
ಹಾಲಿ ಶಾಸಕರ ನಿಧನದಿಂದಾಗಿ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿದೆ.
ಈಗ ನಾವು ಅವರ ಕುಟುಂಬಗಳ ನಿರ್ವಹಣೆಗಾಗಿ, ಅವರ ಪ್ರತಿಷ್ಠೆಗಾಗಿ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಮತದಾನ ಮಾಡಬೇಕು. ಅವರನ್ನು
ನಮ್ಮ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಬೇಕು. ಇವರುಗಳನ್ನು ಹೊರತುಪಡಿಸಿ ನಮ್ಮಲ್ಲಿ ಮತ್ಯಾರಿಗೂ ಸ್ಪರ್ಧಿಸುವ ಸಾಮರ್ಥ್ಯವೂ ಇಲ್ಲ, ಅವಕಾಶ ಇಲ್ಲ. ಏಕೆಂದರೆ ಇದು ಪ್ರಜಾಪ್ರಭುತ್ವ !!!!!!
ಇಡೀ ಆಡಳಿತ ವ್ಯವಸ್ಥೆ, ಬಹುತೇಕ ಎಲ್ಲಾ ಮಂತ್ರಿಗಳು, ಶಾಸಕರು, ವಿರೋಧ ಪಕ್ಷದವರು, ಎಲ್ಲಾ ಜಾತಿಯ ನಾಯಕರು, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಸಾಮಾನ್ಯ ಜನರು ಈ ಉಪಚುನಾವಣೆಯ ಜ್ವರದಿಂದ ಬಳಲುತ್ತಿದ್ದಾರೆ. ಇವರಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಚರ್ಚೆ ಇನ್ನೂ ಸುಮಾರು 3 ವಾರಗಳು ನಡೆಯುತ್ತಿರುತ್ತದೆ. ಮೂರು ವಾರದ ನಂತರ ಯಾರೋ ಇಬ್ಬರು ಆಯ್ಕೆಯಾಗುತ್ತಾರೆ ಅಷ್ಟೇ. ಅದಕ್ಕಾಗಿ ಇಷ್ಟೊಂದು ಸರ್ಕಸ್…..
ಒಂದು ಸಣ್ಣ ಸಂವಿಧಾನಾತ್ಮಕ ಹುದ್ದೆಗಾಗಿ ಈ ನವರಂಗಿ ಆಟ. ಅದರಲ್ಲಿ ವಂಶಪಾರಂಪರ್ಯ ರಾಜಕೀಯ…..
ಈ ವಿಷಯದಲ್ಲಿ ರಾಜಕಾರಣಿಗಳ ಏಕಾಗ್ರತೆ……
ಈಗ ನೋಡಿ ನಮ್ಮ ರಾಜಕೀಯ ಪಕ್ಷಗಳ ಶ್ರದ್ಧೆ, ಶ್ರಮ, ಶಿಸ್ತು, ಯೋಜನೆ, ತಂತ್ರಗಾರಿಕೆ, ಮನೆ ಮನೆ ಭೇಟಿ, ಜಾತಿ ಧರ್ಮದ ಪ್ರೀತಿ, ಕ್ರಿಯಾಶೀಲತೆ ಎಲ್ಲವೂ ಎಷ್ಟೊಂದು ನೈಜವಾಗಿ ಜಾರಿಯಾಗುತ್ತದೆ. ಗುರಿ ತಲುಪುವುದಷ್ಟೇ ಅವರ ಏಕೈಕ ಉದ್ದೇಶ…..
ಅವರ ಏಕಾಗ್ರತೆ ಎಷ್ಟಿರುತ್ತದೆಯೆಂದರೆ…..

