Latest News

ಇಂದಿನಿಂದ ಮೈಸೂರಿನಲ್ಲಿ ಕಿಸಾನ್ ಸ್ವರಾಜ್ ಸಮ್ಮೇಳನ

ಮೈಸೂರು,ಫೆ.26,: ಸಾವಯವ ಕೃಷಿಕರ ಕುಂಭಮೇಳ ಎಂದು ಖ್ಯಾತಿ ಪಡೆದಿರುವ ಕಿಸಾನ್ ಸ್ವರಾಜ್ ಸಮ್ಮೇಳನವು ಇಂದಿನಿಂದ ( ಫೆ.27,ಶುಕ್ರವಾರ)

ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತ ಗಂಗೋತ್ರಿ  ಆವರಣದಲ್ಲಿ ನಡೆಯಲಿದೆ. ಫೆಬ್ರವರಿ 27ರಿಂದ ಮಾರ್ಚ್ 1 ರವರೆಗೆ, ಮೂರು ದಿನಗಳ ಕಾಲ ನಡೆಯಲಿರುವ  ಕಿಸಾನ್ ಸ್ವರಾಜ್ ಸಮ್ಮೇಳದಲ್ಲಿ ವಿವಿಧ ರಾಜ್ಯಗಳ ಒಂದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟ’ (ಅಲಯನ್ಸ್ ಫಾರ್ ಸಸ್ಟೈನೆಬಲ್ ಅಂಡ್ ಹೊಲಿಸ್ಟಿಕ್ ಅಗ್ರಿಕಲ್ಚರ್- ಆಶಾ) ಮತ್ತು  ಪ್ರಸಾರಾಂಗ , ಕರ್ನಾಟಕ ರಾಜ್ಯ ಮುಕ್ತ ವಿಶ‍್ವವಿದ್ಯಾನಿಲಯ ಜೊತೆಯಾಗಿ ಸಮ್ಮೇಳನವನ್ನು ಆಯೋಜಿಸಿವೆ.

ಕೃಷಿ- ಪರಿಸರ ದಿಗ್ಗಜರು ಭಾಗಿಯಾಗಿಸಲಿರುವ  ಕಿಸಾನ್ ಸ್ವರಾಜ್ ಸಮ್ಮೇಳನಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ. ಸಹಜ ಸಮೃದ್ಧ ಆಯೋಜಿಸಿರುವ ‘ಜೀವ ವೈವಿಧ್ಯ ಮೇಳಕ್ಕೆ’  ಅಸ್ಸಾಂ,ಆಂಧ್ರ ಪ್ರದೇಶ, ಕೇರಳ,ತೆಲಂಗಾಣ, ತಮಿಳುನಾಡು, ಮತ್ತು ಮಹಾರಾಷ್ಟ್ರದಿಂದ ಬಂದಿರುವ ಐವತ್ತಕ್ಕೂ ಹೆಚ್ಚಿನ ಬೀಜ ಸಂರಕ್ಷಕರು ವಿವಿಧ  ಬಗೆಯ ದೇಸಿ ಬೀಜ, ಹಣ್ಣು- ಕಾಯಿ, ತೆನೆಗಳನ್ನು ಪ್ರದರ್ಶನಕ್ಕೆ ತಂದಿದ್ದಾರೆ. ವೈವಿಧ್ಯಮಯ ಬೀಜಗಳು ಮಾರಾಟಕ್ಕೆ ಸಿಗುತ್ತಿವೆ.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕೇರಳದ ವಯನಾಡಿನ ಶಾಜಿ 200ಕ್ಕೂ ಹೆಚ್ಚಿನ ಗೆಡ್ಡೆ ಗೆಣಸುಗಳನ್ನು ಪ್ರದರ್ಶಿಸುತ್ತಿದ್ದಾರೆ. ದೇಶ ವಿದೇಶಗಳ , ವೈವಿಧ್ಯಮಯ ಗೆಡ್ಡೆ ಗೆಣಸುಗಳು ಇವರ ಸಂಗ್ರಹದಲ್ಲಿವೆ. ಹೆಗ್ಗಡದೇವನಕೋಟೆಯ ಅಂತರಸಂತೆಯ ಹುಲಿಕಾಡು ರೈತ ಉತ್ಪಾದಕರ ಕಂಪನಿ ಪರ್ಪಲ್ ಯಾಮ್, ಬಳ್ಳಿ ಆಲೂಗೆಡ್ಡೆ ಮತ್ತು ಉತ್ತರಿ ಗೆಣಸುಗಳನ್ನು ಮಾರಾಟಕ್ಕೆ ತಂದಿದೆ.ಆಂಧ್ರ ಪ್ರದೇಶದ ಅರಕು ವ್ಯಾಲಿಯ ಸಂಜೀವಿನಿ ಆದಿವಾಸಿ ಸಂಘದವರು ಅಪರೂಪದ ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕೆ ತಂದಿದ್ದಾರೆ.

