Latest News

ಜಿಲ್ಲಾ ಧಾರ್ಮಿಕ ಪರಿಷತ್ತು ಅತಂತ್ರ; ಭಕ್ತರ ಆಸ್ಥೆಗೆ ಕುತ್ತು

ಧಾರ್ಮಿಕ ಆಡಳಿತದಲ್ಲಿ ರಾಜಕೀಯದ ನೆರಳು; ಭಕ್ತರ ಆಸ್ಥೆಗೆ ಹಾಸನದಲ್ಲಿ ಕುತ್ತು : ಹುಂಡಿ ಹಣದ ಮೇಲೆ ಕಣ್ಣು, ಅಭಿವೃದ್ಧಿಗೆ ಬೆನ್ನು…?

ರಘುನಂದನ್ ಎಸ್.ಎ

ಹಾಸನ ಜಿಲ್ಲೆಯ ಐತಿಹಾಸಿಕ ಮುಜರಾಯಿ ದೇವಾಲಯಗಳು ಮತ್ತು ಸಾಂಪ್ರದಾಯಿಕ ರಥೋತ್ಸವಗಳು ಇಂದು ಆಡಳಿತಾತ್ಮಕ ಅನಾಥಪ್ರಜ್ಞೆಗೆ ತುತ್ತಾಗಿವೆ. ಇದಕ್ಕೆ ಪ್ರಮುಖ ಕಾರಣ, ‘ಜಿಲ್ಲಾ ಧಾರ್ಮಿಕ ಪರಿಷತ್ತು’ ರಚನೆಯಲ್ಲಿ ಸರ್ಕಾರ ತೋರುತ್ತಿರುವ ದಿವ್ಯ ನಿರ್ಲಕ್ಷ್ಯ ಮತ್ತು ಅಧಿಕಾರ ಹಂಚಿಕೆಯ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಜಿದ್ದಾಜಿದ್ದಿ. ಈಗಾಗಲೇ ಹಳೆಯ ಸಮಿತಿ ವಿಸರ್ಜನೆಗೊಂಡು ಎರಡುವರೆ ವರ್ಷಗಳೇ ಕಳೆದಿದ್ದರೂ, ಹೊಸ ಸಮಿತಿ ರಚನೆಯಾಗದಿರುವುದು ವ್ಯವಸ್ಥೆಯ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಇದು ಕೇವಲ ಕಡತಗಳ ವಿಳಂಬವಲ್ಲ, ಜಿಲ್ಲೆಯ ಧಾರ್ಮಿಕ ಪರಂಪರೆಯ ಮೇಲಿನ ಗಂಭೀರ ಪ್ರಹಾರವಾಗಿದೆ.

ಹಾಸನ ಜಿಲ್ಲೆಯಾದ್ಯಂತ ಈಗ ಜಾತ್ರೆ ಮತ್ತು ರಥೋತ್ಸವಗಳ ಸುಗ್ಗಿ ಕಾಲ. ಹಳ್ಳಿಗಳಲ್ಲಿ ಸಂಭ್ರಮ ಸಡಗರ ಮನೆ ಮಾಡಿದ್ದು, ಇದರ ನಡುವೆಯೇ ಆಡಳಿತಾತ್ಮಕ ಶೂನ್ಯತೆಯಿಂದಾಗಿ ಆತಂಕದ ಛಾಯೆ ಆವರಿಸಿದೆ. ಮುಜರಾಯಿ ಗೆಜೆಟ್ ನಿಯಮಗಳ ಅನ್ವಯ, ರಥೋತ್ಸವದಂತಹ ಸೂಕ್ಷ್ಮ ಹಾಗೂ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳ ಉಸ್ತುವಾರಿ ವಹಿಸಲು ‘ಜಿಲ್ಲಾ ಧಾರ್ಮಿಕ ಪರಿಷತ್ತು’ ಅಥವಾ ಅಧಿಕೃತ ವ್ಯವಸ್ಥಾಪನಾ ಸಮಿತಿಗಳ ಅಸ್ತಿತ್ವ ಅನಿವಾರ್ಯ. ಆದರೆ ಜಿಲ್ಲೆಯಲ್ಲಿ ಸಮಿತಿಗಳೇ ಇಲ್ಲದಿರುವುದು ದೈನಂದಿನ ಧಾರ್ಮಿಕ ಆಡಳಿತದ ಮೇಲೂ ತೀವ್ರ ಪರಿಣಾಮ ಬೀರಿದೆ.

