ಟಿ. ನರಸೀಪುರದಲ್ಲಿ ಹಲವು ದಶಕಗಳ ಕನಸು ನನಸು: 5 ಎಕರೆ ಭೂಮಿಯಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ

ಎಂ.ನಾಗೇಂದ್ರಕುಮಾರ್
ಟಿ. ನರಸೀಪುರ, ಫೆ. 20: ಹಲವು ವರ್ಷಗಳಿಂದ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ಎದುರು ನೋಡುತ್ತಿದ್ದ ತಾಲ್ಲೂಕು ಕ್ರೀಡಾಂಗಣ ನಿರ್ಮಾಣದ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಪಟ್ಟಣದ ಜೋಡಿ ಮುಖ್ಯರಸ್ತೆಯಲ್ಲಿರುವ ಹಳೆಯ ಸಿಲ್ಕ್ ಫ್ಯಾಕ್ಟರಿ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಐದು ಎಕರೆ ಭೂಮಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ.

ಪೊಲೀಸ್ ಭದ್ರತೆಯಲ್ಲಿ ನಡೆದ ಭೂಮಿ ಹಸ್ತಾಂತರ ಪ್ರಕ್ರಿಯೆಯಲ್ಲಿ ತಹಶಿಲ್ದಾರ್ ಟಿ.ಜೆ. ಸುರೇಶ್ ಆಚಾರ್ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಅವರಿಗೆ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ತಾಲ್ಲೂಕು ಸರ್ವೇಯರ್ಗಳ ಸಮ್ಮುಖದಲ್ಲಿ ಜಾಗವನ್ನು ಹದ್ದುಬಸ್ತು ಮಾಡಿ ಗುರುತು ಕಲ್ಲುಗಳನ್ನು ನೆಟ್ಟು ಅಧಿಕೃತವಾಗಿ ಗುರುತಿಸಲಾಯಿತು.
ಕ್ರೀಡಾಂಗಣ ಶೀಘ್ರದಲ್ಲೇ ಕಾಮಗಾರಿ ಆರಂಭ
ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಅವರು, “ಇಂದು ಕ್ರೀಡಾಂಗಣಕ್ಕೆ ನೀಡಿರುವ ಸ್ಥಳವನ್ನು ಗುರುತಿಸಿ ಕಲ್ಲುಗಳನ್ನು ನೆಟ್ಟು ಗುರುತು ಮಾಡಲಾಗಿದೆ. ಟಿ. ನರಸೀಪುರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳ ಕ್ರೀಡಾಪಟುಗಳಿಗೆ ಈ ಕ್ರೀಡಾಂಗಣ ಅತ್ಯಂತ ಉಪಯುಕ್ತವಾಗಲಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇದು ವರದಾನವಾಗಲಿದೆ” ಎಂದು ಹೇಳಿದರು.

ಮುಖ್ಯಮಂತ್ರಿಗಳ ತವರು ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಸಂಸದರಾದ ಸುನಿಲ್ ಬೋಸ್ ಅವರ ಸಹಕಾರದಿಂದ ಯೋಜನೆಗೆ ವೇಗ ದೊರಕಿದೆ ಎಂದು ತಿಳಿಸಿದರು. ಕಳೆದ ಬಜೆಟ್ನಲ್ಲಿ ಹಣ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯನ್ನು ಹದಿನೈದು ದಿನಗಳೊಳಗೆ ಪೂರ್ಣಗೊಳಿಸಿ ಒಂದೆರಡು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಹಶಿಲ್ದಾರ್ ಟಿ.ಜೆ. ಸುರೇಶ್ ಆಚಾರ್ ಮಾತನಾಡಿ, “ತಾಲ್ಲೂಕು ಕ್ರೀಡಾಂಗಣಕ್ಕಾಗಿ ಸರ್ಕಾರದಿಂದ ಹಸ್ತಾಂತರಗೊಂಡ ಜಮೀನನ್ನು ಕಂದಾಯ ಇಲಾಖೆಯ ಮೂಲಕ ಹದ್ದುಬಸ್ತು ಮಾಡಿ ಗುರುತು ಹಾಕಲಾಗಿದೆ. ಐದು ಎಕರೆ ಜಾಗವನ್ನು ಅಧಿಕೃತವಾಗಿ ಕ್ರೀಡಾ ಇಲಾಖೆಗೆ ನೀಡಲಾಗಿದೆ. ಇದರಿಂದ ಕಾಮಗಾರಿಗೆ ಯಾವುದೇ ಅಡಚಣೆ ಇರುವುದಿಲ್ಲ” ಎಂದು ತಿಳಿಸಿದರು.
ಕ್ರೀಡಾಂಗಣ ನಿರ್ಮಾಣಕ್ಕೆ ಯಾವುದೇ ತೊಂದರೆ ಇಲ್ಲ

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಡಾ. ಬಿ. ಮರಯ್ಯ ಮಾತನಾಡಿ, “ಎರಡೂ ಕ್ಷೇತ್ರಗಳ ಜನತೆ ಮತ್ತು ಕ್ರೀಡಾಪಟುಗಳ ಒತ್ತಾಯದ ಮೇರೆಗೆ ಮುಖ್ಯಮಂತ್ರಿಗಳು ಸಂಬಂಧಿತ ಇಲಾಖೆಗೆ ಕ್ರೀಡಾಂಗಣ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಸಿಲ್ಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಹೆಚ್ಚುವರಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು, ಪ್ರಸ್ತುತ ಜಾಗದಲ್ಲಿ ಕಾರ್ಮಿಕರು ತಮ್ಮ ಕೆಲಸ ಮುಂದುವರಿಸಬಹುದು” ಎಂದು ಸ್ಪಷ್ಟಪಡಿಸಿದರು.
ಕ್ರೀಡಾಂಗಣ ನಿರ್ಮಾಣಕ್ಕೆ ಗಣ್ಯರು ಹಾಗೂ ಸಾರ್ವಜನಿಕರು
ಭೂಮಿ ಹಸ್ತಾಂತರ ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್, ಜಗದೀಶ್ ಧೂಳ್ ಶೆಟ್ಟಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ದಿವಾಕರ್ ಮರಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎಇಇ ಎಸ್.ಆರ್. ಜಯಪ್ರಕಾಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ತಾಲ್ಲೂಕಿನ ಯುವ ಕ್ರೀಡಾಪಟುಗಳಿಗೆ ಸಮರ್ಪಿತ ಕ್ರೀಡಾಂಗಣ ಸಿಗುತ್ತಿರುವುದು ಗ್ರಾಮೀಣ ಕ್ರೀಡಾ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡುವ ನಿರೀಕ್ಷೆ ಮೂಡಿಸಿದೆ.