ಬೆಳಗೊಳದ  ಬೆಳುವಲ ಫೌಂಡೇಷನ್ ನಗರ ತೋಟಗಾರಿಕೆ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಆಕರ್ಷಕ ಕೈ ತೋಟದ ಮಾದರಿಗಳನ್ನು ರೂಪಿಸಲಾಗಿದೆ. ತೋಟ ಮಾಡಲು ಆಸಕ್ತರಾದ ನಗರವಾಸಿಗಳಿಗೆ ಅಗತ್ಯ ಮಾಹಿತಿ ನೀಡಲು ಬೆಳುವಲ ತಂಡ ಸಿದ್ಧವಾಗಿದೆ.

ನೈಸರ್ಗಿಕ ಕೃಷಿ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಪದಾರ್ಥಗಳ 30 ಸಾವಯವ ಮಳಿಗೆಗಳು ಸಮ್ಮೇಳನಕ್ಕೆ ಬಂದಿವೆ. ನೊಂದಾಯಿಸಿದ್ದ  130 ಮಾರುಕಟ್ಟೆದಾರರಲ್ಲಿ 30 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಪ್ಲಾಸ್ಟಿಕ್ ಮುಕ್ತವಾಗಿ, ಪರಿಸರ ಪ್ರಿಯ ಪ್ಯಾಕಿಂಗ್ ಮಾಡಿದ , ನಂಬಿಕಾರ್ಹ ಸಾವಯವ  ಮೂಲಗಳಿಂದ ಉತ್ಪನ್ನಗಳನ್ನು ಖರೀದಿಸುವ ಮಳಿಗೆದಾರರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಏಳು ಆಹಾರ ಮಳಿಗೆಗಳು ಕೇರಳ, ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನ ಸಾಂಪ್ರದಾಯಿಕ ಶೈಲಿಯ ಅಡುಗೆಗಳನ್ನು ಉಣಬಡಿಸಲು ಸಿದ್ಧವಾಗಿವೆ. ರಾಗಿ ಶ್ಯಾವಿಗೆ, ಜೋಳದ ರೊಟ್ಟಿ, ಬೆರಕೆ ಸೊಪ್ಪಿನ ಪಲ್ಲ್ಯ, ಮರೆತ ಹಣ್ಣುಗಳಾದ ಬೇಲ, ಫ್ಯಾಷನ್ ಪ್ರೂಟ್, ಎಳ್ಳಿ ಕಾಯಿ ಜ್ಯೂಸ್ ಗಳು ಸವಿಯಲು ಸಿಗಲಿವೆ.

ದೇಸಿರಿ ನ್ಯಾಚುರಲ್ಸನವರು ಎತ್ತಿನ ಗಾಣ ಹಾಕಿದ್ದಾರೆ. ಹರಳನ್ನು ಬೇಯಿಸುವ ಪ್ರಾತ್ಯಕ್ಷತೆ ನಡೆಯಲಿದೆ. ಗ್ರಾಹಕರು ತಮ್ಮ ಇಷ್ಟದ ಗಾಣದ ಎಣ್ಣೆ ಖರೀದಿಸಬಹುದು.

