Latest News

ಕಪ್ಪಡಿ ಜಾತ್ರೆಯಲ್ಲಿ ಕೃಷಿ ಮೇಳ ಉದ್ಘಾಟನೆ: ಕೆ.ಆರ್.ನಗರಕ್ಕೆ ದೇಶಮಟ್ಟದ ಹೆಸರು ತರೋಣ ಎಂದ ಸಿದ್ದಲಿಂಗರಾಜೇ ಅರಸ್

ವರದಿ:-ವಡ್ಡರಕೊಪ್ಪಲುಶಿವರಾಮು.

ಕೆ.ಆರ್.ನಗರ. ಮಾ. 07:- ಮಠದ ಅಭಿವೃದ್ಧಿಯ ಜೊತೆಗೆ ಮಠಕ್ಕೆ ಬರುವ ಭಕ್ತರ ಹಿತ ಮತ್ತು ಕ್ಷೇಮವನ್ನ ಅತ್ಯಂತ ಕಾಳಜಿಯಿಂದ ನಮ್ಮ ಮಟ್ಟದ ಭಕ್ತರು ನೋಡಿಕೊಳ್ಳಲಿದ್ದಾರೆ ಎಂದು ಮಂಟೇಸ್ವಾಮಿ‌ಮಠದ ಎಂ.ಎಲ್.ವರ್ಚಸ್ವಿ ಸಿದ್ದಲಿಂಗರಾಜೇ ಅರಸ್ ಹೇಳಿದರು.

ತಾಲೂಕಿನ ಕಪ್ಪಡಿಯಲ್ಲಿ ನಡೆಯುತ್ತಿರುವ ವಾರ್ಷಿಕ‌ ಜಾತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಮೇಳ ಮತ್ತು ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ಈ ಕೆಲಸ ಇಲ್ಲಿಂದಲ್ಲೇ ಆರಂಭವಾಗಿ ಭತ್ತದ ನಾಡು ಎಂದು ಹೆಸರಾಗಿರುವ ಕೆ.ಆರ್.ನಗರ ದೇಶದಲ್ಲಯೇ ಹೆಸರುವಾಸಿಯಾಗಲಿ ಎಂದರು.

ರೈತರು ಹೆಚ್ಚಾಗಿ ಸಾವಯುವ ಕೃಷಿ‌ ಪದ್ದತಿಯಲ್ಲಿ ಬೇಸಾಯ ಮಾಡುವ ಮೂಲಕ ಉತ್ಪಾದನೆಯನ್ನು ದುಪ್ಪಟ್ಟು ಮಾಡಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಇಂತಹ ಮೇಳಗಳು ವಿಚಾರ ಗೋಷ್ಠಿಗಳಲ್ಲಿ ರೈತರು ಕಡ್ಡಾಯವಾಗಿ ಪಾಲ್ಗೊಂಡು ತಮ್ಮ ಅನುಭವ ಹಂಚಿಕೊಳ್ಳಬೇಕೆಂದರಲ್ಲದೆ ಮಾದರಿ ರೈತರಿಂದ ಮಾರ್ಗದರ್ಶನ ಪಡೆದುಕೊಂಡು ಅವುಗಳನ್ನು ತಮ್ಮ ಕೃಷಿ ಚಟುವಟಿಕೆ ಗಳಲ್ಲಿ ಆಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಭಾಗದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಉತ್ತಮ ಕಾರ್ಯಕ್ರಮದ ರೂಪಿಸುವ ಯೋಜನೆ ಹಮ್ಮಿಕೊಂಡಿರುವ ನಮ್ಮ ಮಠವು‌ ಅನ್ನದಾತನಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದು ಪ್ರತಿಯೊಬ್ಬರು ಸಹಾಯ ಪಡೆದುಕೊಳ್ಳಿ ಎಂದು ನುಡಿದರು.

