
ಮೈಸೂರು : ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಪ್ರಭಾವಿ ರಾಜಕೀಯ ಮುಖಂಡರೊಬ್ಬರು ಜಮೀನು ತಮ್ಮ ಹೆಸರಿಗೆ ಬರೆದುಕೊಡಲು ಒತ್ತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಗ್ರಾಮದ ನಿವಾಸಿ ಶಂಕರೇಗೌಡ ಹಾಗೂ ಅವರ ಕುಟುಂಬದವರು ಸುದ್ದಿಗಾರರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ನಗರದಲ್ಲಿ ಮಾತನಾಡಿದ ಶಂಕರೇಗೌಡ ಅವರು, “ಗ್ರಾಮದ ಪ್ರಮುಖ ಹೆದ್ದಾರಿಯಲ್ಲಿರುವ ಸುಮಾರು 8 ಗುಂಟೆ ಬೆಲೆಬಾಳುವ ಜಮೀನು ನಮ್ಮ ಹೆಸರಲ್ಲಿ ಇದೆ. ಈ ಜಮೀನನ್ನು ತಮ್ಮ ಹೆಸರಿಗೆ ಬರೆದುಕೊಡಬೇಕು ಎಂದು ಗ್ರಾಮದ ಪ್ರಭಾವಿ ಮುಖಂಡ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ನಾವು ಇದಕ್ಕೆ ಒಪ್ಪದಿದ್ದಾಗ ಕಿರುಕುಳ ಹೆಚ್ಚಾಗಿದೆ” ಎಂದು ಆರೋಪಿಸಿದರು.
ಈ ವಿಷಯದಲ್ಲಿ ಸ್ಥಳೀಯ ಬೆಟ್ಟದಪುರ ಪೊಲೀಸ್ ಠಾಣೆಯ ಕೆಲ ಅಧಿಕಾರಿಗಳು ಕೂಡಾ ಮುಖಂಡರ ಪರವಾಗಿ ನಿಂತಿದ್ದಾರೆ ಎಂದು ಅವರು ದೂರಿದರು. “ನಾವು ನ್ಯಾಯಾಲಯದ ಮೊರೆ ಹೋಗಿದ್ದರೂ, ಪೊಲೀಸರು ಮಧ್ಯಪ್ರವೇಶಿಸಿ ಜಮೀನು ಬರೆದುಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಪದೇ ಪದೇ ಮನೆಗೆ ಬಂದು ಠಾಣೆಗೆ ಕರೆದೊಯ್ದು ಗಂಟೆಗಟ್ಟಲೆ ಕುಳ್ಳಿರಿಸುತ್ತಿದ್ದಾರೆ” ಎಂದು ಹೇಳಿದರು.

ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೂ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ, ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ತಮಗೆ ರಕ್ಷಣೆ ಒದಗಿಸಬೇಕು ಹಾಗೂ ನ್ಯಾಯ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕುಟುಂಬದವರಾದ ಗನ್ನಮ್ಮ, ಸಂತೋಷ್ ಕುಮಾರ್, ಮೈಲಾರಿ ಹಾಗೂ ಶಿವು ಉಪಸ್ಥಿತರಿದ್ದರು.
ಘಟನೆ ಸಂಬಂಧ ಇನ್ನೂ ಅಧಿಕೃತ ಪ್ರತಿಕ್ರಿಯೆ ಹೊರಬರಬೇಕಿದ್ದು, ಪೊಲೀಸ್ ಇಲಾಖೆಯ ತನಿಖೆಯ ನಂತರವೇ ನಿಜಾಸತ್ಯತೆ ಬಹಿರಂಗವಾಗಬೇಕಿದೆ.
