Latest News

ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿ: ಪ್ರೊ. ಕೆ. ರಾಮಕೃಷ್ಣಯ್ಯ ಅಧಿಕಾರ ಸ್ವೀಕಾರ

ಮೈಸೂರು: ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಖ್ಯಾತ ರಂಗಕರ್ಮಿ ಹಾಗೂ ಶಿಕ್ಷಣ ತಜ್ಞರಾದ ಪ್ರೊ. ಕೆ. ರಾಮಕೃಷ್ಣಯ್ಯ ಅವರು ಸೋಮವಾರ (ಫೆಬ್ರವರಿ 23,2026) ಅಧಿಕಾರ ವಹಿಸಿಕೊಂಡರು. ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಅಧಿಕೃತವಾಗಿ ಜವಾಬ್ದಾರಿ ಸ್ವೀಕರಿಸಿದರು.

ಪ್ರೊ. ರಾಮಕೃಷ್ಣಯ್ಯ ಅವರು ಹಲವು ವರ್ಷಗಳಿಂದ ಪ್ರದರ್ಶಕ ಕಲೆಗಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕರಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಪರ್ಫಾರ್ಮಿಂಗ್ ಆರ್ಟ್ಸ್ ವಿಭಾಗದಲ್ಲಿ ದೀರ್ಘಕಾಲ ಬೋಧನಾ ಸೇವೆ ಸಲ್ಲಿಸಿದ್ದಾರೆ. ರಂಗಭೂಮಿ ಹಾಗೂ ಪ್ರದರ್ಶನ ಕಲಾ ಕ್ಷೇತ್ರದಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅನುಭವ ಹೊಂದಿರುವ ಅವರು ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡಿರುವುದು ಕಲಾ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.

ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನವರಾದ ಪ್ರೊ. ರಾಮಕೃಷ್ಣಯ್ಯ ಅವರು ನೀನಾಸಂನಲ್ಲಿ ರಂಗಭೂಮಿ ತರಬೇತಿ ಪಡೆದಿದ್ದಾರೆ. ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರದರ್ಶಕ ಕಲೆ ವಿಭಾಗದಲ್ಲಿ ಎಂ.ಎ. ಡ್ರಾಮ ಪದವಿ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಸುಮಾರು 25 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಇದನ್ನೂ ಓದಿ:-  ಗೋಪ್ಯ ಸ್ನೇಹದಿಂದ ಮದುವೆ ಮಾತಿನವರೆಗೆ: ವಿಜಯ್ ದೇವರಕೊಂಡ?ರಶ್ಮಿಕಾ ಸಂಬಂಧದ ಪಯಣ ಮತ್ತೆ ಚರ್ಚೆಯಲ್ಲಿ

ಅವರ ಮಾರ್ಗದರ್ಶನದಲ್ಲಿ ಈಗಾಗಲೇ 16 ಸಂಶೋಧಕರು ಪಿಎಚ್.ಡಿ ಪದವಿ ಪಡೆದಿದ್ದು, ರಂಗಭೂಮಿ ಮತ್ತು ಪ್ರದರ್ಶನ ಕಲೆಗೆ ಸಂಬಂಧಿಸಿದ ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಜೊತೆಗೆ ರಂಗಭೂಮಿ ಚಟುವಟಿಕೆಗಳಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ನಟ ಹಾಗೂ ನಿರ್ದೇಶಕರಾಗಿ ಹಲವು ನಾಟಕಗಳಲ್ಲಿ ಅಭಿನಯಿಸಿರುವ ಅವರು ನಾಲ್ಕು ನಾಟಕಗಳನ್ನು ರಚಿಸಿ ಪ್ರಕಟಿಸಿದ್ದಾರೆ. ರಂಗಭೂಮಿಗೆ ಸಲ್ಲಿಸಿದ ಸೇವೆಯನ್ನು ಗಮನಿಸಿ ಅವರಿಗೆ 2011ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸ್ಟೇಟ್ ಫೆಲೋಶಿಪ್ ಹಾಗೂ 2017ರಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು, ೨೦೧೮ರಲ್ಲಿ ದೆಹಲಿಯಲ್ಲಿ ನಡೆದ ೮ನೇ ಥಿಯೇಟರ್ ಒಲಿಂಪಿಕ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ರೀತಿ ಅಹಮದಾಬಾದ್‌ನಲ್ಲಿ ನಡೆದ ಭಾರತರಂಗ ಮಹೋತ್ಸವ 2024 ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿ ಗಮನ ಸೆಳೆದಿದ್ದರು.

ಆಡಳಿತಾತ್ಮಕ ಕ್ಷೇತ್ರದಲ್ಲಿಯೂ ಅನುಭವ ಹೊಂದಿರುವ ಪ್ರೊ. ರಾಮಕೃಷ್ಣಯ್ಯ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸಾಂಸ್ಕೃತಿಕ ಸಂಯೋಜಕರಾಗಿ 2017ರಿಂದ ಕಾರ್ಯನಿರ್ವಹಿಸುತ್ತಿದ್ದರು. ಇದರ ಜೊತೆಗೆ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಆಗಿಯೂ ಹಾಗೂ ಪರ್ಫಾರ್ಮಿಂಗ್ ಆರ್ಟ್ಸ್ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನಾಯಕತ್ವ ಚರ್ಚೆಗಳ ಮಧ್ಯೆ ಡಾ. ಜಿ. ಪರಮೇಶ್ವರ್ ಕುಮಾರಸ್ವಾಮಿ ಭೇಟಿ: ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳ ಮಾತು

ಹೊಸ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದು, ಸಂಗೀತ ಹಾಗೂ ಪ್ರದರ್ಶಕ ಕಲೆಗಳ ಅಧ್ಯಯನಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸುವುದಕ್ಕೆ ಆದ್ಯತೆ ನೀಡುವುದಾಗಿ ಅವರು ತಿಳಿಸಿದ್ದಾರೆ.

ಪ್ರೊ. ರಾಮಕೃಷ್ಣಯ್ಯ ಅವರ ಅನುಭವ ಮತ್ತು ಕಲಾ ಕ್ಷೇತ್ರದ ದೀರ್ಘ ಸೇವೆಯಿಂದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಉತ್ತೇಜನ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Contact us for classifieds and ads : +91 9742974234