Latest News

ಗರಳಪುರಿ ಉತ್ಸವ–2026 ಅಂಗವಾಗಿ ನಂಜನಗೂಡಿನಲ್ಲಿ ಯೋಗ ಜಾಗೃತಿ ಕಾರ್ಯಕ್ರಮಕ್ಕೆ ಭರ್ಜರಿ ಚಾಲನೆ

ಮೈಸೂರು:- ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಐತಿಹಾಸಿಕ ಶ್ರೀಕಂಠೇಶ್ವರಸ್ವಾಮಿ ದೇವಾಲಯ ದೊಡ್ಡ ಜಾತ್ರೆ ಮಹೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ “ಗರಳಪುರಿ ಉತ್ಸವ–2026” ಪ್ರಯುಕ್ತ ಯೋಗ ಜಾಗೃತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಪ್ರಪ್ರಥಮ ಬಾರಿಗೆ ಈ ಉತ್ಸವದ ಭಾಗವಾಗಿ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮವು ಸಾರ್ವಜನಿಕರಲ್ಲಿ ವಿಶೇಷ ಗಮನ ಸೆಳೆಯಿತು.

ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಯಾಗಿ ಭಾಗವಹಿಸಿದವರು ಯೋಗಪಟುಗಳೊಂದಿಗೆ ವೇದಿಕೆಯಲ್ಲಿ ಯೋಗಾಭ್ಯಾಸ ನಡೆಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳಗಿನ ತಾಜಾ ಗಾಳಿಯಲ್ಲಿ ನಡೆದ ಈ ಯೋಗ ಶಿಬಿರವು ಒಂದು ರೀತಿಯಲ್ಲಿ ಆರೋಗ್ಯದ ಹಬ್ಬದಂತೇ ಅನಿಸಿತು. ವಿವಿಧ ವಯೋಮಾನದ ಜನರು ಉತ್ಸಾಹದಿಂದ ಭಾಗವಹಿಸಿ, ಯೋಗಾಸನಗಳನ್ನು ಅಭ್ಯಾಸ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಡುವ ಅತ್ಯುತ್ತಮ ಮಾರ್ಗ. ಇದು ನಮ್ಮ ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆ. ಇಂದಿನ ವೇಗದ ಬದುಕಿನಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಆರೋಗ್ಯಕರ ಜೀವನ ನಡೆಸಲು ಯೋಗ ಅತ್ಯಗತ್ಯ” ಎಂದು ತಿಳಿಸಿದರು. ಪ್ರತಿಯೊಬ್ಬರೂ ದಿನನಿತ್ಯದ ಜೀವನದಲ್ಲಿ ಕನಿಷ್ಠ ಕೆಲವು ನಿಮಿಷಗಳಾದರೂ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಲ್ಲನಮೂಲೆ ಸ್ವಾಮೀಜಿ ಆಶೀರ್ವಚನ ನೀಡಿದ್ದು, ಯೋಗದ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದರು. ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ಸಮಾಜದ ಆರೋಗ್ಯ ಸುಧಾರಣೆಗೆ ದಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಂ ಶಂಕರ್, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕಂಠ ನಾಯಕ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಗರ ಸಭಾ ಪೌರಾಯುಕ್ತರಾದ ಬಸವರಾಜ್ ಸಹ ಭಾಗವಹಿಸಿ ಕಾರ್ಯಕ್ರಮದ ವ್ಯವಸ್ಥೆಯನ್ನು ಮೆಚ್ಚಿದರು.

ಇದೇ ವೇಳೆ ಝೆಡ್ ಶ್ರೀಧರ್, ಗಾಯತ್ರಿ ಮೋಹನ್, ಗಣೇಶ್, ಶಿಶಿರೇಖಾ ಸೇರಿದಂತೆ ಅನೇಕ ಗಣ್ಯರು, ಮುಖಂಡರು, ಯೋಗಪಟುಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ಗರಳಪುರಿ ಉತ್ಸವದ ಭಾಗವಾಗಿ ನಡೆದ ಈ ಯೋಗ ಜಾಗೃತಿ ಕಾರ್ಯಕ್ರಮವು ಕೇವಲ ಆರೋಗ್ಯದ ಅರಿವು ಮೂಡಿಸುವುದಷ್ಟೇ ಅಲ್ಲ, ನಂಜನಗೂಡಿನಲ್ಲಿ ಸಂಸ್ಕೃತಿ ಮತ್ತು ಆರೋಗ್ಯದ ಸಂಗಮವಾಗಿ ಗಮನಾರ್ಹವಾಗಿ ಮೂಡಿ ಬಂದಿದೆ.

Contact us for classifieds and ads : +91 9742974234