
ಮೈಸೂರು:- ಕಬಿನಿ, ಬಂಡಿಪುರ ಹಾಗೂ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ತಲೆದೋರಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆ ಹುಂಡಿ ಭಾಗ್ಯರಾಜ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿ ಚುನಾಯಿತ ಪ್ರತಿನಿಧಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು “ಉಳಿಸಿ ಉಳಿಸಿ ಕಬಿನಿ?ಬಂಡಿಪುರ?ನಾಗರಹೊಳೆ ಉಳಿಸಿ”, “ಕಾಡನ್ನು ಉಳಿಸಿ ನಾಡನ್ನು ರಕ್ಷಿಸಿ”, “ಅಕ್ರಮ ಕಟ್ಟಡ ತೆರವುಗೊಳಿಸಿ” ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅರಣ್ಯ ಪ್ರದೇಶಗಳ ಸುತ್ತಮುತ್ತ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳು, ಬಾರ್ಗಳು, ರೆಸ್ಟೋರೆಂಟ್ಗಳು ಹಾಗೂ ಹೋಟೆಲ್ಗಳು ಪರಿಸರ ಹಾನಿಗೆ ಕಾರಣವಾಗುತ್ತಿದ್ದು, ವನ್ಯಜೀವಿಗಳ ಸಂಚಲನಕ್ಕೂ ತೊಂದರೆ ಉಂಟುಮಾಡುತ್ತಿವೆ ಎಂದು ರೈತರು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಹಳ್ಳಿ ಕೆರೆ ಹುಂಡಿ ಭಾಗ್ಯರಾಜ್ ಅವರು, ಸುಮಾರು ಒಂದು ತಿಂಗಳ ಹಿಂದೆ ಇದೇ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಬಿನಿ, ಬಂಡಿಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳನ್ನು ಪತ್ತೆಹಚ್ಚಲು ರೈತ ಮುಖಂಡರು ಹಾಗೂ ಸಂಬಂಧಿತ ಅಧಿಕಾರಿಗಳ ಸಂಯುಕ್ತ ಸಮೀಕ್ಷೆ ನಡೆಸುವಂತೆ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದರು. ಈ ವೇಳೆ ಸಲ್ಲಿಸಿದ ಒತ್ತಾಯಕ್ಕೆ ಸ್ಪಂದಿಸಿದ್ದ ಪ್ರಾದೇಶಿಕ ಆಯುಕ್ತರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದರು ಎಂದು ಅವರು ತಿಳಿಸಿದರು.

ಪ್ರಾದೇಶಿಕ ಆಯುಕ್ತರ ಸೂಚನೆಯಂತೆ ಸುಮಾರು 25 ದಿನಗಳ ಹಿಂದೆ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಅರಣ್ಯ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳು, ಬಾರ್, ರೆಸ್ಟೋರೆಂಟ್ ಹಾಗೂ ಹೋಟೆಲ್ಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಹತ್ತು ದಿನಗಳೊಳಗೆ ಸಮರ್ಪಕ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು ಎಂದು ಭಾಗ್ಯರಾಜ್ ಹೇಳಿದರು.
ಆದರೆ ಸಭೆ ನಡೆದಿದ್ದು ಹಲವು ದಿನಗಳು ಕಳೆದರೂ ಇಂದಿನವರೆಗೂ ಯಾವುದೇ ವರದಿ ಬಹಿರಂಗಪಡಿಸಿಲ್ಲ. ಅಕ್ರಮ ಕಟ್ಟಡಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸಂಬಂಧಪಟ್ಟವರಿಗೆ ನೋಟಿಸ್ ಕೂಡ ನೀಡಲಾಗಿಲ್ಲ. ರೈತ ಮುಖಂಡರೊಂದಿಗೆ ಜಂಟಿ ಸರ್ವೆ ನಡೆಸುವ ಬಗ್ಗೆ ಕೂಡ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದರು.

ತಕ್ಷಣವೇ ಅಕ್ರಮ ಕಟ್ಟಡಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಅವುಗಳನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರೈತರು ನೀಡಿರುವ ಹಕ್ಕು ಒತ್ತಾಯಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂಬುದಾಗಿ ಅಧಿಕಾರಿಗಳು ಬರವಣಿಗೆಯ ಮೂಲಕ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ತನಿಖೆ ಹಾಗೂ ವರದಿ ತಯಾರಿಸುವಲ್ಲಿ ರಾಜಕೀಯ ಹಸ್ತಕ್ಷೇಪವಿದ್ದರೆ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ಜಂಟಿ ಸಮಿತಿ ರಚಿಸುವಂತೆ ಕೋರಬೇಕು ಎಂದು ಭಾಗ್ಯರಾಜ್ ಒತ್ತಾಯಿಸಿದರು. ಅರಣ್ಯ ಪ್ರದೇಶಗಳನ್ನು ರಕ್ಷಿಸುವ ವಿಷಯದಲ್ಲಿ ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಒತ್ತಡಕ್ಕೆ ಮಣಿಯಬಾರದು ಎಂದು ಅವರು ಹೇಳಿದರು.
