Latest News

ತಂಬಾಕು ರೈತರ ಹಿತ ಕಾಯಬೇಕು: ಕನಿಷ್ಠ ಬೆಂಬಲ ಬೆಲೆಯೊಂದಿಗೆ ಖರೀದಿಗೆ ಎಚ್.ಡಿ.ಕುಮಾರಸ್ವಾಮಿ ಸೂಚನೆ

ಮೈಸೂರು: ರಾಜ್ಯದ ತಂಬಾಕು ರೈತರು ಸಂಕಷ್ಟಕ್ಕೆ ಸಿಲುಕದಂತೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿ ತಕ್ಷಣವೇ ತಂಬಾಕು ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಂಬಾಕು ಮಂಡಳಿ ಮತ್ತು ಖರೀದಿದಾರರಿಗೆ ಸ್ಪಷ್ಟ ಸೂಚನೆ ನೀಡಿದರು.

ಮೈಸೂರಿನಲ್ಲಿ ತಂಬಾಕು ಮಂಡಳಿಯ ವತಿಯಿಂದ ನಡೆಯುತ್ತಿರುವ ಎಫ್‌ಸಿವಿ (FCV) ತಂಬಾಕು ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ತಂಬಾಕು ವರ್ತಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ರೈತರ ಹಿತವೇ ಮೊದಲ ಆದ್ಯತೆ ಆಗಿರಬೇಕು ಎಂದು ಒತ್ತಿ ಹೇಳಿದ ಅವರು, ರೈತರಿಗೆ ಯಾವುದೇ ರೀತಿಯ ನಷ್ಟವಾಗದಂತೆ ಬೆಲೆ ನಿಗದಿಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಮುಂದಿನ ಒಂದೆರಡು ದಿನಗಳಲ್ಲಿ ರೈತರು ಮತ್ತು ಖರೀದಿದಾರರೊಂದಿಗೆ ಮತ್ತೊಂದು ಸಭೆ ನಡೆಸಿ ಅಂತಿಮವಾಗಿ ತಂಬಾಕು ಬೆಲೆ ನಿಗದಿ ಮಾಡಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ರೈತರು ಬೆಳೆದ ತಂಬಾಕು ಗೋದಾಮುಗಳಲ್ಲಿ ಉಳಿದುಕೊಳ್ಳಬಾರದು, ತಕ್ಷಣವೇ ಖರೀದಿ ಪ್ರಾರಂಭವಾಗಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಮಾತನಾಡಿದ ಸಚಿವ ಕೆ.ವೆಂಕಟೇಶ್ ಅವರು, ಸಿಗರೇಟಿನ ಮೇಲಿನ ತೆರಿಗೆ ಹೆಚ್ಚಳವನ್ನು ನೆಪವನ್ನಾಗಿ ಮಾಡಿಕೊಂಡು ರೈತರ ಬೆಳೆ ಖರೀದಿ ಕಡಿಮೆ ಮಾಡುವುದು ಸರಿಯಲ್ಲ ಎಂದು ಹೇಳಿದರು. ಸಿಗರೇಟು ತಯಾರಿಕಾ ಕಂಪನಿಗಳ ಮೇಲೆ ತೆರಿಗೆ ಹೆಚ್ಚಿಸುವುದು ಬೇರೆ ವಿಷಯ, ಆದರೆ ಅದರ ಪರಿಣಾಮವನ್ನು ರೈತರ ಮೇಲೆ ಬೀಳುವಂತೆ ಮಾಡಬಾರದು ಎಂದು ಹೇಳಿದರು.