ಮಹಾಭಾರತದಲ್ಲಿ ಗುರು ದ್ರೋಣಾಚಾರ್ಯರು, ಪಾಂಡವರು ಮತ್ತು ಕೌರವರಿಗೆ ಬಾಲ್ಯದಲ್ಲಿ ಬಿಲ್ವಿದ್ಯೆ ಕಲಿಸುವಾಗ ಒಮ್ಮೆ ಆ ಹುಡುಗರ ಏಕಾಗ್ರತೆ ಪರೀಕ್ಷಿಸಲು ಒಂದು ಪ್ರಶ್ನೆ ಕೇಳುತ್ತಾರೆ. ದೂರದಲ್ಲಿ ಒಂದು ಮರ ಮತ್ತು ಆ ಮರದ ಮೇಲೆ ಒಂದು ಪಕ್ಷಿ ಕುಳಿತಿರುತ್ತದೆ. ಆ ಪಕ್ಷಿಯನ್ನು ಬಿಲ್ಲಿನಿಂದ ಗುರಿ ಇಟ್ಟು ಹೊಡೆಯಬೇಕು. ಅದನ್ನು ವಿವರಿಸಿ ಒಬ್ಬೊಬ್ಬರಾಗಿ ಅಲ್ಲಿ ಏನು ಕಾಣುತ್ತಿದೆ ಎಂದು ಪ್ರಶ್ನಿಸುತ್ತಾರೆ. ಭೀಮಾ, ದುರ್ಯೋಧನ, ನಕುಲ, ದುಶ್ಯಾಸನ ಮುಂತಾದವರು ಮರ ಕಾಣುತ್ತಿದೆ, ಕೊಂಬೆ ಕಾಣುತ್ತಿದೆ, ಎಲೆ ಕಾಣುತ್ತಿದೆ, ಪಕ್ಷಿ ಕಾಣುತ್ತಿದೆ ಎನ್ನುತ್ತಾರೆ. ಆದರೆ ಅರ್ಜುನ ಮಾತ್ರ ಪಕ್ಷಿಯ ಅಕ್ಷಿಯಲ್ಲದೆ ಬೇರೇನೂ ಕಾಣುತ್ತಿಲ್ಲ ಎನ್ನುತ್ತಾನೆ. ಆತನ ಏಕಾಗ್ರತೆ ಗುರಿಯೆಡೆಗೆ ಅಷ್ಟು ತೀಕ್ಷ್ಣವಾಗಿರುತ್ತದೆ….
ಹಾಗೆಯೇ ಈ ಉಪಚುನಾವಣೆ ಗೆಲ್ಲಲು ಎರಡೂ ಪಕ್ಷಗಳು ಒಂದೇ ಏಕಾಗ್ರತೆಯಿಂದ ಕೆಲಸ ಮಾಡುತ್ತವೆ. ಏನು ದೇಶ ಭಕ್ತಿ, ಧರ್ಮ, ಭಾಷೆ, ಜಾತಿ ಎಲ್ಲ ರಸಗಳು ಉಕ್ಕಿ ಹರಿಯುತ್ತದೆ. ಸಂಬಂಧಗಳು ನೆನಪಾಗುತ್ತದೆ. ದುಡ್ಡು, ಕಾಸು, ಹೆಂಡ ಒಳಗೊಳಗೆ ಹರಿದಾಡುತ್ತದೆ…..
