ದಾಸವಾಳದ ಹೂ ನುಂಗಿದ್ದಕ್ಕೆ ಉಸಿರಾಟ ಸಮಸ್ಯೆ  ಜೀವಕ್ಕೆ ಹಾನಿ

ನುಂಗಿದ ಹೂವಿನ ಭಾಗವು ಮಗುವಿನ ಶ್ವಾಸಕೋಶದಲ್ಲಿ ಸಿಲುಕಿಕೊಂಡ ಪರಿಣಾಮ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಮಗುವಿನ ಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರವಾಗುತ್ತಿದ್ದಂತೆ ಗಾಬರಿಗೊಂಡ ಪೋಷಕರು ತಕ್ಷಣ ಹನಗೋಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದರೂ, ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿನ್ಮಯ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ದೊಡ್ಡ ಹೆಜ್ಜೂರು  ಗ್ರಾಮದಲ್ಲಿ ಶೋಕದ ವಾತಾವರಣ

ಈ ಘಟನೆ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ದುಃಖದ ನೆರಳು ಹರಡಿಸಿದೆ. ಆಟವಾಡುವ ವಯಸ್ಸಿನಲ್ಲೇ ಮಗು ಪ್ರಾಣ ಕಳೆದುಕೊಂಡಿರುವುದು ಕುಟುಂಬಸ್ಥರ ಅಳಲಿಗೆ ಕಾರಣವಾಗಿದೆ. ಪೋಷಕರ ಆಕ್ರಂದನ ಹೃದಯ ಕಲೆಹಾಕುವಂತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಕ್ಕಳು ವಿಶೇಷವಾಗಿ ಶಿಶುಗಳು ಸಣ್ಣ ವಸ್ತುಗಳನ್ನು ಬಾಯಿಗೆ ಹಾಕುವ ಸ್ವಭಾವ ಹೊಂದಿರುವುದರಿಂದ, ಮನೆಗಳಲ್ಲಿ ಪೂಜೆ ಸಾಮಗ್ರಿ ಅಥವಾ ಸಣ್ಣ ವಸ್ತುಗಳನ್ನು ಅವರ ಕೈಗೆಟುಕದ ಸ್ಥಳದಲ್ಲಿ ಇಡುವುದು ಅತ್ಯಂತ ಮುಖ್ಯ. ಸಣ್ಣ ಅಜಾಗರೂಕತೆಯೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ.

Contact us for classifieds and ads : +91 9742974234