Latest News

ಅರಮನೆ ಆವರಣದಲ್ಲಿ ಶಿವರಾತ್ರಿ ಸಂಭ್ರಮ: ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧಾರಣೆ

ಮಹಾ ಶಿವರಾತ್ರಿ ಅಂಗವಾಗಿ ತ್ರಿನೇಶ್ವರನಿಗೆ ಧರಿಸುವ 11 ಕೆಜಿ ಚಿನ್ನದ ಬಾಲಶಿವ ಮುಖವಾಡ ದೇವಾಲಯಕ್ಕೆ ಆಗಮನ

ಮೈಸೂರು ಫೆ13 :- ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಅರಮನೆ ಆವರಣದಲ್ಲಿ ಇರುವ ಪುರಾತನ ಶ್ರೀ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ಇಂದಿನಿಂದ ಆಚರಣೆಗಳ ಸಕಲ ಸಿದ್ಧತೆಗಳು ಆರಂಭವಾಗಿದ್ದು, ದೇವರಿಗೆ ಶಿವರಾತ್ರಿ ಹಬ್ಬದಂದು ಧರಿಸಲಾಗುವ 11 ಕೆಜಿ ತೂಕದ ಚಿನ್ನದ ಬಾಲಶಿವ ಮುಖವಾಡ (ಚಿನ್ನದ ಕೊಳಗ) ಒಂದು ದಿನ ಮುಂಚಿತವಾಗಿಯೇ ಮೈಸೂರು ಜಿಲ್ಲಾ ಖಜಾನೆಯಿಂದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯೊಂದಿಗೆ ತ್ತೀನೇಶ್ವರ ದೇವಾಲಯಕ್ಕೆ ತರಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಚಿನ್ನದ ಮುಖವಾಡವನ್ನು ದೇವಾಲಯದ ಅರ್ಚಕರಿಗೆ ಹಾಗೂ ಆಡಳಿತಕ್ಕೆ ಹಸ್ತಾಂತರಿಸಲಾಯಿತು.
ಯಾವಾಗಲು ಪ್ರತಿ ವರ್ಷ ಶಿವರಾತ್ರಿಯ ಸಂದರ್ಭದಲ್ಲಿ ಮಾತ್ರ ದೇವರಿಗೆ ಧರಿಸಲಾಗುವ ಈ ಚಿನ್ನದ ಮುಖವಾಡವನ್ನು ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ಸ್ವೀಕರಿಸುವ ದೇವಾಲುದಲ್ಲಿ ಸಂಪ್ರದಾಯವಿದೆ. ಈ ವರ್ಷವೂ ಶುಕ್ರವಾರ ಸಂಜೆ ಚಿನ್ನದ ಮುಖವಾಡವನ್ನು ದೇವಾಲಯಕ್ಕೆ ತಂದು ಹೊರಗಿಡಲಾಯಿತು. ಶಿವರಾತ್ರಿಯ ದಿನ ದೇವರಿಗೆ ಅಲಂಕರಿಸಿ ಭಕ್ತರಿಗೆ ದರ್ಶನಕ್ಕೆ ಇಡಲಾಗುತ್ತದೆ.