ಇದೇ ಆಸಕ್ತಿ, ಏಕಾಗ್ರತೆ ಅತಿವೃಷ್ಠಿ, ಅನಾವೃಷ್ಟಿ ಮತ್ತು ಅದರಿಂದ ಉಂಟಾಗುವ ಆರ್ಥಿಕ ನಷ್ಟ ತಡೆಯಲು ನಿಮ್ಮಿಂದ ಆಗುತ್ತಿಲ್ಲ. ಈಗಲೂ ಜನ ಪರದಾಡುತ್ತಿದ್ದಾರೆ. ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿರುವುದು ನಡದೇ ಇದೆ. ಸಮಸ್ಯೆಯನ್ನು ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ……
ಅಲ್ರೀ ಅಭ್ಯರ್ಥಿಗಳು ಕೇವಲ ನಾಮಪತ್ರ ಸಲ್ಲಿಸುವಾಗಲೂ ಪಟಾಕಿ ಸುಟ್ಟು ಸಂಭ್ರಮಿಸುತ್ತಾರಲ್ರೀ ಇವರೇನು ಮನುಷ್ಯರಾ, ಕೋತಿಗಳಾ, ಸ್ವಲ್ಪವೂ ಸ್ವಾಭಿಮಾನ, ಹೋಗಲಿ ಸಾಮಾನ್ಯ ಜ್ಞಾನವೂ ಬೇಡವೇ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಒಂದು ಸಾಮಾನ್ಯ ಉಪ ಚುನಾವಣೆಗೆ ಹಿಂಬಾಲಕರು ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದೇ. ಮಾಡಲು ಎಷ್ಟೊಂದು ಕೆಲಸಗಳಿರುವಾಗ ಅಷ್ಟೊಂದು ಜನ ಅಲ್ಲಿ ಗುಂಪು ಸೇರಿ ಮಾಡುವುದಾದರೂ ಏನು ?…..
ಈ ಉಪಚುನಾವಣೆಯಿಂದ ರಾಜ್ಯ ಉದ್ದಾರವಾಗುತ್ತದೆಯೇ,
ದೇಶ ಉದ್ಧಾರವಾಗುತ್ತದೆಯೇ ಅಥವಾ ಆ ಕ್ಷೇತ್ರ ಉದ್ಧಾರವಾಗುತ್ತದೆಯೇ.. ಹೊಟ್ಟೆ ಪಾಡಿಗಾಗಿ ಸಾಮಾನ್ಯ ಜನ ಈ ಹಂತಕ್ಕೆ ತಲುಪಿರುವಾಗ ಪ್ರಜಾಪ್ರಭುತ್ವ ನೈಜ ಅರ್ಥ ಪಡೆಯುವುದು ಹೇಗೆ, ಅದು ಯಶಸ್ವಿಯಾಗುವುದು ಹೇಗೆ…
ಅಲ್ಲಿ ನೋಡಿದರೆ ಯುದ್ಧ ಜನರ ಬದುಕನ್ನೇ ಅಲುಗಾಡಿಸಿದೆ,
ನಿರುದ್ಯೋಗ ತಾಂಡವವಾಡುತ್ತಿದೆ, ಜನಜೀವನ ಸಾಮಾನ್ಯ ಸ್ಥಿತಿಯನ್ನು ತಲುಪಲು ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಆಡಳಿತ ಮತ್ತು ರಾಜಕೀಯ ವ್ಯವಸ್ಥೆ ಚುನಾವಣಾ ಕಾರ್ಯಗಳಲ್ಲಿ ತೊಡಗಿಕೊಂಡರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ…..
ಮಾಧ್ಯಮಗಳು ಈ ಉಪ ಚುನಾವಣೆಯನ್ನು ವೈಭವೀಕರಿಸಿ ಮಹಾನ್ ಹೋರಾಟ ಎಂದು ಜನರಲ್ಲಿ ಕುತೂಹಲ ಕೆರಳಿಸಿದಷ್ಟು ಇತರ ಅತ್ಯವಶ್ಯಕ ವಿಷಯಗಳು ಮಹತ್ವ ಕಳೆದುಕೊಳ್ಳುತ್ತದೆ. ಆಡಳಿತಗಾರರಿಗು ಅದೇ ಬೇಕಾಗಿರುತ್ತದೆ. ಸಾಲ ಮಾಡಿರುವ ದೊಡ್ಡ ಮೊತ್ತದ ಹಣವನ್ನು ವಿವಿಧ ಯೋಜನೆಗಳ ನೆಪದಲ್ಲಿ ನುಂಗಲಾಗುತ್ತದೆ. ರೈತ – ಕಾರ್ಮಿಕರ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತದೆ. ಜನರ ಬದುಕು ಬವಣೆ ಎಂದಿನಂತೆ ಅರಣ್ಯ ರೋಧನ…..
