Articles

ಇತಿಹಾಸವನ್ನು ಮರೆತವನು, ಇತಿಹಾಸವನ್ನು ಸೃಷ್ಟಿಸಲಾರ!

- ಲಕ್ಷ್ಮಿ ಕಿಶೋರ್ ಅರಸ್

ಸಮಾಜದ ಮೇಲ್ವರ್ಗದ ಜನ ಬಡವರು ಮತ್ತು ಶೋಷಿತ ವರ್ಗದ ಜನರ ಮೇಲೆ ಶೋಷಣೆ ಮಾಡುತ್ತಿದ್ದ ಕಾಲವದು. ಮೇಲ್ವರ್ಗದ ಜನ ಎಷ್ಟೇ ಅಪಮಾನ, ಅವಮಾನಗಳಿಂದ ನಿಂದಿಸಿದರು ಸಹ ಅವೆಲ್ಲವನ್ನು ಮೆಟ್ಟಿ ನಿಂತು ಅತ್ಯುತ್ತಮ ಶಿಕ್ಷಣವನ್ನು ಪಡೆದು ಮಹಾನ್ ವ್ಯಕ್ತಿಯಾಗಿ ರೂಪುಗೊಂಡು ಸಂವಿಧಾನವನ್ನು ರಚಿಸಿ ವಿಶ್ವಜ್ಞಾನಿ ಎನಿಸಿಕೊಂಡವರು ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ .ಇಂದು ಅವರ ಜನ್ಮದಿನ .ಅಂಬೇಡ್ಕರ್ ರವರು ನಮ್ಮನ್ನು ದೈಹಿಕವಾಗಿ ಆಗಲಿರಬಹುದು ಆದರೆ ಅವರು ನೀಡಿರುವ ಕೊಡುಗೆ ಸೂರ್ಯ ಚಂದ್ರ ಇರುವವರೆಗೂ ಅಜರಾಮರ. ಡಾ. ಭೀಮರಾವ್ ರಾಮ್ ಜಿ ಅಂಬೇಡ್ಕರ್ 14 ಏಪ್ರಿಲ್ 1891ರಲ್ಲಿ ಮಧ್ಯಪ್ರದೇಶದ ಮಾವೊ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಜನಿಸಿದರು. ಇವರ ತಂದೆ ಬಿಟಿಷರ ಮಾವೊ ಕಂಟೋನ್ಮೆಂಟ್ ನಲ್ಲಿ ಸೈನಿಕರಾಗಿದ್ದರು. ಇವರಿಗೆ 14ನೇ ಪುತ್ರರಾಗಿ ಜನಿಸಿದ ಅಂಬೇಡ್ಕರ್ರವರ ಬಾಲ್ಯದ ಹೆಸರು ಭೀಮರಾವ್ .ಇವರು ದಲಿತ ಸಮುದಾಯಕ್ಕೆ ಸೇರಿದ್ದರಿಂದ ಜನರು ಇವರನ್ನು ಶೋಷಿಸುತ್ತಿದ್ದರು. ಅಂಬೇಡ್ಕರ್ ಅವರ ಕುಟುಂಬ ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರು .ಇವರ ಮಾತೃಭಾಷೆ ಮರಾಠಿ ಯಾಗಿದ್ದು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ಬಾಬಾಸಾಹೇಬರ ಕುಟುಂಬ ಶೋಚನೀಯ ಸ್ಥಿತಿಗೆ ತಲುಪುತ್ತದೆ.

sri krishnadevaraya hampi

ಇವರ ಎಂಟು ಮಂದಿ ಸೋದರ-ಸೋದರಿಯರು ಸಹ ಶೋಷಣೆಗೆ ಒಳಪಟ್ಟು ಸಾವನ್ನಪ್ಪುತ್ತಾರೆ. ಐದು ಮಂದಿ ಮಾತ್ರ ಬದುಕುಳಿಯುತ್ತಾರೆ. ಅಂಬೇಡ್ಕರ್ ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ನೋಡಿ ಆಸೆಯಿಂದ ತಮ್ಮ ತಂದೆಯನ್ನು ಶಾಲೆಗೆ ಸೇರಿಸುವಂತೆ ಕೇಳುತ್ತಾರೆ. ಆದರೆ, ಅಸ್ಪೃಶ್ಯರಾದ ಕಾರಣ ಅವರಿಗೆ ದಾಖಲಾತಿ ದೊರೆಯುವುದಿಲ್ಲ. ಅವರ ತಂದೆ ಬ್ರಿಟಿಷ್ ಅಧಿಕಾರಿಯನ್ನು ಕೇಳಿಕೊಂಡು ಅವರಿಗೆ ಶಾಲೆಗೆ ದಾಖಲಾತಿ ಕೊಡಿಸುತ್ತಾರೆ. ಆದರೆ ಶಾಲೆಯಲ್ಲಿ ಬಾಬಾಸಾಹೇಬರು ದಲಿತ ಎಂಬ ಕಾರಣಕ್ಕೆ ಅವರನ್ನು ಕೀಳಾಗಿ ಕಾಣಲಾಗುತ್ತದೆ .ಕುಡಿಯಲು ನೀರು ಸಹ ಕೊಡುತ್ತಿರಲಿಲ್ಲ, ಒಮ್ಮೆ ಅವರು ಕೆರೆಯಲ್ಲಿ ನೀರು ಕುಡಿಯುವುದನ್ನು ಕಂಡು ಮೇಲ್ವರ್ಗದ ಜನ ಅವರನ್ನು ತಳಿಸುತ್ತಾರೆ ಹಾಗೂ ಇವರು ಅಸ್ಪೃಶ್ಯರೆಂದು ಕ್ಷೌರವನ್ನು ಸಹ ಮಾಡುತ್ತಿರಲಿಲ್ಲ, ಅವರ ಅಕ್ಕನೇ ಅಂಬೇಡ್ಕರ್ ಅವರಿಗೆ ತಲೆ ಕ್ಷೌರ ಮಾಡುತ್ತಿರುತ್ತಾರೆ .ಇಂತಹ ಘಟನೆಗಳು ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ ಮತ್ತು ಗಾಢವಾಗಿ ಪರಿಣಾಮ ಬೀರುತ್ತದೆ.