ಈ ಮಾತಿಗೆ ಬೆಂಬಲ ಸೂಚಿಸಿದ ಶಾಸಕ ಎ.ಮಂಜು ಅವರು, ತೆರಿಗೆ ವಿಧಿಸುವುದಾದರೆ ಗ್ರಾಹಕರ ಮೇಲೆ ವಿಧಿಸಬೇಕು, ಉತ್ಪಾದಕರಾದ ರೈತರ ಮೇಲೆ ಹೊರೆ ಹಾಕಬಾರದು ಎಂದು ಹೇಳಿದರು. ತಂಬಾಕು ಮಂಡಳಿ ರೈತರ ಪರ ನಿಲುವು ತೆಗೆದುಕೊಳ್ಳಬೇಕು ಹೊರತು ವ್ಯಾಪಾರಿಗಳ ಪರವಾಗಿ ಮಾತನಾಡಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ತಂಬಾಕು ಮಾರುಕಟ್ಟೆಯಲ್ಲಿ ಕೆಲವೇ ಕಂಪನಿಗಳು ಪ್ರಭುತ್ವ ಸಾಧಿಸಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರು. ವಿಶೇಷವಾಗಿ ಐಟಿಸಿ ಕಂಪನಿ ಮಾರುಕಟ್ಟೆಯ ದೊಡ್ಡ ಭಾಗವನ್ನು ಹಿಡಿದಿಟ್ಟುಕೊಂಡಿರುವುದರಿಂದ ಸ್ಪರ್ಧಾತ್ಮಕ ಖರೀದಿ ನಡೆಯುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ವಿದೇಶಿ ಕಂಪನಿಗಳಿಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಸ್ಪರ್ಧಾತ್ಮಕ ಮಾರುಕಟ್ಟೆ ನಿರ್ಮಿಸಬೇಕು ಎಂದು ಅವರು ಸಲಹೆ ನೀಡಿದರು. ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್‌ಟಿ ಹೆಚ್ಚಳದ ಕುರಿತು ಕೇಂದ್ರ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ತೆರಿಗೆ ವಿನಾಯಿತಿ ಕುರಿತು ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಪ್ರಸ್ತುತ ಎದುರಾಗಿರುವ ಸಮಸ್ಯೆಗೆ ಪರಿಹಾರವಾಗಿ ಖರೀದಿದಾರರು ನಿರ್ದಿಷ್ಟ ಬೆಲೆ ನಿಗದಿ ಮಾಡಿ ಉಳಿದಿರುವ ತಂಬಾಕು ಖರೀದಿಗೆ ಮುಂದಾಗಬೇಕು ಎಂದು ಹೇಳಿದರು. ಅಕ್ರಮ ಸಿಗರೇಟ್ ಮಾರಾಟವನ್ನು ತಡೆಯುವ ಮೂಲಕ ತಂಬಾಕು ರೈತರ ಹಿತವನ್ನು ರಕ್ಷಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಸಚಿವ ಕೆ.ವೆಂಕಟೇಶ್ ಅವರು ಆಂಧ್ರ ಪ್ರದೇಶದಲ್ಲಿ ತಂಬಾಕು ಹೆಚ್ಚು ದರಕ್ಕೆ ಖರೀದಿಯಾಗುತ್ತಿರುವುದನ್ನು ಉಲ್ಲೇಖಿಸಿ, “ಆಂಧ್ರದಲ್ಲಿ ₹470ಕ್ಕೆ ಖರೀದಿಸುತ್ತಿರುವಾಗ ನಮ್ಮಲ್ಲಿ ₹370ಕ್ಕೂ ಖರೀದಿ ನಡೆಯದಿರುವುದು ರೈತರಿಗೆ ಅನ್ಯಾಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಐಟಿಸಿ ಕಂಪನಿ ಮಾರುಕಟ್ಟೆಯ ಸುಮಾರು ಶೇಕಡಾ 50ರಷ್ಟು ತಂಬಾಕು ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಾರಂಭದಲ್ಲಿ ನಿಗದಿಪಡಿಸಿದ ದರದಲ್ಲೇ ರೈತರಿಂದ ಖರೀದಿ ಮಾಡಬೇಕು ಎಂದು ಅವರು ಒತ್ತಾಯಿಸಿದರು. ತಂಬಾಕು ಬೆಳೆ ಮೂಲಕವೇ ಐಟಿಸಿ ಕಂಪನಿ ತನ್ನ ಬೆಳವಣಿಗೆ ಸಾಧಿಸಿದ್ದು, ಈಗ ರೈತರ ಪರ ನಿಲುವು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಕನಿಷ್ಠ ₹320 ದರವನ್ನು ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಸಭೆಯಲ್ಲಿ ಮಾತನಾಡಿದ ಐಟಿಸಿ ಕಂಪನಿಯ ಉಪಾಧ್ಯಕ್ಷರು, ಸಿಗರೇಟ್ ಉತ್ಪನ್ನಗಳ ಮೇಲಿನ ತೆರಿಗೆ ಏರಿಕೆಯಿಂದ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಹೇಳಿದರು. ಹಿಂದೆ ಸುಮಾರು 18 ಶೇಕಡಾ ಇದ್ದ ತೆರಿಗೆ ಈಗ 40 ಶೇಕಡಕ್ಕೆ ಏರಿಕೆಯಾಗಿದೆ. ಸಿಗರೇಟಿನ ಮೇಲಿನ ಒಟ್ಟು ತೆರಿಗೆ ಭಾರವೂ ಬಹಳ ಹೆಚ್ಚಾಗಿದೆ ಎಂದು ಅವರು ವಿವರಿಸಿದರು.

