Latest News

ಕಂಪಲಾಪುರದ ಶ್ರಾವಣಿ ಭರ್ಜರಿ 525 ಅಂಕಗಳೊಂದಿಗೆ ಅತ್ಯುತ್ತಮ ಸಾಧನೆಗೆ ಅಭಿನಂದನೆಗಳ ಮಹಾಪೂರ

ವರದಿ: ರವಿಚಂದ್ರ ಬೂದಿತಿಟ್ಟು

ಕಂಪಲಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಅತ್ಯುನ್ನತ ಸಾಧನೆ ಮಾಡಿ ಗ್ರಾಮಕ್ಕೆ ಹೆಮ್ಮೆ ತಂದಿದ್ದಾಳೆ.

ಪಿರಿಯಾಪಟ್ಟಣ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರಾವಣಿ ಎಸ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 525 ಅಂಕಗಳನ್ನು ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಮ್ಮ ಶ್ರಮ, ಪರಿಶ್ರಮ ಮತ್ತು ಏಕಾಗ್ರತೆಯಿಂದ ಅವರು ಈ ಸಾಧನೆಯನ್ನು ಮಾಡಿದ್ದಾರೆ.

ಶ್ರಾವಣಿ ಎಸ್ ಅವರು ಶಿಕ್ಷಣದಲ್ಲಿ ನಿರಂತರ ಸಾಧನೆ ತೋರಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಈ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಯೂ 554 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಇದರಿಂದಲೇ ಅವರ ಶೈಕ್ಷಣಿಕ ಸಾಮರ್ಥ್ಯ ಸ್ಪಷ್ಟವಾಗುತ್ತದೆ.

ಕಂಪಲಾಪುರದ ವಿಜಯವಾಣಿ ವರದಿಗಾರ ಸದಾಶಿವ ಅವರ ಪುತ್ರಿಯಾದ ಶ್ರಾವಣಿ, ತಮ್ಮ ತಂದೆ-ತಾಯಿಯ ಪ್ರೋತ್ಸಾಹ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ. “ನಿಯಮಿತ ಓದು, ಶಿಸ್ತಿನ ಜೀವನ ಮತ್ತು ಗುರಿ ಸ್ಪಷ್ಟತೆ ನನ್ನ ಯಶಸ್ಸಿನ ಮೂಲ ಕಾರಣ” ಎಂದು ಶ್ರಾವಣಿ ತನ್ನ ಸಂತೋಷವನ್ನು ಹಂಚಿಕೊಂಡಿದ್ದಾಳೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಗ್ರಾಮಸ್ಥರು, ಬಂಧು-ಬಳಗದವರು ಹಾಗೂ ಕಾಲೇಜಿನ ಅಧ್ಯಾಪಕ ವೃಂದ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಗುರಿಗಳನ್ನು ಸಾಧಿಸಲಿ ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ಈ ಮಟ್ಟದ ಸಾಧನೆ ಮಾಡಿರುವುದು ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರಣೆಯಾಗಿದೆ

Contact us for classifieds and ads : +91 9742974234