ಜಿಲ್ಲಾ ಧಾರ್ಮಿಕ ಪರಿಷತ್ತು ಕೇವಲ ನಾಮಮಾತ್ರದ ಸಮಿತಿಯಲ್ಲ. ಜಿಲ್ಲೆಯ ‘ಸಿ’ ದರ್ಜೆಯ ದೇವಾಲಯಗಳಿಗೆ ಅರ್ಹ ಸದಸ್ಯರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿಗಳನ್ನು ನೇಮಿಸುವುದು, ದೇವಾಲಯದ ಆಸ್ತಿ ಹಾಗೂ ಆಭರಣಗಳ ಅತಿಕ್ರಮಣ ತಡೆಯುವುದು ಮತ್ತು ಅರ್ಚಕರ ಸೇವಾ ವಿವಾದಗಳನ್ನು ಬಗೆಹರಿಸುವುದು ಇದರ ಮೂಲ ಕರ್ತವ್ಯವಾಗಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997ರ (ಮುಜರಾಯಿ ಗೆಜೆಟ್) ಅನ್ವಯ, ಪ್ರತಿ ಜಿಲ್ಲೆಯೂ ಧಾರ್ಮಿಕ ಪರಿಷತ್ತನ್ನು ಹೊಂದಿರಲೇಬೇಕು. ಈ ಗೆಜೆಟ್ ದೇವಾಲಯಗಳ ಆಡಳಿತಕ್ಕೆ ಸಂವಿಧಾನಾತ್ಮಕ ಚೌಕಟ್ಟನ್ನು ನೀಡುತ್ತದೆ.

ಆದರೆ ಹಾಸನ ಜಿಲ್ಲೆಯಲ್ಲಿ  ಜಿಲ್ಲಾ ಧಾರ್ಮಿಕ ಪರಿಷತ್ತು ಅಸ್ತಿತ್ವದಲ್ಲಿಲ್ಲದ ಕಾರಣ, ಇಂದು ದೇವಸ್ಥಾನದ ಪ್ರತಿಯೊಂದು ಸಣ್ಣ ಕೆಲಸದ ಜವಾಬ್ದಾರಿಯನ್ನೂ ತಹಶೀಲ್ದಾರ್ ಅಥವಾ ಕಂದಾಯ ಇಲಾಖೆಯ ಮೇಲೆ ಹೇರಲಾಗಿದೆ. ಈಗಾಗಲೇ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಮುಂಬರುವ ಚುನಾವಣಾ ಸಿದ್ಧತೆ ಮತ್ತು ಜನಸಾಮಾನ್ಯರ ಆಡಳಿತಾತ್ಮಕ ಕೆಲಸಗಳಲ್ಲಿ ಮುಳುಗಿರುವ ಕಂದಾಯ ಅಧಿಕಾರಿಗಳಿಗೆ, ದೇವಸ್ಥಾನದ ವ್ಯವಸ್ಥೆಗಳನ್ನು ನೋಡುವುದು ‘ಹೆಚ್ಚುವರಿ ಹೊರೆ’ಯಾಗಿ ಪರಿಣಮಿಸಿದೆ. ಅಧಿಕಾರಿಗಳು ಕೇವಲ ರಥೋತ್ಸವಗಳನ್ನು ಮಾಡುವುದರಲ್ಲೇ ಕಾಲ ಕಳೆದರೆ, ಕಚೇರಿಗೆ ಬರುವ ಸಾರ್ವಜನಿಕರ ಕೆಲಸಗಳನ್ನು ಮಾಡುವುದು ಯಾವಾಗ ಎಂಬ ಬಲವಾದ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವಿಪರ್ಯಾಸವೆಂದರೆ, ಜಿಲ್ಲೆಯ ದೇವಾಲಯಗಳಲ್ಲಿ ಭಕ್ತರ ಕಾಣಿಕೆ ಮತ್ತು ಸರ್ಕಾರದ ಅನುದಾನ ಲಭ್ಯವಿದ್ದರೂ ಅವು ಸದ್ಬಳಕೆಯಾಗುತ್ತಿಲ್ಲ. ತಾಂತ್ರಿಕ ಅನುಮೋದನೆ ನೀಡಲು ಅಧಿಕೃತ ಪರಿಷತ್ತು ಇಲ್ಲದ ಕಾರಣ ದೇವಾಲಯಗಳ ಗೋಪುರ ಹಾಗೂ ಪ್ರಾಕಾರಗಳ ಜೀರ್ಣೋದ್ಧಾರ ಕಾರ್ಯಗಳು ಸ್ಥಗಿತಗೊಂಡಿವೆ. ಜಿಲ್ಲಾಡಳಿತ ಕೇವಲ ‘ಉತ್ಸವ ನಿರ್ವಾಹಕ’ನ ಪಾತ್ರಕ್ಕೆ ಸೀಮಿತವಾಗದೆ, ರಾಜ್ಯ ಸರ್ಕಾರ ಹಾಸನ ಜಿಲ್ಲೆಯಲ್ಲಿ ತಕ್ಷಣವೇ ಪರಿಷತ್ತನ್ನು ರಚಿಸಿ ವ್ಯವಸ್ಥಿತ ಆಡಳಿತಕ್ಕೆ ನಾಂದಿ ಹಾಡಬೇಕಿದೆ.

