Articles

ಬೇರೆ ಹಾಡನ್ನು ಹಾಡಿಸಬಹುದಿತ್ತೇನೋ…?

- ಚೇತನ್ ಸಿ ರಾಯನಹಳ್ಳಿ

ಶಾಲೆಯಲ್ಲಿ ಅದರಲ್ಲೂ ಸಾಂಸ್ಕೃತಿಕವಲಯದಲ್ಲಿ ಸಕ್ರೀಯರಾಗಿರುವವರಿಗೆ ಪ್ರತಿಭಾಕಾರಂಜಿ ಎಂದರೆ ಒಂದು ಸಂತಸ, ಸಂಭ್ರಮ, ಸಡಗರ. ಈಬಾರಿ ಪ್ರತಿಭಾಕಾರಂಜಿ ಆರಂಭವಾದಾಗ ಯಾವ ಯಾವ ವಿಭಾಗದಲ್ಲಿ ಯಾರ್ಯಾರು ಏನೇನು ಕಾರ್ಯಕ್ರಮ ನೀಡಬೇಕೆಂದು ಎಲ್ಲವನ್ನೂ ತೀರ್ಮಾನಿಸಿದೆವು. ತಯಾರಿಗಳು ಆರಂಭವಾದವು. ಇವುಗಳ ಮಧ್ಯೆ ಸಾಮೂಹಿಕಗೀತೆಯ ವಿಭಾಗದಲ್ಲಿ ಮೊದಲೇ ತಿಳಿಸಿರುವಂತೆ ಜನಪದ/ಜನಪದಧಾಟಿಯಲ್ಲಿರುವ ಗೀತೆ ಎಂಬುದನ್ನು ತಿಳಿದು ಯಾವ ರೀತಿಯ ಹಾಡನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾಗ ನಮ್ಮ ರಂಗಭೂಮಿಯ ಗೆಳೆಯರಲ್ಲಿ ಈ ಮಾಹಿತಿ ಹಂಚಿಕೊAಡಾಗ ಚಂದ್ರಶೇಖರ ಕಂಬಾರರ ‘ಸಾವಿರದ ಶರಣವ್ವ ಕರಿಮಾಯಿತಾಯಿ’ ಪ್ರಯತ್ನ ಮಾಡಬಹುದು ಎಂಬ ಸಲಹೆ ದೊರಕಿತು. ಹಲವಾರು ಬಾರಿ ಈ ಹಾಡನ್ನು ಕೇಳಿದ್ದರಿಂದಾಗಿ ಸ್ವಲ್ಪ ಕಷ್ಟ ಆದರೂ ಪ್ರಯತ್ನ ಮಾಡೋಣ ಎನಿಸಿತು. ಕೂಡಲೇ ಹಾಡನ್ನು ಸಂಗ್ರಹಿಸಿದ್ದಾಯಿತು. ಹಾಡಲು ಹೆಸರು ನೀಡಿದ್ದ ಮಕ್ಕಳಿಗೆ ಈ ಹಾಡಿನ ಸಾಲುಗಳು ಚೆಂದ ಅನಿಸಿದ್ದು ನೋಡಲು ಮಾತ್ರ, ನಿಜವಾದ ಸಮಸ್ಯೆ ಹಾಡುವಾಗಲೇ ತಿಳಿದದ್ದು.