ಎಲ್ಲಾ ಹಂತಗಳಲ್ಲಿ, ಎಲ್ಲಾ ರೀತಿಯಲ್ಲಿ ಬದಲಾವಣೆ ಆದರೆ ಮಾತ್ರ ಏನಾದರೂ ಸುಧಾರಣೆ ಸಾಧ್ಯವಾಗಬಹುದು. ಜನ ಈ ರೀತಿ ಹುಚ್ಚು ಹುಚ್ಚಾಗಿ ರಾಜಕೀಯ ಪಕ್ಷಗಳ ಹಿಂಬಾಲಕರಾಗಿ ಕುಣಿದು ಕುಪ್ಪಳಿಸಿ ಅದರಿಂದ ಬರುವ ಸಣ್ಣ ಕಾಸಿನಲ್ಲಿ ಬದುಕು ಕಟ್ಟಿಕೊಳ್ಳುವ ಮನಸ್ಥಿತಿಯಿಂದ ಹೊರಗೆ ಬರದಿದ್ದರೆ, ಸ್ವಾಭಿಮಾನ ಬೆಳೆಸಿಕೊಳ್ಳದಿದ್ದರೆ, ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿಕೊಳ್ಳದಿದ್ದರೆ, ವಿವೇಚನೆಯಿಂದ ವರ್ತಿಸದಿದ್ದರೆ ಜೀವನ ಇನ್ನಷ್ಟು ಅಧೋಗತಿಗೆ ಇಳಿಯುತ್ತದೆ…..
ಇನ್ನೂ ದುರಂತವೆಂದರೆ, ಪುರುಷರಂತೆ ಮಹಿಳೆಯರು ಸಹ ಈ ಹಿಂಬಾಲಕರೆಂಬ ಕೆಟ್ಟ ರಾಜಕೀಯ ವ್ಯವಸ್ಥೆಯ ಸುಳಿಗೆ ಸಿಲುಕುತ್ತಿದ್ದಾರೆ. ಗುತ್ತಿಗೆ ಅಥವಾ ದಿನಗೂಲಿ ಒಪ್ಪಂದದ ರೀತಿಯಲ್ಲಿ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜೈಕಾರ ಹಾಕುವ ಅರೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ…..
ಹೌದು, ಹೊಟ್ಟೆ ಪಾಡಿನ ಅನಿವಾರ್ಯತೆಯ ಬಗ್ಗೆಯೂ ಮರುಕವಿದೆ. ಆದರೆ ವ್ಯವಸ್ಥೆಯ ಸುಧಾರಣೆ ಹೇಗೆ ಎಂಬುದೇ ಬಹುದೊಡ್ಡ ಚಿಂತೆ. ಭ್ರಷ್ಟಾಚಾರ, ಬಡತನ, ಅಜ್ಞಾನ, ಅನಿವಾರ್ಯತೆ, ಗುಲಾಮಿತನ, ಶೋಷಣೆ ಎಲ್ಲವೂ ಒಂದಕ್ಕೊಂದು ಪೂರಕವಾಗಿರುತ್ತದೆ. ಅದನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರ ಏನು ಮತ್ತು ಹೇಗೆ ?……..
ಪ್ರಚಾರ………
ಪ್ರಚಾರವೆಂಬುದರ ಅವಶ್ಯಕತೆ ಯಾವುದಕ್ಕಾಗಿ ಮತ್ತು ಯಾರಿಗಾಗಿ, ದಯವಿಟ್ಟು ಗಂಭೀರವಾಗಿ ಯೋಚಿಸಿ…..