ಹಳ್ಳಿರಾಜಕಾರಣದ  ಭೀತಿ..

ಇನ್ನೇನು ಸ್ಥಳೀಯ ಸಂಸ್ಥೆ ಚುನಾವಣೆಗಳು ಹೊಸ್ತಿಲಲ್ಲಿವೆ. ಸಾಮಾನ್ಯವಾಗಿ ಗ್ರಾಮ ಮಟ್ಟದ ಚುನಾವಣೆಗಳಲ್ಲಿ ದೇವಸ್ಥಾನದ ರಥೋತ್ಸವಗಳು ಮತ್ತು ಜಾತ್ರೆಗಳು ಕೇವಲ ಧಾರ್ಮಿಕ ಆಚರಣೆಗಳಾಗಿ ಉಳಿಯದೆ, ಅಭ್ಯರ್ಥಿಗಳ ಶಕ್ತಿ ಪ್ರದರ್ಶನದ ವೇದಿಕೆಗಳಾಗಿ ಮಾರ್ಪಡುತ್ತವೆ. ಅಧಿಕೃತ ವ್ಯವಸ್ಥಾಪನಾ ಸಮಿತಿಗಳು ಇಲ್ಲದಿರುವಾಗ, ಸ್ಥಳೀಯ ಪ್ರಭಾವಿ ನಾಯಕರು ಅಥವಾ ಚುನಾವಣಾ ಆಕಾಂಕ್ಷಿಗಳು ದೇವಸ್ಥಾನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಆರಂಭಿಸುತ್ತಾರೆ. ಅಧಿಕೃತ ಪರಿಷತ್ತು ಇದ್ದಾಗ ರಥೋತ್ಸವದ ಪ್ರತಿಯೊಂದು ಹಂತವೂ ಗೆಜೆಟ್ ನಿಯಮಗಳ ಅನ್ವಯ ಪಾರದರ್ಶಕವಾಗಿ ನಡೆಯುತ್ತದೆ. ಯಾರಿಗೆ ಯಾವ ಗೌರವ ನೀಡಬೇಕು, ಉತ್ಸವದ ಖರ್ಚು-ವೆಚ್ಚಗಳು ಹೇಗಿರಬೇಕು ಎಂಬ ಬಗ್ಗೆ ಕಾನೂನಾತ್ಮಕ ಚೌಕಟ್ಟು ಇರುತ್ತದೆ. ಆದರೆ ಈಗ ಸಮಿತಿ ಇಲ್ಲದ ಕಾರಣ, ರಥೋತ್ಸವದ ನೇತೃತ್ವ ಯಾರು ವಹಿಸಬೇಕು ಎಂಬ ವಿಷಯದಲ್ಲಿ ಗುಂಪುಗಾರಿಕೆ ಮತ್ತು ಜಿದ್ದಾಜಿದ್ದಿ ಶುರುವಾಗಿದೆ.