ಬಿ.ಜಯಶ್ರೀ ಅವರು ಹಾಡಿರುವ ಎರಡು ರೀತಿಯ ಹಾಡನ್ನು ಕೇಳಿ, ಅದರಲ್ಲಿ ಮಕ್ಕಳು ತಮಗೆ ಸರಿ ಎನಿಸುವ ಧಾಟಿಯನ್ನು ಆಯ್ಕೆ ಮಾಡಿಕೊಂಡರು. ಅಲ್ಲಿಂದ ಆದದ್ದು ನಿಜವಾದ ಪ್ರಾರಂಭ, ಪ್ರಯತ್ನ, ಪ್ರಯಾಸ, ಆಯಾಸ.
ಬಹಳಷ್ಟು ಏರಿಳಿತದ ಈ ಹಾಡನ್ನು ಕೇಳಿದ ಹಿಂದಿ ಮೇಡಂ, ‘ಬೇರೆ ಹಾಡು ಹಾಡಿಸಬಹುದಿತ್ತು ಸರ್, ಇದು ಮಕ್ಕಳಿಗೆ ಬಹಳ ಕಷ್ಟ ಆಗತ್ತೇನೋ?’ ನನಗೆ ಮಕ್ಕಳ ಮೇಲೆ ಭಯಂಕರ ಧೈರ್ಯ ಹಾಗಾಗಿ ಈ ಹಾಡನ್ನೇ ಹಾಡಲಿ ಎಂದದ್ದಾಯಿತು. ಮಕ್ಕಳು ಖಾಲಿ ತರಗತಿಯ ಕೊಠಡಿಯ ಬೋರ್ಡ್ಲಿ ಹಾಡನ್ನು ಬರೆದು ನೋಡುತ್ತ, ಹಾಡುತ್ತ, ಸಣ್ಣ-ಪುಟ್ಟ ತಮಾಷೆ ಮಾಡಿಕೊಳ್ಳುತ್ತ ಅಭ್ಯಾಸ ಮಾಡತೊಡಗಿದರು.
ಕ್ಲಸ್ಟರ್ ಮಟ್ಟದ ಸ್ಫರ್ಧೆಗೆ ವೇದಿಕೆ ಸಿದ್ದತೆಯಾಗಿತ್ತು. ದಿಶಾ ಸರಾಫ್ ಭರತನಾಟ್ಯ ಮುಗಿಸಿಕೊಂಡು, ಶ್ರೇಯಾ.ಎನ್.ಈ ನಾಟಕವನ್ನು ಮುಗಿಸಿಕೊಂಡು ಅದೇ ವಸ್ತçದಲ್ಲಿ, ಉಳಿದವರು ಶಾಲಾಸಮವಸ್ತçದಲ್ಲಿ ತೀರ್ಪುಗಾರರ ಮುಂದೆ ಕೊಠಡಿಯಲ್ಲಿ ಹಾಡುತ್ತಿದ್ದರೆ ಅಕ್ಕಪಕ್ಕದ ಕೊಠಡಿಗಳಿಗೂ ಇವರ ಧ್ವನಿ ಕೇಳುತ್ತಿತ್ತು.

