
ವರದಿ :-ಎಂ ನಾಗೇಂದ್ರ ಕುಮಾರ್.
ಟಿ.ನರಸೀಪುರ, ಫೆ.16: ಕೇಂದ್ರ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ರೈತ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಟಿ.ನರಸೀಪುರ ತಾಲ್ಲೂಕಿನ ಕಿರಗಸೂರು ಗ್ರಾಮದಲ್ಲಿ ನಡೆದಿದೆ. ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಕರೆ ಹಿನ್ನೆಲೆಯಲ್ಲಿ ಕಿರಗಾಸೂರು ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲಿ ರೈತರು ಕರಾರು ಒಪ್ಪಂದದ ಸಹಿಪತ್ರದ ಪ್ರತಿಯನ್ನು ಸುಟ್ಟು ವಿರೋಧ ವ್ಯಕ್ತಪಡಿಸಿದರು.

ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಿರಗಸೂರು ಗ್ರಾಮದಲ್ಲಿ ನಡೆದ ಪ್ರತಿಭಟನೆಯನ್ನು ರಾಜ್ಯ ಕಬ್ಬು ಬೆಳೆಗಾರ ಸಂಘದ ಮೈಸೂರು-ಚಾಮರಾಜನಗರ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ಮುಂದಾಳತ್ವ ವಹಿಸಿದ್ದರು. ಕಿರಗಾಸೂರು ಗ್ರಾಮಸ್ಥರು, ರೈತ ಮುಖಂಡರು ಹಾಗೂ ವಿವಿಧ ರೈತ ಸಂಘಟನೆಗಳ ಸದಸ್ಯರು ಸೇರಿಕೊಂಡು ಕೇಂದ್ರ ಸರ್ಕಾರದ ರೈತರ ವಿರುದ್ದದ ನೀತಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ರೈತರ ಪ್ರತಿಭಟನೆಯ ವೇಳೆ ಮುಕ್ತ ವ್ಯಾಪಾರ ಒಪ್ಪಂದವು ರೈತರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತ ನೀಡುವ ಸಾಧ್ಯತೆ ಹೆಚ್ಚಾಗಿ ಇದೆ ಎಂದು ಆರೋಪಿಸಿ, ಕೆಂದ್ರ ಸರ್ಕಾರದ ಕರಾರು ಪ್ರತಿಯನ್ನು ಸಾರ್ವಜನಿಕವಾಗಿ ಬೆಂಕಿ ಹಚ್ಚಿ ಸುಡಲಾಯಿತು.
ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಕಿರಗಸೂರು ಶಂಕರ್, ಭಾರತ ಮತ್ತು ಅಮೆರಿಕ ನಡುವೆ ನಡೆದಿರುವ ಮುಕ್ತ ವ್ಯಾಪಾರ ಒಪ್ಪಂದವು ನಮ್ಮ ದೇಶದ ರೈತರಿಗೆ ಮರಣ ಶಾಸನದಂತಾಗಿದೆ ಎಂದು ಹೇಳಿದರು. ಇಂತಹ ಒಪ್ಪಂದಗಳಿಂದ ದೇಶೀಯ ರೈತರ ಕೃಷಿ ಉತ್ಪನ್ನಗಳಿಗೆ ಬೆಲೆ ಕುಸಿತವಾಗುವ ಸಾಧ್ಯತೆ ಇದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ರೈತರ ಕೃಷಿ ವಲಯವನ್ನು ರಕ್ಷಿಸುವ ಬದಲು ವಿದೇಶಿ ಮಾರುಕಟ್ಟೆಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಭಾವನೆ ರೈತರಲ್ಲಿ ಮೂಡಿದೆ ಎಂದು ಹೇಳಿದರು.