ಬಹಳ ಸ್ವಾಭಿಮಾನಿಯಾದ ಅಂಬೇಡ್ಕರ್ರವರು ತಾವು ಶಿಕ್ಷಣವನ್ನು ಪಡೆದು, ತಮ್ಮ ಕಾಲ ಮೇಲೆ ನಿಲ್ಲಬೇಕು ಎಂದು, ಶೋಷಣಾರಹಿತ ಸಮಾಜ ನಿರ್ಮಾಣ ಮಾಡಬೇಕೆಂಬ ಹೆಬ್ಬಯಕೆಯಿಂದ ಹಲವಾರು ಗ್ರಂಥಗಳನ್ನು ಸಂಗ್ರಹಿಸಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುತ್ತಾರೆ. ಮತ್ತು ಶಾಲೆಯಲ್ಲಿ ಯಾರು ಬಿಡಿಸಲಾಗದ ಗಣಿತ ಸೂತ್ರವನ್ನು ಬಿಡಿಸಿ ಶಿಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಾರೆ . ನಂತರ
ಅಂಬೇಡ್ಕರ್ರವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳುತ್ತಾರೆ. ನಾಲ್ಕು ವರ್ಷ ಶಿಕ್ಷಣವನ್ನು ಮುಗಿಸಿ ಅಲ್ಲಿಂದ ವಾಪಸಾಗಿ ಭಾರತದಲ್ಲಿ ಮಿಲಿಟರಿ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಾರೆ, ಇವರು ದಲಿತರೆಂಬ ಕಾರಣಕ್ಕೆ ಅಲ್ಲಿಯೂ ಕೂಡ ತಿರಸ್ಕರಿಸಲ್ಪಡುತ್ತಾರೆ.

ಆ ನೌಕರಿಯನ್ನು ಬಿಟ್ಟು ಬಾಬಾಸಾಹೇಬರು 1919ರಲ್ಲಿ ಬರೋಡ ಮಹಾರಾಜರ ಸಹಕಾರ ಪಡೆದು ಅತ್ಯುನ್ನತ ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳುತ್ತಾರೆ. ಸತತ ಪರಿಶ್ರಮ ಮತ್ತು ಪ್ರಯತ್ನದಿಂದ ಇಂಗ್ಲೆಂಡಿನಲ್ಲಿ ತಮ್ಮ ಬ್ಯಾರಿಸ್ಟರ್ ಪದವಿಯನ್ನು ಮುಗಿಸಿ ಸಾವಿರ 1923 ರಲ್ಲಿ ಭಾರತಕ್ಕೆ ಮರಳಿ ವಕೀಲ ವೃತ್ತಿಯನ್ನು ಪ್ರಾರಂಭಿಸುತ್ತಾರೆ .ಸಮಾಜದಲ್ಲಿ ನಡೆಯುತ್ತಿರುವ ದಲಿತರ, ಶೋಷಿತರ ಮೇಲಿನ ಶೋಷಣೆ ಬಗ್ಗೆ ಗಾಢವಾಗಿ ಚಿಂತನೆ ನಡೆಸಿ, ಮುಸ್ಲಿಮರು ಹಾಗೂ ಸಿಕ್ಕರ ರೀತಿಯಲ್ಲಿ ದಲಿತರಿಗೂ ಸಹ ಪ್ರತ್ಯೇಕ ಮತದಾನ ಪದ್ಧತಿಯನ್ನು ನೀಡುವಂತೆ ಹೋರಾಟ ನಡೆಸುತ್ತಾರೆ .ನಂತರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡು ಸ್ವತಂತ್ರ ಚಳುವಳಿಯಲ್ಲಿ ಭಾಗವಹಿಸುತ್ತಾರೆ. ಒಮ್ಮೆ ಅವರನ್ನು ಚುನಾವಣೆಯಲ್ಲಿ ಷಡ್ಯಂತ್ರದಿಂದ ಸೊಲಿಸಲಾಗುತ್ತದೆ.

