Latest News

ಚೇನಂಡ ಹಾಕಿ ಉತ್ಸವಕ್ಕೆ ಆಗಮಿಸಲು ಮನ್ಸುಖ್‌ ಮಾಂಡವಿಯಾಗೆ ಯದುವೀರ್‌ ಆಹ್ವಾನ

ಕೇಂದ್ರ ಸಚಿವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಸಂಸದರ ನೇತೃತ್ವದ ಕೊಡಗು ತಂಡ

ಮೈಸೂರು, ಫೆ. 9: ಕರ್ನಾಟಕದಲ್ಲಿ ಹಾಕಿ ತವರೂರು ಆಗಿರುವ ಕೊಡಗಿನಲ್ಲಿ ಮತ್ತೊಮ್ಮೆ ಹಾಕಿ ಉತ್ಸವ ಆಯೋಜನೆಯಾಗುತ್ತಿದ್ದು, ಈ ಬಾರಿ ಅತ್ಯಂತ ಅದ್ದೂರಿಯಾಗಿ ನಡೆಸಲು ಎಲ್ಲ ತಯಾರಿ ನಡೆಸಲಾಗಿದೆ. ಈ ಬಾರಿ ಕೇಂದ್ರ ಕ್ರೀಡಾ ಸಚಿವರಾದ ಮನ್ಸುಖ್‌ ಮಾಂಡವಿಯಾ ಅವರಿಗೂ ಆಹ್ವಾನ ನೀಡಲಾಗಿದ್ದು, ಅವರು ಆಗಮಿಸುವ ಭರವಸೆ ನೀಡಿದ್ದಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಕೊಡಗಿನಲ್ಲಿ ಈ ಬಾರಿ ಚೇನಂಡ ಹಾಕಿ ಉತ್ಸವ ನಡೆಯಲಿದೆ. ಪಂದ್ಯಾವಳಿಯ ಆಯೋಜಕ ಸಮಿತಿಯ ಪದಾಧಿಕಾರಿಗಳು ಸಂಸದ ಯದುವೀರ್‌ ಒಡೆಯರ್‌ ನೇತೃತ್ವದಲ್ಲಿ ಕ್ರೀಡಾ ಸಚಿವರನ್ನು ಭೇಟಿ ಮಾಡಿ ಹಾಕಿ ಉತ್ಸವದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲು ಆಹ್ವಾನ ನೀಡಿದರು.

ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಸಂಸದ ಯದುವೀರ್‌ ಒಡೆಯರ್‌, ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅದ್ದೂರಿಯಾಗಿ ಚೇನಂಡ ಹಾಕಿ ಉತ್ಸವ ಆಯೋಜಿಸಲು ತಯಾರಿ ನಡೆಸಲಾಗಿದೆ. ಇದಕ್ಕಾಗಿ ಎಲ್ಲ ಕ್ರಮಗಳು ನಿರಂತರವಾಗಿ ನಡೆಯುತ್ತಿದೆ ಎಂದರು.

ಈ ಬಾರಿಯ ಹಾಕಿ ಉತ್ಸವಕ್ಕೆ ಕ್ರೀಡಾ ಸಚಿವ ಮನ್ಸುಖ್‌ ಮಾಂಡವಿಯಾ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದೇವೆ ಎಂದು ತಿಳಿಸಿದರು.

ಕೊಡಗಿನ ಹಾಕಿ ಇತಿಹಾಸ ಬಗ್ಗೆ ಮಾಹಿತಿ ಪಡೆದ ಸಚಿವರು
ಆಹ್ವಾನ ಸ್ವೀಕರಿಸಿದ ಸಚಿವರು, ಕೊಡಗಿನ ಹಾಕಿ ಇತಿಹಾಸದ ಬಗ್ಗೆ ಹಾಗೂ ಇಲ್ಲಿ ನಡೆಯುವ ಐತಿಹಾಸಿಕ ಹಾಕಿ ಉತ್ಸವದ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಹಾಕಿ ಉತ್ಸವಕ್ಕೆ ಆಗಮಿಸಲು ಒಪ್ಪಿಗೆ ಸೂಚಿಸಿದರು ಎಂದು ಯದುವೀರ್‌ ಒಡೆಯರ್‌ ಹೇಳಿದರು.

ಚೇನಂಡ ಹಾಕಿ ಉತ್ಸವದ ಆಯೋಜನಾ ಸಮಿತಿಯ ಸದಸ್ಯರು ಸಾಂಪ್ರದಾಯಿಕ ಕೊಡಗು ಶೈಲಿಯ ಉಡುಪು ಧರಿಸಿಯೇ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು ವಿಶೇಷವಾಗಿತ್ತು.

ಸಂಸದರಿಗೆ ಧನ್ಯವಾದ ತಿಳಿಸಿದರು ಆಯೋಜಕರು
ಚೇನಂಡ ಹಾಕಿ ಉತ್ಸವಕ್ಕೆ ಕೇಂದ್ರ ಕ್ರೀಡಾ ಸಚಿವರನ್ನು ಆಹ್ವಾನಿಸಲು ನವದೆಹಲಿಯಲ್ಲಿ ವಿಶೇಷ ವ್ಯವಸ್ಥೆ ಮಾಡಿಸಿದ ಮೈಸೂರು-ಕೊಡಗು ಸಂಸದರಾದ ಯದುವೀರ್‌ ಒಡೆಯರ್‌ ಅವರ ನೆರವು ಸ್ಮರಣೀಯ. ಇಡೀ ಹಾಕಿ ಉತ್ಸವವನ್ನು ಅತ್ಯುತ್ತಮವಾಗಿ ಆಯೋಜಿಸಲು ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ ಎಂದು ಆಯೋಜಕರು ಧನ್ಯವಾದ ತಿಳಿಸಿದ್ದಾರೆ.

Contact us for classifieds and ads : +91 9742974234