Latest News

ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಬಲವರ್ಧನೆಗೆ ದಾರಿ: ಎಸ್. ಅರುಣ್ ಕುಮಾರ್

ಮೈಸೂರು, ಮಾ.09:- ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಲು ಸಹಕಾರಿಯಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಎಸ್. ಅರುಣ್ ಕುಮಾರ್ ಹೇಳಿದರು.

ಮೈಸೂರು ತಾಲ್ಲೂಕಿನ ಇಲವಾಲ ಗ್ರಾಮದ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಪ್ರಯೋಜನ ಇಂದು ಸಮಾಜದ ಬಡ ವರ್ಗ ಮತ್ತು ಮಹಿಳೆಯರಿಗೆ ತಲುಪುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರು ಗೃಹಲಕ್ಷ್ಮೀ ಸೇರಿದಂತೆ ಹಲವು ಯೋಜನೆಗಳ ಮೂಲಕ ಸ್ವಂತ ಆರ್ಥಿಕ ಭದ್ರತೆ ಪಡೆಯುತ್ತಿದ್ದಾರೆ. ಇದರ ಪರಿಣಾಮವಾಗಿ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮತ್ತಷ್ಟು ಬಲವಾಗಿದೆ ಎಂದು ಅವರು ಹೇಳಿದರು.


ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಂ.ಬಿ. ಸವಿತಾ ಮಾತನಾಡಿ, ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಸಮಾಜದಲ್ಲಿ ತಮ್ಮ ಹಕ್ಕುಗಳನ್ನು ಸಾಧಿಸಬೇಕೆಂದು ತಿಳಿಸಿದರು. ಇಂದಿನ ದಿನಗಳಲ್ಲಿ ಶಿಕ್ಷಣ, ಉದ್ಯೋಗ, ಆಡಳಿತ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಆತ್ಮವಿಶ್ವಾಸದಿಂದ ಬದುಕುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಅಧ್ಯಕ್ಷ ಗುರುಸ್ವಾಮಿ ಅವರು ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಸಾಮಾನ್ಯ ಕುಟುಂಬಗಳ ಬದುಕಿಗೆ ನೆಮ್ಮದಿ ತಂದಿವೆ. ಮಹಿಳೆಯರಿಗೆ ಆರ್ಥಿಕ ಸಹಾಯ ದೊರೆತ ಪರಿಣಾಮ ಹಲವಾರು ಕುಟುಂಬಗಳು ಸ್ವಾವಲಂಬನೆಯತ್ತ ಹೆಜ್ಜೆ ಹಾಕಿವೆ ಎಂದು ಹೇಳಿದರು.

ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿ. ಕೃಷ್ಣ ಮಾತನಾಡಿ, ಮಹಿಳೆಯರು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಶಕ್ತಿಯಾಗಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯರು ಯಾವುದೇ ಹೀನಭಾವಕ್ಕೆ ಒಳಗಾಗದೆ ತಮ್ಮಲ್ಲಿರುವ ಸಾಮರ್ಥ್ಯವನ್ನು ಬಳಸಿಕೊಂಡು ಮುಂದುವರೆಯಬೇಕು. ಶಿಕ್ಷಣ, ಉದ್ಯೋಗ ಹಾಗೂ ಸ್ವಾವಲಂಬನೆ ಮೂಲಕ ಮಹಿಳೆಯರು ಸಮಾಜದ ರೂಪುರೇಷೆ ಬದಲಿಸುವ ಶಕ್ತಿ ಹೊಂದಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಬಿ. ಕರೀಗೌಡ, ಬಸವಣ್ಣ, ತಾಲ್ಲೂಕು ಸಮಿತಿಯ ಸದಸ್ಯರಾದ ಚನ್ನಪ್ಪ, ಕರೀಗೌಡ, ರಾಣಿ, ನವೀನ್, ಗ್ರಾಮಾಂತರ ಸಿಡಿಪಿಒ ತಿಮ್ಮಯ್ಯ, ಆಹಾರ ಶಿರಸ್ತೆದಾರ್ ಮಹೇಶ್ ಕುಮಾರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಾಣಿ, ಆಹಾರ ನಿರೀಕ್ಷಕ ನಂದಿನಿ, ಇಲವಾಲ ಗ್ರಾಮ ಪಂಚಾಯತ್ ಪಿಡಿಒ ಹೇಮಂತ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸ್ಥಳೀಯ ಮಹಿಳೆಯರು ಉಪಸ್ಥಿತರಿದ್ದರು.

ಇಲವಾಲ ಹೋಬಳಿಯ ಆನಂದೂರು ಗ್ರಾಮದ ರತ್ನಮ್ಮ ಅವರು ತಮ್ಮ ಅನುಭವವನ್ನು ಹಂಚಿಕೊಂಡು, “ಗೃಹಲಕ್ಷ್ಮೀ ಯೋಜನೆಯಡಿ ದೊರೆಯುವ ಹಣವನ್ನು ಬಳಸಿ ನಾನು ಹಸು ಖರೀದಿಸಿದ್ದೇನೆ. ಇದರಿಂದ ನಮ್ಮ ಕುಟುಂಬಕ್ಕೆ ಹೆಚ್ಚುವರಿ ಆದಾಯ ದೊರೆಯುತ್ತಿದೆ. ಜೊತೆಗೆ ಅನ್ನಭಾಗ್ಯ ಯೋಜನೆಯಿಂದ ಆಹಾರದ ಚಿಂತೆ ಕಡಿಮೆಯಾಗಿದೆ. ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣ ಸಾಧ್ಯವಾಗಿದ್ದು ಖರ್ಚು ಕೂಡ ಕಡಿಮೆಯಾಗಿದೆ. ಈ ಗ್ಯಾರಂಟಿ ಯೋಜನೆಗಳು ನಮ್ಮಂತಹ ಬಡ ಕುಟುಂಬಗಳಿಗೆ ದೊಡ್ಡ ನೆರವಾಗಿವೆ,” ಎಂದು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಗ್ರಾಮೀಣ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅರಿವು ಪಡೆದುಕೊಂಡರು.

Contact us for classifieds and ads : +91 9742974234