ಐತಿಹಾಸಿಕ ಸಂಪ್ರದಾಯದ ಮುಂದುವರಿಕೆ: ಶಿವರಾತ್ರಿಗೆ ತ್ರಿನೇಶ್ವರನಿಗೆ ಚಿನ್ನದ ಅಲಂಕಾರ

ಪ್ರತಿ ವರ್ಷದಲ್ಲಿ ಒಂದೇ ದಿನ, ಅಂದರೆ ಮಹಾಶಿವರಾತ್ರಿ ಸಂದರ್ಭದಲ್ಲಿ, ತ್ರಿನೇಶ್ವರ ಸ್ವಾಮಿಗೆ 11 ಕೆಜಿ ತೂಕದ ಅಪರಂಜಿ ಚಿನ್ನದಿಂದ ನಿರ್ಮಿತ ಬಾಲಶಿವ ಮುಖವಾಡ ಧರಿಸಲಾಗುತ್ತದೆ. ದೇವರಿಗೆ ಈ ಮುಖವಾಡವನ್ನು ಧರಿಸುವುದು ಶಿವರಾತ್ರಿಯಲ್ಲಿ ಮಹತ್ವದ ಆಚರಣೆಗಳಲ್ಲಿ ಒಂದಾಗಿದ್ದು, ಶಿವರಾತ್ರಿಯಲ್ಲಿ ಭಕ್ತರಿಗೆ ಇಲ್ಲಿ ಅಪರೂಪದ ದರ್ಶನವಾಗುತ್ತದೆ. ಈ ದಿನ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ದೇವಾಲಯದ ಸ್ಥಾನಿಕ ಅಧಿಕಾರಿ ವೆಂಕಟೇಶ್ ಅವರ ಪ್ರಕಾರ, ಶಿವರಾತ್ರಿಯ ದಿನ ಬೆಳಿಗ್ಗೆ ಮೂಲ ಮೂರ್ತಿಗೆ ಅಭಿಷೇಕ ಹಾಗೂ ರುದ್ರಾಭಿಷೇಕ ನೆರವೇರಿಸಲಾಗುತ್ತದೆ. ನಂತರ ಚಿನ್ನದ ಬಾಲಶಿವ ಮುಖವಾಡವನ್ನು ಧರಿಸಲಾಗುತ್ತದೆ. ಅದಾದ ಬಳಿಕ ನಾಲ್ಕು ಯಾಮಗಳಲ್ಲಿ ಪೂಜೆ ನಡೆಯಲಿದ್ದು, ರಾತ್ರಿ ಪೂರ್ತಿ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಸೋಮವಾರ ಬೆಳಗ್ಗೆ ರುದ್ರಾಕ್ಷಿ ಮಂಟಪ ಉತ್ಸವ ನಡೆಯಲಿದ್ದು, ಇದರೊಂದಿಗೆ ಶಿವರಾತ್ರಿ ಆಚರಣೆಗಳು ಕೊನೆಗೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ.

ಈ ಚಿನ್ನದ ಕೊಳಗಕ್ಕೆ ಐತಿಹಾಸಿಕ ಹಿನ್ನೆಲೆ ಏನು?


ಈ ಚಿನ್ನದ ಕೊಳಗಕ್ಕೆ ಐತಿಹಾಸಿಕ ಮಹತ್ವವೂ ಇದೆ. ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಮುಖವಾಡವನ್ನು ತ್ರಿನೇಶ್ವರ ದೇವರಿಗೆ ಸಮರ್ಪಿಸಿದ್ದರು. ಮಹಾರಾಜರಿಗೆ ಗಂಡು ಸಂತಾನವಾಗದ ಹಿನ್ನೆಲೆಯಲ್ಲಿ, ಮಹಾರಾಜರ ವಂಶಕ್ಕೆ ಗಂಡು ಸಂತಾನ ದೊರೆತರೆ ದೇವರಿಗೆ ಚಿನ್ನದ ಕೊಳಗ ಸಮರ್ಪಿಸುವ ಹರಕೆ ಹೊತ್ತಿದ್ದರು ಎಂದು ಹೇಳಲಾಗುತ್ತದೆ. ನಂತರ ಅವರಿಗೆ ಗಂಡು ಸಂತಾನ ಜನಿಸಿದ ಹಿನ್ನೆಲೆಯಲ್ಲಿ ಅವರು ತಮ್ಮ ಹರಕೆಯನ್ನು ನೆರವೇರಿಸಿದರು. ಅಪ್ಪಟ ಚಿನ್ನದಲ್ಲಿ ಮಾಡಿಸಿ ದೇವರಿಗೆ ಅರ್ಪಿಸಿದರಂತೆ ಎಂದು ಹೇಳಲಾಗುತ್ತದೆ
ಅದರಂತೆ, ಅರಮನೆ ಆವರಣದ ತ್ರಿನೇಶ್ವರಸ್ವಾಮಿ ದೇವಾಲಯಕ್ಕೆ 11 ಕೆಜಿ ತೂಕದ ಚಿನ್ನದ ಬಾಲಶಿವ ಮುಖವಾಡವನ್ನು ಮಾಡಿಸಿ ನೀಡಲಾಯಿತು. ಇದೇ ವೇಳೆ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಾಲಯ ಹಾಗೂ ಮಲೆಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ದೇವಾಲಯಗಳಿಗೆ ಸಹ ಚಿನ್ನದ ಕೊಳಗಗಳನ್ನು ಸಮರ್ಪಿಸಲಾಯಿತು. ಈ ಘಟನೆ ಮೈಸೂರು ಸಂಸ್ಥಾನದ ಧಾರ್ಮಿಕ ಪರಂಪರೆಯ ಒಂದು ಭಾಗವಾಗಿ ಇಂದಿಗೂ ನೆನಪಿಸಿಕೊಳ್ಳಲಾಗುತ್ತದೆ.