sri krishnadevaraya hampi

ಸಂಜೆ ಸ್ಫರ್ಧೆ ನಡೆದ ಕೊಠಡಿಯಲ್ಲಿ ಪ್ರಶಸ್ತಿ ಬಂದಿದೆಯೇ ಇಲ್ಲವೇ ಎಂದು ವಿಚಾರಿಸಲು ಹೋದಾಗ ತೀರ್ಪುಗಾರರು, ‘ನಿಮ್ಮ ಮಕ್ಕಳು ತುಂಬಾ ಚೆನ್ನಾಗಿ ಹಾಡಿದ್ದಾರೆ, ನಿಜಕ್ಕೂ ಪ್ರಶಸ್ತಿಗೆ ಅರ್ಹವಾದ ತಂಡ. ಪ್ರಯತ್ನ ಇನ್ನೂ ಚೆನ್ನಾಗಿ ಮಾಡಿಕೊಂಡರೆ ಮುಂದಿನ ಹಂತದಲ್ಲೂ ಪ್ರಶಸ್ತಿ ಕಟ್ಟಿಟ್ಟಬುತ್ತಿ, ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ’ ಎಂಬ ಮಾತನ್ನು ಮಕ್ಕಳೆದುರಿಗೆ ಆಡಿದ್ದು ಅವರಿಗೆ ಹೊಸ ಹುರುಪು, ಉತ್ಸಾಹ ನೀಡಿತು. ಮುಂದಿನ ತಾಲೂಕುಹಂತಕ್ಕೆ ಪ್ರಥಮ ಪ್ರಶಸ್ತಿ ಪಡೆದವರು ಮಾತ್ರ ಭಾಗವಹಿಸಬೇಕಿತ್ತು. ಮಕ್ಕಳಿಗೆ ತೀರ್ಪುಗಾರರ ಮಾತುಗಳು ಎಷ್ಟು ಪ್ರಭಾವ ಬೀರಿತ್ತೆಂದರೆ ಶಾಲೆಯಲ್ಲಿ ಅಭ್ಯಾಸ ಮುಗಿಸಿ, ಹಾಡುವ ೮ಮಕ್ಕಳು ಒಬ್ಬ ವಿದ್ಯಾರ್ಥಿನಿಯ ಮನೆಯಲ್ಲಿ ಸಂಜೆ ಮತ್ತೆ ಅಭ್ಯಾಸ ಮಾಡತೊಡಗಿದರು. ಇದರ ಮಧ್ಯೆ ಹಬ್ಬದ ಸಂದರ್ಭ ಮಕ್ಕಳ ಜೊತೆಗೆ ಪೋಷಕರು ಸಹ ಸೇರಿದರು ಒಂದೊಳ್ಳೆಯ ಭಾಂದವ್ಯಕ್ಕೆ ಸಾಕ್ಷಿಯಾದರು. ಒಬ್ಬ ವಿದ್ಯಾರ್ಥಿನಿ ಮಾತ್ರ ಅಭ್ಯಾಸಕ್ಕೆ ಬರಲು ಆಗಲೇ ಇಲ್ಲ, ಆದರೆ ಉಳಿದ ಮಕ್ಕಳು ಹಾಡುವುದನ್ನು ಬಿಡಲೇ ಇಲ್ಲ. ತಾಲೂಕು ಮಟ್ಟದ ಸ್ಫರ್ಧೆಗಳು ಆರಂಭವಾದವು ಶಿವಮೊಗ್ಗ ತಾಲೂಕಿನಲ್ಲಿ ಪ್ರಶಸ್ತಿ ಪಡೆದ ಮಕ್ಕಳು ಭಾಗವಹಿಸಿದ್ದರು. ಒಂದಕ್ಕಿಂತ ಒಂದು ತಂಡದವರು ಉತ್ತಮವಾಗಿಯೇ ಹಾಡುತ್ತಿದ್ದರು. ನಾವು ಎರಡು ಹಾಡುಗಳನ್ನು ಒಂದು ಮಾಡಿಕೊಂಡು ಹಾಡಿದ್ದೆವು. ‘ಶ್ರೀಗಣರಾಯ ಪಾರ್ವತಿತನಯ’ ಗೀತೆಯನ್ನು ಮುಗಿಸಿ ‘ಸಾವಿರದ ಶರಣವ್ವ’ ಹಾಡಿನಲ್ಲಿ ಶರ್ವಾಣಿ ಆಲಾಪವನ್ನು ಹಾಡುವಾಗ ಸ್ವಲ್ಪತಪುö್ಪ ಮಾಡಿದಳು ಅದನ್ನು ಮುಚ್ಚಿಟ್ಟುಕೊಳ್ಳುವಂತೆ ಅಡಿಗ ಕಂಜರ ನುಡಿಸುತ್ತ, ದೀಪ್ತಿ, ದಿಶಾ, ಚಂದನ, ಶ್ರೇಯಾ (ತ್ರಯರು) ಸೇರಿ ದನಿಗೂಡಿಸಿ ಹಾಡಿದರು. ಅಂತೂ ಹಾಡು ಮುಗಿದಾಗ ಸ್ಫರ್ಧೆಯನ್ನು ಮರೆತು ಜೋರಾದ ಚಪ್ಪಾಳೆ ಅಲ್ಲಿದ್ದ ಎಲ್ಲಾ ಮಕ್ಕಳಿಂದ.