ಆಂಧ್ರ ಪ್ರದೇಶದ ಪೊಂಡೂರಿನ ನೇಕಾರರು ಜಗತ್  ಪ್ರಸಿದ್ಧರು. ದೇಸಿ ಹತ್ತಿಯಿಂದ ಗುಣಮಟ್ಟದ ಬಟ್ಟೆಗಳನ್ನು ನೇಯುವ ಇವರ ಕೌಶಲ್ಯ ಎಂಥವರನ್ನೂ ನಿಬ್ಬೆರೆಗಾಗಿಸುತ್ತದೆ. ಪೊಂಡೂರಿನ  ಮಹಿಳೆಯರು, ಪ್ರಸಿದ್ಧ ಪಟ್ಟಣೂಲ ನೂಲಾಟದ ನೇರ ಪ್ರದರ್ಶನ ಮಾಡಲಿದ್ದಾರೆ. ಚರಕದಿಂದ ನೂಲು ತೆಗೆವ ಕೌಶಲ್ಯ ಕಾಣಬಹುದು. ಚೆನ್ನೈನ ತುಲಾ ಇಂಡಿಯಾದವರು ದೇಸಿ ಹತ್ತಿಯ ಉಡುಪುಗಳನ್ನು ಮಾರಾಟ ಮಾಡಲಿದ್ದಾರೆ.

ಈ ಸಮ್ಮೇಳನದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನೈಸರ್ಗಿಕ ಕೃಷಿಕರಾದ  ಸುಭಾಷ್ ಶರ್ಮಾ ಸೇರಿದಂತೆ ಹಲವಾರು ಕೃಷಿ ದಿಗ್ಗಜರು  ಭಾಗವಹಿಸಲಿದ್ದಾರೆ. ಗೋಕೃಪಾಮೃತ ಸಂಶೋಧಕ ಗುಜರಾತಿನ ಗೋಪಾಲ್ ಭಾಯ್ ಸುತಾರಿಯ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕೃಷಿ ಮತ್ತು ಗ್ರಾಮೀಣ ಜೀವನೋಪಾಯಗಳಿಗೆ ಎದುರಾಗಿರುವ ಪ್ರಮುಖ ಸವಾಲುಗಳ ಬಗ್ಗೆ ಚರ್ಚೆ,ಸಂವಾದಗಳು  ನಡೆಯಲಿವೆ.  ಬೀಜ ಸ್ವಾಯತ್ತತೆ, ರೈತರ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು, ಕಳೆನಾಶಕ ಸಹಿಷ್ಣು ಬೆಳೆಗಳ ಪರಿಣಾಮ, ಕೃಷಿ ಕಾರ್ಮಿಕರ ಸಮಸ್ಯೆಗಳು ಮತ್ತು ಮಾನವ-ಪ್ರಾಣಿ ಸಂಘರ್ಷಗಳಂತಹ ವಿಷಯಗಳು ಚರ್ಚೆಗೆ ಬರಲಿವೆ.

ಶಾಲಾ ವಿದ್ಯಾರ್ಥಿಗಳು, ನಗರದ ಗ್ರಾಹಕರು ಹಾಗೂ ರೈತರಿಗೆ ಶೈಕ್ಷಣಿಕ ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು, ಪರಿಸರ ಸ್ನೇಹಿ ಜೀವನ ಪದ್ಧತಿಯ ಅನುಭವ ಪಡೆಯಬಹುದು.

ಕೃಷಿ ಮತ್ತು ಪರಿಸರ ವಿಷಯಾಧಾರಿತ ಚಲನಚಿತ್ರೋತ್ಸವ ಏರ್ಪಡಿಸಲಾಗಿದೆ. ಶುಕ್ರವಾರ ರಾತ್ರಿ 8 ಗಂಟೆಗೆ ಖ್ಯಾತ ಗಾಯಕ ವಾಸು ದೀಕ್ಷಿತ್ ಅವರ “ಸಾಂಗ್ಸ್ ಫಾರ್ ದ ಸೋಲ್” ಸಂಗೀತ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 28ರ ಸಂಜೆ 8 ಗಂಟೆಗೆ ಅಭಿನಯಕ್ತಿ ಫೌಂಡೇಶನ್ ಕಲಾವಿದರಿಂದ ವಿಶಿಷ್ಟ ಭರತನಾಟ್ಯ ಪ್ರದರ್ಶನ ನಡೆಯಲಿದೆ.

ಮೈಸೂರಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಲು ಸಂಘಟಕರು ಮನವಿ ಮಾಡಿದ್ದು,  ಪರ್ಯಾಯ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು, ನೈಸರ್ಗಿಕ ಕೃಷಿ  ಚಳುವಳಿಯ ಭಾಗವಾಗುವ ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8105579839

Contact us for classifieds and ads : +91 9742974234