ಒಂದು ಗುಂಪು ಉತ್ಸವ ನಡೆಸಲು ಮುಂದಾದರೆ, ಮತ್ತೊಂದು ರಾಜಕೀಯ ಬಣ ಅದನ್ನು ವಿರೋಧಿಸುವ ಅಥವಾ ತನ್ನ ಪ್ರಭಾವ ಬೀರಲು ಪ್ರಯತ್ನಿಸುವ ಸಾಧ್ಯತೆ ದಟ್ಟವಾಗಿದೆ. ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡರು  ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಶಾಂತಿ ಮತ್ತು ಭಕ್ತಿಯ ಕೇಂದ್ರವಾಗಬೇಕಾದ ದೇವಸ್ಥಾನಗಳು ರಾಜಕೀಯ ಜಿದ್ದಾಜಿದ್ದಿನ ಕಣಗಳಾಗಿ ಮಾರ್ಪಟ್ಟು, ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಸೃಷ್ಟಿಸುವ ಸಾದ್ಯತೆಯಿದೆ.

ನಾಯಕರ ಪ್ರತಿಷ್ಠೆ: ರಾಜಕೀಯ ಲಾಬಿಗೆ ಭಕ್ತರ ನಂಬಿಕೆ ಬಲಿ?

ಹಾಸನ ಜಿಲ್ಲಾ ಧಾರ್ಮಿಕ ಪರಿಷತ್ತು ರಚನೆಯ ವಿಳಂಬದ ಹಿಂದೆ ಪ್ರಭಾವಿ ರಾಜಕೀಯ ನಾಯಕರ ಪ್ರತಿಷ್ಠೆಯ ಸಂಘರ್ಷ ಎದ್ದುಕಾಣುತ್ತಿದೆ. ಸ್ಥಳೀಯ ಮುಖಂಡರ  ನಡುವಿನ ಶೀತಲ ಸಮರವು ನೇಮಕಾತಿ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಪರಿಷತ್ತಿನ ಒಂಬತ್ತು ಸದಸ್ಯ ಸ್ಥಾನಗಳಿಗಾಗಿ ಬೆಂಬಲಿಗರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ರಾಜಕೀಯ ಲಾಬಿಯಿಂದಾಗಿ ನೇಮಕಾತಿ ಕಡತವು ಅತ್ತ ಜಿಲ್ಲಾಡಳಿತದ ಮಟ್ಟದಲ್ಲಿಯೂ ಇಲ್ಲದೆ, ಇತ್ತ ಸರ್ಕಾರದ ಮಟ್ಟದಲ್ಲಿಯೂ ಇತ್ಯರ್ಥವಾಗದೆ ಅತಂತ್ರವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕಿದ್ದರೂ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಬಿ. ಶಿವರಾಂ ನಡುವಿನ ಪೈಪೋಟಿ ನೇಮಕಾತಿಗೆ ತಡೆಯೊಡ್ಡಿದೆ ಎನ್ನಲಾಗುತ್ತಿದೆ.

  • ರಾಜಕೀಯ ಜಿದ್ದಾಜಿದ್ದಿನಿಂದ ಧಾರ್ಮಿಕ ಪರಿಷತ್ತು ನೇಮಕಾತಿ ಅತಂತ್ರ
  • ಸ್ಥಾನಮಾನಕ್ಕಾಗಿ ಮುಖಂಡರ ಬೆಂಬಲಿಗರ ನಡುವೆ ತೀವ್ರ ಪೈಪೋಟಿ
  • 30 ತಿಂಗಳ ಆಡಳಿತಾತ್ಮಕ ಮೌನಕ್ಕೆ ಭಕ್ತರ ಆಕ್ರೋಶ
  • ಸಮಿತಿ ಇಲ್ಲದೆ ದೇಗುಲದ ಕೋಟ್ಯಂತರ ಆಸ್ತಿ ಅಸುರಕ್ಷಿತ
  • ಪ್ರತಿಷ್ಠೆ ಬದಿಗಿಟ್ಟು ತಕ್ಷಣವೇ ಪರಿಷತ್ತು ರಚಿಸಲು ಬೇಡಿಕೆ

Contact us for classifieds and ads : +91 9742974234