Latest News

ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಮುಕ್ತವಾಗಿಸಲು ಅಧಿಕಾರಿಗಳು ಶ್ರಮಿಸಿ: ಡಾ: ಶಿವರಾಜು ಪಿ

ಮೈಸೂರು, ಏ.08:- ಬಲಕಾರ್ಮಿಕ ಪದ್ಧತಿಯು ದೇಶಕ್ಕೆ ಮಾರಕವಾಗಿದ್ದು, ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತವಾಗಿಸಲು ಅಧಿಕಾರಿಗಳು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ:ಶಿವರಾಜು ಪಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಹಾಗೂ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ಅಧಿಕಾರಿಗಳು ನಿಯಮಿತವಾಗಿ ದಾಳಿ ನಡೆಸಿ ಪತ್ತೆಯಾಗುವ ಬಾಲ ಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರು ಪುನ: ಶಾಲೆಗೆ ದಾಖಲಿಸಬೇಕು ಅವರು ವಿದ್ಯಾಭ್ಯಾಸ ಮುಂದುವರಿಸಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಬಾಲ ಕಾರ್ಮಿಕರ ಪೋಷಕರು ಮಕ್ಕಳನ್ನು ಓದಿಸುವ ಸ್ಥಿತಿಯಲ್ಲಿ ಇಲ್ಲದಿದ್ದರೆ ಅಂತಹ ಮಕ್ಕಳನ್ನು ವಸತಿ ಶಾಲೆಗೆ ಸೇರಿಸಲು ಕ್ರಮ ವಹಿಸಿ. ಜಿಲ್ಲೆಯಲ್ಲಿ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಜಿಲ್ಲೆಯ ರಸ್ತೆ ಬದಿಗಳಲ್ಲಿ ಮಕ್ಕಳು ಭಿಕ್ಷಾಟನೆ ಮಾಡುವುದನ್ನು ತಡೆಯಲು ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸಿ ಶಿಕ್ಷಣ ನೀಡಲು ಅಧಿಕಾರಿಗಳು ಸಂಘಟಿತರಾಗಿ ಕೆಲಸ ನಿರ್ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಪೊಲೀಸ್ ಇಲಾಖೆ ಹಾಗೂ ಇನ್ನಿತರೆ ಇಲಾಖೆಗಳು ಅನಿರೀಕ್ಷಿತ ದಾಳಿಗಳನ್ನು ನಡೆಸಿ ಭಿಕ್ಷಾಟನೆ ಮಾಡುವ ಮಕ್ಕಳನ್ನು ರಕ್ಷಿಸಿ ಎಂದರು.


ಬಾಲಕಾರ್ಮಿಕ ಮಕ್ಕಳು ಹೆಚ್ಚಾಗಿ ಕಂಡು ಬರುವ ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ, ಅಂತಹ ಸ್ಥಳಗಳ ಗಣ್ಯ ವ್ಯಕ್ತಿಗಳ ಅಧ್ಯಕ್ಷತೆಯಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಿ, ಬಾಲಕಾರ್ಮಿಕ ಮಕ್ಕಳನ್ನು ಶಾಲೆಗೆ ಕರೆತನ್ನಿ. ಜಿಲ್ಲೆಯಲ್ಲಿ ಹೆಚ್ಚಿನ ಜಾಗೃತಿ ಶಿಬಿರಗಳನ್ನು ಆಯೋಜಿಸಿ ಮುಂದಿನ ಸಭೆಗೆ ಮಾಹಿತಿ ನೀಡಿ ಎಂದರು.
ಜಿಲ್ಲೆಯಲ್ಲಿ 12 ವೃತ್ತಗಳಲ್ಲಿ 2025 ಏಪ್ರಿಲ್ ನಿಂದ 2026 ಮಾಚ್೯ ರವರೆಗೆ 1483 ದಾಳಿಗಳನ್ನು ನಡೆಸಿ 3 ಬಾಲ ಕಾರ್ಮಿಕರು, 34 ಕಿಶೋರ ಕಾರ್ಮಿಕರನ್ನು ಪತ್ತೆಹಚ್ಚಿ 12 ಪ್ರಕರಣಗಳಲ್ಲಿ 162000 ದಂಡ ವಸೂಲಿ ಮಾಡಲಾಗಿದೆ ಎಂದರು.
ಸಭೆಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತೆ ಲಲಿತಾ ಬಾಯಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಲಿಂಗರಾಜು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯೋಗೇಶ್ ಕುಮಾರ್, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Contact us for classifieds and ads : +91 9742974234