ಭರ್ಜರಿಯಾಗಿ ಉಪ ಚುನಾವಣೆಯ ಪ್ರಚಾರವೇನೋ ನಡೆಯುತ್ತಲೇ ಇದೆ, ಮುಂದೆ ನಡೆಯುತ್ತಲೂ ಇರುತ್ತದೆ…. ಕಾಂಗ್ರೆಸ್ ಪರವಾಗಿ ಘಟಾನುಘಟಿ ಸ್ಟಾರ್ ನಾಯಕರು, ಬಿಜೆಪಿ ಪರವಾಗಿ ಘಟಾನುಘಟಿ ಸ್ಟಾರ್ ಪ್ರಚಾರಕರು, ಜೆಡಿಎಸ್ ಪರವಾಗಿ ಘಟಾನುಘಟಿ ಸ್ಟಾರ್ ನಾಯಕರು,
ಹೀಗೆ ಒಂದೊಂದು ಪಕ್ಷದ ಪರವಾಗಿ ಘಟಾನುಘಟಿ ಸ್ಟಾರ್ ಪ್ರಚಾರಕರು ಪ್ರಚಾರ ಮಾಡುತ್ತಾರೆ……
ಅದರ ಯಥಾವತ್ತು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮತ್ಯಾವುದೋ ಸಂಪರ್ಕ ಸಾಧನಗಳ ಮುಖಾಂತರ ರಾಜ್ಯಾದ್ಯಂತ, ದೇಶಾದ್ಯಂತ, ವಿಶ್ವದಾದ್ಯಂತ ಪ್ರಚಾರವಾಗುತ್ತಿದೆ…….
ಅವರ ಪ್ರಚಾರ ಅವರ ಪಕ್ಷಗಳು, ಅಭ್ಯರ್ಥಿಗಳು, ಚಿಹ್ನೆಗಳ ಬಗ್ಗೆ ಮಾತ್ರ. ಆದರೆ ನಮ್ಮ ಭವಿಷ್ಯದ ಮುಂದಿನ ಪೀಳಿಗೆಯ ಮಕ್ಕಳಿಗಾಗಿ, ಮಾನವ ಸಮಾಜದ ಮುಂದುವರಿಕೆಗಾಗಿ ಈ ವಿಷಯಗಳ ಬಗ್ಗೆ ಪ್ರಚಾರ ಮಾಡುವವರು ಯಾರು……
ಪ್ರೀತಿಯ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಪ್ರೀತಿ ವಿರಹದಿಂದ ಬಳಲುತ್ತಿದೆ….. ನಮ್ಮ ಮಕ್ಕಳಿಗಾಗಿ ಸ್ನೇಹದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಸ್ನೇಹ ಸೊರಗುತ್ತಿದೆ….. ಕರುಣೆಯ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಕರುಣೆ ಕೊರಗುತ್ತಿದೆ…… ತ್ಯಾಗದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ತ್ಯಾಗ ದುಃಖಿಸುತ್ತಿದೆ…… ಕ್ಷಮೆಯ ಬಗ್ಗೆ ಯಾರು ಪ್ರಚಾರ ಮಾಡಲಿಲ್ಲ, ಕ್ಷಮೆ ಮರುಗುತ್ತಿದೆ….. ಸಭ್ಯತೆಯ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಸಭ್ಯತೆಯ ಮನ ನೋಯುತ್ತಿದೆ…… ಸಹಕಾರದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಸಹಕಾರ ಸಂಕಟಪಡುತ್ತಿದೆ…… ಸಮನ್ವಯದ ಬಗ್ಗೆ ಯಾರೂ ಪ್ರಚಾರ ಮಾಡಲಿಲ್ಲ, ಸಮನ್ವಯ ನಾಶವಾಗುತ್ತಿದೆ…..
ಸಂಬಂಧಗಳ ಪಾವಿತ್ರ್ಯತೆ ಬಗ್ಗೆ ಯಾರೂ ಪ್ರಚಾರ ಮಾಡುತ್ತಿಲ್ಲ, ಸಂಬಂಧಗಳು ವ್ಯಾಪಾರಿಕರಣವಾಗುತ್ತಿದೆ……
ನ್ಯಾಯದ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ನ್ಯಾಯ ಅಳುತ್ತಿದೆ…….., ನೀತಿ – ಸಂಸ್ಕಾರ – ಸಂಸ್ಕೃತಿಗಳ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ಅವು ಅಳಿವಿನ ಅಂಚಿನಲ್ಲಿವೆ….
