Latest News

ಕೆಇಆರ್ಸಿ ವತಿಯಿಂದ ಸೆಸ್ಕ್ನ ಟ್ರೂಯಿಂಗ್ ಅಪ್-ಎಪಿಆರ್ ಬಗ್ಗೆ ಸಾರ್ವಜನಿಕ ವಿಚಾರಣೆ

2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ : ಪ್ರಗತಿ ಮತ್ತು ಸಾಧನೆಗಳ ವಿವರಣೆ ನೀಡಿದ ಕೆ.ಎಂ.ಮುನಿಗೋಪಾಲ್ ರಾಜು

ಮೈಸೂರು, ಫೆ.16, 2026: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)ದ 528.12 ಕೋಟಿ ರೂ. ಗಳ ನಿವ್ವಳ ಆದಾಯ ಕೊರತೆ ಸರಿದೂಗಿಸಲು ಸೂಕ್ತ ಆದೇಶ ಹೊರಡಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣದ ಅಧ್ಯಕ್ಷ ಪಿ.ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆರ್ಥಿಕ ವರ್ಷ 2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ ಅರ್ಜಿಯ (ಟ್ರೂಯಿಂಗ್ ಅಪ್-ಎಪಿಆರ್) ಬಗ್ಗೆ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ 2024-25ನೇ ಸಾಲಿನಲ್ಲಿ ಸೆಸ್ಕ್ ವತಿಯಿಂದ ನಡೆಸಲಾಗಿರುವ ಹಲವು ಪ್ರಗತಿ ಕಾರ್ಯಗಳು ಮತ್ತು ಸಾಧನೆಗಳ ಕುರಿತು ಪ್ರಸ್ತಾಪಿಸಲಾಯಿತು.

ಸಭೆಯ ಆರಂಭದಲ್ಲಿ ಮಾತನಾಡಿದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ ರಾಜು ಅವರು, “2024-25ರ ಆರ್ಥಿಕ ವರ್ಷದಲ್ಲಿ ಕೆಇಆರ್ಸಿ ೮೪೨೮.೮೨ ಮಿಲಿಯನ್ ಯೂನಿಟ್ಗೆ ಅನುಮೋದನೆ ನೀಡಿದ್ದರೆ, 8447.42 ಮಿ.ಯೂನಿಟ್ ಬಳಕೆಯಾಗಿ ಶೇ.0.22 ವ್ಯತ್ಯಾಸವಾಗಿದ್ದು, 7591.20 ಕೋಟಿ ರೂ. ಕಂದಾಯ ಸಂಗ್ರಹಣೆಯ ಬದಲಿಗೆ 7173.29 ಕೋಟಿ ರೂ. ಸಂಗ್ರಹವಾಗಿದೆ. ಇದರಿಂದಾಗಿ ಶೇ.5.83ರಷ್ಟು ವ್ಯತ್ಯಾಸವಾಗಿದೆ. ವಿದ್ಯುತ್ ಮಾರಾಟ, ಆದಾಯ, ವೆಚ್ಚವನ್ನು ಪರಿಗಣಿಸಿದರೆ 528.12 ಕೋಟಿ ರೂ. ಕೊರತೆ ಆಗಲಿದ್ದು, ಇದನ್ನು ಸರಿದೂಗಿಸಲು ಅವಕಾಶ ನೀಡುವಂತೆ” ಮನವಿ ಮಾಡಿದರು.

ಅನುಮೋದಿತ ಯೋಜನೆಗಳು:

“ಕಳೆದ ವರ್ಷದಲ್ಲಿ ಕಂದಾಯ ವಸೂಲಿ ಮತ್ತು ಇತರೆಗಳಿಂದ 200 ಕೋಟಿ ರೂ. ಗಳನ್ನು ವಸೂಲಾತಿ,ಉಳಿತಾಯ  ಮಾಡಲಾಗಿದ್ದು, 11 ಕೆವಿ ಮಾರ್ಗಗಳ 705 ಸಮರ್ಪಕ ನಿರ್ವಹಣಾ ಮಾಡಲಾಗಿದ್ದು, ಇದರಿಂದಾಗಿ ಅಡಚಣೆಗಳು, ಅಪಘಾತಗಳನ್ನು ಕಡಿಮೆಗೊಳಿಸಲಾಗಿದೆ. ಸೆಸ್ಕ್ ವ್ಯಾಪ್ತಿಯಲ್ಲಿ 20 ಸಾವಿರ ಪರಿವರ್ತಕಗಳ ಸಮರ್ಪಕ ನಿರ್ವಹಣೆ, ವಿದ್ಯುತ್ ನಷ್ಟವನ್ನು ಕಡಿತಗಳಿಸಲು ಅಭಿಯಾನ ನಡೆಸಿದ ಪರಿಣಾಮ 9.38ನಿಂದ 8.76ಗೆ ಕಡಿಮೆಯಾಗಿದ್ದು, 40,461 ಅಪಾಯಕಾರಿ ವಿದ್ಯುತ್ ವ್ಯವಸ್ಥೆ ಸರಿಪಡಿಸುವ ಕೆಲಸ ಮಾಡಲಾಗಿದೆ” ಎಂದು ವಿವರಣೆ ನೀಡಿದರು.

ವಿವಿಧ ಯೋಜನೆಗಳ ಪ್ರಗತಿ:

ಅಲ್ಲದೇ, “ಕುಸುಮ್-ಸಿ ಯೋಜನೆಯಡಿ 950 ಮೆಗಾವ್ಯಾಟ್ನಷ್ಟು ಫೀಡರ್ ಸೋಲಾರ್ ಸ್ಟೇಷನ್ ವ್ಯವಸ್ಥೆ ಅಳವಡಿಸಲು ಕ್ರಮ, ಕುಸುಮ್-ಬಿ ಯೋಜನೆಯಡಿ 6 ಸಾವಿರ ರೈತರ ನೀರಾವರಿ ಪಂಪ್ಸೆಟ್ಗಳಿಗೆ ರಿಯಾಯಿತಿಯಡಿ ಸೋಲಾರ್ ಪಂಪ್ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಪಿಎಂ ಜನ್ಮನ್ ಯೋಜನೆಯಡಿ 5467 ಜೇನುಕುರುಬ, ಗಿರಿಜನ, ಆದಿವಾಸಿ ಹಾಗೂ ಬುಡಕಟ್ಟು ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮವಹಿಸಲಾಗಿದೆ. ಜತೆಗೆ ಕಳೆದ ವರ್ಷ 11 ಕೆವಿ ಮಾರ್ಗಗಳನ್ನು 66 ಕೆವಿ ವಿತರಣಾ ಕೇಂದ್ರಗಳನ್ನಾಗಿ ಮೇಲ್ದರ್ಜೇಗೇರಿಸಲಾಗಿದೆ. ಇದಲ್ಲದೇ 150ಕ್ಕೂ ಹೆಚ್ಚು ಹೊಸ ಮಾರ್ಗಗಳ ಅಳವಡಿಕೆ, ಪಿಎಂ ಸೂರ್ಯಘರ್ ಯೋಜನೆಯಡಿ 5337 ಗ್ರಾಹಕರಿಂದ 91.2 ಮೆಗಾವ್ಯಾಟ್ನಷ್ಟು ಸೋಲಾರ್ ರೂಪ್ ಟಾಪ್ ಅಳವಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಇದನ್ನೂ ಓದಿ:- ನಿಖಿಲ್ ಕುಮಾರಸ್ವಾಮಿ ಫೆ.18ರಿಂದ ಮೈಸೂರಿನಲ್ಲಿ ‘ಜನರೊಂದಿಗೆ ಜನತಾ ದಳ ಅಭಿಯಾನ ಆರಂಭ

ಸಭೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯರಾದ ಎಚ್.ಕೆ. ಜಗದೀಶ್ ಹಾಗೂ ಸೆಸ್ಕ್ನ ಪ್ರಮುಖ ಅಧಿಕಾರಿಗಳು ಇದ್ದರು.