ಸಿಗರೇಟ್ ಬಳಕೆ ಕಡಿಮೆಯಾಗಿರುವುದು ಹಾಗೂ ವಿವಿಧ ರೀತಿಯ ತೆರಿಗೆಗಳಿಂದ ಕಂಪನಿಗಳಿಗೆ ನಷ್ಟ ಉಂಟಾಗಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಿದರೆ ರೈತರಿಗೆ ಉತ್ತಮ ಬೆಲೆ ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಶಾಸಕ ಎ.ಮಂಜು ಅವರು ಕಂಪನಿಗಳ ವಿವರಣೆಗೆ ತೀವ್ರ ಪ್ರತಿಕ್ರಿಯೆ ನೀಡಿ, ವಿವಿಧ ಕಾರಣಗಳನ್ನು ನೆಪವಾಗಿ ಹೇಳದೇ ರೈತರಿಗೆ ನ್ಯಾಯವಾದ ಬೆಲೆ ನೀಡಬೇಕು ಎಂದು ಹೇಳಿದರು. ಕೆಲವು ತಂಬಾಕು ತಳಿಗಳಿಗೆ ಆರಂಭದಲ್ಲೇ ₹450 ದರ ನಿಗದಿಪಡಿಸಿರುವುದನ್ನು ಉಲ್ಲೇಖಿಸಿ, ಈಗ ನೀಡಲಾಗುತ್ತಿರುವ ದರ ಕಡಿಮೆ ಎಂದು ಹೇಳಿದರು.

ಆಂಧ್ರ ಪ್ರದೇಶದಲ್ಲಿ ಆರಂಭದಲ್ಲಿ ಹೆಚ್ಚಿನ ದರ ಇದ್ದರೂ ನಂತರ ಮಾರುಕಟ್ಟೆ ಕುಸಿಯುತ್ತದೆ. ಆದರೆ ಕರ್ನಾಟಕದಲ್ಲಿ ಅಂತಹ ಏರಿಳಿತವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು.

ಸಭೆಯಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ವಿಚಾರವಾಗಿ ಜನಪ್ರತಿನಿಧಿಗಳು ಮತ್ತು ತಂಬಾಕು ಮಂಡಳಿ ಅಧಿಕಾರಿಗಳ ನಡುವೆ ವಾಗ್ವಾದವೂ ನಡೆಯಿತು. ಜಿಎಸ್‌ಟಿ ಕಡಿತದ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಬೇಕು ಎಂದು ತಂಬಾಕು ಮಂಡಳಿ ಅಧಿಕಾರಿಗಳು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಯದುವೀರ, ರೈತರ ಹಿತವೇ ಮುಖ್ಯವಾಗಿದ್ದು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಮೇಲೆ ಆರೋಪ ಮಾಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿದರು. ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯ ಸರ್ಕಾರವೂ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಸಂಸದ ಸುನೀಲ್ ಬೋಸ್, ಶಾಸಕರಾದ ಜಿ.ಡಿ.ಹರೀಶ್ ಗೌಡ, ಡಿ.ರವಿಶಂಕರ್, ವಿಧಾನಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ ಹಾಗೂ ಕೆ.ವಿವೇಕಾನಂದ, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ತಂಬಾಕು ಮಂಡಳಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

Contact us for classifieds and ads : +91 9742974234