ಪ್ರಾಮಾಣಿಕತೆಯ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ,
ಪ್ರಾಮಾಣಿಕತೆ ಮರೆಯಾಗುತ್ತಿದೆ….. ಶಿಸ್ತಿನ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ಶಿಸ್ತು ಮಾಯವಾಗುತ್ತಿದೆ….. ಸಂಯಮದ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ಸಂಯಮ ಇಲ್ಲವಾಗುತ್ತಿದೆ……. ಮನುಷ್ಯರ ಶೀಲ – ಚಾರಿತ್ರ್ಯದ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ,
ಶೀಲ ಸಮಸ್ಯೆಯಾಗುತ್ತಿದೆ….. ನೈತಿಕತೆಯ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ, ನೈತಿಕತೆ ನಿರ್ನಾಮವಾಗುತ್ತಿದೆ….. ಜಾತಿಗಳ ಬಗ್ಗೆ ಪ್ರಚಾರವಾಗುತ್ತದೆ, ಧರ್ಮಗಳ ಬಗ್ಗೆ ಪ್ರಚಾರ ಮಾಡುತ್ತಾರೆ,
ಎಲ್ಲಾ ವಸ್ತುಗಳ ಬಗ್ಗೆ ಪ್ರಚಾರ ಮಾಡುತ್ತಾರೆ, ಆದರೆ ಮಾನವೀಯ ಮೌಲ್ಯಗಳ ಬಗ್ಗೆ ಪ್ರಚಾರ ಮಾಡುವವರು ಯಾರೂ ಇಲ್ಲ…..
ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯಕವಾದ, ಮನುಷ್ಯರ ಮೂಲಭೂತ ಭಾವನೆಗಳಾದ ಮಾನವೀಯ ಮೌಲ್ಯಗಳೆಂಬ ಜೀವ ದ್ರವ್ಯಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲ…..
ಎಲ್ಲಾ ಇಲ್ಲವುಗಳ ನಡುವೆ ಈ ಪದಗಳ, ಭಾವಗಳ ವಿರುದ್ಧ ಪದಗಳು, ಭಾವಗಳು ಈ ಸಮಾಜದಲ್ಲಿ ಮಾನ್ಯತೆ ಪಡೆಯುತ್ತಿವೆ. ಅದಕ್ಕೆ ಎಲ್ಲಾ ಕ್ಷೇತ್ರಗಳ ಎಲ್ಲರೂ ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಿದ್ದಾರೆ…….
ಈಗಲಾದರೂ ಎಚ್ಚೆತ್ತುಕೊಂಡು ಚುನಾವಣಾ ಪ್ರಚಾರಕ್ಕಿಂತ ಮಾನವೀಯ ಮೌಲ್ಯಗಳ ಪ್ರಚಾರ – ಪ್ರಸಾರ ಈ ಸಮಾಜದ ಪ್ರಮುಖ ಆದ್ಯತೆಯಾಗಲಿ. ಇಲ್ಲದಿದ್ದರೆ ಮುಂದಿನ ಭವಿಷ್ಯ ಕರಾಳವಾಗಲಿದೆ……..
ಒಂದು ಸಣ್ಣ ಚುನಾವಣಗೆ ಇಷ್ಟೊಂದು ಮಹತ್ವ ನೀಡಿ, ನಿಜವಾದ ಮಾನವೀಯ ಮೌಲ್ಯಗಳನ್ನು ನಿರ್ಲಕ್ಷಿಸಿದರೆ, ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಚ್ಚರ ಎಂದು ಮನವಿ ಮಾಡಿಕೊಳ್ಳುತ್ತಾ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451……