ಶ್ರೀ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿ ರೂಪ ಹೇಳಿಕೆ


ಈ ಕುರಿತು ಶ್ರೀ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿ ರೂಪ ಮಾತನಾಡಿ, ಮಹಾಶಿವರಾತ್ರಿ ಮಾಘ ಮಾಸದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದ್ದು, ಮೈಸೂರಿನ ಪುರಾತನ ದೇವಾಲಯಗಳಲ್ಲಿ ಆಚರಣೆಗಳು ಭಕ್ತಿಭಾವದಿಂದ ನಡೆಯುತ್ತವೆ ಎಂದು ತಿಳಿಸಿದ್ದಾರೆ. ಈ ವರ್ಷ ಶನಿವಾರ ಸರ್ಕಾರಿ ರಜೆ ಇರುವುದರಿಂದ ಭದ್ರತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಚಿನ್ನದ ಮುಖವಾಡವನ್ನು ಒಂದು ದಿನ ಮುಂಚಿತವಾಗಿಯೇ ಜಿಲ್ಲಾ ಖಜಾನೆಯಿಂದ ತರಲಾಗಿದೆ ಎಂದು ಅವರು ಹೇಳಿದರು.

ಮಹಾಶಿವರಾತ್ರಿ ದಿನ ದೇವಾಲಯದಲ್ಲಿ ಭಕ್ತರ ದರ್ಶನ ವ್ಯವಸ್ಥೆ


ಮಹಾಶಿವರಾತ್ರಿ ದಿನ ದೇವಾಲಯದಲ್ಲಿ ಭಕ್ತರ ಹೆಚ್ಚಿನ ಸಂಚಾರ ನಿರೀಕ್ಷೆಯಿದ್ದು, ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಪೂಜೆ ಹಾಗೂ ದರ್ಶನಕ್ಕೆ ಸರದಿ ಸಾಲು ವ್ಯವಸ್ಥೆ, ಭದ್ರತಾ ಕ್ರಮಗಳು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ದೇವಾಲಯ ಆಡಳಿತ ಭಕ್ತರು ಶಿಸ್ತಿನೊಂದಿಗೆ ಸಹಕರಿಸುವಂತೆ ಮನವಿ ಮಾಡಿದೆ.

ಮಹಾಶಿವರಾತ್ರಿ ಹಿಂದೂ ಧರ್ಮದಲ್ಲಿ ಧಾರ್ಮಿಕ ಮಹತ್ವ

ಮಹಾಶಿವರಾತ್ರಿ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ದಿನವಾಗಿದ್ದು, ಶಿವನ ಆರಾಧನೆ, ಉಪವಾಸ, ಜಾಗರಣೆ ಮತ್ತು ಅಭಿಷೇಕ ಪ್ರಮುಖ ಆಚರಣೆಗಳಾಗಿವೆ. ತ್ರಿನೇಶ್ವರ ದೇವಾಲಯದಲ್ಲಿ ನಡೆಯುವ ಚಿನ್ನದ ಕೊಳಗ ಅಲಂಕಾರ ದರ್ಶನ ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ಅನುಭವವಾಗಿದ್ದು, ಪ್ರತಿವರ್ಷ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ.

Contact us for classifieds and ads : +91 9742974234