ನಮ್ಮೆಲ್ಲರಿಗೂ ಭೂಮಿ ಮಾತೃ ಸ್ವರೂಪಿಣಿಯಾಗಿದ್ದು ಹೊಟ್ಟೆಗೆ ಹಾಕಿಕೊಳ್ಳಲು ಸಾಧ್ಯವಾಗದ ವಸ್ತುಗಳನ್ನು ಭೂತಾಯಿಯ ಒಡಲಿಗೆ ಹಾಕಿ‌ ಕಲುಷಿತ ಮಾಡಬೇಡಿ ಎಂದು ಸಲಹೆ ನೀಡಿದ ಅವರು ಭವಿಷ್ಯದಲ್ಲಿ ರೈತರೆಲ್ಲ ರಾಸಾಯನಿಕ‌ ಗೊಬ್ಬರ‌ ಮತ್ತು ವಿಷಯುಕ್ತ ಔಷಧಿ ಸಿಂಪಡಿಸುವುದನ್ನು ಬಿಟ್ಟು ನೈಸರ್ಗಿಕ ಕೃಷಿಯತ್ತ ಒಲವು ತೋರಬೇಕೆಂದು ಮಾರ್ಗದರ್ಶನ ನೀಡಿದರು.

ಮುಂದಿನ ವರ್ಷದಿಂದ ರೈತಾಪಿ ವರ್ಗದ ಜನರಿಗೆ ಇನ್ನು ಹೆಚ್ಚಿನ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪರಿಸರ ಸಂರಕ್ಷಣೆ ಜತೆಗೆ ತಿಂಗಳ ಕಾಲ ಕೃಷಿ ಮೇಳ ವಿಚಾರ ಗೋಷ್ಠಿ ಸಂವಾದ ಸಭೆಗಳನ್ನು ನಡೆಸಲು ನಿರ್ಧಾರ ಮಾಡಿದ್ದು ಇದಕ್ಕೆ ಎಲ್ಲರೂ ಬೆಂಬಲ ನೀಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ರೇಷ್ಮೆ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಮತ್ತು ಪ್ರಗತಿ ಪರ ರೈತರಾದ ಹಂಪಾಪುರ ಸ್ವರೂಪರಾಣಿ, ಹನುಮನಹಳ್ಳಿ ಗ್ರಾಮದ ಇಂದ್ರಿರಮ್ಮ, ಮತ್ತು ಇತರ ಪ್ರಗತಿ‌ಪರ ರೈತರು ಸಾವಯವ ಹಾಗೂ‌ ನೈಸರ್ಗಿಕ ಕೃಷಿ ಪದ್ದತಿಯಲ್ಲಿ‌ ಬೆಳೆದ ಬೆಳೆಗಳು ಮತ್ತು ದೇಸಿ ಪದ್ದತಿಯ ಆಹಾರ ಪದಾರ್ಥಗಳನ್ನು ಪ್ರದರ್ಶನ ಮಾಡಿದರು.

ಸಹಾಯಕ ಕೃಷಿ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ್, ರೇಷ್ಮೆ ಸಹಾಯಕ ನಿರ್ದೇಶಕ ಶಿವಮೂರ್ತಿ, ವಲಯ ಅರಣ್ಯಾಧಿಕಾರಿ ಟಿ.ವಿ.ಹರಿಪ್ರಸಾದ್, ಎಸಿಡಿಪಿಒ ಅಕ್ಕಮಹಾದೇವಿ, ಕಪ್ಪಡಿ‌ ಮಠದ ವ್ಯವಸ್ಥಾಪಕ ಹೆಬ್ಬಾಳುಲಿಂಗರಾಜು, ಮಠದ ಭಕ್ತ ಕಪ್ಪಡಿಮಧು, ರಾಂಪ್ರಸಾದ್, ಹೆಚ್.ಆರ್.ನವೀನ್, ಕನುಗನಹಳ್ಳಿಕೃಷ್ಣ, ಕುಬೇರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ರೈತರು ಹಾಜರಿದ್ದರು.

Contact us for classifieds and ads : +91 9742974234