ಗ್ರಾಹಕರಿಗೆ ಉತ್ತಮಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಸೆಸ್ಕ್ ಸದಾ ಸನ್ನದ್ಧವಾಗಿದೆ. ಇದಕ್ಕಾಗಿ ವಿದ್ಯುತ್ ಜಾಲವನ್ನು ಸದೃಢಪಡಿಸಲು ಅನುವಾಗುವಂತೆ ಅಭಿಯಾನ, ವಿದ್ಯುತ್ ಮಾರ್ಗಗಳ ನಿರ್ವಹಣೆ, ವಿತರಣಾ ಪರಿವರ್ತಕಗಳ ನಿರ್ವಹಣೆ, ಮೈಸೂರು ನಗರಕ್ಕೆ ಭೂಗತ ಕೇಬಲ್ ಅಳವಡಿಕೆ ಹಾಗೂ ಅಪಾಯಕಾರಿ ಸ್ಥಳಗಳ ನ್ಯೂನತೆ ಸರಿಪಡಿಸುವಲ್ಲಿ ಕ್ರಮವಹಿಸಲಾಗುತ್ತಿದೆ.

–              ಕೆ.ಎಂ. ಮುನಿಗೋಪಾಲ ರಾಜು,

 

ವ್ಯವಸ್ಥಾಪಕ ನಿರ್ದೇಶಕರು, ಚಾವಿಸನಿನಿ. ಸಭೆಯಲ್ಲಿ ದರ ಏರಿಕೆ ಪ್ರಸ್ತಾಪವಿಲ್ಲ:

ಪ್ರತಿವರ್ಷ ವಿದ್ಯುತ್ ದರ ಹೆಚ್ಚಳಕ್ಕೆ ಅನುಮತಿ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಮೂರು ವರ್ಷಕ್ಕೊಮ್ಮೆ ವಿದ್ಯುತ್ ದರ ಏರಿಕೆ ಮಾಡಲಾಗುತ್ತಿದೆ. ಆದ್ದರಿಂದ ಇದು ದರ ಏರಿಕೆಗೆ ಸಂಬಂಧಿಸಿದ ಸಭೆಯಲ್ಲ. ಕಾರ್ಯನಿರ್ವಹಣಾ ಪರಿಶೀಲನಾ ಅರ್ಜಿ ಕುರಿತು ಸಾರ್ವಜನಿಕ ವಿಚಾರಣೆ ನಡೆಯಲಿದೆ. ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳು 2026-27ನೇ ಸಾಲಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ದರ ಹೆಚ್ಚಳಕ್ಕೆ ಮನವಿ ಮಾಡಿವೆ. ಈ ಬಗ್ಗೆ ಫೆ.25ರಂದು ನಡೆಯಲಿದ್ದು, ಸರ್ಕಾರ ದರ ಏರಿಕೆಗೆ ಅನುಮತಿ ಕೊಡಬಹುದು ಅಥವಾ ಕೊಡದೆ ಇರಬಹುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರಾದ ಪಿ. ರವಿಕುಮಾರ್ ಅವರು ಸಭೆಯ ಆರಂಭದಲ್ಲೇ ತಿಳಿಸಿದರು.

ಹಲವರಿಂದ ಸಮಸ್ಯೆಗಳ ಪ್ರಸ್ತಾಪ

ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಪಾಲ್ಗೊಂಡಿದ್ದ ಕೈಗಾರಿಕಾ ಸಂಘದ ಅಧ್ಯಕ್ಷರು, ರೈತ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೆಸ್ಕ್ಗೆ ಸಂಬಂಧಿಸಿದ ತಮ್ಮ ದೂರುಗಳನ್ನು ಕೆಇಆರ್ಸಿ ಅಧ್ಯಕ್ಷರ ಮುಂದಿಟ್ಟರು. ಕರ್ನಾಟಕ ರಾಷ್ಟ್ರ ಪಕ್ಷದ ಮುಖಂಡ ನಾಗರಾಜು, ಮೈಸೂರು ಸಣ್ಣ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಸುರೇಶ್ ಕುಮಾರ್ ಜೈನ್, ಹಿರಿಯರಾದ ಅಶ್ವಥ್ ನಾರಾಯಣ ಸೇರಿದಂತೆ ಹಲವರು ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ಪ್ರಾಸ್ತಾಪಿಸಿದರು.

ಇದನ್ನೂ ಓದಿ:- ಗೊಲ್ಲರ ಬೀದಿಯಲ್ಲಿ ಕಿಡಿಗೇಡಿಗಳ ಕೃತ್ಯ: ರಾಗಿ ಹುಲ್ಲಿನ ಮೇದೆಗೆ ಬೆಂಕಿ, ಸಾವಿರಾರು ರೂ. ಮೇವು ಭಸ್ಮ

Contact us for classifieds and ads : +91 9742974234