ಈ ವೇಳೆ ರೈತ ಸಮಸ್ಯೆಗಳ ಕುರಿತೂ ಭಾಗ್ಯರಾಜ್ ಗಮನ ಸೆಳೆದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಸುಮಾರು 50,000 ಹೆಚ್ಚು ಕೃಷಿ ಪಂಪ್ಸೆಟ್ಗಳಿಗೆ ಸರ್ಕಾರದ ಆದೇಶದಂತೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿದರು. ವಿದ್ಯುತ್ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಅಕ್ರಮ-ಸಕ್ರಮ ಯೋಜನೆಯ ಜಾರಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು. ಹಲವು ವರ್ಷಗಳಿಂದ ರೈತರು ಅರ್ಜಿ ಸಲ್ಲಿಸಿದ್ದರೂ ಸಮಸ್ಯೆಗಳು ಬಗೆಹರಿಯದೇ ಉಳಿದಿವೆ ಎಂದು ಹೇಳಿದರು. ಸರ್ಕಾರದ ಸೋಲಾರ್ ಯೋಜನೆಯೂ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಸೌರಶಕ್ತಿ ಯೋಜನೆಯಡಿ ಪಂಪ್ಸೆಟ್ಗಳನ್ನು ಅಳವಡಿಸುವಲ್ಲಿ ವಿಳಂಬವಾಗುತ್ತಿರುವುದರಿಂದ ರೈತರಿಗೆ ನಿರೀಕ್ಷಿತ ಪ್ರಯೋಜನ ಸಿಗುತ್ತಿಲ್ಲ ಎಂದು ಅವರು ಹೇಳಿದರು.
ಇದಲ್ಲದೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕೆರೆಕಟ್ಟೆಗಳಿಗೆ ನದಿ ಮೂಲಗಳಿಂದ ನೀರು ತುಂಬಿಸುವ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ಆರೋಪಿಸಿದರು. ಕೆಲವು ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯಂತ್ರಗಳನ್ನು ಸ್ಥಗಿತಗೊಳಿಸಲಾಗಿದ್ದು ಇದರಿಂದ ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೈಗೊಂಡಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಸಮರ್ಪಕ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿವೆ ಎಂದು ಅವರು ಹೇಳಿದರು. ಯೋಜನೆಯ ಸುತ್ತಮುತ್ತ ಒಂದು ಅಥವಾ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ನೀರು ತುಂಬಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಈ ಯೋಜನೆಯನ್ನು ವಿಸ್ತರಿಸಿ ಹೆಚ್ಚಿನ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ವ್ಯವಸ್ಥೆ ಕಲ್ಪಿಸಬೇಕು. ಬೇಸಿಗೆ ಕಾಲದಲ್ಲಿ ಜಾನುವಾರುಗಳ ರಕ್ಷಣೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಇದು ಅಗತ್ಯವಾಗಿದೆ ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆ ವೇಳೆ ರೈತ ಮುಖಂಡರಾದ ಡಾ. ಗುರುಪ್ರಸಾದ್, ಕೆರೆಹುಂಡಿ ರಾಜಣ್ಣ, ಹಾಲಿನ ನಾಗರಾಜ್, ವಳಗೆರೆ ಗಣೇಶ್, ಅಂಡುವಿನಹಳ್ಳಿ ಎಚ್.ಎಸ್ ರಾಜು, ಮಾಡ್ರಳ್ಳಿ ಮಾದೇವಪ್ಪ, ಹಿರಿಕಾಟಿ ಚಿಕ್ಕಣ್ಣ, ಮಯೂರ್, ಮಹೇಂದ್ರ, ಸತೀಶ್ ಎಚ್, ಗುಂಡ್ಲ ಚಿದಂಬರ, ಮುದ್ದಳ್ಳಿ ಮಧು, ದೇವಿರಮ್ಮನಹಳ್ಳಿ ಹುಂಡಿ ವೈಟ್ ನವೀನ್, ಹೊನ್ನೇಗೌಡನಹಳ್ಳಿ ಮಹೇಶ್, ಮುಕಡಹಳ್ಳಿ ರಾಜು, ಪುಟ್ಟ ಮಲ್ಲೆಗೌಡ, ಮಹೇಶ್, ದೇವನೂರು ನಾಗೇಂದ್ರ, ಸ್ಯಾನಂಡರಳ್ಳಿ ಬಸವರಾಜು, ನಾಗರಾಜಪ್ಪ, ಊರ್ದಳ್ಳಿ ರಾಮಣ್ಣ, ಕಿರಲಿಪುರ ಶ್ರೀಕಂಠ, ಮಾದೇವಪ್ಪ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ಪ್ರತಿಭಟನೆ ಬಳಿಕ ರೈತ ಮುಖಂಡರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿ ಕಬಿನಿ, ಬಂಡಿಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ನಿರ್ಮಾಣಗಳನ್ನು ತಕ್ಷಣ ತೆರವುಗೊಳಿಸಿ ಪರಿಸರ ಸಂರಕ್ಷಣೆಗಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ರೈತರ ವಿವಿಧ ಸಮಸ್ಯೆಗಳಿಗೂ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಕ್ರಮ ಕಟ್ಟಡಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ರೈತರು ಮತ್ತು ಪರಿಸರ ಹಿತಾಸಕ್ತಿಯ ದೃಷ್ಟಿಯಿಂದ ಅಧಿಕಾರಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.


