Latest News

ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಹಿಳೆ ಪುಟ್ಟಸಾವಿತ್ರಿ ಚಿಕಿತ್ಸೆಗೆ ಧನಸಹಾಯ ಕೋರಿ ಮನವಿ

ಹುಣಸೂರು:-  ತಾಲ್ಲೂಕು ಬಿಳಿಕೆರೆ ಹೋಬಳಿ, ಹಳೇಬೀಡು ಗ್ರಾಮ ಪಂಚಾಯ್ತಿಗೆ ಒಳಪಡುವ ಮೈದನಹಳ್ಳಿ ಗ್ರಾಮದ ಪರಿಶಿಷ್ಟ ಆದಿ ಕರ್ನಾಟಕ ಜಾತಿಗೆ ಸೇರಿದ ಕುಮಾರನ ಹೆಂಡತಿ ಪುಟ್ಟಸಾವಿತ್ರಿ (38 ವರ್ಷ) ಎಂಬುವರು ಕಳೆದ 1 ವರ್ಷದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ತುಂಬಾ ತೊಂದರೆಪಡುತ್ತಿದ್ದು, ಈ ಕುಟುಂಬವು ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಈ ನೊಂದ ಕುಟುಂಬಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ಧನಸಹಾಯ ಮಾಡುವಂತೆ ಸಹೃದಯರಲ್ಲಿ ಹುಣಸೂರು ತಾಲ್ಲೂಕು ದಸಂಸ ಮನವಿ ಮಾಡಿಕೊಳ್ಳುತ್ತದೆ.
ಈ ಬಗ್ಗೆ ದಿನಾಂಕ : 30-03-2026 ರ ಸೋಮವಾರ ಹುಣಸೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಕ್ಯಾನ್ಸರ್ ಪೀಡಿತ ಪುಟ್ಟಸಾವಿತ್ರಿ ಇವರ ಕುಟುಂಬದವರನ್ನು ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿ ಇವರನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಉಮೇಶ್ ರವರ ಬಳಿ ಕರೆದುಕೊಂಡು ಹೋಗಿ ಇವರ ಪರಿಸ್ಥಿತಿಯನ್ನು ವೈದ್ಯರಿಗೆ ತಿಳಿಸಲಾಯಿತು.
ವೈದ್ಯಾಧಿಕಾರಿಗಳು ತಪಾಸಣೆ ನಡೆಸಿ ಪುಟ್ಟಸಾವಿತ್ರಿ ರವರಿಗೆ ಕ್ಯಾನ್ಸರ್ ಬಂದಿರುವುದು ದೃಢಪಡಿಸಿ ಈ ರೋಗಕ್ಕೆ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಶಿಫಾರಸ್ಸು ಮಾಡಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ಗೆ ದೃಢೀಕರಿಸಿಕೊಟ್ಟಿದ್ದು, ಇವರಿಗೆ ದಸಂಸ ವು ಅಭಿನಂದಿಸುತ್ತದೆ.
ವೈದ್ಯರ ಶಿಫಾರಸ್ಸಿನ ಮೇರೆಗೆ ಇವರನ್ನು ದಸಂಸ ದ ಸಹಾಯದಿಂದ ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಈ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಪಾಸಣೆ ಮಾಡಿ ಪುಟ್ಟಸಾವಿತ್ರಿ ರವರಿಗೆ ರೇಡಿಯೇಷನ್ ಮಾಡಿಸಲು ಮೊದಲ ಹಂತವಾಗಿ ಸ್ಕ್ಯಾನಿಂಗ್ ಮಾಡಿಸುವಂತೆ ಸೂಚಿಸಿರುತ್ತಾರೆ. ಈ ಸ್ಕ್ಯಾನಿಂಗ್ ಮಾಡಿಸಲು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಅಧಿಕಾರಿಗಳು ರೂ. 23,000/- ಹಣವನ್ನು ಪಾವತಿಸುವಂತೆ ತಿಳಿಸಿರುತ್ತಾರೆ.
ಆಗ ನಾವು ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತವಾಗಿ ಸ್ಕ್ಯಾನಿಂಗ್ ಮಾಡಿಸಿ ಎಂದು ಕೇಳಿದಾಗ ಅವರು ಈ ಯೋಜನೆಯಡಿ ಕೇವಲ ಶಸ್ತ್ರಚಿಕಿತ್ಸೆಗೆ ಮಾತ್ರ ಅನ್ವಯವಾಗಲಿದ್ದು, ಇತರೆ ಪರೀಕ್ಷೆಗಳಿಗೆ ಅನ್ವಯಿಸುವುದಿಲ್ಲ. ಆದ ಕಾರಣ ಮೊದಲು ಸ್ಕ್ಯಾನಿಂಗ್ ಮಾಡಿಸಲು ಹಣ ಕಟ್ಟಲೇಬೇಕೆಂದು ತಿಳಿಸಿರುತ್ತಾರೆ.
ಆದರೆ ಈ ಬಡ ಕುಟುಂಬವು ತೀರಾ ಹಣಕಾಸಿನ ತೊಂದರೆಯಿಂದ ಬಳಲುತ್ತಾ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಈ ಕುಟುಂಬದ ಹತ್ತಿರ ನಯಾ ಪೈಸೆಯೂ ಇರುವುದಿಲ್ಲ. ಪುಟ್ಟಸಾವಿತ್ರಿಯ ಗಂಡನಾದ ಕುಮಾರ ಹೆಂಡತಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಇಬ್ಬರು ಪುಟ್ಟ ಮಕ್ಕಳ ಜೊತೆ ಗೋಳಾಡುತ್ತಾ, ಅಣ್ಣಾ ಹೇಗಾದರೂ ಮಾಡಿ ನನ್ನ ಮಕ್ಕಳು ತಬ್ಬಲಿ ಆಗದಂತೆ ನನ್ನ ಹೆಂಡತಿಗೆ ಚಿಕಿತ್ಸೆ ಕೊಡಿಸಿ ಉಳಿಸಿ ಎಂದು ಅತ್ಯಂತ ದಯನೀಯವಾಗಿ ಕ್ಷೀಣ ಧ್ವನಿಯಲ್ಲಿ ಕೇಳಿಕೊಳ್ಳುತ್ತಿದ್ದ ದೃಶ್ಯವು ನನಗೆ ನೋವಾಗುತ್ತಿತ್ತು. ನಮಗೆ ಯಾರೂ ಇಲ್ಲ ಎನ್ನುವ ಇವರ ನೋವಿನ ಮಾತನ್ನು ಕೇಳಿ ನನ್ನ ಒಳಮನಸ್ಸು ನಾನಿದ್ದೇನೆ ಎಂದು ಕೂಗುತ್ತಾ ಈ ಕುಟುಂಬಕ್ಕೆ ಹೇಗಾದರೂ ಮಾಡಿ ಯಾರಿಂದಲಾದರೂ ಧನಸಹಾಯ ಮಾಡಿಸಿ ಇವರ ಸಂಕಷ್ಟದ ಜೊತೆ ದಸಂಸವು ನಿಂತು ನೆರವಾಗುವಂತೆ ಸಹೃದಯೀ ಹೃದಯವಂತ ಬಂಧುಗಳಲ್ಲಿ ಮನವಿ ಮಾಡಿಕೊಳ್ಳುತ್ತದೆ.

ಸಹಾಯ ಮಾಡಲು ಬಯಸುವವರು ಮೊಬೈಲ್ ಸಂಖ್ಯೆ : 9845680641/ 9845286436 ನ್ನು ಸಂಪರ್ಕಿಸಿ..

 

Contact us for classifieds and ads : +91 9742974234