
ಮೈಸೂರು:- ಅಪಘಾತವೊಂದರಲ್ಲಿ ಕಾಲುಗಳನ್ನು ಕಳೆದುಕೊಂಡ ಮೈಸೂರಿನ ಏಕಲವ್ಯ ನಗರದ ಅಲೆಮಾರಿ ದೊಂಬಿದಾಸ ಸಮಾಜದ ಮಹಿಳೆ ಲಕ್ಷ್ಮಮ್ಮಳಿಗೆ ದಿನಾಂಕ :19-03-2026ರ ಗುರುವಾರ ದಸಂಸ ದ ವತಿಯಿಂದ ಆಹಾರದ ಕಿಟ್ನ್ನು ಕೊಡಲಾಯಿತು.
ಈ ಸಂದರ್ಭದಲ್ಲಿ ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ ಏಕಲವ್ಯ ನಗರದ ಅಲೆಮಾರಿ ದೊಂಬಿದಾಸ ಸಮಾಜದ ಕಾಳಪ್ಪನ ಹೆಂಡತಿ ಲಕ್ಷ್ಮಮ್ಮ 65 ವರ್ಷ ಕಳೆದ ಕೆಲವು ದಿನಗಳ ಹಿಂದೆ ಸಂಬಂಧಿಕರ ಮನೆಗೆ ಹೋಗಿದ್ದಾಗ ಬೆಳ್ಳೂರು ಕ್ರಾಸ್ನಲ್ಲಿ ಬಸ್ಸು ಅಪಘಾತ ಮಾಡಿ ಇವರ ಕಾಲುಗಳು ಜಖಂಗೊಂಡವು. ಇವರ ಸಂಬಂಧಿ ಮಣಿ ಎಂಬ ಮಹಿಳೆ ಸ್ಥಳದಲ್ಲಿ ಮರಣ ಹೊಂದಿದರು. ಈ ಅಪಘಾತದಿಂದ ಈ ಅಲೆಮಾರಿ ಕುಟುಂಬಕ್ಕೆ ಬರಸಿಡಿಲು ಬಿದ್ದಂತಾಯಿತು. ಆಸ್ಪತ್ರೆಯಲ್ಲಿ ಕೆಲವು ದಿನಗಳ ಚಿಕಿತ್ಸೆ ಪಡೆದು ಈಗ ಏಕಲವ್ಯ ನಗರದ ಇವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವಯೋವೃದ್ಧರಾದ ಇವರ ಗಂಡ ಕಾಳಪ್ಪ ರವರು ದುಡಿಯಲು ಆಗದೆ ಚಿಕಿತ್ಸೆಗೂ ಹಣಕಾಸಿಲ್ಲದೆ ಪರದಾಡುತ್ತಾ ಊಟಕ್ಕೂ ಕಷ್ಟಪಡುತ್ತಿರುವ ಇವರ ಸಂಕಷ್ಟದ ಪರಿಸ್ಥಿತಿಯನ್ನು ಸ್ಥಳೀಯರು ದಸಂಸದ ಗಮನಕ್ಕೆ ತಂದಿದ್ದರು.

ಅಪಘಾತದಲ್ಲಿ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡ ಇವರ ಸಂಕಷ್ಟದ ಪರಿಸ್ಥಿತಿಯನ್ನು ಅರಿತಿದ್ದ ನಿಂಗರಾಜ್ ಮಲ್ಲಾಡಿರವರು ಈ ವೃದ್ಧ ದಂಪತಿಗಳ ಮನೆಗೆ ಭೇಟಿ ನೀಡಿ ತಮ್ಮ ಮನೆಯ ಯುಗಾದಿ ಹಬ್ಬದ ಖರ್ಚಿನಲ್ಲಿ ಅರ್ಧ ಭಾಗದಷ್ಟು ಖರ್ಚನ್ನು ಕಡಿತಗೊಳಿಸಿ ಈ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಹಾರ ಪದಾರ್ಥಗಳನ್ನು ಮಾನವೀಯತೆಯ ಅಂತಃಕರಣದೊಂದಿಗೆ ಕೊಟ್ಟು ಯುಗಾದಿ ಹಬ್ಬ ಆಚರಿಸಲಾಗುತ್ತಿದೆ.
ಯುಗಾದಿ ಹಬ್ಬದ ದಿನದಂದು 25 ಕೆ.ಜಿ ಅಕ್ಕಿ ಬೇಳೆಕಾಳುಗಳು, ಸೋಪುಗಳು, ಅಡಿಗೆ ಎಣ್ಣೆ ಪ್ರತಿಯೊಂದು ಅಗತ್ಯ ಪದಾರ್ಥಗಳನ್ನು ದಸಂಸ ದ ವತಿಯಿಂದ ಅವರ ಮನೆಗೆ ಹೋಗಿ ವಿತರಣೆ ಮಾಡಲಾಯಿತು.
ಅಪಘಾತದಲ್ಲಿ ಸಾವಿನಿಂದ ಪಾರಾಗಿರುವ ಲಕ್ಷ್ಮಮ್ಮರವರು ಮಾತನಾಡಿ ಯುಗಾದಿ ಹಬ್ಬ ಮಾಡಲು ನಮ್ಮ ಮನೆಯಲ್ಲಿ ಏನೂ ಇರಲಿಲ್ಲ. ನಿಂಗರಾಜ್ ಮಲ್ಲಾಡಿಯವರ ಈ ಸಹಾಯದಿಂದ ನಮಗೆ ಯುಗಾದಿ ಹಬ್ಬ ಮಾಡಲು ಸಹಾಯವಾಗಿ ನಮ್ಮ ಬದುಕಿನಲ್ಲಿ ಭರವಸೆ ಬಂದು ನಮ್ಮ ಕಷ್ಟಕ್ಕೆ ಸಹಾಯ ಮಾಡಲು ದೇವರೇ ನಮ್ಮ ಮನೆಗೆ ಅವರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಆನಂದಭಾಷ್ಪದಿಂದ ಕೈಮುಗಿಯುತ್ತಾ ಹೃದಯತುಂಬಿ ಹಾರೈಸಿದರು.
ಈ ಸಂದರ್ಭದಲ್ಲಿ ಅಲೆಮಾರಿ ಯುವ ಅಧ್ಯಕ್ಷರಾದ ಏಕಲವ್ಯ ನಗರದ ವೈ ಕುಮಾರ್, ಅಲೆಮಾರಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಸತೀಶ್, ಲಕ್ಷ್ಮಮ್ಮನ ಗಂಡ ಕಾಳಪ್ಪ ಇತರರು ಹಾಜರಿದ್ದರು.