ಇದು ನಮ್ಮಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಹಾಡು ಮುಗಿಸಿ ಹೊರಬಂದಾಗ ಶರ್ವಾಣಿ ಆಗಲೇ ಬಿಕ್ಕಿಬಿಕ್ಕಿ ಅಳತೊಡದ್ದಳು. ‘ನನ್ನಿಂದಲೇ ತಪ್ಪಾಗಿದೆ ಸಾರಿ…’ ಅಂತ. ‘ಅದೇನು ಸಮಸ್ಯೆ ಅಲ್ಲ ಬಿಡು ಚೆನಾಗಿ ಹಾಡಿದಿಯ’ ಹಿಂದಿ ಮೇಡಂರಿಂದ ಅಮ್ಮನ ರೀತಿಯಲ್ಲಿ ಸಮಾಧಾನ ಮಾಡಿದ್ದಾಯಿತು. ನಂತರದಲ್ಲಿ ಎಲ್ಲರೂ ಊಟಮಾಡಿ ಹೊರಟರು. ನಾನು ಶ್ರೇಯಾ ಅಂಬುಜಾಕ್ಷಿ ಮೇಡಂ ಮಾತ್ರ ಉಳಿದೆವು. ಮೂವರು ಸೇರಿ ಭರತನಾಟ್ಯದಲ್ಲಿ ದಿಶಾಗೆ ದ್ವಿತೀಯ ಬಹುಮಾನ ಬಂದಿತ್ತು ಅದನ್ನು ತೆಗೆದುಕೊಂಡು ಸಾಮೂಹಿಕ ಗೀತೆಗೆ ಬಂದೆವು. ಇನ್ನೂ ಪ್ರಶಸ್ತಿ ಘೋಷಣೆ ಮಾಡಿರಲಿಲ್ಲ. ಅಲ್ಲಿ ಕುಳಿತೆವು ಮೊದಲ ಪ್ರಶಸ್ತಿ ಶರ್ವಾಣ.ಎಂ ಮತ್ತು ತಂಡ, ಸಾಂದೀಪನಿ ಶಾಲೆ ಎಂದಾಗ ಆದ ಸಂತೋಷ ಹೇಳತೀರದು. ಅಲ್ಲಿಯ ತೀರ್ಪುಗಾರರು ಕೂಡ ಮೆಚ್ಚುಗೆಯ ನುಡಿಗಳನ್ನಾಡಿ ಬೀಳ್ಕೊಟ್ಟರು. ಎಲ್ಲಾ ಮಕ್ಕಳಿಗೆ ಫೋನ್ ಮಾಡಿ ‘ನಾಳೆಯ ಜಿಲ್ಲಾ ಮಟ್ಟದಲ್ಲೂ ಹಾಡಲು ತಯಾರಿ ಮಾಡಿಕೊಳ್ಳಬೇಕಿದೆ’ ಎಂದರೆ ‘ಸರ್ ಪ್ರಶಸ್ತಿ ಬರಲಿಲ್ಲವಾ?’ ಎಂದು ಅರೆಕ್ಷಣ ಯೋಚಿಸಿ, ಮತ್ತೆ ‘ಹೋ..ನಾವು ಗೆದ್ದಿದಿವಿ..’ ಎಂದು ಖುಷಿಯಲ್ಲಿ ಕೂಗತೊಡಗಿದರು. ಕೆಲವು ಪೋಷಕರು ನಿಜಕ್ಕೂ ಇವರೇ ಹಾಡಿದ್ರಾ? ಹಾಡೋದ್ರಲ್ಲಿ ರಾಕ್ಷಸರು ಬಿಡಿ ಎಂಬ ಸಂದೇಹ, ಸಂಭ್ರಮ.
ಮರುದಿನ ಜಿಲ್ಲಾ ಮಟ್ಟದಲ್ಲಿ ಹಾಡಿದರು ಅಲ್ಲಿಯೂ ಪ್ರಶಸ್ತಿ ಪಡೆದರು ಎಂಬುದು ಸಂತೋಷದ ಸಂಗತಿ.
ಈ ಹಾಡನ್ನು ಹಾಡುವುದು ಕಷ್ಟ ಬೇರೆ ಹಾಡನ್ನು ಪ್ರಯತ್ನ ಮಾಡಬಹುದೇ ನೋಡಿ ಎಂದು ಕೆಲವು ಶಿಕ್ಷಕರು, ಪೋಷಕರು ಹೇಳಿದ್ದರು, ನಾನು ಮಕ್ಕಳೊಂದಿಗೆ ಮಾತನಾಡಿದ್ದಾಗ ‘ಇದೇ ಹಾಡು ಇರಲಿ, ನಾವು ಹಾಡುತ್ತೇವೆ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡೇಮಾಡುತ್ತೇವೆ’ ಎಂದು ಒಂದು ರೀತಿಯ ಸವಾಲನ್ನು ಸ್ವೀಕರಿಸಿ, ಏರಿಳಿತಗಳ ನಡುವೆ ಬಿಡದೆ ಮಾಡಿದ ಈ ಕಾರ್ಯ ಫಲ ಕೊಟ್ಟಿತು.
ನಿರಂತರ ಪ್ರಯತ್ನ ಮುಂದೆ ಒಂದು ಒಳ್ಳೆಯ ಹಂತಕ್ಕೆ ಕೊಂಡೊಯ್ಯುತ್ತೆ, ಪ್ರಶಸ್ತಿಯನ್ನು ತಂದುಕೊಡತ್ತೆ ಅನ್ನೋದನ್ನ ನಿರೂಪಿಸಿದ ಮಕ್ಕಳು ಮುಂದೆಯೂ ಸವಾಲುಗಳನ್ನು ಸ್ವೀಕರಿಸಲಿ ಅದು ಸಾಧನೆಗೆ ದಾರಿಯಾಗಲಿ…

Contact us for classifieds and ads : +91 9742974234 
error: Content is protected !!