ಕೆಂದ್ರ ಸರ್ಕಾರ ಮಾಡಿಕೊಂಡಿರುವ ಈ ಒಪ್ಪಂದವನ್ನು ಇಗಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, ಸರ್ಕಾರ ರೈತರ ಕಷ್ಟಗಳನ್ನು ಗಮನಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಭಾರತದ್ಯಾದ್ದಂತ ರೈತರಿಂದ ರಾಷ್ಟ್ರವ್ಯಾಪಿ ಹೋರಾಟ ತೀವ್ರಗೊಳ್ಳಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು. ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ದೇಶಾದ್ಯಂತ ಹೋರಾಟಗಳನ್ನು ನಡೆಸಲು ಈಗಾಗಲೇ ಸಿದ್ಧವಾಗಿದ್ದು, ಅಗತ್ಯವಿದ್ದರೆ ಉಗ್ರ ಪ್ರತಿಭಟನೆಗಳಿಗೂ ಮುಂದಾಗಲಿದೆ ಎಂದು ತಿಳಿಸಿದರು. ರೈತ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ನೀತಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂಬ ಸಂದೇಶ ನೀಡಲು ಈ ಪ್ರತಿಭಟನೆ ನಡೆಸಲಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ಮತ್ತು ಗ್ರಾಮಸ್ಥರು ಸರ್ಕಾರ ಕೃಷಿ ನೀತಿಗಳನ್ನು ರೂಪಿಸುವಾಗ ರೈತರ ಅಭಿಪ್ರಾಯವನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು. ಕೃಷಿ ಉತ್ಪನ್ನಗಳ ಬೆಲೆ ಸ್ಥಿರತೆ, ಉತ್ಪಾದನಾ ವೆಚ್ಚದ ನಿಯಂತ್ರಣ ಮತ್ತು ಮಾರುಕಟ್ಟೆ ರಕ್ಷಣೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಒಪ್ಪಂದದ ಪರಿಣಾಮಗಳ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಹಾಗೂ ರೈತರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಹೇಳಿದರು.
ಮಾರ್ಚ್ 19ರಂದು ದೆಹಲಿಯಲ್ಲಿ ಬೃಹತ್ ರೈತರ ಸಮಾವೇಶ

ಮುಕ್ತ ವ್ಯಾಪಾರ ಒಪ್ಪಂದ ಸೇರಿದಂತೆ ರೈತರ ಹಲವು ಬೇಡಿಕೆಗಳ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಸಲು ಮಾರ್ಚ್ 19ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬೃಹತ್ ರೈತರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ರೈತ ಮುಖಂಡರು ತಿಳಿಸಿದರು. ಈ ಸಮಾವೇಶದಲ್ಲಿ ಅಮೆರಿಕಾ-ಭಾರತ ಒಪ್ಪಂದದ ವಿಚಾರ ಸೇರಿದಂತೆ ರೈತರಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದರು. ದೇಶದ ವಿವಿಧ ರಾಜ್ಯಗಳಿಂದ ರೈತರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಜಂಟಿ ಕಾರ್ಯದರ್ಶಿ ಬೆನಕನಹಳ್ಳಿ ಬಿಪಿ ಪರಶಿವಮೂರ್ತಿ, ಕರುಹಟ್ಟಿ ಉಮೇಶ್, ರಾಜ್ ಕುಮಾರ್, ಕೆಇಬಿ ಯೋಗೇಶ್, ರಘು, ಕಿರಗಸೂರು ಸುರೇಶ್, ರಾಜೀವ್, ಮಹಾದೇವ, ಮಹೇಶ್, ಅಂಕಪ್ಪ, ಬಸವಲಿಂಗಪ್ಪ, ನಾಗ, ಮಾದೇಶ್, ಸ್ವಾಮಿ, ಚಂದ್ರು, ಶಂಕ್ರಿ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು. ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ, ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ರೈತ ಸಂಘಟನೆಗಳು ವ್ಯಕ್ತಪಡಿಸಿದ ಆಕ್ರೋಶವು ಕೃಷಿ ನೀತಿಗಳ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ಹಾಗೂ ಚಟುವಟಿಕೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ರೈತರ ಆತಂಕಗಳಿಗೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದು ಗಮನಾರ್ಹವಾಗಿದೆ.