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶಕ್ಕೊಂದು ಸಂವಿಧಾನದ ಅವಶ್ಯಕತೆ ಇರುತ್ತದೆ. ಇದರಿಂದ ಸಂವಿಧಾನವನ್ನು ರಚಿಸಲು ಮಹಾನ್ ಜ್ಞಾನಿ ಡಾ. ಬಿ.ಆರ್ ಅಂಬೇಡ್ಕರ್ ಸೂಕ್ತ ವ್ಯಕ್ತಿ ಎಂದು ಅವರನ್ನು ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತದೆ. ಅಂಬೇಡ್ಕರ್ರವರು ದೇಶ-ವಿದೇಶಗಳ ಸಂವಿಧಾನಗಳನ್ನು ,ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಬಹಳ ಆಳವಾಗಿ ಅಧ್ಯಯನ ಮಾಡಿ, ತಮ್ಮ ಅಪರಿಮಿತ ಜ್ಞಾನ ಹಾಗೂ ಅವಿರತ ಪರಿಶ್ರಮದಿಂದಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಸುಭದ್ರವಾದ, ಸುಸ್ಪಷ್ಟವಾದ ಇಡೀ ಜಗತ್ತಿನಲ್ಲೇ ದೊಡ್ಡದಾದ ವಿಶಿಷ್ಟವಾದ ಲಿಖಿತ ಸಂವಿಧಾನವನ್ನು ರಚಿಸಿ ನಮ್ಮ ದೇಶಕ್ಕೆ ಬಳವಳಿಯಾಗಿ ನೀಡುತ್ತಾರೆ.

ಭಾರತದ ಸಂವಿಧಾನ ಪ್ರಪಂಚದ ಯಾವ ದೇಶವು ಹೊಂದಿರದ ಅತಿದೊಡ್ಡ ಸಂವಿಧಾನವಾಗಿದೆ, ಇಂತಹ ಸಂವಿಧಾನ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ರಚಿಸಿ, ಭಾರತದ ಪ್ರಜೆಗಳು ಶಾಂತಿ, ಸ್ವರಾಜ್ಯ, ಸಹೋದರತ್ವ ,ಸೌಹಾರ್ದತೆ ಹಾಗೂ ಸಹಬಾಳ್ವೆಯಿಂದ ನೆಮ್ಮದಿಯಿಂದ ಜೀವನ ಸಾಗಿಸಲು ಅಂಬೇಡ್ಕರ್ ಅವರ ಸಂವಿಧಾನ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣವಾಗಿದೆ. ಸ್ವಾತಂತ್ರ್ಯದ ನಂತರ ಡಾ. ಬಿ.ಆರ್ ಅಂಬೇಡ್ಕರ್ ಅವರು ಭಾರತ ಸರ್ಕಾರದ ಕಾನೂನು ಮಂತ್ರಿಗಳಾಗುತ್ತಾರೆ ಮತ್ತು ಹಲವಾರು ಹುದ್ದೆಗಳನ್ನು ಅಲಂಕರಿಸುತ್ತಾರೆ. ಇಂತಹ ಮಹಾನ್ ಚೇತನ, ಭಾರತದ ದಲಿತ ಸೂರ್ಯ ಜ್ಞಾನ, ಭಂಡಾರ ಡಾ. ಬಿ.ಆರ್ ಅಂಬೇಡ್ಕರ್ 1956 ಡಿಸೆಂಬರ್ ನಲ್ಲಿ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರು ದೈಹಿಕವಾಗಿ ನಮ್ಮನ್ನು ಅಗಲಿದರು ಸಹ ಭಾರತಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದದ್ದು.

ಅಂಬೇಡ್ಕರ್ ರವರಿಗೆ ಕೇಂದ್ರ ಸರ್ಕಾರ “ಭಾರತ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ .ವಿಶ್ವಸಂಸ್ಥೆಯು ಅವರ ಜಯಂತಿಯನ್ನು “ವಿಶ್ವ ಜ್ಞಾನ” ದಿನವನ್ನಾಗಿ ಆಚರಿಸುತ್ತಿದೆ. “ಇತಿಹಾಸವನ್ನು ಮರೆತವರು, ಇತಿಹಾಸವನ್ನು ಸೃಷ್ಟಿಸಲಾರರು” ಎಂಬ ಮಹಾನ್ ಸಂದೇಶವನ್ನು ಜಗತ್ತಿಗೆ ನೀಡಿ ಎಂದು ಮರೆಯದ ಇತಿಹಾಸವನ್ನು ಸೃಷ್ಟಿಸಿ, ಭಾರತದ ಜ್ಯೋತಿಯಾಗಿ ಜನಮಾನಸದಲ್ಲಿ ಇಂದಿಗೂ ಸಹ ಅಚ್ಚಳಿಯದೆ ಉಳಿದಿದ್ದಾರೆ.

Contact us for classifieds and ads : +91 9742974234



 
error: Content is protected !!